Dharwad Rural: ಧಾರವಾಡ ಗ್ರಾಮೀಣದಲ್ಲಿ ಬಿಗ್‌ ಫೈಟ್! ಕುಲಕರ್ಣಿಗೆ ಪರ್ಯಾಯ ಇಲ್ವಾ? ಬಿಜೆಪಿ ಆ ತಪ್ಪು ಮಾಡಿದ್ರೆ 'ಕೈ'ಗೆ ಅಧಿಕಾರ ಫಿಕ್ಸ್‌!

Published : Jul 26, 2026, 07:45 PM IST
Vinay Kulakarni

ಸಾರಾಂಶ

ಶಾಸಕ ವಿನಯ್ ಕುಲಕರ್ಣಿ ಅವರ ಅನರ್ಹತೆಯಿಂದಾಗಿ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಉಪಚುನಾವಣೆಯ ಕಾವು ಏರಿದೆ. ಕಾಂಗ್ರೆಸ್‌ನಲ್ಲಿ ಕುಲಕರ್ಣಿ ಕುಟುಂಬಕ್ಕೆ ಟಿಕೆಟ್ ನೀಡಬೇಕೇ ಅಥವಾ ಪರ್ಯಾಯ ನಾಯಕತ್ವಕ್ಕೆ ಮಣೆ ಹಾಕಬೇಕೇ ಎಂಬ ಚರ್ಚೆ ನಡೆದರೆ, ಬಿಜೆಪಿಯಲ್ಲಿ ಆಕಾಂಕ್ಷಿಗಳ ನಡುವಿನ ಬಣ ರಾಜಕೀಯವೇ ದೊಡ್ಡ ಸವಾಲಾಗಿದೆ.

ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ-71 ಪ್ರಸ್ತುತ ರಾಜ್ಯ ರಾಜಕೀಯದ ಪ್ರಮುಖ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ. ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಶಾಸಕರಾಗಿದ್ದ ವಿನಯ್ ಕುಲಕರ್ಣಿ ಅವರು ದೋಷಿ ಎಂದು ಸಾಬೀತಾಗಿ ಜೈಲು ಸೇರಿರುವ ಹಿನ್ನೆಲೆಯಲ್ಲಿ, ಅವರ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಉಪಚುನಾವಣೆಯ ಕಹಳೆ ಮೊಳಗುವುದು ಬಹುತೇಕ ಖಚಿತವಾಗಿದೆ ಎನ್ನಲಾಗಿದೆ. ನಾಯಕನ ಅಲಭ್ಯತೆಯಿಂದಾಗಿ ಬೀಳು ಬಿದ್ದಿದ್ದ ರಾಜಕೀಯ ಚಟುವಟಿಕೆಗಳು ಇದೀಗ ಉಪಚುನಾವಣೆಯ ಹಿನ್ನೆಲೆಯಲ್ಲಿ ಭಾರಿ ಕಾವು ಪಡೆದುಕೊಂಡಿವೆ.

ಕಾಂಗ್ರೆಸ್ ಅಂಗಳ; ಕುಲಕರ್ಣಿ ಕುಟುಂಬವೋ? ಪರ್ಯಾಯ ನಾಯಕತ್ವವೋ?

ಧಾರವಾಡ ಗ್ರಾಮೀಣ ಎಂದರೆ ವಿನಯ್ ಕುಲಕರ್ಣಿ ಎಂಬಷ್ಟರ ಮಟ್ಟಿಗೆ ಕ್ಷೇತ್ರದಲ್ಲಿ ಅವರ ಪ್ರಭಾವ ಇತ್ತು. ಆದರೆ ಈಗ ಅವರು ಸಕ್ರಿಯ ರಾಜಕೀಯದಿಂದ ದೂರವಾಗಿರುವುದರಿಂದ 'ಕೈ' ಪಡೆಯಲ್ಲಿ ಅವರ ಸ್ಥಾನ ತುಂಬುವವರು ಯಾರು ಎಂಬ ಪ್ರಶ್ನೆ ಎದ್ದಿದೆ. ಸಹಾನುಭೂತಿಯ ಅಲೆಯ ಲಾಭ ಪಡೆಯಲು ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರಿಗೆ ಟಿಕೆಟ್ ನೀಡಬೇಕೆಂಬ ಒತ್ತಡ ಬೆಂಬಲಿಗರಿಂದ ಕೇಳಿಬರುತ್ತಿದೆ. ಅಲ್ಲದೇ ಇದೇ ಹಿನ್ನೆಲೆಯಲ್ಲಿ, ಡಿ.ಕೆ.ಶಿವಕುಮಾರ್‌ಗೆ ಬೇಟಿಯೂ ಆಗಿದ್ದಾರೆ ಎನ್ನುವುದು ಕೇಳಿ ಬಂದಿದೆ. ಅಷ್ಟೇ ಅಲ್ಲ, ಇನ್ನೊಂದೆಡೆ ತವನಪ್ಪ ಅಷ್ಟಗಿ ಅವರಂತಹ ಹಿರಿಯ ಸ್ಥಳೀಯ ನಾಯಕರು ಸಹ ಟಿಕೆಟ್‌ಗಾಗಿ ಲಾಭಿ ನಡೆಸುತ್ತಿದ್ದು, ಕುಲಕರ್ಣಿ ಕುಟುಂಬೇತರ ಪರ್ಯಾಯ ಮುಖವಾಗಿ ಗುರುತಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಕುಟುಂಬದ ಸಹಾನುಭೂತಿಯನ್ನು ನೆಚ್ಚಿಕೊಳ್ಳುತ್ತದೆಯೋ ಅಥವಾ ಹೊಸ ನಾಯಕತ್ವಕ್ಕೆ ಮಣೆ ಹಾಕುತ್ತದೆಯೋ ಎಂಬುದು ಸಹ ಆ ಕ್ಷೇತ್ರದಲ್ಲಿ ಕುತೂಹಲ ಮೂಡಿಸಿದೆ.

