ದಕ್ಷಿಣದ ಏಕೈಕ ಐಷಾರಾಮಿ ರೈಲು ಗೋಲ್ಡನ್ ಚಾರಿಯಟ್ ಯಾನ ಮರು ಆರಂಭ, ಬೆಂಗಳೂರಲ್ಲಿ ಸಿಎಂ ಚಾಲನೆ, ಟಿಕೆಟ್‌ ಸೋಲ್ಡ್ ಔಟ್!

Published : Oct 24, 2026, 11:11 AM IST
Golden Chariot

ಸಾರಾಂಶ

ದಕ್ಷಿಣ ಭಾರತದ ಏಕೈಕ ಐಷಾರಾಮಿ ರೈಲು 'ಗೋಲ್ಡನ್ ಚಾರಿಯಟ್' ಅತ್ಯಾಧುನಿಕ ಸೌಲಭ್ಯಗಳು ಮತ್ತು ಹೊಸ ರಾಜವೈಭವದೊಂದಿಗೆ ತನ್ನ ಯಾನವನ್ನು ಮರು ಆರಂಭಿಸಿದೆ. ಐಆರ್‌ಸಿಟಿಸಿ ಮತ್ತು ಕೆಎಸ್‌ಟಿಡಿಸಿ ನಿರ್ವಹಿಸುತ್ತಿರುವ ಈ ರೈಲು, 'ಪ್ರೈಡ್ ಆಫ್ ಕರ್ನಾಟಕ' ಪ್ರವಾಸದ ಮೂಲಕ ಪ್ರವಾಸಿಗರಿಗೆ ವಿಶೇಷ ಅನುಭವ ನೀಡಲಿದೆ. ಮೊದಲ ಪ್ರಯಾಣದ ಎಲ್ಲಾ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ.

ಬೆಂಗಳೂರು: ಕರ್ನಾಟಕದ ಹೆಮ್ಮೆಯ ಹಾಗೂ ದಕ್ಷಿಣ ಭಾರತದ ಏಕೈಕ ಐಷಾರಾಮಿ ಪ್ರವಾಸಿ ರೈಲು ‘ಗೋಲ್ಡನ್ ಚಾರಿಯಟ್’ (ಸುವರ್ಣ ರಥ) ಅತ್ಯಾಧುನಿಕ ಸೌಲಭ್ಯಗಳು ಮತ್ತು ಹೊಸ ರಾಜವೈಭವದೊಂದಿಗೆ 2026-27ರ ಪ್ರವಾಸಿ ಋತುವಿನ ಯಾನವನ್ನು ಮರು ಆರಂಭಿಸಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ರೈಲು ನಿಲ್ದಾಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಜಂಟಿಯಾಗಿ ಹಸಿರು ನಿಶಾನೆ ತೋರಿ ರೈಲಿನ ಮೊದಲ ಸಂಚಾರಕ್ಕೆ ಚಾಲನೆ ನೀಡಿದರು.

ಮೊದಲ ಪಯಣದಲ್ಲೇ ಭರ್ಜರಿ ಬೇಡಿಕೆ , ಟಿಕೆಟ್ ಸೋಲ್ಡ್ ಔಟ್:

ನವೀಕೃತ ರೂಪದಲ್ಲಿ ಮಾರುಕಟ್ಟೆಗೆ ಬಂದಿರುವ ಈ ಐಷಾರಾಮಿ ರೈಲಿಗೆ ಪ್ರವಾಸಿಗರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಮೊದಲ ಪ್ರಯಾಣದ ಎಲ್ಲಾ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿದ್ದು, ದೇಶದ ಪ್ರಮುಖ ಪ್ರವಾಸಿಗರ ಜೊತೆಗೆ ಸ್ಪೇನ್ ಸೇರಿದಂತೆ ವಿವಿಧ ದೇಶಗಳ ವಿದೇಶಿ ಅತಿಥಿಗಳು ಈ ಸುವರ್ಣ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಐಆರ್‌ಸಿಟಿಸಿ ಹಾಗೂ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಜಂಟಿಯಾಗಿ ಈ ಐಷಾರಾಮಿ ರೈಲನ್ನು ನಿರ್ವಹಿಸುತ್ತಿವೆ.

