5 ವರ್ಷ ಸಿದ್ದರಾಮಯ್ಯ ಸಿಎಂ ಹೇಳಿಕೆಗೆ ಸಚಿವ ಸಂತೋಷ್ ಲಾಡ್ ಸಹಮತ

By Ravi JanekalFirst Published Nov 3, 2023, 3:00 PM IST
Highlights

ಮುಂದಿನ 5 ವರ್ಷಗಳ ನಾನೇ ಸಿಎಂ ಎಂದು ಹೇಳಿರುವ ಸಿದ್ದರಾಮಯ್ಯ ಅವರಿಗೆ ನನ್ನ ಸಹಮತ ಇದೆ. ಸಿಎಂ ಬದಲಾವಣೆ ವಿಚಾರವಾಗಿ ಈ ಬಗ್ಗೆ ಯಾರು ಕೂಡ ಬಹಿರಂಗ ಹೇಳಿಕೆ ನೀಡಬಾರದು. ಪಕ್ಷದ ಹೈ ಕಮಾಂಡ್ ಹಾಗೂ ಶಾಸಕರು ಮುಂದಿನ ನಡೆ ಬಗ್ಗೆ ತೀರ್ಮಾನ ಮಾಡಲಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿತ್ರದುರ್ಗ (ನ.3):  ಮುಂದಿನ 5 ವರ್ಷಗಳ ನಾನೇ ಸಿಎಂ ಎಂದು ಹೇಳಿರುವ ಸಿದ್ದರಾಮಯ್ಯ ಅವರಿಗೆ ನನ್ನ ಸಹಮತ ಇದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಆದ ದಿನದಿಂದ ಎರಡೂವರೆ ವರ್ಷ ಸಿಎಂ ಸ್ಥಾನ‌ ಹಂಚಿಕೆ ಆಗಿದೆಯಾ ಎಂಬ ಪ್ರಶ್ನೆ ಬಹಳಷ್ಟು ಜನರು ಕೇಳುತ್ತಿದ್ದರು ಅದಕ್ಕೆಲ್ಲಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನೇ 5 ವರ್ಷ ಸಿಎಂ ಎಂದು ಹೇಳುವ ಮೂಲಕ ಎಲ್ಲಾ ಚರ್ಚೆ ಹಾಗೂ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. 

ಈ ಬಗ್ಗೆ ಯಾರು ಕೂಡ ಮತ್ತೆ ಮಾತನಾಡಬಾರದು. ಪಕ್ಷದ ಹೈ ಕಮಾಂಡ್ ಹಾಗೂ ಶಾಸಕರು ಮುಂದಿನ ನಡೆ ಬಗ್ಗೆ ತೀರ್ಮಾನ ಮಾಡಲಿದ್ದಾರೆ ಎಂದು ತಿಳಿಸಿದರು. ಸಚಿವ ಸತೀಶ್ ಜಾರಕಿಹೊಳೆ ಹಾಗೂ ಡಿ ಕೆ ಶಿವಕುಮಾರ್ ಗುಂಪುಗಳನ್ನು ಕಟ್ಟಿಕೊಂಡು ಶಾಸಕರ ಬೆಂಬಲ ಇದೆ. ನಾವು ಕೂಡ ಸಿಎಂ ಆಕಾಂಕ್ಷಿ ಎಂದಿರುವ ಕುರಿತು ನನಗೆ ತಿಳಿದಿಲ್ಲ ಎಂದಷ್ಟೇ ಹೇಳಿದ ಅವರು, ಎಲ್ಲರೂ ಕೂಡ ನಮ್ಮ ಪಕ್ಷದವರೇ ಆಗಿದ್ದು, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ, ಗೊಂದಲಗಳು ಇಲ್ಲ. ಅಭಿಪ್ರಾಯಗಳು ಇವೆ ಅಷ್ಟೇ ಎಂದರು. ಕಾಂಗ್ರೆಸ್ ಪಕ್ಷದ 60 ಜನ ಶಾಸಕರ ಬೆಂಬಲ ನಮಗಿದೆ ಎಂದು ಅಪರೇಷನ್ ಕಮಲ ಮಾಡಲು ಹೊರಟಿರುವ ಬಿಜೆಪಿ ಅವರು ಕುರಿತು ಮಾತನಾಡಿದ ಅವರು, ಬಿಜೆಪಿಯವರಿಗೆ ಇದೀಗ ಮಾಡಲು ಏನು ಕೆಲಸ ಇಲ್ಲ. ಅವರ ಪಕ್ಷ ಅಧಿಕಾರದಲ್ಲಿರದೆ ಬೇರೆ ಪಕ್ಷ ಅಧಿಕಾರದಲ್ಲಿದ್ದಾಗ ಅದನ್ನು ಹೇಗೆ ಬಿಳಿಸಬೇಕು ಎಂಬುವುದನ್ನು ಚಾಳಿಯಾಗಿ ಬೆಳೆಸಿಕೊಂಡಿದ್ದು, ಸಿಬಿಐ ಇಡಿ, ಲೋಕಾಯುಕ್ತ ಎಂದು ತಮ್ಮ ಅಧಿಕಾರವನ್ನು ಬಳಸಿಕೊಂಡು ಮನಬಂದತೆ ದಾಳಿ ಮಾಡಿಸಿ, ಆರೋಪಗಳನ್ನು ಮಾಡಿ ಮಾನಸಿಕವಾಗಿ ಕುಗ್ಗಿಸಿ ಬಿಜೆಪಿಗೆ ಕರೆದುಕೊಳ್ಳುವುದು ಅವರ ಹವ್ಯಾಸವಾಗಿದೆ. 

