ಶಾಲಾ ಮಕ್ಕಳನ್ನು ಪ್ರೇಕ್ಷಕರಾಗಿ ಬಳಸಿಕೊಳ್ಳುವಂತಿಲ್ಲ: ಶಿಕ್ಷಣ ಇಲಾಖೆ ಮಹತ್ವದ ಆದೇಶ

Published : Aug 03, 2025, 03:08 PM ISTUpdated : Aug 03, 2025, 03:09 PM IST
Ramanagar news

ಸಾರಾಂಶ

ಸರ್ಕಾರಿ ಶಾಲಾ ಮಕ್ಕಳನ್ನು ಸರ್ಕಾರಿ ಮತ್ತು ಖಾಸಗಿ ಕಾರ್ಯಕ್ರಮಗಳಲ್ಲಿ ಪ್ರೇಕ್ಷಕರನ್ನಾಗಿ ಬಳಸಿಕೊಳ್ಳುವುದನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. 

ರಾಮನಗರ: ಇನ್ನು ಮುಂದೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಯಾವುದೇ ಸರ್ಕಾರಿ ಅಥವಾ ಖಾಸಗಿ ಕಾರ್ಯಕ್ರಮಗಳಿಗೆ ಪ್ರೇಕ್ಷಕರಾಗಿ ಬಳಸಿಕೊಳ್ಳುವಂತಿಲ್ಲ.

ಸಾಮಾನ್ಯವಾಗಿ ದಾರ್ಶನಿಕರ ಜಯಂತಿಗಳು, ಸರ್ಕಾರಿ ಸಮಾರಂಭಗಳು ಹಾಗೂ ಜಾಗೃತಿ ಮೂಡಿಸುವ ಜಾಥಾಗಳಲ್ಲಿ ಶಾಲಾ ಮಕ್ಕಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲಾಗುತ್ತಿತ್ತು. ಇದರಿಂದ ಶಾಲೆಗಳಲ್ಲಿ ಪಠ್ಯ ಪ್ರವಚನ ಹಾಗೂ ಆ ಮಕ್ಕಳ ಶೈಕ್ಷಣಿಕ ಚಟುವಟಿಕೆ ಮೇಲೆ ಪರಿಣಾಮ ಬೀರುತ್ತಿತ್ತು.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಅವರ ಶಾಲೆಯ ಹೊರಗಡೆ ವಿವಿಧ ಕಾರ್ಯಕ್ರಮಗಳ ಪ್ರೇಕ್ಷಕರಾಗಿ ಭಾಗವಹಿಸಲು ಅಥವಾ ಕರೆದುಕೊಂಡು ಹೋಗಲು ನಿರ್ದೇಶಿಸಬಾರದು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಆದೇಶದಲ್ಲಿ ಏನಿದೆ?

ಯಾವುದೇ ಶಿಕ್ಷಕರನ್ನು/ಶಾಲಾ ಮುಖ್ಯೋಪಾಧ್ಯಾಯರನ್ನು ಯಾವುದೇ ತರಬೇತಿ ಕಾರ್ಯಕ್ರಮಗಳಿಗೆ, ಕಾರ್ಯಾಗಾರಗಳಿಗೆ, ಸಭೆಗಳಿಗೆ, ಇತರೆ ಚಟುವಟಿಕೆಗಳಿಗೆ ಶಾಲಾ ದಿನಗಳಲ್ಲಿ, ಶಾಲಾ ಸಮಯದಲ್ಲಿ ನಿಯೋಜನೆ/ಓಓಡಿ ಮೌಖಿಕ ಅಥವಾ ಲಿಖಿತ ಆದೇಶಗಳ ಮೂಲಕ ಕಳುಹಿಸಬಾರದು. ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಹ ಇಂತಹ ನಿರ್ದೇಶನಗಳನ್ನು ನೀಡಬಾರದು.

ಶಾಲಾ ಸಮಯದಲ್ಲಿ ಶಾಲಾ ಶಿಕ್ಷಕರು ಮತ್ತು ಶಾಲಾ ಮುಖ್ಯೋಪಾಧ್ಯಾಯರ ಯಾವುದೇ ಸಭೆಗಳನ್ನು ಕರೆಯಬಾರದು ಅಥವಾ ವಿಡಿಯೋ ಕಾನ್ಸರೆನ್ಸ್ (video conference) ಮಾಡಬಾರದು. ಶಾಲೆಗಳನ್ನು ಭೇಟಿ ನೀಡುವ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ನಡೆದುಕೊಳ್ಳಬೇಕು. ಯಾವುದೇ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಅವರ ಶಾಲೆಯ ಹೊರಗಡೆ ವಿವಿಧ ಕಾರ್ಯಕ್ರಮಗಳ ಪ್ರೇಕ್ಷಕರಾಗಿ ಭಾಗವಹಿಸಲು ಅಥವಾ ಕರೆದುಕೊಂಡು ಹೋಗಲು ನಿರ್ದೇಶಿಸಬಾರದು.