ಆಧುನಿಕತೆ ಹಾಗೂ ರಾಜವೈಭವದ ಸಮ್ಮಿಲನ:

ಮೈಸೂರಿನ ರೈಲ್ವೆ ಕಾರ್ಯಾಗಾರದಲ್ಲಿ ತಾಂತ್ರಿಕ ನವೀಕರಣ ಹಾಗೂ ಹೊರಾಂಗಣದ ವಿನ್ಯಾಸವನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸಲಾಗಿದೆ. ಈ ಹಿಂದೆ ಕೇವಲ ಮಲಗುವ ಕೋಣೆಗಳನ್ನು ಮಾತ್ರ ಹೊಂದಿದ್ದ ಕ್ಯಾಬಿನ್‌ಗಳನ್ನು ಈಗ ಪ್ರತ್ಯೇಕ 'ಲಿವಿಂಗ್ ರೂಮ್' ಮತ್ತು 'ಬೆಡ್ ರೂಮ್' ಒಳಗೊಂಡಂತೆ ಮರುವಿನ್ಯಾಸಗೊಳಿಸಲಾಗಿದೆ. ದಕ್ಷಿಣ ಭಾರತದ ಮಹಾನ್ ರಾಜವಂಶಗಳಾದ ಹೊಯ್ಸಳ, ಚಾಲುಕ್ಯ ಹಾಗೂ ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪದ ಥೀಮ್ ಆಧಾರಿಸಿ ಒಳಾಂಗಣವನ್ನು ಹೊಳೆಯುವ ಮರದ ಮೇಲ್ಮೈ ಮತ್ತು ಸುಂದರ ವಿನ್ಯಾಸದಿಂದ ಸಜ್ಜುಗೊಳಿಸಲಾಗಿದೆ.

ರೈಲಿನಲ್ಲಿ ಲಭ್ಯವಿರುವ ಪ್ರಮುಖ ಸೌಲಭ್ಯಗಳು

ಒಟ್ಟು 40 ಸುಸಜ್ಜಿತ ಕ್ಯಾಬಿನ್‌ಗಳಿದ್ದು (13 ಡಬಲ್-ಬೆಡ್, 26 ಟ್ವಿನ್-ಬೆಡ್), ಏಕಕಾಲಕ್ಕೆ 80 ಅತಿಥಿಗಳಿಗೆ ಅತ್ಯುನ್ನತ ಆತಿಥ್ಯ ನೀಡಬಹುದು. ವಿಕಲಚೇತನರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಪ್ರತ್ಯೇಕ ಕ್ಯಾಬಿನ್ ಸೌಲಭ್ಯವೂ ಇದೆ. ಪ್ರತಿ ಕ್ಯಾಬಿನ್‌ನಲ್ಲಿ ಸ್ಮಾರ್ಟ್ ಟಿವಿ ಹಾಗೂ ಹೈ-ಸ್ಪೀಡ್ ವೈ-ಫೈ ಸ್ಟ್ರೀಮಿಂಗ್ ವ್ಯವಸ್ಥೆಯಿದ್ದು, ಪ್ರಯಾಣಿಕರಿಗೆ ಖಾಸಗಿ ಥಿಯೇಟರ್ ಅನುಭವ ನೀಡುತ್ತದೆ.

