
ಬೆಂಗಳೂರು (ಅ.24): ವಾಣಿ ವಿಲಾಸ ಆಸ್ಪತ್ರೆ(Vanivilas Hospital Bengaluru)ಯ ವೈದ್ಯರ ನಿರ್ಲಕ್ಷ್ಯದಿಂದಾಗಿ 57 ದಿನದ ಹೆಣ್ಣು ಮಗು ಕಾಲಿನ ಬೆರಳು ಕಳೆದುಕೊಳ್ಳುವಂತಾಗಿದೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಜ್ವರದಿಂದ ಬಳಲುತ್ತಿದ್ದ ಮಗುವನ್ನು ಸೆ.15ಕ್ಕೆ ಆಸ್ಪತ್ರೆಗೆ ಕರೆತರಲಾಗಿತ್ತು. ಪರೀಕ್ಷಿಸಿದ ವೈದ್ಯರು ಮಗುವಿಗೆ ಸೋಂಕು ತಗುಲಿದೆ ಎಂದು ಹೇಳಿ 8 ದಿನಗಳ ಕಾಲ ಚಿಕಿತ್ಸೆ ನೀಡಿದ್ದಾರೆ. ಈ ನಡುವೆ ಮಗುವಿನ ಕಾಲಿಗೆ ಗ್ಯಾಂಗ್ರೀನ್ ಆಗಿದ್ದು, ಅದಕ್ಕೆ ಚಿಕಿತ್ಸೆ ನೀಡಿ ಎಂದರೆ ಸೂಕ್ತ ಚಿಕಿತ್ಸೆ ನೀಡದೆ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ. ಕಾಲಿನ ಬಣ್ಣ ನೀಲಿ ಬಣ್ಣಕ್ಕೆ ತಿರುಗಿದ ಬಗ್ಗೆ ವೈದ್ಯರ ಗಮನಕ್ಕೆ ತಂದಿದರೂ ಗಮನ ಹರಿಸಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.
20 ದಿನ ಕಳೆದಬಳಿಕ ಆಸ್ಪತ್ರೆಯವರು ಕಾಲಿನ ಬೆರಳುಗಳನ್ನು ಕಟ್ ಮಾಡಿ ಮಗುವನ್ನು ನಮಗೆ ನೀಡಿದ್ದಾರೆ. ಕೂಲಿ ಕೆಲಸ ಮಾಡುವ ನಾವು ಆ ಮಗುವನ್ನು ಮುಂದೆ ಹೇಗೆ ಸಾಕಬೇಕು? ಎಂದು ಮಗುವಿನ ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರೋಪ ನಿರಾಕರಿಸಿದ ಆಸ್ಪತ್ರೆ: ಮಕ್ಕಳ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಚಿಕ್ಕನರಸರೆಡ್ಡಿ ಮಾತನಾಡಿ, ಮಗುವಿನ ಪೋಷಕರು ಮೊದಲು ಸಿ.ವಿ. ರಾಮನ್ ಹಾಗೂ ಬೌರಿಂಗ್ ಆಸ್ಪತ್ರೆಗೆ ಹೋಗಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ವಾಣಿವಿಲಾಸ್ ಆಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆಗೆ ಬಂದಾಗಲೇ ಮಗುವಿಗೆ ನಂಜಾಗಿತ್ತು. ಮಗುವಿನ ಪ್ರಾಣಕ್ಕೆ ತೊಂದರೆ ಇತ್ತು. ಬಂದ ಕೂಡಲೇ ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಿದ್ದು, ಸವಾಲಾಗಿ ಸ್ವೀಕರಿಸಿ ಮಗುವಿನ ಪ್ರಾಣ ಉಳಿಸಿದ್ದೇವೆ. ಹೀಗಾಗಿ ವೈದ್ಯರ ನಿರ್ಲಕ್ಷ್ಯವಿಲ್ಲ ಎಂದು ಹೇಳಿದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸವಿತಾ, ಮಗುವಿಗೆ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಹೀಗಾಗಿ ಅಗತ್ಯ ಚಿಕಿತ್ಸೆ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿರುವ ಕಾರಣ, ರೀಲ್ಸ್ ನೋಡಿಕೊಂಡು ಕೂರಲು ಯಾರಿಗೂ ಇಲ್ಲಿ ಸಮಯ ಇಲ್ಲ. ಹೀಗಾಗಿ ಪೋಷಕರ ಆರೋಪ ಸುಳ್ಳು ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