ಕರ್ನಾಟಕದ ಮೊದಲ ಸಮುದ್ರ ಆಂಬ್ಯುಲೆನ್ಸ್ ಸೇವೆ - ಮಂಗಳೂರು, ಮಲ್ಪೆ, ತದಡಿ ಬಂದರಿನಿಂದ ಆರಂಭ

Published : Sep 30, 2024, 01:19 PM ISTUpdated : Sep 30, 2024, 01:54 PM IST
ಕರ್ನಾಟಕದ ಮೊದಲ ಸಮುದ್ರ ಆಂಬ್ಯುಲೆನ್ಸ್ ಸೇವೆ - ಮಂಗಳೂರು, ಮಲ್ಪೆ, ತದಡಿ ಬಂದರಿನಿಂದ ಆರಂಭ

ಸಾರಾಂಶ

ಕಡಲಿಗಿಳಿದು ಮೀನು ಹಿಡಿಯುವ ಮೀನುಗಾರರ ಹಲವು ವರ್ಷಗಳ ಬೇಡಿಕೆ ಈಡೇರಿಕೆಗೆ ಮುಂದಾಗಿರುವ ಸರ್ಕಾರ, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸಮುದ್ರ ಆಂಬ್ಯುಲೆನ್ಸ್‌ ಖರೀದಿಗೆ ಸಿದ್ಧತೆ ನಡೆಸಲಾಗಿದೆ.

ಗಿರೀಶ್‌ ಗರಗ

 ಬೆಂಗಳೂರು (ಸೆ.30) :  ಕಡಲಿಗಿಳಿದು ಮೀನು ಹಿಡಿಯುವ ಮೀನುಗಾರರ ಹಲವು ವರ್ಷಗಳ ಬೇಡಿಕೆ ಈಡೇರಿಕೆಗೆ ಮುಂದಾಗಿರುವ ಸರ್ಕಾರ, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸಮುದ್ರ ಆಂಬ್ಯುಲೆನ್ಸ್‌ ಖರೀದಿಗೆ ಸಿದ್ಧತೆ ನಡೆಸಲಾಗಿದೆ.

ಕರಾವಳಿಯ ಮೀನುಗಾರರು ಹಾಗೂ ಪ್ರವಾಸಿಗರ ಸುರಕ್ಷತೆಗಾಗಿ ಸಮುದ್ರ ಆಂಬ್ಯುಲೆನ್ಸ್‌ ಸೇವೆ ಆರಂಭಿಸುವಂತೆ ಹಲವು ವರ್ಷಗಳಿಂದ ರಾಜ್ಯ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗುತ್ತಿತ್ತು. ಆದರೆ, ಅದು ಈವರೆಗೆ ಈಡೇರಿರಲಿಲ್ಲ. ಅಲ್ಲದೆ, ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಕರಾವಳಿ ಪ್ರದೇಶದಲ್ಲಿ ಪ್ರಚಾರ ಮಾಡುವಾಗ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಸಮುದ್ರ ಆಂಬ್ಯುಲೆನ್ಸ್‌ ಸೇವೆ ಆರಂಭಿಸುವಂತೆ ಮೀನುಗಾರರು ಒತ್ತಾಯಿಸಿದ್ದರು. ಅದಕ್ಕೆ ಅಸ್ತು ಎಂದಿದ್ದ ರಾಹುಲ್‌ ಗಾಂಧಿ, ಸರ್ಕಾರ ರಚನೆಯಾದ ನಂತರ ಸಮುದ್ರ ಆಂಬ್ಯಲೆನ್ಸ್ ಸೇವೆ ಆರಂಭಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚನೆಯನ್ನೂ ನೀಡಿದ್ದರು.

ಅದರ ಆಧಾರದಲ್ಲಿ ಸಮುದ್ರ ಆಂಬ್ಯುಲೆನ್ಸ್ ಖರೀದಿಗಾಗಿ 2024-25ನೇ ಸಾಲಿನ ಬಜೆಟ್‌ನಲ್ಲಿ ಹಣವನ್ನೂ ಮೀಸಲಿಡಲಾಗಿತ್ತು. ಇದೀಗ ಸಮುದ್ರ ಆಂಬ್ಯುಲೆನ್ಸ್‌ ಖರೀದಿಗೆ ಮೀನುಗಾರಿಕಾ ಇಲಾಖೆ ಮುಂದಾಗಿದ್ದು, ಇನ್ನು ಕೆಲವೇ ತಿಂಗಳಲ್ಲಿ ನೂತನ ಸಮುದ್ರ ಆಂಬ್ಯುಲೆನ್ಸ್ ಬೋಟ್‌ಗಳು ಕಡಲಿಗಿಳಿಯಲಿವೆ.

