10000 ಕೋಟಿ ಕೊಡಿ, ವಿಶೇಷ ಪ್ಯಾಕೇಜ್‌ ನೀಡುವಂತೆ ಮೋದಿಗೆ ಸಿಎಂ ಪತ್ರ!

By Kannadaprabha NewsFirst Published Oct 22, 2020, 7:14 AM IST
Highlights

ನೆರೆ: .10000 ಕೋಟಿ ಕೊಡಿ| ವಿಶೇಷ ಪ್ಯಾಕೇಜ್‌ ನೀಡುವಂತೆ ಮೋದಿಗೆ ಸಿಎಂ ಪತ್ರ| 3 ಹಂತದಲ್ಲಿ ರಾಜ್ಯದಲ್ಲಿ ಪ್ರವಾಹ| ಒಟ್ಟಾರೆ 21,609 ಕೋಟಿ ಆಸ್ತಿ-ಪಾಸ್ತಿ ನಷ್ಟ

ಲಿಂಗರಾಜು ಕೋರಾ

ಬೆಂಗಳೂರು(ಅ.22): ರಾಜ್ಯದಲ್ಲಿ ಕಳೆದ ಎರಡೂವರೆ ತಿಂಗಳಿಂದ ಉಂಟಾಗಿರುವ ಅತಿವೃಷ್ಟಿಹಾಗೂ ಪ್ರವಾಹ ಪರಿಸ್ಥಿತಿಯಿಂದ ಒಟ್ಟಾರೆ 21,609 ಕೋಟಿ ರು.ಗಳಷ್ಟುನಷ್ಟವುಂಟಾಗಿದ್ದು, ತುರ್ತು ಪರಿಹಾರವಾಗಿ 10 ಸಾವಿರ ಕೋಟಿ ರು. ವಿಶೇಷ ಪ್ಯಾಕೇಜ್‌ ಘೋಷಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೋರಿದ್ದಾರೆ.

ಮೋದಿ ಅವರು ಅ.16ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕರೆ ಮಾಡಿ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ, ಮಳೆ ಹಾನಿ ಕುರಿತು ಚರ್ಚೆ ನಡೆಸಿ ಕೇಂದ್ರ ಸರ್ಕಾರದಿಂದ ಅಗತ್ಯ ನೆರವು ನೀಡುವ ಭರವಸೆ ನೀಡಿದ್ದರು.

ಇದಾದ ಮರುದಿನವೇ ಮುಖ್ಯಮಂತ್ರಿ ಅವರು ರಾಜ್ಯ ಎದುರಿಸುತ್ತಿರುವ ಪ್ರವಾಹ ಪರಿಸ್ಥಿತಿ, ಮಳೆ ಹಾನಿ ಹಾಗೂ ಇದರಿಂದಾದ ನಷ್ಟದ ಸಂಬಂಧ ಸಂಪೂರ್ಣ ವಿವರವನ್ನೊಳಗೊಂಡ ಮೂರು ಪುಟಗಳ ಪತ್ರವನ್ನು ಪ್ರಧಾನಿ ಅವರಿಗೆ ಬರೆದಿದ್ದು ತುರ್ತು ಪರಿಹಾರಕ್ಕೆ 10 ಸಾವಿರ ಕೋಟಿ ರು. ವಿಶೇಷ ಪ್ಯಾಕೇಜ್‌ ನೀಡುವಂತೆ ಕೋರಿದ್ದಾರೆ. (ಮುಖ್ಯಮಂತ್ರಿಯವರು ಪ್ರಧಾನಿಯವರಿಗೆ ಬರೆದಿರುವ ಪತ್ರದ ಪ್ರತಿ ಲಭ್ಯವಾಗಿದೆ.

3 ಹಂತದ ಅತಿವೃಷ್ಟಿ:

ಮುಖ್ಯಮಂತ್ರಿ ಅವರು ಬರೆದಿರುವ ಪತ್ರದಲ್ಲಿ ರಾಜ್ಯದಲ್ಲಿ ಇದುವರೆಗೂ ಮೂರು ಹಂತದಲ್ಲಿ ಅತಿವೃಷ್ಟಿಹಾಗೂ ನೆರೆ ಹಾನಿ ಉಂಟಾಗಿದೆ. ಆಗಸ್ಟ್‌ನಿಂದ ಸೆಪ್ಟೆಂಬರ್‌ 15ರವರೆಗೆ ಮೊದಲ ಹಂತದಲ್ಲಿ ಕರಾವಳಿ, ಮಲೆನಾಡು ಹಾಗೂ ಉತ್ತಕ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಆದ ಮಳೆ ಹಾನಿಯಿಂದ 9,441 ಕೋಟಿ ರು. ನಷ್ಟವಾಗಿದೆ.

