ಶಕ್ತಿ ಯೋಜನೆಯ ಬಸ್‌ಗಳಿಗೆ ಕಲ್ಲೆಸೆದ ಕಾಲೇಜು ವಿದ್ಯಾರ್ಥಿಗಳು: ಗಾಜುಗಳು ಪುಡಿ, ಪುಡಿ

By Sathish Kumar KHFirst Published Sep 4, 2023, 12:03 PM IST
Highlights

ಕಾಂಗ್ರೆಸ್‌ ಸರ್ಕಾರ ಶಕ್ತಿ ಯೋಜನೆಯ ಬಸ್‌ಗಳಿಗೆ ವಿದ್ಯಾರ್ಥಿಗಳು ಕಲ್ಲೆಸೆದು ಗಾಜು ಒಡೆಯುವ ಹಾಗೂ ಹಾನಿಗೊಳಿಸುವ ಪ್ರಕರಣ ಹೆಚ್ಚಾಗಿ ಕಂಡುಬರುತ್ತಿವೆ.

ಬೆಳಗಾವಿ (ಆ.04): ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಮೊದಲ ಗ್ಯಾರಂಟಿಯಾಗಿ ಜಾರಿಗೊಳಿಸಿದ ಶಕ್ತಿ ಯೋಜನೆಯ (ಮಹಿಳೆಯರಿಗೆ ಸರ್ಕಾರದ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ) ಬಸ್‌ಗಳಿಗೆ ವಿದ್ಯಾರ್ಥಿಗಳು ಕಲ್ಲೆಸೆದು ಗಾಜು ಒಡೆಯುವ ಹಾಗೂ ಹಾನಿಗೊಳಿಸುವ ಪ್ರಕರಣ ಹೆಚ್ಚಾಗಿ ಕಂಡುಬರುತ್ತಿವೆ.

ಹೌದು, ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆ (ಕರ್ನಾಟಕದ ಎಲ್ಲ ಮಹಿಳೆಯರಿಗೂ ಸಾರಿಗೆ ಇಲಾಖೆಯ ವೇಗದೂತ ಬಸ್‌ಗಳಲ್ಲಿ ಉಚಿತ ಪ್ರಯಾಣ) ಅಡಿಯಲ್ಲಿ ಮಹಿಳೆಯರು ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಇದರಿಂದಾಗಿ ಸಾರಿಗೆ ಇಲಾಖೆಯ (ಕೆಎಸ್‌ಆರ್‌ಟಿಸಿ, ಕೆಕೆಆರ್‌ಸಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಹಾಗೂ ಬಿಎಂಟಿಸಿ) ಬಹುತೇಕ ಬಸ್‌ಗಳು ಫುಲ್‌ ರಶ್‌ ಆಗುತ್ತಿದ್ದು, ಮಹಿಳೆಯರ ಬಸ್‌ ಪ್ರಯಾಣವೂ ಹೆಚ್ಚಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಬಸ್‌ಗಳಲ್ಲಿ ಸೀಟು ಸಿಗುತ್ತಿಲ್ಲ. ಆದ್ದರಿಂದ ಕೆಲ ವಿದ್ಯಾರ್ಥಿಗಳು ಬಸ್‌ಗಳ ಚಾಲಕರು, ಕಂಡಕ್ಟರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಆಯಾ ಸ್ಥಳೀಯ ಬಸ್‌ ಡಿಪೋಗಳ ಬಳಿ ಹೆಚ್ಚುವರಿ ಬಸ್‌ಗಳನ್ನು ಬಿಡವಂತೆ ಪ್ರತಿಭಟನೆಯನ್ನೂ ಮಾಡಿದ್ದಾರೆ.

Latest Videos

ಶಕ್ತಿ ಯೋಜನೆಯ ಉಚಿತ ಬಸ್‌ಗಳನ್ನು ಕಿತ್ತುಕೊಂಡ ಗೃಹಲಕ್ಷ್ಮಿ:ನಾಳೆ ಊರಿಗೆ ಹೋಗೋರಿದ್ರೆ ಕ್ಯಾನ್ಸಲ್‌ ಮಾಡಿ