ಶಾಲಾ ದಿನಗಳಲ್ಲಿ ಯಾವುದೇ ಬಾಹ್ಯ ಪರೀಕ್ಷೆಗಳನ್ನು (ಉದಾ: ಕರ್ನಾಟಕ ಲೋಕಸೇವಾ ಆಯೋಗ (KPSC) ಅಥವಾ ಇತರ ರಾಜ್ಯ/ಕೇಂದ್ರ ಸರ್ಕಾರ/ಖಾಸಗಿ ಸಂಸ್ಥೆಗಳು ನಡೆಸುವ ಪರೀಕ್ಷೆಗಳು) ಶಾಲೆಯ ಆವರಣದಲ್ಲಿ ನಡೆಸಬಾರದು. ಈ ನಿಬಂಧನೆಯನ್ನು ಉಲ್ಲಂಘಿಸಿದ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಯಟ್ ಪ್ರಾಂಶುಪಾಲರು, ಶಾಲಾ ಮುಖ್ಯೋಪಾಧ್ಯಾಯರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಇಂತಹ ಪರೀಕ್ಷೆಗಳನ್ನು ನಡೆಸಲು ಅವಕಾಶ ನೀಡಬೇಕಾದ್ದಲ್ಲಿ. ಅದು ಸಾರ್ವಜನಿಕ ರಜೆ ಅಥವಾ ಬೇಸಿಗೆ ರಜೆಯ ಸಮಯದಲ್ಲಿ ಮಾತ್ರ ನಿಯಮಗಳಂತೆ ನೀಡಬೇಕು.

ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಯಟ್ ಪ್ರಾಂಶುಪಾಲರು, ಶಾಲಾ ಮುಖ್ಯೋಪಾಧ್ಯಾಯರ ಇಲಾಖೆಯ ಯಾವುದೇ ಮಟ್ಟದ ಅಧಿಕಾರಿಗಳು ಖಾಸಗಿ ಸಂಸ್ಥೆಗಳ ಅಥವಾ ಯಾವುದೇ ಜ್ಞಾನ ಪಾಲುದಾರರು ಸಾಫ್ಟ್‌ವೇರ್‌ಗಳಲ್ಲಿ ಡೇಟಾ ಎಂಟ್ರಿ ಮಾಡುವಂತೆ ಶಿಕ್ಷಕರು ಅಥವಾ ಶಾಲಾ ಮುಖ್ಯೋಪಾಧ್ಯಾಯರಿಗೆ ಮೌಖಿಕ ಅಥವಾ ಲಿಖಿತ ಆದೇಶ ನೀಡಬಾರದು. ಇಂತಹ ಆದೇಶ ನೀಡುವ ಯಾವುದೇ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ಸರ್ಕಾರಿ ಶಾಲೆಗಳಲ್ಲಿ ಶಾಲೆಯ ಸಮಯದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲೆಯಲ್ಲಿಯೇ ಹಾಜರಿದ್ದು ಶಿಕ್ಷಣದ ಹಕ್ಕು ಕಾಯಿದೆಯ ಅಡಿಯಲ್ಲಿ ಪ್ರತಿದಿನ ಶಾಲೆಯ ಹಂತದಲ್ಲಿ ಭೋಧನೆ ಮತ್ತು ಕಲಿಕೆ ನಡೆಸಲು ಅನುವಾಗಬೇಕು. ಸರ್ಕಾರಿ ಶಾಲೆಗಳಲ್ಲಿ ಕಲಿಕೆ ಫಲಿತಾಂಶಗಳನ್ನು ಸುಧಾರಿಸಲು ಮತ್ತು ಉತ್ತಮ ಬೋಧನೆ ನೀಡಲು ಶಿಕ್ಷಕರೂ ಹಾಗೂ ಶಾಲಾ ಮುಖ್ಯೋಪಾಧ್ಯಾಯರೂ ಸಂಪೂರ್ಣವಾಗಿ ಶಾಲೆಯಲ್ಲಿ ಹಾಜರಿರುವುದು ಅತ್ಯಂತ ಅಗತ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಎಲ್ಲಾ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಯಟ್ ಪ್ರಾಂಶುಪಾಲರು ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ರಾಜ್ಯ ಹಾಗೂ ಜಿಲ್ಲೆಯಲ್ಲಿರುವ ಎಲ್ಲಾ ಅಧಿಕಾರಿಗಳು/ಸಿಬ್ಬಂದಿಗಳು ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಇಲಾಖೆ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್ ಆದೇಶದಲ್ಲಿ ನಿರ್ದೇಶನ ನೀಡಿದ್ದಾರೆ.

ಶಾಲಾ ಮಕ್ಕಳನ್ನು ಸಮಾರಂಭಗಳು ಹಾಗೂ ಜಾಥಾಗಳಲ್ಲಿ ಬಳಕೆ ಮಾಡಿಕೊಳ್ಳುವುದನ್ನು ತಡೆಯಲು ಸರ್ಕಾರ ಆದೇಶ ಹೊರಡಿಸಿರುವುದು ಸ್ವಾಗತಾರ್ಹ. ಸರ್ಕಾರಿ ಮಾತ್ರವಲ್ಲದೆ ಎಲ್ಲ ಶಾಲೆಗಳಿಗೂ ಇದು ಅನ್ವಯವಾಗಬೇಕು. ಶೈಕ್ಷಣಿಕ ಉದ್ದೇಶ ಹೊರತು ಪಡಿಸಿ ಬೇರೆ ಯಾವ ಕಾರ್ಯಕ್ರಮಗಳಲ್ಲೂ ಮಕ್ಕಳು ಭಾಗವಹಿಸುವುದನ್ನು ತಪ್ಪಿಸಬೇಕು.

-ಸೂರ್ಯಪ್ರಕಾಶ್ , ಆಡಳಿತಾಧಿಕಾರಿಗಳು, ವಾಸವಿ ವಿದ್ಯಾನಿಕೇತನ ಶಾಲೆ, ರಾಮನಗರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!