ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷ: ಅಸಾಧ್ಯವನ್ನ ಸಾಧಿಸಿ ತೋರಿಸಿದ್ದೇವೆ: ಡಿಕೆ ಶಿವಕುಮಾರ

By Kannadaprabha News  |  First Published May 20, 2024, 4:05 AM IST

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರ ವಹಿಸಿಕೊಂಡು ಒಂದು ವರ್ಷ ಕಳೆದಿದೆ. ಈ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಸಾಧ್ಯವಾದ ಕೆಲಸವನ್ನು ಸಾಧಿಸಿ ತೋರಿಸಿದೆ.


-ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ

ಈ ಯುಗಾದಿ ಹಬ್ಬದಂದು ಹಾವೇರಿಯ ಮಹಿಳೆಯೊಬ್ಬರ ಮನೆಯಲ್ಲಿ ಹೊಸ ಸಂಭ್ರಮ ಮೂಡಿತ್ತು. ಆಕೆ ಬರೋಬ್ಬರಿ 17,500 ರುಪಾಯಿ ಕೊಟ್ಟು ಹೊಸ ರೆಫ್ರಿಜರೇಟರ್‌ ಖರೀದಿಸಿದ್ದರು. ಒಂದು ಬಡ ಅಥವಾ ಬಡ ಮಧ್ಯಮ ಕುಟುಂಬಕ್ಕೆ ಇದಕ್ಕಿಂತಲೂ ಸಂಭ್ರಮ ಬೇರೆ ಇಲ್ಲ. ಇದೇ ರೀತಿ ಹಾವೇರಿಯಲ್ಲೇ ಮತ್ತೊಬ್ಬ ಮಹಿಳೆ ಹಲವಾರು ದಿನಗಳ ಕನಸಾಗಿ ತಮ್ಮಿಷ್ಟದ ಮೊಬೈಲ್‌ ಖರೀದಿಸಿ ಸಂತಸ ಹಂಚಿಕೊಂಡಿದ್ದರು. ಅಂದ ಹಾಗೆ ಈ ತಾಯಂದಿರ ಸಂಭ್ರಮಕ್ಕೆ ಮೂಲ ಕಾರಣವಾಗಿದ್ದು, ಗೃಹಲಕ್ಷ್ಮಿ ಯೋಜನೆಯಡಿ ನೀಡಿದ 2,000 ರುಪಾಯಿ ಹಣ!

Tap to resize

Latest Videos

ಗ್ಯಾರಂಟಿಗಳಿಂದ ಏನು ಪ್ರಯೋಜನ, ಇದರಿಂದ ಆರ್ಥಿಕತೆ ನಾಶವಾಗುತ್ತಿಲ್ಲವೇ ಎಂದು ಪ್ರಶ್ನೆ ಮಾಡುವವರಿಗೆ ಕಾಂಗ್ರೆಸ್‌ ಪಕ್ಷವಾಗಲೀ, ನಾಯಕರಾಗಲೀ ಉತ್ತರ ನೀಡಬೇಕಿಲ್ಲ. ಈ ಯೋಜನೆಗಳಿಂದ ಲಾಭ ಪಡೆದ ಜನರೇ ಇದಕ್ಕೆ ಉತ್ತರ ನೀಡುತ್ತಿದ್ದು, ಇದು ಎಲ್ಲರ ಕಣ್ಣಿಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಕಳೆದೊಂದು ವರ್ಷದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ, ಪ್ರತಿ ಮನೆಗಳಲ್ಲಿ ಮೂಡಿಸಿದ್ದು ಇದೇ ಸಂಭ್ರಮವನ್ನು, ಇದೇ ಸಂತಸವನ್ನು. ಒಂದು ವರ್ಷದಲ್ಲಿ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವ ಮೂಲಕ ನಮ್ಮ ಸರ್ಕಾರ ಅಭಿವೃದ್ಧಿಗೆ ಹೊಸ ಮಾದರಿಯೊಂದನ್ನು ಸೃಷ್ಟಿಸಿದೆ. ಸರ್ಕಾರ ರಚನೆಯಾದ ಆರಂಭದಲ್ಲಿ, ಇಂತಹ ಯೋಜನೆಗಳ ಜಾರಿ ಸಾಧ್ಯವೇ ಇಲ್ಲ ಎಂದವರಿಗೆ, ಅಸಾಧ್ಯವಾದುದನ್ನು ಸಾಧ್ಯ ಮಾಡಿ ನಾವು ತೋರಿಸಿದ್ದೇವೆ. ಇದಕ್ಕಾಗಿ ನುಡಿದಂತೆಯೇ ನಡೆದಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತೇವೆ.ಇದೇ ರೀತಿ ಶಕ್ತಿ ಗ್ಯಾರಂಟಿಯಿಂದ ಪ್ರಯೋಜನ ಪಡೆದ ಫಲಾನುಭವಿ, ಕಾನೂನು ವಿದ್ಯಾರ್ಥಿನಿಯೊಬ್ಬರು ಟಿಕೆಟ್‌ಗಳ ಹಾರ ತಯಾರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅರ್ಪಿಸಿದ್ದರು. ಇದೇ ಯೋಜನೆಯ ಮತ್ತೊಬ್ಬ ಫಲಾನುಭವಿ, ಬೆಳಗಾವಿ ಜಿಲ್ಲೆ ಸಂಗೊಳ್ಳಿ ಗ್ರಾಮ ನಿಂಗವ್ವ ಸವದತ್ತಿಯ ಮೊಮ್ಮಗನ ಮನೆಯ ಗೃಹ ಪ್ರವೇಶಕ್ಕೆ ಹೊರಟಾಗ ಧಾರವಾಡ-ಗೋಕಾಕ ಬಸ್‌ಗೆ ಹಣೆ ಇಟ್ಟು ನಮಸ್ಕಾರ ಮಾಡಿದ ಚಿತ್ರ ಇನ್ನೂ ನನ್ನ ಕಣ್ಣ ಮುಂದಿದೆ. ಈವರೆಗೆ 210.29 ಕೋಟಿಗೂ ಅಧಿಕ ಉಚಿತ ಟಿಕೆಟ್‌ಗಳನ್ನು ನಾಡಿನ ಮಹಿಳೆಯರು ಪಡೆದು ಬಸ್‌ನಲ್ಲಿ ಪ್ರಯಾಣಿಸಿದ್ದಾರೆ. ಇದರ ಒಟ್ಟಾರೆ ಮೌಲ್ಯ 5096.66 ಕೋಟಿ ರುಪಾಯಿ ಆಗಿದೆ ಎಂಬುದು ರಾಜ್ಯ ರಾಜಕೀಯದಲ್ಲೇ ದೊಡ್ಡ ದಾಖಲೆ.ಗ್ಯಾರಂಟಿ ಹೆಸರೇ ಈಗ ಬ್ರ್ಯಾಂಡ್‌

ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷ: ಪಂಚ ಗ್ಯಾರಂಟಿಗಳು 4.60 ಕೋಟಿ ಜನರನ್ನು ತಲುಪಿವೆ; ರಣದೀಪ್ ಸುರ್ಜೆವಾಲ

ಗ್ಯಾರಂಟಿ ಯೋಜನೆಗಳು ಜನರಿಗೆ ಎಷ್ಟೊಂದು ಆಪ್ತವಾಗಿದೆ ಎಂದರೆ, ಈ ಹೆಸರೇ ಒಂದು ಅತ್ಯುತ್ತಮ ಬ್ರ್ಯಾಂಡ್‌ ಆಗಿಬಿಟ್ಟಿದೆ. ಇದನ್ನು ಬಿಜೆಪಿ ಕೂಡ ಕದ್ದು ಲೋಕಸಭೆ ಚುನಾವಣೆಯಲ್ಲಿ ಮಾರ್ಕೆಟಿಂಗ್‌ ಮಾಡಿಕೊಂಡಿದೆ ಎಂದರೆ ಈ ಪದದ ಪ್ರಭಾವವನ್ನು ಗಮನಿಸಬಹುದು. ಇಂತಹ ಗ್ಯಾರಂಟಿಗಳು ಕಳೆದೊಂದು ವರ್ಷದಲ್ಲಿ ಜನರ ಬದುಕಿನ ಮೇಲೆ ಬಹಳ ದೊಡ್ಡ ಆರ್ಥಿಕ ಪರಿಣಾಮ ಬೀರಿದೆ. ಹೆಣ್ಣುಮಕ್ಕಳು ಗೃಹಲಕ್ಷ್ಮಿಯಿಂದ ಪಡೆದ ಹಾಗೂ ಉಚಿತ ಬಸ್‌ನಿಂದ ಉಳಿಸಿದ ಹಣವನ್ನು ಅಕ್ಷಯ ತೃತೀಯದಂದು ಚಿನ್ನ ಖರೀದಿಸಲು, ಮನೆಗೆ ಬೇಕಾದ ಉಪಕರಣ ಖರೀದಿಸಲು, ಮಕ್ಕಳ ಶಾಲಾ ಶುಲ್ಕ ಕಟ್ಟಲು ಬಳಸಿದ್ದಾರೆ. ಉಚಿತ ವಿದ್ಯುತ್‌ನಿಂದ ಬಡ ಕುಟುಂಬಗಳ ತಿಂಗಳ ವೆಚ್ಚದಲ್ಲಿ ದೊಡ್ಡ ಪ್ರಮಾಣದ ಇಳಿಕೆ ಕಂಡುಬಂದಿದೆ. ನಿರುದ್ಯೋಗಿ ಯುವಕ-ಯುವತಿಯರು ಸಣ್ಣ ಕೋರ್ಸ್‌ಗಳನ್ನು ಮಾಡಲು ಯುವನಿಧಿ ಬಳಸುತ್ತಿದ್ದರೆ, ಹಸಿದವರು ಅನ್ನಭಾಗ್ಯದಿಂದ ಹೊಟ್ಟೆಭರ್ತಿಯಾಗಿ ನೆಮ್ಮದಿಯಿಂದ ಊಟ ಮಾಡುತ್ತಿದ್ದಾರೆ.ಆರ್ಥಿಕತೆ ಮೇಲಿನ ಪರಿಣಾಮ