ವಿದ್ಯಾರ್ಥಿಗಳು ಕೈ ಮಾಡಿದರೂ ನಿಲ್ಲಿಸದ ಬಸ್‌: ಇನ್ನು ಬೆಳಗಾವಿ ಜಿಲ್ಲೆ ಸೇರಿದಂತೆ ವಿವಿಧೆಡೆ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ನೀಡುವ ಸಾರಿಗೆ ಇಲಾಖೆಗಳ ಬಸ್‌ಗಳಲ್ಲಿ ಪ್ರಯಾಣಿಕರು ತುಂಬಿಕೊಳ್ಳುವುದರಿಂದ ಹೆಚ್ಚಿನ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣ ಆಗುತ್ತಿದೆ. ಇದರಿಂದ ಬಸ್‌ನ ಚಾಲಕರು ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ಯಾಣಿಕರು ಕೈ ತೋರಿಸಿದರೂ ನಿಲ್ಲಿಸದೇ ಹೊರಡು ಹೋಗುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಶಾಲೆ-ಕಾಲೇಜುಗಳಿಗೆ ಹೋಗಲು ಸಮಸ್ಯೆ ಆಗುತ್ತಿದೆ. ಸರ್ಕಾರದ ಶಕ್ತಿ ಯೋಜನೆ ವಿರುದ್ಧ ವಿದ್ಯಾರ್ಥಿಗಳು ಅಸಮಾಧಾನ ಹೊರ ಹಾಕಿದ್ದಾರೆ.

ಬಸ್‌ಗಳಿಗೆ ಕಲ್ಲೆಸೆದ ವಿದ್ಯಾರ್ಥಿಗಳು: ಇನ್ನು ಬೆಳಗಾವಿಯಲ್ಲಿ ಶಕ್ತಿ ಯೋಜನೆ ಎಫೆಕ್ಟ್‌ನಿಂದ ಉಚಿತವಾಗಿ ಪ್ರಯಾಣ ಮಾಡುವ ಮಹಿಳೆಯರಿಂದ ಬಸ್‌ ತುಂಬಿದೆ. ಆದ್ದರಿಂದ, ವಿದ್ಯಾರ್ಥಿಗಳು ಕೈ ತೋರಿಸಿದರೂ ನಿಲ್ಲದೇ ಹೋದ ಬಸ್‌ಗೆ ಕಲ್ಲೆಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲಾ- ಕಾಲೇಜಿನ ವಿದ್ಯಾರ್ಥಿಗಳು ಬಸ್‌ ಮುಂದೆ ಹೋಗುವಾಗ ಹಿಂದಿನ ಗಾಜಿಗೆ ಕಲ್ಲು ಎಸೆದು ಆಕ್ರೋಶ ಹೊರ ಹಾಕಿದ್ದಾರೆ. ಇದರಿಂದಾಗಿ ಬಸ್ ಹಿಂಭಾಗದ ಗಾಜು ಪುಡಿ ಪುಡಿಯಾಗಿದೆ. ನಂತರ, ಬಸ್‌ ಅನ್ನು ನಿಲ್ಲಿಸಿ ವಿದ್ಯಾರ್ಥಿಗಳ ವಿರುದ್ಧ ಚಾಲಕರು ಮತ್ತು ಕಂಡಕ್ಟರ್‌ ಕಿಡಿಕಾರಿದ್ದಾರೆ.

ಗೃಹಲಕ್ಷ್ಮಿಯರ ಮನೆಮುಂದೆ ಅರಳಿದ 'ನಾ ಯಜಮಾನಿ' ರಂಗೋಲಿ: ನಾಳೆ ಮಹಿಳೆಯರ ಖಾತೆಗೆ 2000 ರೂ. ವರ್ಗ

ವಾಯುವ್ಯ ಸಾರಿಗೆ ಬಸ್‌ ಗಾಜು ಪುಡಿ, ಪುಡಿ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದಿಂದ ಬೈಲಹೊಂಗಲಕ್ಕೆ ಹೊರಟಿದ್ದ ಬಸ್‌ಗೆ ಕಲ್ಲೆಸದು ಗಾಜು ಒಡೆದು ಹಾಕಿರುವ ಘಟನೆ ನಡೆದಿದೆ. ನಯಾನಗರ ಗ್ರಾಮದ ವಿದ್ಯಾರ್ಥಿಗಳು ವಾಯುವ್ಯ ಸಾರಿಗೆ ಬಸ್‌ಗೆ ಕಲ್ಲೆಸೆದಿದ್ದಾರೆ.  ಕಾಲೇಜು ವಿದ್ಯಾರ್ಥಿಗಳು ಹಾಗೂ ಚಾಲಕ ನಿರ್ವಾಹಕರ ಮಧ್ಯೆ ಮಾತಿನ‌ ಚಕಮಕಿ ನಡೆದಿದೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಬೈಲಹೊಂಗಲ ಪೊಲೀಸರ ಸ್ಥಳಕ್ಕೆ ಭೇಟಿ ಮಾಡಿದ್ದಾರೆ. ಇನ್ನು ಬಸ್ ದಾರಿ ಮಧ್ಯೆ ನಿಂತಿರುವುದರಿಂದ, ಇತರೆ ವಾಹನಗಳು ಸಾಲು ಗಟ್ಟಿ ನಿಂತುಕೊಂಡಿವೆ. ಇದರಿಂದ ಟ್ರಾಫಿಕ್‌ ಜಾಮ್‌ ಉಂಟಾಗಿದೆ. 

click me!