25ರಿಂದ 27ರವರೆಗೆ ಸಿದ್ದರಾಮಯ್ಯ ಪ್ರವಾಸ

By Kannadaprabha NewsFirst Published Oct 22, 2020, 7:04 AM IST
Highlights

ಅ.25 ರಿಂದ 27ರ ವರೆಗೆ ಪ್ರವಾಸ ಕೈಗೊಳ್ಳುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ. 
 

ಹುಬ್ಬಳ್ಳಿ (ಅ.22):  ಪ್ರವಾಹ ಪೀಡಿತ ಕಲಬುರಗಿ, ರಾಯಚೂರು, ಬೆಳಗಾವಿ, ವಿಜಯಪುರ ಜಿಲ್ಲೆಗಳಿಗೆ ಅ.25 ರಿಂದ 27ರ ವರೆಗೆ ಪ್ರವಾಸ ಕೈಗೊಳ್ಳುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ. 

ಇದೇ ವೇಳೆ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ವೈಮಾನಿಕ ಸಮೀಕ್ಷೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು, ತಾವು ಕಾರಿನಲ್ಲೇ ತೆರಳಿ ಜನರ ಸಮಸ್ಯೆ ಆಲಿಸುವುದಾಗಿ ತಿಳಿಸಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿದ್ದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸುವುದನ್ನು ಬಿಟ್ಟು ಜನರ ಬಳಿ ತೆರಳಿ ಸಮಸ್ಯೆ ಆಲಿಸಬೇಕು.

ವೈಮಾನಿಕ ಸಮೀಕ್ಷೆಯಿಂದ ನಿರಾಶ್ರಿತರ ಸಮಸ್ಯೆ ಅರಿಯಲು ಸಾಧ್ಯವಿಲ್ಲ. ಬದಲಿಗೆ ಜನರ ಬಳಿ ತೆರಳಿ ಅವರ ಸಮಸ್ಯೆ ಆಲಿಸಬೇಕು. ಆಗ ಮಾತ್ರ ಅವರ ಸಂಕಷ್ಟತಿಳಿಯಲಿದೆ ಎಂದರು.

ಪ್ರವಾಹದಿಂದ 15 ಸಾವಿರ ಕೋಟಿಗೂ ಹೆಚ್ಚು ಹಾನಿಯುಂಟಾಗಿದ್ದರೂ ಕೇಂದ್ರದ ತಂಡ ಈವರೆಗೂ ಭೇಟಿ ನೀಡಿಲ್ಲ. ರಾಜ್ಯ ಸರ್ಕಾರವೂ ಕಳೆದ ವರ್ಷ ಪ್ರವಾಹ ಸಂತ್ರಸ್ತರಿಗೆ ನೀಡಬೇಕಿದ್ದ ಪರಿಹಾರವನ್ನು ಈವರೆಗೂ ಕೊಟ್ಟಿಲ್ಲ ಎಂದು ಕಿಡಿಕಾರಿದರು.

click me!