 

ಕರಾವಳಿಯಲ್ಲಿಅತೀ ಅಪರೂಪದ 'ಡೂಮ್ಸ್‌ ಡೇ ಫಿಶ್‌' ಪತ್ತೆ: ಇದಕ್ಕೂ ಪ್ರಾಕೃತಿಕ ವಿಕೋಪಕ್ಕೂ ಇದೆ ಸಂಬಂಧ!

 ಬಂದರುಗಳಿಂದ ಕಾರ್ಯಾಚರಣೆ: 

ಮೀನುಗಾರಿಕಾ ಇಲಾಖೆ ಯೋಜನೆಯಂತೆ 320 ಕಿಮೀ ಉದ್ದದ ಕರಾವಳಿ ಪ್ರದೇಶದಲ್ಲಿನ ಮೂರು ಬಂದರುಗಳಿಂದ ಸಮುದ್ರ ಆಂಬ್ಯುಲೆನ್ಸ್‌ ಸೇವೆ ಆರಂಭಿಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯ ಮಂಗಳೂರು ಬಂದರು, ಉಡುಪಿ ಜಿಲ್ಲೆ ವ್ಯಾಪ್ತಿಯ ಮಲ್ಪೆ ಹಾಗೂ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯ ತದಡಿ ಬಂದರುಗಳಿಂದ ಸಮುದ್ರ ಆಂಬ್ಯುಲೆನ್ಸ್‌ ಸೇವೆ ನೀಡಲಾಗುತ್ತದೆ. ಅದಕ್ಕಾಗಿ 3 ಸಮುದ್ರ ಆಂಬ್ಯುಲೆನ್ಸ್‌ಗಳನ್ನು ಖರೀದಿಸಲು ಮುಂದಾಗಿದ್ದು, ಅದಕ್ಕಾಗಿ ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮೂರು ಆಂಬ್ಯುಲೆನ್ಸ್‌ ಖರೀದಿಗಾಗಿ ಸುಮಾರು 7 ಕೋಟಿ ರು. ವ್ಯಯಿಸಲು ನಿರ್ಧರಿಸಲಾಗಿದೆ.

 ವೈದ್ಯಕೀಯ ಉದ್ದೇಶಕ್ಕೆ ಬಳಕೆ: 

ನೂತನ ಸಮುದ್ರ ಆಂಬ್ಯುಲೆನ್ಸ್‌ ಬೋಟ್‌ಗಳನ್ನು ಪ್ರಮುಖವಾಗಿ ವೈದ್ಯಕೀಯ ಉದ್ದೇಶಕ್ಕೆ ಬಳಸಲಾಗುತ್ತದೆ. ಸಮುದ್ರದಲ್ಲಿ ಮೀನುಗಾರರಿಗೆ ಅಥವಾ ಸಾರ್ವಜನಿಕರಿಗೆ ಯಾವುದಾದರೂ ಸಮಸ್ಯೆಯಾದಾಗ ಕೂಡಲೆ ನೆರವಿಗೆ ಧಾವಿಸಿ ಅವರಿಗೆ ವೈದ್ಯಕೀಯ ನೆರವು ನೀಡಲಾಗುತ್ತದೆ. ಅದಕ್ಕಾಗಿ ಆಂಬ್ಯುಲೆನ್ಸ್‌ನಲ್ಲಿ ವೈದ್ಯಕೀಯ ಸಿಬ್ಬಂದಿ ನೇಮಿಸಲಾಗುತ್ತದೆ ಹಾಗೂ ಪ್ರತಿ ಆಂಬ್ಯುಲೆನ್ಸ್‌ನಲ್ಲಿ ಐವರು ರೋಗಿಗಳನ್ನು ಕರೆದುಕೊಂಡು ಹೋಗುವ ಹಾಗೂ ಬೋಟ್‌ನಲ್ಲೇ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನೂ ಅಳವಡಿಸಲಾಗುತ್ತಿದೆ. ಅದರ ಜತೆಗೆ ರಕ್ಷಣಾ ಸಿಬ್ಬಂದಿ, ಆಕ್ಸಿಜನ್‌ ಸಿಲಿಂಡರ್‌ ಸೇರಿದಂತೆ ವೈದ್ಯಕೀಯ ಚಿಕಿತ್ಸಾ ಪರಿಕರಗಳನ್ನೂ ಆಂಬ್ಯುಲೆನ್ಸ್‌ನಲ್ಲಿಡಲಾಗುತ್ತದೆ. 

