ರೈತರ ಮಾರಣಹೋಮ ದೇಶಕ್ಕೇ ಕಪ್ಪುಚುಕ್ಕೆ: ಸಿಎಂ ರಾಜೀನಾಮೆ ಕೊಡಲಿ

By Kannadaprabha NewsFirst Published Oct 7, 2021, 7:45 AM IST
Highlights
  • ಉತ್ತರ ಪ್ರದೇಶದ ರೈತರ ಮಾರಣ ಹೋಮ ದೇಶಕ್ಕೇ ಕಪ್ಪು ಚುಕ್ಕೆ
  • ಆರು ಮಂದಿ ರೈತರನ್ನು ಅಮಾನುಷವಾಗಿ ಕಾರು ಹತ್ತಿಸಿ ಕೊಲೆ ಮಾಡಿದ ಕೇಂದ್ರ ಸಚಿವರ ಪುತ್ರನನ್ನು ಕೂಡಲೇ ಬಂಧಿಸಬೇಕು

 ಬೆಂಗಳೂರು (ಅ.07):  ಉತ್ತರ ಪ್ರದೇಶದ (Uttara Pradesh) ರೈತರ (Farmers) ಮಾರಣ ಹೋಮ ದೇಶಕ್ಕೇ ಕಪ್ಪು ಚುಕ್ಕೆ. ಆರು ಮಂದಿ ರೈತರನ್ನು ಅಮಾನುಷವಾಗಿ ಕಾರು (Car) ಹತ್ತಿಸಿ ಕೊಲೆ ಮಾಡಿದ ಕೇಂದ್ರ ಸಚಿವರ ಪುತ್ರನನ್ನು ಕೂಡಲೇ ಬಂಧಿಸಬೇಕು. ಇನ್ನು ಮುಂದೆ ರೈತರ ವಿರುದ್ಧ ಮಾತನಾಡುವವರು ಹಾಗೂ ಪ್ರಚೋದಿಸುವವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಒತ್ತಾಯಿಸಿದ್ದಾರೆ.

ಬುಧವಾರ ಕೆಪಿಸಿಸಿ (KPCC) ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಈ ದೇಶದಲ್ಲಿ ಸರ್ವಾಧಿಕಾರಿ ಧೋರಣೆ ಯಾವ ಮಟ್ಟದಲ್ಲಿದೆ? ಸರ್ಕಾರ ಯಾವ ಮಟ್ಟದಲ್ಲಿ ಬೆದರಿಕೆ ನೀತಿಯನ್ನು ಅಳವಡಿಸಿಕೊಂಡಿದೆ ಎಂಬುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿ. ಹೀಗಾಗಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‌ಮಿಶ್ರಾ (Ajay Mishra) ಅವರ ಪುತ್ರನ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಿ ಬಂಧಿಸಬೇಕು. ಜತೆಗೆ ರೈತರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಸಚಿವ ಅಜಯ್‌ಮಿಶ್ರಾ ಹಾಗೂ ಹರ್ಯಾರ್‍ಣ ಮುಖ್ಯಮಂತ್ರಿ ಮನೋಹರ್‌ಲಾಲ್‌ ಖಟ್ಟರ್‌ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ದಲಿತ ಸಿಎಂ ವಿಚಾರ: ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ

ರೈತರನ್ನು ಹತ್ಯೆ ಮಾಡಿದವರಿಗೆ ಕೇಂದ್ರ ಸರ್ಕಾರ ರಾಜಮರ್ಯಾದೆ ನೀಡುತ್ತಿದೆ. ಅದೇ ರೈತರಿಗೆ ಸಾಂತ್ವನ ಹೇಳಲು ಹೊರಟ ಪ್ರಿಯಾಂಕಾ ಗಾಂಧಿ (Priyanka Gandhi) ಅವರನ್ನು ಕಾನೂನುಬಾಹಿರವಾಗಿ ಬಂಧಿಸಿದೆ. ಈ ಕುರಿತು ಸುಪ್ರೀಂ ಕೋರ್ಟ್‌ (supreme Court) ವಿಶ್ರಾಂತ ನ್ಯಾಯಮೂರ್ತಿಗಳೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರ್ಕಾರಕ್ಕೆ ರೈತರ ಬಗ್ಗೆ ಬದ್ಧತೆ ಇದ್ದರೆ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯ ಮಾಡಿದರು.

