Covid 19 Threat: ಬಿಜೆಪಿಗರೇ ಕೋವಿಡ್‌ ನಿರ್ವಹಣೆಯಲ್ಲಿ ಕೈ ಜೋಡಿಸಿ: ಸಿಎಂ ಬೊಮ್ಮಾಯಿ

By Kannadaprabha NewsFirst Published Jan 6, 2022, 4:30 AM IST
Highlights

ಸೋಂಕು ಹೆಚ್ಚಳ: ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ಕೈಗೊಳ್ಳುವ ಕಾರ್ಯದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಾಲ್ಗೊಳ್ಳಿ ಎಂದು ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
 

ಬೆಂಗಳೂರು (ಜ. 6): ರಾಜಧಾನಿಯಲ್ಲಿ (Bengaluru) ಕೋವಿಡ್‌ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರದ ಕೋವಿಡ್‌ ನಿರ್ವಹಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basvaraj Bommai) ಅವರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಬುಧವಾರ ಮಲ್ಲೇಶ್ವರದಲ್ಲಿರುವ (Malleswara) ಬಿಜೆಪಿ ಕಚೇರಿಯಲ್ಲಿ ನಗರವನ್ನು ಪ್ರತಿನಿಧಿಸುವ ಪಕ್ಷದ ಸಂಸದರು, ಶಾಸಕರು ಹಾಗೂ ಪದಾಧಿಕಾರಿಗಳ ಸಭೆ ನಡೆಸಿದರು.

ಕೋವಿಡ್‌ ರೂಪಾಂತರ ತಳಿ ಒಮಿಕ್ರೋನ್‌ ಅನ್ನು ಯಾವ ರೀತಿ ನಿರ್ವಹಣೆ ಮಾಡಬೇಕು, ಅದರಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ನಾವು ಸಕ್ರಿಯವಾಗಿ ಭಾಗವಹಿಸಿ ಮಾಹಿತಿ ನೀಡಬೇಕಾಗಿದೆ. ಕ್ವಾರಂಟೈನ್‌ನಲ್ಲಿ ಮಾರ್ಗದರ್ಶನ, ಆ್ಯಂಬುಲೆಸ್ಸ್‌ ನಿರ್ವಹಣೆ, ಲಸಿಕೆ ಅಭಿಯಾನ ಮುಂತಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.ಬೆಂಗಳೂರಿನ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಕೋವಿಡ್‌ ಆರೈಕೆ ಕೇಂದ್ರಗಳನ್ನು ಸ್ಥಾಪಿಸಬೇಕು. ಜತೆಗೆ ರೋಗಿಗಳಿಗೆ ಸರಿಯಾದ ಸಮಯದಲ್ಲಿ ಆ್ಯಂಬುಲೆನ್ಸ್‌ ಸಿಗುವಂತೆ ವ್ಯವಸ್ಥೆ ಕಲ್ಪಿಸಬೇಕು. ವೆಂಟಿಲೇಟರ್‌ ವ್ಯವಸ್ಥೆ ಇರುವ ಆಂಬ್ಯುಲೆನ್ಸ್‌ಗಳನ್ನು ಇರುವಂತೆ ನೋಡಿಕೊಳ್ಳಿ. ಪ್ರತಿ ವಾರ್ಡ್‌ ಮಟ್ಟದಲ್ಲೂ ಕೋವಿಡ್‌ ನಿರ್ವಹಣಾ ಸಮಿತಿಗಳನ್ನು ರಚಿಸಿ ಎಂದು ಸಲಹೆ ನೀಡಿದರು.

ಇದನ್ನೂ ಓದಿ: 36ನೇ ರಾಜ್ಯ ಪತ್ರಕರ್ತರ ಸಮ್ಮೇಳನ: ಗ್ರಾಮೀಣ ಪತ್ರಕರ್ತರಿಗೆ ಆರೋಗ್ಯಕಾರ್ಡ್‌, ಬಸ್‌ಪಾಸ್‌: ಬೊಮ್ಮಾಯಿ!

ಕಾಂಗ್ರೆಸ್‌ ಪಕ್ಷದ ಉದ್ದೇಶಿತ ಮೇಕೆದಾಟು ಪಾದಯಾತ್ರೆಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಯಾರು ಏನೇ ಮಾಡಿಕೊಳ್ಳಲಿ. ಆದರೆ, ನಮ್ಮ ಪಕ್ಷದ ಕಾರ್ಯಕರ್ತರು ಕೋವಿಡ್‌ ನಿಯಮಾವಳಿಗಳನ್ನು ಪಾಲಿಸಿ. ಏನೇ ಕಾರ್ಯಕ್ರಮಗಳನ್ನು ಮಾಡಿದರೂ ಮಾರ್ಗಸೂಚಿ ಮೀರದಂತೆ ಎಚ್ಚರಿಕೆ ವಹಿಸಿ ಎಂದು ಸೂಚಿಸಿದರು.ಸಭೆಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ನಿರ್ಮಲ್‌ಕುಮಾರ್‌ ಸುರಾನಾ, ಸಂಸದ ಡಿ.ವಿ.ಸದಾನಂದಗೌಡ ಸೇರಿದಂತೆ ಹಲವು ಶಾಸಕರು ಹಾಗೂ ಮುಖಂಡರು ಉಪಸ್ಥಿತರಿದ್ದರು.