ಸೆಪ್ಟಂಬರ್‌ ಉಳಿದಾರ್ಧದಲ್ಲಿ ವಿವಿಧ ಜಿಲ್ಲೆಗಳಲ್ಲಿ ಉಂಟಾದ ಎರಡನೇ ಹಂತದ ನೆರೆಯಿಂದ 5,668 ಕೋಟಿ ರು. ಹಾಗೂ ಪ್ರಸ್ತುತ ಅ.10ರಿಂದ ಕರಾವಳಿ ಮತ್ತು ಉತ್ತರ ಕರ್ನಾಟಕದ ಹಲವೆಡೆ ಉಂಟಾಗಿರುವ ಮೂರನೇ ಹಂತದ ಪ್ರವಾಹ ಪರಿಸ್ಥಿತಿಯಿಂದ ಅಂದಾಜು 6,500 ಕೋಟಿ ರು. ನಷ್ಟುಹಾನಿಯಾಗಿದೆ.

ಈ ಅವಧಿಯಲ್ಲಿ ವಾಯುವ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಅ.10ರಿಂದ 15ರ ನಡುವೆ ವಾಡಿಕೆಗಿಂತ ಶೇ.620ರಷ್ಟುಹೆಚ್ಚು ಮಳೆಯಾಗಿದೆ. ಕಲಬುರಗಿ ಮತ್ತು ಬೀದರ್‌ ಜಿಲ್ಲೆಗಳಲ್ಲಿ ಅ.14ರಂದು ಒಂದೇ ದಿನ ವಾಡಿಕೆಗಿಂತ 30 ಪಟ್ಟು ಹೆಚ್ಚು ಮಳೆ ಬಿದ್ದಿದೆ ಎಂದು ತಿಳಿಸಿದ್ದಾರೆ.

ಒಟ್ಟಾರೆ ಈ ಮೂರೂ ಅವಧಿಯಲ್ಲಿ 30 ಸಾವಿರಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದ್ದು, 6 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ರಸ್ತೆ, ಕಾಲುವೆಗಳು, ಮೇಲ್ಸೇತುವೆ, ಶಾಲೆ, ಅಂಗನವಾಡಿ ಕಟ್ಟಡ, ವಿದ್ಯುತ್‌ ಸಂಪರ್ಕ ಸೇರಿದಂತೆ ಮತ್ತಿತರ ಮೂಲ ಸೌಕರ್ಯ ವ್ಯವಸ್ಥೆ ಹಾಳಾಗಿದೆ. ಇದರಿಂದ ಒಟ್ಟಾರೆ ರಾಜ್ಯದಲ್ಲಿ 21,609 ಕೋಟಿ ರು. ಮೌಲ್ಯದ ಆಸ್ತಿ-ಪಾಸ್ತಿ ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ. ಹಾಗಾಗಿ ತುರ್ತು ನೆರೆ ಪರಿಹಾರ ಕಾರ್ಯಗಳಿಗೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 10 ಸಾವಿರ ಕೋಟಿ ರು. ವಿಶೇಷ ಪ್ಯಾಕೇಜ್‌ ನೀಡುವಂತೆ ಮನವಿ ಮಾಡಿದ್ದಾರೆ. ಸೆ.15ರ ನಂತರ ಉಂಟಾಗಿರುವ ಮಳೆ ಹಾನಿ ಹಾಗೂ ನಷ್ಟಕ್ಕೆ ಸಂಬಂಧಿಸಿದ ಹೆಚ್ಚುವರಿ ವರದಿಯನ್ನು ಅಕ್ಟೋಬರ್‌ ಮಾಸಾಂತ್ಯದ ವೇಳೆಗೆ ಸಲ್ಲಿಸಲಾಗುವುದು ಎಂದೂ ಪತ್ರದಲ್ಲಿ ತಿಳಿಸಿದ್ದಾರೆ.

ಹಾನಿಯಾದ ಮನೆಗೆ 5 ಲಕ್ಷ ಪರಿಹಾರ:

ಈ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಸರ್ಕಾರ ಕಾರ್ಯತತ್ಪರವಾಗಿದೆ. ನೆರೆ ಪ್ರದೇಶಗಳ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿ ತಾತ್ಕಾಲಿಕ ಆಶ್ರಯ ಕೇಂದ್ರಗಳನ್ನು ತೆರೆದಿದೆ. ಮನೆ ಕುಸಿತ, ನೂರು ನುಗ್ಗಿ ವಸ್ತುಗಳು ಹಾನಿಯಾಗಿರುವ ಸಂತ್ರಸ್ತರಿಗೆ ಪ್ರತಿ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 10 ಸಾವಿರ ರು. ತಾತ್ಕಾಲಿಕ ಪರಿಹಾರ ನೀಡಲಾಗುತ್ತಿದೆ.

