ರಾಜ್ಯ ಸಂಪುಟ ವಿಸ್ತರಣೆ: ಡಿಕೆ, ಬಿಕೆ, ಸಿದ್ದು ದೆಹಲಿಗೆ ದಾಂಗುಡಿ; ಪ್ರಾತಿನಿದ್ಯ ಸಿಕ್ಕ ಜಿಲ್ಲೆ, ಸಮುದಾಯ ಔಟ್!

Sathish Kumar KH   | Kannada Prabha
Published : Jul 27, 2026, 06:23 AM IST
DK SHivakumar

ಸಾರಾಂಶ

ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಬಿ.ಕೆ.ಹರಿಪ್ರಸಾದ್ ಅವರು ದೆಹಲಿಗೆ ತೆರಳಲಿದ್ದಾರೆ. ಹೈಕಮಾಂಡ್ ನಾಯಕರೊಂದಿಗೆ ಸಭೆ ನಡೆಸಿ ಸಂಭಾವ್ಯ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಿದ್ದು, ಶೀಘ್ರದಲ್ಲೇ ನೂತನ ಸಚಿವರ ಪ್ರಮಾಣ ವಚನ ನಡೆಯುವ ಸಾಧ್ಯತೆಯಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ದೆಹಲಿಗೆ ತೆರಳಲಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಿಡಬ್ಲ್ಯುಸಿ ಸದಸ್ಯರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಅವರು ಹೈಕಮಾಂಡ್‌ ನಾಯಕರೊಂದಿಗೆ ಸೋಮವಾರ ಇಲ್ಲವೇ ಮಂಗಳವಾರ ಮಹತ್ವದ ಸಭೆ ನಡೆಸಲಿದ್ದಾರೆ.

ಹೈಕಮಾಂಡ್‌ ನಾಯಕರೊಂದಿಗೆ ಸಭೆಗೆ ಇನ್ನೂ ನಿರ್ದಿಷ್ಟ ಸಮಯ ನಿಗದಿಯಾಗಿಲ್ಲ, ಸೋಮವಾರ ನಿಗದಿಯಾಗಲಿದೆ. ಒಂದು ವೇಳೆ ಸೋಮವಾರ ಸಮಯ ನಿಗದಿಯಾಗದಿದ್ದಲ್ಲಿ ಮಂಗಳವಾರ ಸಭೆ ನಡೆಯಲಿದೆ ಎಂದು ತಿಳಿದು ಬಂದಿದೆ. ಹೈಕಮಾಂಡ್‌ ಬುಲಾವ್‌ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆಯೇ ಮೂವರೂ ನಾಯಕರು ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್‌, ರಣದೀಪ್‌ ಸುರ್ಜೇವಾಲ ಅವರೊಂದಿಗೆ ರಾಜ್ಯ ನಾಯಕರು ದೆಹಲಿಯಲ್ಲಿ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲಿದ್ದಾರೆ. 

ಈಗಾಗಲೇ ಹಿಂದೆ ನಡೆದಿರುವ ಪೂರ್ವಭಾವಿ ಸಭೆಗಳಲ್ಲಿ ರಾಜ್ಯ ನಾಯಕರು ಮತ್ತು ಎಐಸಿಸಿ ನಾಯಕರು ಪ್ರತ್ಯೇಕವಾದ ಸಂಭಾವ್ಯ ಸಚಿವರ ಪಟ್ಟಿಗಳನ್ನು ನೀಡಿದ್ದಾರೆ. ಸೋಮವಾರದ ಸಭೆಯಲ್ಲಿ ಈ ಪಟ್ಟಿಗಳನ್ನು ಪರಿಶೀಲಿಸಿ ಜಿಲ್ಲಾವಾರು ಹಾಗೂ ಸಮುದಾಯವಾರು ಪ್ರಾತಿನಿಧ್ಯ ಅನುಸರಿಸಿ ಹೈಕಮಾಂಡ್‌ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.