ಗ್ಯಾರಂಟಿಗಳ ಬಗ್ಗೆ ಪ್ರಮುಖವಾದ ಟೀಕೆ ಕೇಳಿಬರುವುದು ಅದು ಆರ್ಥಿಕತೆಯ ಮೇಲೆ ಮಾಡುತ್ತಿರುವ ಪರಿಣಾಮದ ಬಗ್ಗೆ. ಈ ಒಂದು ವರ್ಷದಲ್ಲಿ ರಾಜ್ಯದ ಆರ್ಥಿಕತೆ ವೇಗವಾಗಿ ಪ್ರಗತಿ ಕಂಡಿದೆ. ಗ್ಯಾರಂಟಿಗಳಿಗಾಗಿ ಕಾಂಗ್ರೆಸ್‌ ಸರ್ಕಾರ ಪ್ರತಿ ವರ್ಷ 58,000 ಕೋಟಿ ರು. ಖರ್ಚು ಮಾಡುತ್ತಿದ್ದು, ಇದು 4.60 ಕೋಟಿ ಜನರಿಗೆ ತಲುಪುತ್ತಿದೆ. ಇದರಿಂದಾಗಿ ತಿರುಗಿ ಆ ಹಣ ಆರ್ಥಿಕತೆಯೊಳಗೆ ಬಂದು ಖರ್ಚಾಗಿ ಆರ್ಥಿಕ ವ್ಯವಸ್ಥೆಗೆ ಬಲ ಬಂದಿದೆ. ಇದನ್ನೇ ಮಾದರಿಯಾಗಿಸಿ ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆಯವರು ರಾಷ್ಟ್ರೀಯ ಮಟ್ಟದಲ್ಲೂ ಈ ಯೋಜನೆಗಳನ್ನು ತರುವುದಾಗಿ ಘೋಷಿಸಿದ್ದಾರೆ. ಭಾರತದ ಗೃಹಿಣಿಯರಿಗೆ ವರ್ಷಕ್ಕೆ 1 ಲಕ್ಷ ರು., ಯುವಜನರಿಗೆ 1 ಲಕ್ಷ ಶಿಷ್ಯ ವೇತನ, 25 ಲಕ್ಷ ರು. ಆರೋಗ್ಯ ವಿಮೆ, ಸಾಲ ಮನ್ನಾ ಮೊದಲಾದ ಕಾರ್ಯಕ್ರಮಗಳು ದೇಶದ ಭವಿಷ್ಯವನ್ನು ಬೇರೊಂದು ದಿಕ್ಕಿಗೆ ಕೊಂಡೊಯ್ಯಬಲ್ಲವು. ಇದಕ್ಕೆ ಕರ್ನಾಟಕದ ಕಾಂಗ್ರೆಸ್‌ ಮಾದರಿಯೇ ಆಧಾರ ಎಂಬುದು ನಮ್ಮ ಕಾರ್ಯಕರ್ತರು ಹೆಮ್ಮೆ ಪಡುವ ಸಂಗತಿ.

ಈ ಹಿಂದೆ ರಾಜಕಾರಣಗಳ ಕೇಂದ್ರಿತ ಆಡಳಿತ ನಡೆಯುತ್ತಿತ್ತು. ಇದನ್ನು ಜನಕೇಂದ್ರಿತ ಆಡಳಿತವಾಗಿ ಬದಲಿಸಲಾಗಿದೆ. ಜನರ ಕೈಗೆ ನೇರವಾಗಿ ಹಣ ನೀಡಿ ಅವರಿಂದಲೇ ಆರ್ಥಿಕಾಭಿವೃದ್ಧಿ ಉಂಟುಮಾಡುವ ಸುಧಾರಣೆಯ ಹೊಸ ಮಾದರಿಯನ್ನು ನೀಡಲಾಗಿದೆ. ಹಾಗೆಂದು ಸರ್ಕಾರದ ಯಾವುದೇ ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಂಡಿಲ್ಲ. ಶಿಕ್ಷಣ, ಆರೋಗ್ಯ, ನೀರಾವರಿ, ಸಾರಿಗೆ, ಮೂಲಸೌಕರ್ಯ ಮೊದಲಾದ ಕ್ಷೇತ್ರಗಳಲ್ಲಿ ಯೋಜನೆ, ಕಾಮಗಾರಿಗಳು ಈ ಹಿಂದಿನಂತೆಯೇ ಪ್ರಗತಿಯಲ್ಲಿ ಸಾಗಿವೆ.