ಇದಲ್ಲದೆ, ಸಂಪೂರ್ಣ ಹಾನಿಯಾಗಿರುವ ಮನೆಗಳ ಪುನರ್‌ ನಿರ್ಮಾಣಕ್ಕೆ ಪ್ರತಿ ಮನೆಗೆ 5 ಲಕ್ಷ ರು. ಪರಿಹಾರ ಹಾಗೂ ಹೆಚ್ಚಿನ ಹಾನಿ ಮತ್ತು ಭಾಗಶಃ ಹಾನಿಗೊಳಗಾದ ಮನೆಗಳಿಗೆ 3 ಲಕ್ಷ ರು., ಭಾಗಶಃ ಹಾನಿಗೊಳಗಾಗಿರುವ ಮನೆಗಳ ದುರಸ್ತಿಗೆ 50 ಸಾವಿರ ರು. ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ, 2019 ಮತ್ತು 2020 ಎರಡೂ ವರ್ಷ ಅತಿವೃಷ್ಟಿಹಾಗೂ ಪ್ರವಾಹದಿಂದಾಗಿ ಹೆಚ್ಚಿನ ಆರ್ಥಿಕ ಹೊರೆ ಅನುಭವಿಸುವಂತಾಗಿದೆ. ಕೋವಿಡ್‌ನಿಂದಾಗಿ ಉಂಟಾಗಿರುವ ಪರಿಸ್ಥಿತಿ ನಿಭಾಯಿಸಲು ಎಸ್‌ಡಿಆರ್‌ಎಫ್‌ ಅಡಿಯ ಭಾಗಶಃ ಅನುದಾನ ಹಾಗೂ ರಾಜ್ಯ ಬಜೆಟ್‌ನ ಸಾಕಷ್ಟುಅನುದಾನವನ್ನು ಬಳಸಲಾಗಿದೆ.

ಹೀಗಾಗಿ ರಾಜ್ಯ ಅತ್ಯಂತ ಕಠಿಣ ಆರ್ಥಿಕ ಪರಿಸ್ಥಿತಿ ಎದುರಿಸುತ್ತಿದೆ. ಹೀಗಾಗಿ ರಾಜ್ಯಕ್ಕೆ 10 ಸಾವಿರ ರು. ವಿಶೇಷ ಪ್ಯಾಕೇಜ್‌ ಘೋಷಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಮೋದಿ ಅವರನ್ನು ಪತ್ರದಲ್ಲಿ ಕೋರಿದ್ದಾರೆ.

ಹೊಸ ಮಾರ್ಗಸೂಚಿ ದರ ಜಾರಿಗೆ ಮನವಿ

ನೆರೆ ಪರಿಹಾರಕ್ಕೆ ರೂಪಿಸಲಾಗಿರುವ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ (ಎನ್‌ಡಿಆರ್‌ಎಫ್‌) ಹೊಸ ಮಾರ್ಗಸೂಚಿಯನ್ನು 2020ರಿಂದಲೇ ಜಾರಿಗೊಳಿಸುವಂತೆಯೂ ಈ ಪತ್ರದಲ್ಲಿ ಯಡಿಯೂರಪ್ಪ ಪ್ರಧಾನಿಯವರನ್ನು ಕೋರಿದ್ದಾರೆ.

‘ಪ್ರಸ್ತುತ 2015ರ ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಡಿ ನೀಡುವ ಪರಿಹಾರ ಮೊತ್ತದಿಂದ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲು ಸಾಕಾಗುವುದಿಲ್ಲ. ಅಲ್ಲದೆ, ಮೂಲಸೌಕರ್ಯಗಳಿಗೆ ನೀಡುವ ಪರಿಹಾರ ಮೊತ್ತ ಕಡಿಮೆಯಿದೆ. ಹಾಗಾಗಿ 2020ರಿಂದಲೇ ಹೊಸ ಮಾರ್ಗಸೂಚಿ ಅನುಸಾರ ಪರಿಹಾರ ನೀಡಬೇಕು’ ಎಂದು ಕೋರಿದ್ದಾರೆ.

click me!