ದೇಶದ ಅನ್ನದಾತರ ಮೇಲೆ ಉತ್ತರ ಪ್ರದೇಶ, ಹರಿಯಾಣ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರದ ಬಿಜೆಪಿ ಸರ್ಕಾರಗಳು ದೌರ್ಜನ್ಯ ನಡೆಸುತ್ತಿವೆ. ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ… ಮಿಶ್ರಾ ಅವರ ಪುತ್ರ ಕಾರು ಹರಿಸಿ ಹತ್ಯೆ ಮಾಡಿದ್ದಾರೆ. ಈ ಹಿಂದೆ ಪ್ರತಿಭಟನಾನಿರತ ರೈತರಿಗೆ ಆತ ಪಾಠ ಕಲಿಸುವುದಾಗಿ ಎಚ್ಚರಿಸಿದ್ದರು. ಇದನ್ನೆಲ್ಲಾ ನೋಡುತ್ತಿದ್ದರೆ ದೇಶದಲ್ಲಿ ಸರ್ವಾಧಿಕಾರದ ಸರ್ಕಾರ ಆಳ್ವಿಕೆ ನಡೆಸಿದಂತೆ ಕಾಣುತ್ತಿದೆ ಎಂದು ಖರ್ಗೆ ಕಿಡಿಕಾರಿದರು.

ಯೋಗಿ ರಾಜೀನಾಮೆ ನೀಡಲಿ:

ನರೇಂದ್ರ ಮೋದಿಯವರು ಮಂಗಳವಾರ ಲಖನೌನಲ್ಲೇ ಇದ್ದರೂ ರೈತರ ಕುಟುಂಬಕ್ಕೆ ಸಾಂತ್ವನ ಹೇಳುವ ಪ್ರಯತ್ನ ಮಾಡದೇ ನಿರ್ಲಕ್ಷಿಸಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿಗಳು ಯಾವಾಗಲೂ ಕಾನೂನುಬಾಹಿರವಾಗಿ ನಡೆದುಕೊಳ್ಳುತ್ತಾರೆ. ಹತ್ರಾಸ್‌ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆ ಶವವನ್ನು ಅವರ ಪೋಷಕರಿಗೆ ತಿಳಿಸದಂತೆ ರಾತ್ರೋರಾತ್ರಿ ಸುಟ್ಟರು. ಆಮೂಲಕ ಇಂತಹ ಕೆಲಸಗಳಿಗೆ ಪ್ರಚೋದನೆ, ಪೋ›ತ್ಸಾಹ ನೀಡುತ್ತಿದ್ದು, ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಅರ್ಹರಲ್ಲ. ಅವರು ಬಾಯಲ್ಲಿ ರಾಮ, ಮಗ್ಗುಲಲ್ಲಿ ಚೂರಿ ಎಂಬ ಮಾತಿನಂತೆ ಅವರು ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಯೋಗಿ ಆದಿತ್ಯನಾಥ್‌ ರಾಜೀನಾಮೆ ನೀಡಬೇಕು ಎಂದರು.

ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌, ಕಾರ್ಯಾಧ್ಯಕ್ಷರಾದ ರಾಮಲಿಂಗ ರೆಡ್ಡಿ, ಈಶ್ವರ್‌ ಖಂಡ್ರೆ, ಧ್ರುವ ನಾರಾಯಣ್‌ ಸೇರಿದಂತೆ ಹಲವರು ಹಾಜರಿದ್ದರು.

click me!