ಬ್ರ್ಯಾಂಡ್‌ ಬೆಂಗಳೂರಿನ ನೋಟ

ಈ ಒಂದು ವರ್ಷದಲ್ಲಿ ಬ್ರ್ಯಾಂಡ್‌ ಬೆಂಗಳೂರು ಯೋಜನೆಗೆ ಚಾಲನೆ ದೊರೆತಿರುವುದು ಮಹತ್ವದ ಬೆಳವಣಿಗೆ. ಸಂಚಾರ ದಟ್ಟಣೆ ನಿವಾರಣೆ, ಮೂಲಸೌಕರ್ಯಾಭಿವೃದ್ಧಿ, ಕೆರೆ ಸಂರಕ್ಷಣೆ, ಪರಿಸರ ಅಭಿವೃದ್ಧಿ, ಕೈಗಾರಿಕಾಭಿವೃದ್ಧಿ ಮೊದಲಾದ ಕ್ರಮಗಳ ಮೂಲಕ ಹೊಸ ಪೀಳಿಗೆಗೆ ಹೊಸ ಬೆಂಗಳೂರು ನಗರವನ್ನು ನೀಡುವುದು ನನ್ನ ಗುರಿ. ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ನೆಮ್ಮದಿಯಿಂದ ಜೀವಿಸಬಲ್ಲ ನಗರವಾಗಿ ಸುಧಾರಿಸುವ ಪ್ರಯತ್ನಕ್ಕೆ ವೇಗ ಸಿಕ್ಕಿದೆ.

‘ಕರ್ನಾಟಕ ಮಾದರಿ’ ಅಭಿವೃದ್ಧಿಗೆ 1 ವರ್ಷ; ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ದೊರೆಯದ ಸಹಕಾರ

ಈ ವರ್ಷದ ಬರಗಾಲ ಸರ್ಕಾರಕ್ಕೆ ಅತಿ ದೊಡ್ಡ ಸವಾಲನ್ನು ಒಡ್ಡಿದೆ. ರಾಜ್ಯದ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ಪ್ರಕೃತಿಯ ಜೊತೆಗೆ ಕೇಂದ್ರ ಸರ್ಕಾರ ಕೂಡ ನಮಗೆ ಸಹಕಾರ ನೀಡಲಿಲ್ಲ. ಆದರೆ ರಾಜ್ಯದಲ್ಲಿ ತಲೆದೋರಿದ್ದ ಭೀಕರ ಬರಗಾಲವನ್ನು ಸಮರ್ಥವಾಗಿ ಎದುರಿಸುವಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಯಾವುದೇ ರೀತಿಯಲ್ಲೂ ಹಿಂದುಳಿಯಲಿಲ್ಲ. ನಮ್ಮ ರೈತರಿಗೆ ಸಿಗಬೇಕಾದ ಬರ ಪರಿಹಾರದಲ್ಲಿ ನಿರೀಕ್ಷೆಯಷ್ಟು ಸಿಗದಿದ್ದರೂ, ಕೇಂದ್ರ ಸರ್ಕಾರದ ವಿರುದ್ಧ ಸಮರ್ಥ ಹೋರಾಟದ ಮೂಲಕ ಪರಿಹಾರವನ್ನು ತಂದು ರೈತರಿಗೆ ನೀಡುವಲ್ಲಿ ಯಶಸ್ವಿಯಾಗಿದ್ದೇವೆ. ಈ ರೀತಿ ಒಕ್ಕೂಟ ವ್ಯವಸ್ಥೆಯಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಒಂದು ರಾಜ್ಯ ಸರ್ಕಾರ ಗೆದ್ದಿರುವುದು ಐತಿಹಾಸಿಕ. ಕೇಂದ್ರದ ಸಹಕಾರ ದೊರೆಯದೇ ಇದ್ದರೂ ಜನರ ಬದುಕನ್ನು ಬದಲಿಸುವ ನಮ್ಮ ಬದ್ಧತೆ ಎಂದಿಗೂ ಸೋತಿಲ್ಲ.

click me!