ಕೇಂದ್ರದಿಂದ ರಾಜ್ಯಕ್ಕೆ 275 ಪಶು ಸಂಜೀವಿನಿ ಸಂಚಾರ ವಾಹನ

By Kannadaprabha NewsFirst Published Oct 7, 2021, 8:38 AM IST
Highlights
  • ಕಳೆದ ಒಂದು ವರ್ಷದಿಂದ ಕೇಂದ್ರದೊಂದಿಗೆ ಸಂವಹನ ನಡೆಸಿದ ಪರಿಣಾಮ
  •  ರಾಜ್ಯಕ್ಕೆ 275 ಪಶುಸಂಜೀವಿನಿ ಸಂಚಾರಿ ಪಶು ಚಿಕಿತ್ಸಾ ವಾಹನಗಳು ಲಭ್ಯವಾಗಿವೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್‌

ಬೆಂಗಳೂರು (ಅ.07):   ಕಳೆದ ಒಂದು ವರ್ಷದಿಂದ ಕೇಂದ್ರದೊಂದಿಗೆ ಸಂವಹನ ನಡೆಸಿದ ಪರಿಣಾಮ ರಾಜ್ಯಕ್ಕೆ 275 ಪಶುಸಂಜೀವಿನಿ (pashu sanjeevini) ಸಂಚಾರಿ ಪಶು ಚಿಕಿತ್ಸಾ ವಾಹನಗಳು (Vehicle) ಲಭ್ಯವಾಗಿವೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್‌ (Prabhu chavan) ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶು ಸಂಜೀವಿನಿ ಯೋಜನೆ ಯಶಸ್ವಿಯಾಗಿದ್ದು, ರೈತರ ಮನೆ ಬಾಗಿಲಿಗೆ ಸಂಚಾರಿ ಪಶು ಚಿಕಿತ್ಸಾ ವಾಹನ ತೆರಳಿ ಚಿಕಿತ್ಸೆ ನೀಡುತ್ತಿರುವುದರಿಂದ ರೈತರಿಗೆ ಈ ಯೋಜನೆ ಉಪಯೋಗವಾಗಿದೆ. ಎಲ್ಲಾ ತಾಲೂಕುಗಳಿಗೆ ಇದನ್ನು ವಿಸ್ತರಿಸಬೇಕು ಎಂದು ಪಕ್ಷಾತೀತವಾಗಿ ಎಲ್ಲ ಜನಪ್ರತಿನಿಧಿಗಳು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಪಶುಸಂಗೋಪನೆ ಸಚಿವ ಪರಶೋತ್ತಮ್‌ ರೂಪಲಾ (Parashottam rupala) ಹಾಗೂ ಇಲಾಖೆಯೊಂದಿಗೆ ನಿರಂತರವಾಗಿ ಚರ್ಚೆ ನಡೆಸಿದ ಪರಿಣಾಮ ರಾಷ್ಟ್ರೀಯ ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯಕ್ಕೆ 275 ಪಶು ಚಿಕಿತ್ಸಾ ವಾಹನಗಳು ದೊರೆತಿವೆ ಎಂದು ತಿಳಿಸಿದರು.

RSS ಇಲ್ದಿದ್ರೆ ಭಾರತ, ಪಾಕಿಸ್ತಾನ ಆಗಿರ್ತಿತ್ತು, ಎಚ್‌ಡಿಕೆಗೆ ಪ್ರಭು ಚವ್ಹಾಣ್ ಟಾಂಗ್

ವಾಹನ ಒದಗಿಸಲು ಕೇಂದ್ರದಿಂದ 44 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದ್ದು, ಪ್ರತಿ ಪಶು ಚಿಕಿತ್ಸಾ ವಾಹನಕ್ಕೆ 16 ಲಕ್ಷ ರು. ವೆಚ್ಚವಾಗಲಿದೆ. ವಾರ್ಷಿಕವಾಗಿ ವಾಹನ ನಿರ್ವಹಣೆ ಪಿಪಿಪಿ (PPP) ಮಾದರಿಯಲ್ಲಿ ನಡೆಯಲಿದೆ. ಪ್ರತಿ ವರ್ಷ ವಾಹನ ಮತ್ತು ಸಿಬ್ಬಂದಿಯ ನಿರ್ವಹಣೆಗೆ ಹೆಚ್ಚುವರಿಯಾಗಿ 50 ಕೋಟಿ ರು. ಅನುದಾನವನ್ನು ಕೇಂದ್ರ ಮತ್ತು ರಾಜ್ಯದ ಪಾಲುದಾರಿಕೆಯಲ್ಲಿ ನೀಡಲಾಗಿದೆ. ರಾಜ್ಯದ ಪಾಲು ಶೇ.40 ಮತ್ತು ಕೇಂದ್ರದ ಪಾಲು ಶೇ.60 ಇರಲಿದೆ. ವಾಹನದಲ್ಲಿ ಓರ್ವ ಪಶುವೈದ್ಯರು, ಪಶು ವೈದ್ಯಕೀಯ ಸಹಾಯಕ ಮತ್ತು ನುರಿತ ಚಾಲಕ/ಪರಿಚಾರಕ ಇರಲಿದ್ದಾರೆ. ಪಶು ಕಲ್ಯಾಣ ಸಹಾಯವಾಣಿ ದೇಶದಲ್ಲಿಯೇ ಮೊದಲಬಾರಿಗೆ ರಾಜ್ಯದಲ್ಲಿ ಸ್ಥಾಪನೆಯಾಗಿದ್ದು, ಅತ್ಯಂತ ಯಶಸ್ವಿಯಾಗಿ ರೈತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪಶುಸಂಗೋಪನೆ ಇಲಾಖೆ ಕಾರ್ಯಪ್ರವೃತ್ತವಾಗಿದೆ ಎಂದು ಮಾಹಿತಿ ನೀಡಿದರು.

ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅತಿ ಶೀಘ್ರದಲ್ಲಿಯೇ ಸಮಯ ನಿಗದಿಗೊಳಿಸಿ ಸಂಚಾರಿ ಪಶು ಶಸ್ತ್ರ ಚಿಕಿತ್ಸಾ ವಾಹನವನ್ನು ಲೋಕಾರ್ಪಣೆ ಮಾಡಲಾಗುವುದು. ಟಾಟಾ ಕಂಪನಿ ಜತೆ ಮಾತುಕತೆ ನಡೆಸಲಾಗಿದ್ದು, ಆದಷ್ಟುಬೇಗ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಸಂಚಾರಿ ಪಶು ಶಸ್ತ್ರ ಚಿಕಿತ್ಸಾವಾಹನ ಕಾರ್ಯನಿರ್ವಹಿಸಲಿವೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಪಶುಸಂಗೋಪನೆ ಇಲಾಖೆ ನಿರ್ದೇಶಕ ಮಂಜುನಾಥ ಪಾಳೇಗಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

click me!