ಜಾಗತಿಕ ಮತ್ತು ಭಾರತೀಯ ಖಾದ್ಯಗಳನ್ನು ಉಣಬಡಿಸುವ 'ರುಚಿ' ಮತ್ತು 'ನಲಪಾಕ' ಎಂಬ ಎರಡು ಸಿಗ್ನೇಚರ್ ರೆಸ್ಟೋರೆಂಟ್‌ಗಳಿವೆ. ಪ್ರೀಮಿಯಂ ಪಾನೀಯಗಳಿಗೆ 'ಮದಿರಾ' ಲೌಂಜ್ ಬಾರ್ ಲಭ್ಯವಿದೆ. ಪ್ರವಾಸಿಗರ ವಿನಂತಿಯಂತೆ ಮೊದಲ ಬಾರಿಗೆ ಜೈನ್ ಆಹಾರ ಹಾಗೂ ಗ್ಲುಟನ್-ಮುಕ್ತ ಖಾದ್ಯಗಳ ಆಯ್ಕೆಯನ್ನು ಪರಿಚಯಿಸಲಾಗಿದೆ. ಅಡುಗೆಮನೆಯಲ್ಲಿ ಕಾಂಬಿ ಓವನ್, ಇಂಡಕ್ಷನ್ ವ್ಯವಸ್ಥೆ ಹಾಗೂ ಸುಧಾರಿತ RO ನೀರು ಶುದ್ಧೀಕರಣ ಘಟಕಗಳನ್ನು ಅಳವಡಿಸಲಾಗಿದೆ. ಪ್ರಯಾಣಿಕರ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಾಂಪ್ರದಾಯಿಕ ಆಯುರ್ವೇದ ಥೆರಪಿ ಮತ್ತು ಜಿಮ್ ಸೌಲಭ್ಯ ಒಳಗೊಂಡ 'ಆರೋಗ್ಯ ಸ್ಪಾ ಮತ್ತು ಫಿಟ್‌ನೆಸ್ ಸೆಂಟರ್' ಕೂಡ ಇರಲಿದೆ. ಇಡೀ ರೈಲಿನಲ್ಲಿ ಕಣ್ಣಿಗೆ ಕಾಣಿಸದ ಅತ್ಯಾಧುನಿಕ ಸಿಸಿಟಿವಿ ಕಣ್ಗಾವಲು ಹಾಗೂ ಸುಧಾರಿತ ಅಗ್ನಿಶಾಮಕ ಅಲಾರಾಂ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

‘ಪ್ರೈಡ್ ಆಫ್ ಕರ್ನಾಟಕ’ ಯಾತ್ರೆಯ ಹೈಲೈಟ್ಸ್:

2026-27ರ ಪ್ರವಾಸಿ ಋತುವಿನಲ್ಲಿ ಒಟ್ಟು 13 ಐಷಾರಾಮಿ ಪ್ರವಾಸಗಳನ್ನು ಯೋಜಿಸಲಾಗಿದೆ. 5 ರಾತ್ರಿಗಳು ಹಾಗೂ 6 ದಿನಗಳ "ಪ್ರೈಡ್ ಆಫ್ ಕರ್ನಾಟಕ" ಪ್ರವಾಸದಲ್ಲಿ ಪ್ರವಾಸಿಗರು ಬಂಡೀಪುರದ ವನ್ಯಜೀವಿ ಧಾಮ, ಬೇಲೂರು-ಹಳೇಬೀಡಿನ ಅದ್ಭುತ ವಾಸ್ತುಶಿಲ್ಪ, ಚಿಕ್ಕಮಗಳೂರಿನ ಸೌಂದರ್ಯಭರಿತ ಕಾಫಿ ತೋಟಗಳು, ವಿಶ್ವಪಾರಂಪರಿಕ ತಾಣ ಹಂಪಿ ಹಾಗೂ ಗೋವಾದ ಸುಂದರ ಕರಾವಳಿ ತೀರಗಳನ್ನು ವೀಕ್ಷಿಸಲಿದ್ದಾರೆ. ಎಲ್ಲಾ ಪ್ರವಾಸಗಳು ಬೆಂಗಳೂರಿನಿಂದಲೇ ಆರಂಭವಾಗಿ ಬೆಂಗಳೂರಿನಲ್ಲಿಯೇ ಮುಕ್ತಾಯಗೊಳ್ಳಲಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು to ಬಂಡೀಪುರ, ಹಂಪಿ ಸೇರಿ ಪ್ರಮುಖ ತಾಣಕ್ಕೆ ಪ್ರವಾಸಿ ರೈಲು, ಟಿಕೆಟ್ ಬೆಲೆ ಎಷ್ಟು?
ಪ್ರತಿಯೊಬ್ಬ ಕನ್ನಡಿಗ ಓದಲೇಬೇಕು; ನಿಮ್ಮ ಮಾತೃಭಾಷೆ ಕನ್ನಡನಾ? ಹಾಗಾದ್ರೆ ರೆಸ್ಯೂಂ ಕಸದ ಬುಟ್ಟಿಗೆ! ಯುವತಿಯ ಶಾಕಿಂಗ್ ವಿಡಿಯೋ ವೈರಲ್!