ದಿನಾಂಕವೂ ನಿಗದಿ ಸಾಧ್ಯತೆ:

ಜೊತೆಗೆ ಸಂಪುಟ ವಿಸ್ತರಣೆಗೆ ಸಭೆಯಲ್ಲಿ ದಿನಾಂಕ ನಿಗದಿಪಡಿಸುವ ಸಾಧ್ಯತೆಯೂ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಬುಧವಾರ ನೂತನ ಸಚಿವರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ನೇತೃತ್ವದ ಸಂಪುಟದಲ್ಲಿ ಜೂ.3ರಂದು 13 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರು. ಈ ವೇಳೆ ಯಾವ್ಯಾವ ಜಿಲ್ಲೆ, ಸಮುದಾಯಗಳಿಗೆ ಪ್ರಾತಿನಿದ್ಯ ದೊರಕಿದೆಯೋ ಅದನ್ನು ಬಿಟ್ಟು ಉಳಿದ ಜಿಲ್ಲೆ, ಸಮುದಾಯಗಳಿಗೆ ಈಗಿನ ಸಂಪುಟ ವಿಸ್ತರಣೆಯಲ್ಲಿ ಆದ್ಯತೆ ನೀಡಲಾಗುತ್ತದೆ. ಇನ್ನು, ಕೆಲ ಪ್ರಬಲ ಸಮುದಾಯ ಹಾಗೂ ಜಿಲ್ಲೆಗಳಿಗೆ ಹೆಚ್ಚುವರಿ ಅವಕಾಶ ಸಿಗುವ ಸಾಧ್ಯತೆ ಇದೆ.

ಕಳೆದ ವಾರ ರಾಜ್ಯ ನಾಯಕರು ವರಿಷ್ಠರ ಭೇಟಿಗೆ ದೆಹಲಿಗೆ ತೆರಳಿದ್ದರಾದರೂ ನೀಟ್‌ ಅಕ್ರಮ ಖಂಡಿಸಿ ಕಾಕ್ರೋಚ್‌ ಜನತಾ ಪಾರ್ಟಿ ನಡೆಸುತ್ತಿದ್ದ ಹೋರಾಟ ಬೆಂಬಲಿಸಿ ರಾಹುಲ್‌ ಗಾಂಧಿ, ಪ್ರಿಯಾಂಕ್‌ ಗಾಂಧಿ ಸೇರಿ ಕಾಂಗ್ರೆಸ್‌ ನಾಯಕರೂ ಹೋರಾಟ ನಡೆಸಿದ್ದರಿಂದ ಚರ್ಚೆ ಸಾಧ್ಯವಾಗಿರಲಿಲ್ಲ. ಇದೀಗ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆಯಿಂದ ಹೋರಾಟಕ್ಕೆ ವಿರಾಮ ದೊರಕಿರುವುದರಿಂದ ವರಿಷ್ಠರು ರಾಜ್ಯ ನಾಯಕರಿಗೆ ದೆಹಲಿಗೆ ಬರುವಂತೆ ಆಹ್ವಾನಿಸಿದ್ದರು. ಹೀಗಾಗಿ ಈ ಬಾರಿ ಬಹುತೇಕ ಸಂಪುಟ ವಿಸ್ತರಣೆಗೆ ಪಟ್ಟಿ ಅಂತಿಮಗೊಳಿಸಿ, ದಿನಾಂಕವೂ ನಿಗದಿಯಾಗಲಿದೆ ಎಂದು ತಿಳಿದು ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜ್ಯ ಗೃಹ ಸಚಿವರಿಗೆ ಅನಾಮಧೇಯ ಪತ್ರ, ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ ಪೊಲೀಸ್ ಲೆಟರ್
Dharwad Rural: ಧಾರವಾಡ ಗ್ರಾಮೀಣದಲ್ಲಿ ಬಿಗ್‌ ಫೈಟ್! ಕುಲಕರ್ಣಿಗೆ ಪರ್ಯಾಯ ಇಲ್ವಾ? ಬಿಜೆಪಿ ಆ ತಪ್ಪು ಮಾಡಿದ್ರೆ 'ಕೈ'ಗೆ ಅಧಿಕಾರ ಫಿಕ್ಸ್‌!