ಬಿಬಿಎಂಪಿ ಚುನಾವಣೆ ಬಗ್ಗೆ ಉತ್ತರಿಸಿದ ಸಿಎಂ

ಬಿಬಿಎಂಪಿ ಚುನಾವಣೆ ಯಾವಾಗ ನಡೆಯಲಿದೆ ಎಂಬ ಪಕ್ಷದ ಮುಖಂಡರ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಮಾಹಿತಿ ನೀಡಲು ಹಿಂದೇಟು ಹಾಕಿದ ಪ್ರಸಂಗವೂ ನಡೆದಿದೆ.ಸಭೆಯಲ್ಲಿದ್ದ ಹಲವು ಮುಖಂಡರು ಬಿಬಿಎಂಪಿ ಚುನಾವಣೆ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಸ್ಪಷ್ಟಉತ್ತರ ನೀಡದ ಮುಖ್ಯಮಂತ್ರಿಗಳು, ನಾವು ಕೆಲಸ ಮಾಡುತ್ತಾ ಹೋಗೊಣ ಎಂದಷ್ಟೇ ಚುಟುಕಾಗಿ ಪ್ರತಿಕ್ರಿಯಿಸಿದರು ಎಂದು ಮೂಲಗಳು ತಿಳಿಸಿವೆ.

ಸಂಚಾರ ಪೊಲೀಸರ ಕಿರಿಕಿರಿ ಬಗ್ಗೆ ಪ್ರಸ್ತಾಪ

ನಗರದಲ್ಲಿ ಸಂಚಾರ ಪೊಲೀಸರ ಕಿರಿಕಿರಿ ಹೆಚ್ಚಾಗುತ್ತಿದೆ ಎಂದು ಕೆಲವು ಮುಖಂಡರು ಸಭೆಯಲ್ಲಿದ್ದ ಮುಖ್ಯಮಂತ್ರಿಗಳ ಗಮನಕ್ಕೆ ತಂದರು.ಪೊಲೀಸರು ನಗರದಲ್ಲಿ ಕಂಡ ಕಂಡಲ್ಲಿ ವಾಹನಗಳನ್ನು ಅಡ್ಡಹಾಕಿ ನಿಲ್ಲಿಸಿ ದಂಡ ಹಾಕುತ್ತಿದ್ದಾರೆ. ಇದು ಜನರ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ಪ್ರಸ್ತಾಪಿಸುತ್ತಿದ್ದಂತೆಯೇ, ಆ ವಿಷಯ ನನ್ನ ಗಮನಕ್ಕೆ ಬಂದಿದೆ. ಸರಿಪಡಿಸಲಾಗುವುದು ಎಂದರು ಎನ್ನಲಾಗಿದೆ.

ಬಿಬಿಎಂಪಿ 8 ವಲಯಗಳ ಸಹಾಯವಾಣಿ

ಕೊರೋನಾ ನಿಯಂತ್ರಣಕ್ಕೆ ನಗರದ 8 ವಲಯಗಳಲ್ಲಿ ನಿಯಂತ್ರಣಾ ಕೊಠಡಿಗಳನ್ನು ತೆರೆಯಲಾಗಿದ್ದು, ಬಿಬಿಎಂಪಿ ಪತ್ರಿಕಾ ಪ್ರಕಟಣೆಯಲ್ಲಿ ಹೆಲ್ಪ್​ಲೈನ್ (Covid Helpline)​ ನಂಬರ್​ಗಳನ್ನ ತಿಳಿಸಿದೆ.  ದಿನದ 24 ಗಂಟೆಯೂ ಅಗತ್ಯ ಮಾಹಿತಿ ನೀಡಲಿದ್ದಾರೆ ಎಂದು ಬಿಬಿಎಂಪಿ ಹೇಳಿದೆ.

ನಗರದ ಎಲ್ಲಾ ನಾಗರೀಕರು ಕೊವಿಡ್​ಗೆ ಸಂಬಂಧಿಸಿದಂತೆ ಟ್ರಯಾಜಿಂಗ್, ಕೊವಿಡ್ ಪರೀಕ್ಷೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಾಹಿತಿ, ಆಸ್ಪತ್ರೆಗೆ ದಾಖಲು, ಲಸಿಕೆ ಪಡೆಯುವುದು ಸೇರಿದಂತೆ ಇತರೆ ವಿಷಯಗಳ ಬಗ್ಗೆ ನಿಯಂತ್ರಣ ಕೊಠಡಿಯ ಸಿಬ್ಬಂದಿಯಿಂದ ಮಾಹಿತಿ ಪಡೆಯಬಹುದು.

ಎಂಟು ವಲಗಳ ಕೊವಿಡ್ ಸಹಾಯವಾಣಿ ಇಂತಿದೆ.

ಬೊಮ್ಮನಹಳ್ಳಿ- 8884666670
ದಾಸರಹಳ್ಳಿ- 94806 83132
ಪೂರ್ವ- 9480685163
ಮಹದೇವಪುರ- 08023010102
ಆರ್.ಆರ್.ನಗರ- 08028601050.
ದಕ್ಷಿಣ- 8431816718
ಪಶ್ಚಿಮ- 08068248454
ಯಲಹಂಕ- 9480685961

click me!