ದುಬೈನಿಂದ ಕುಟುಂಬ ಸಮೇತ ಬೆಂಗಳೂರಿಗೆ ಬಂದಿಳಿದ ಎಚ್‌ಡಿಕೆ; ಬರುತ್ತಲೇ ಕಾಂಗ್ರೆಸ್ ವಿರುದ್ಧ ಕಿಡಿ

ಆರೋಪ ಹೊತ್ತ ವ್ಯಕ್ತಿ ಬಿಜೆಪಿಗೆ ಹೋದರೆ ವಾಷಿಂಗ್ ಪೌಡರ್ ನಿರ್ಮಾ ಇದ್ದ ಆಗೆ. ಅಲ್ಲಿ ಎಲ್ಲಾ ತೊಳೆದುಬಿಡುತ್ತಾರೆ ನಂತರ ಆ ವ್ಯಕ್ತಿ ಪರಿಶುದ್ದ ಆಗಿಬಿಡುತ್ತಾನೆ. ಈ ಕೆಲಸವನ್ನು ಬಿಜೆಪಿ ಕಳೆದ 9 ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದು, ಈಗಲೂ ಅದನ್ನೆ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದು ದೂರಿದರು. ಹೈಕಮಾಂಡ್ ನಾಯಕರು ರಾಜ್ಯಕ್ಕೆ ಬರುವುದೇ ವಸೂಲಿ ಗೊಸ್ಕರ ಎಂದಿರುವ ಹೆಚ್.ಡಿ.ಕುಮಾರಸ್ವಾಮಿ ಬಗ್ಗೆ ಎಲ್ಲರಿಗೂ ತಿಳಿದಿದೆ. ಈ ಮೊದಲು ಬಿಜೆಪಿ ಯವರ ಬಗ್ಗೆ ಮಾತನಾಡುತ್ತಿದ್ದ ಕುಮಾರಣ್ಣ ಇದೀಗ ಕಾಂಗ್ರೇಸ್ ಬಗ್ಗೆ ಮಾತನಾಡುತ್ತಿದ್ದಾರೆ. ಬಿಜೆಪಿ ಜೊತೆ ಹೊಂದಾಣಿಕೆ‌ ಮಾಡಿ ಕೊಂಡಿರುವುದರಿಂದ ನಮ್ಮ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದ್ದಾರೆ. ಅದನ್ನು ನಿಲ್ಲಿಸಿ ಬರಗಾಲ, ರೈತರು, ಶಿಕ್ಷಣ ಸೇರಿದಂತೆ ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳ ಬಗ್ಗೆ ಮಾತನಾಡಬೇಕು ಎಂದು ಸಲಹೆ‌ ನೀಡಿದರು.

ಕರ್ನಾಟಕದಲ್ಲಿ ಸಿಎಂ ಬದಲಾವಣೆ ಚರ್ಚೆಗೆ ಕಾಂಗ್ರೆಸ್‌ ಹೈಕಮಾಂಡ್‌ ಬ್ರೇಕ್‌..!

click me!