* ಕಡೂರು ತಾಲೂಕಲ್ಲಿ ಇಂದು ಲೋಕಾರ್ಪಣೆ
* ರಾಜ್ಯದ ಮೊದಲ ಸರ್ಕಾರಿ ಗೋಶಾಲೆ
* 200 ಗೋ ಸಾಕಣೆ ಪ್ರಭು ಚವ್ಹಾಣ್ ಉದ್ಘಾಟನೆ
* ಗೋವುಗಳನ್ನು ದತ್ತು ಪಡೆಯಲು ಇಲ್ಲಿದೆ ಅವಕಾಶ
ಚಿಕ್ಕಮಗಳೂರು(ಜೂ.27): ಪ್ರತಿ ಜಿಲ್ಲೆಗೊಂದು ಸರ್ಕಾರಿ ಗೋಶಾಲೆ ನಿರ್ಮಾಣ ಮಾಡುವ ಈ ಬಾರಿಯ ಬಜೆಟ್ ಘೋಷಣೆಯಂತೆ ತಲೆ ಎತ್ತಿರುವ ರಾಜ್ಯದ ಮೊದಲ ಸರ್ಕಾರಿ ಗೋ ಶಾಲೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಎಮ್ಮೆದೊಡ್ಡಿಯಲ್ಲಿ ಸೋಮವಾರ ಲೋಕಾರ್ಪಣೆಗೊಳ್ಳಲಿದೆ.
ಪಶು ಸಂಗೋಪನಾ ಸಚಿವ ಪ್ರಭು ಚವಾಣ್ ಬೆಳಗ್ಗೆ 11ಕ್ಕೆ ಗೋಶಾಲೆ ಉದ್ಘಾಟಿಸಲಿದ್ದಾರೆ. ಸುಮಾರು .53 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಗೋಶಾಲೆಯಲ್ಲಿ ಸುಮಾರು 200ಕ್ಕೂ ಅಧಿಕ ಜಾನುವಾರುಗಳಿಗೆ ಆಶ್ರಯ ನೀಡಬಹುದು. ಸದ್ಯ ಇಲ್ಲಿ ಬೀಡಾಡಿ ಗೋವುಗಳು, ರೈತರಿಗೆ ಸಾಕಲು ಕಷ್ಟವಾಗಿರುವ ಜಾನುವಾರುಗಳು, ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ಜಾನುವಾರುಗಳನ್ನು ಸಾಕಲು ವ್ಯವಸ್ಥೆ ಮಾಡಲಾಗಿದೆ. ಒಟ್ಟು ಎರಡು ಎಕರೆಯಲ್ಲಿ ಗೋ ಶಾಲೆ, 8 ಎಕರೆಯಲ್ಲಿ ಮೇವು ಬೆಳೆಯಲು ಜಾಗ ಮೀಸಲಿರಿಸಲಾಗಿದೆ ಎಂದು ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಪ್ರಕಾಶ್ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಪುಣ್ಯಕೋಟಿ ದತ್ತು:
ಗೋಶಾಲೆ ನಿರ್ಮಾಣದ ಜತೆಗೆ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಪುಣ್ಯಕೋಟಿ ದತ್ತು ಕಾರ್ಯಕ್ರಮವನ್ನೂ ಜಾರಿಗೆ ತಂದಿದೆ. ಪ್ರಾಣಿ ಸಂಗ್ರಹಾಲಯಗಳಲ್ಲಿ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಮಾದರಿಯಲ್ಲೇ ಗೋಶಾಲೆಯಲ್ಲಿರುವ ರಾಸುಗಳನ್ನೂ ದತ್ತು ತೆಗೆದುಕೊಳ್ಳಲು ಈ ಕಾರ್ಯಕ್ರಮದಡಿ ಅವಕಾಶ ಮಾಡಿಕೊಡಲಾಗುವುದು. ಇದಕ್ಕಾಗಿ 1 ರಾಸುವಿಗೆ ಒಂದು ವರ್ಷಕ್ಕೆ .11 ಸಾವಿರ ನೀಡಬೇಕಾಗಿದೆ. ಪುಣ್ಯಕೋಟಿ ದತ್ತು, ದತ್ತಾಂಶವನ್ನು ರಾಜ್ಯ ಸರ್ಕಾರ ಸಿದ್ಧಪಡಿಸಿದ್ದು, ಚಿಕ್ಕಮಗಳೂರು ಜಿಲ್ಲೆಯ 7 ಖಾಸಗಿ ಗೋ ಶಾಲೆಗಳ ಮಾಹಿತಿಯನ್ನು ದತ್ತಾಂಶದಲ್ಲಿ ದಾಖಲು ಮಾಡಲಾಗಿದೆ ಎಂದು ಉಪನಿರ್ದೇಶಕ ಡಾ.ಪ್ರಕಾಶ್ ತಿಳಿಸಿದ್ದಾರೆ.
7 ಖಾಸಗಿ ಗೋ ಶಾಲೆ:
ಜಿಲ್ಲೆಯಲ್ಲಿ ಒಟ್ಟು 7 ಖಾಸಗಿ ಗೋ ಶಾಲೆಗಳಿದ್ದು, ಈ ಪೈಕಿ ಕೊಪ್ಪ ತಾಲೂಕಿನಲ್ಲಿ 4, ಶೃಂಗೇರಿ, ಕಡೂರು ತಾಲೂಕುಗಳಲ್ಲಿ ತಲಾ ಒಂದು, ಬಾಳೆಹೊನ್ನೂರಿನಲ್ಲಿ ಒಂದು ಗೋ ಶಾಲೆ ಇದೆ. ಇವುಗಳಲ್ಲಿ 1139 ರಾಸುಗಳಿವೆ. ಈ ಗೋಶಾಲೆಗಳಿಗೆ ರಾಜ್ಯ ಸರ್ಕಾರ ಪ್ರತಿ ರಾಸುವಿನ ನಿರ್ವಹಣೆಗೆ ಪ್ರತಿದಿನ .17.50 ನೀಡುತ್ತಿದೆ.
ಆತ್ಮನಿರ್ಭರ ಗೋಶಾಲೆ!
ಮುಂದಿನ ದಿನಗಳಲ್ಲಿ ಸರ್ಕಾರಿ ಗೋಶಾಲೆಗಳನ್ನು ಆತ್ಮನಿರ್ಭರ್ ಗೋಶಾಲೆಗಳನ್ನಾಗಿ ಮಾಡಲೂ ಸರ್ಕಾರ ಚಿಂತನೆ ನಡೆಸಿದೆ. ಗೋಶಾಲೆಗಳಲ್ಲಿರುವ ಗೋವುಗಳಿಂದ ಉತ್ಪತ್ತಿಯಾಗುವ ಸಗಣಿ, ಗಂಜಲದಿಂದ ಗವ್ಯ ಸೇರಿ ಉಪ ಉತ್ಪನ್ನಗಳನ್ನು ತಯಾರಿಸುವ ಉದ್ದೇಶವಿದೆ. ಈ ಮೂಲಕ ಗೋಶಾಲೆಗಳಿಗೆ ಆದಾಯದ ಮೂಲವನ್ನೂ ದಾರಿ ಮಾಡಿಕೊಡುವ ಉದ್ದೇಶ ಸರ್ಕಾರಕ್ಕಿದೆ.