 ಆಂಬ್ಯುಲೆನ್ಸ್‌ ನಿರ್ಮಾಣದ ಕುರಿತ ನಿಗಾಕ್ಕೆ ಸಮಿತಿ ರಚನೆ: 

ಸಮುದ್ರ ಆಂಬ್ಯುಲೆನ್ಸ್‌ ಪೂರೈಸುವ ಸಂಸ್ಥೆಯು ಮೀನುಗಾರಿಕಾ ಇಲಾಖೆ ನಿಗದಿ ಮಾಡಿದಂತೆ ಆ ಆಂಬ್ಯುಲೆನ್ಸ್‌ಗಳನ್ನು ಸಿದ್ಧಪಡಿಸಬೇಕಿದೆ. ಅದಕ್ಕಾಗಿ ಹೆಚ್ಚುವರಿ ಮೀನುಗಾರಿಕೆ ನಿರ್ದೇಶಕ (ಮಲ್ಪೆ ಬಂದರು)ರ ನೇತೃತ್ವದಲ್ಲಿ ಸಮಿತಿ ರಚಿಸಲಾಗುತ್ತಿದೆ. ಈ ಸಮಿತಿಯಲ್ಲಿ ಮೀನುಗಾರಿಕೆ ಕಾಲೇಜಿನ ಪ್ರತಿನಿಧಿ, ಮಂಗಳೂರು, ಉಡುಪಿ, ಕಾರವಾರದ ಮೀನುಗಾರಿಕೆ ಜಂಟಿ ನಿರ್ದೇಶಕರು ಹಾಗೂ ಉಪ ನಿರ್ದೇಶಕರನ್ನು ಸದಸ್ಯರನ್ನಾಗಿ ನೇಮಿಸಲಾಗುತ್ತಿದೆ. ಈ ಸಮಿತಿಯು ಮೀನುಗಾರಿಕೆ ಇಲಾಖೆ ನಿಗದಿ ಮಾಡುವ ಮಾನದಂಡದಂತೆ ಸಮುದ್ರ ಆಂಬ್ಯುಲೆನ್ಸ್‌ ನಿರ್ಮಿಸಲಾಗುತ್ತಿದೆ ಎಂಬ ಬಗ್ಗೆಯೂ ನಿಗಾವಹಿಸಲಿದೆ.

ರಾಜ್ಯದ ಕರಾವಳಿಗೆ ಶುಭ ಸುದ್ದಿ, ಶೀಘ್ರದಲ್ಲೇ ಭಾರತೀಯ ರೈಲ್ವೆಯಲ್ಲಿ ಕೊಂಕಣ್‌ ರೈಲ್ವೆ ವಿಲೀನ!

 ನೈಸರ್ಗಿಕ ವಿಕೋಪದಲ್ಲಿ ಅಲರ್ಟ್‌: 

ಸಮುದ್ರದಲ್ಲಿ ಸಂಭವಿಸುವ ಅಪಘಾತಗಳು ಸೇರಿದಂತೆ ಇನ್ನಿತರ ದುರ್ಘಟನೆಗಳ ಜತೆಗೆ ನೈಸರ್ಗಿಕ ವಿಕೋಪದಂತಹ ಸಂದರ್ಭದಲ್ಲಿಯೂ ಸಮುದ್ರ ಆಂಬ್ಯುಲೆನ್ಸ್‌ಗಳನ್ನು ಬಳಸಲು ನಿರ್ಧರಿಸಲಾಗಿದೆ. ಅದರ ಪ್ರಕಾರ ಚಂಡಮಾರುತ, ಪ್ರವಾಹ, ಸುನಾಮಿಯಂತಹ ಸಂದರ್ಭದಲ್ಲಿ ಈ ಆಂಬ್ಯುಲೆನ್ಸ್‌ಗಳನ್ನು ಹೈ ಅಲರ್ಟ್‌ನಲ್ಲಿಡಲಾಗುತ್ತದೆ. ಅಲ್ಲದೆ, ಹವಾಮಾನ ಇಲಾಖೆಯ ಮುನ್ಸೂಚನೆಯನ್ನಾಧರಿಸಿ ಇವುಗಳು ಕೆಲಸ ಮಾಡಲಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಉಪಲೋಕಾಯುಕ್ತರಿಗೆ ಒಂದ್ ನಮಸ್ಕಾರ': ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಲು ಮಾತ್ರ ಅಧಿಕಾರವಿದೆಯೇ? – ಹೆಚ್‌ಡಿಕೆ ವ್ಯಂಗ್ಯ
ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ: ಯತೀಂದ್ರ ಸಿದ್ದರಾಮಯ್ಯ