ಬಿಜೆಪಿ ಪಡೆಗೆ ಒಗ್ಗಟ್ಟಿನ ಸವಾಲು!

ಕಮಲ ಪಡೆಯಲ್ಲೂ ಆಕಾಂಕ್ಷಿಗಳ ದಂಡೇ ಇದೆ. ಮಾಜಿ ಶಾಸಕ ಅಮೃತ ದೇಸಾಯಿ, ಸೀಮಾ ಮಸೂತಿ, ಮಂಜುನಾಥ ಮಕ್ಕಳಗೇರಿ ಹಾಗೂ ಶಿಲ್ಪಾ ಅಮರಶೆಟ್ಟಿ ಸೇರಿ ಹಲವು ಪ್ರಮುಖ ನಾಯಕರು ಟಿಕೆಟ್‌ಗಾಗಿ ತೀವ್ರ ಸ್ಪರ್ಧೆಯೊಡ್ಡಿದ್ದಾರೆ ಎನ್ನಲಾಗಿದೆ. ಇಲ್ಲಿ ಬಿಜೆಪಿಗೆ ಅತಿ ದೊಡ್ಡ ಸವಾಲೆಂದರೆ 'ಬಣ ರಾಜಕೀಯ'. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ, ಟಿಕೆಟ್ ಹಂಚಿಕೆ ಬಳಿಕ ಅತೃಪ್ತಿ ಉಂಟಾಗಿ ಆಂತರಿಕ ಭಿನ್ನಾಭಿಪ್ರಾಯ ಮೂಡಿದರೆ, ಮತಗಳು ವಿಭಜನೆಯಾಗುವ ಸಾಧ್ಯತೆಯೇ ಬಹುತೇಕ ಹೆಚ್ಚಾಗಿದೆ. ನಾಯಕರ ನಡುವೆ ಸಮ್ಮತಿ ಮೂಡಿಸಿ ಎಲ್ಲರನ್ನೂ ಒಂದೇ ವೇದಿಕೆಗೆ ತರುವುದು ಬಿಜೆಪಿ ವರಿಷ್ಠರಿಗೆ ದೊಡ್ಡ ಪರೀಕ್ಷೆಯಾಗಲಿದೆ.

ಹೇಗಿದೆ ಜಾತಿ ಲೆಕ್ಕಾಚಾರ?

ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಒಟ್ಟು ಸುಮಾರು 2.11 ರಿಂದ 2.14 ಲಕ್ಷ ಮತದಾರರಿದ್ದಾರೆ. ಜಾತಿವಾರು ಲೆಕ್ಕಾಚಾರಗಳನ್ನು ಗಮನಿಸುವುದಾದರೆ, ಲಿಂಗಾಯತರು ಸುಮಾರು 65,000 ಮತದಾರರು (ಅತ್ಯಂತ ಪ್ರಭಾವಿ ಸಮುದಾಯ). ಕುರುಬರು ಸುಮಾರು 30,000 ಮತದಾರರು (ಕ್ಷೇತ್ರದ 2ನೇ ಅತಿ ದೊಡ್ಡ ಸಮುದಾಯ). ಮುಸ್ಲಿಮರು: ಸುಮಾರು 25,000 ರಿಂದ 30,000 ಮತದಾರರು. ಪ.ಜಾತಿ, ಪ.ಪಂಗಡ ಸಮುದಾಯ, ಸುಮಾರು 25,000 ಮತದಾರರು ಇದ್ದಾರೆ. ಅಲ್ಲದೇ ಮರಾಠರು ಸುಮಾರು 15,000 ಮತದಾರರು ಇದ್ದಾರೆ.

2008ರಲ್ಲಿ ಬಿಜೆಪಿಗೆ ಆಸರೆ ಆಗಿದ್ದೇನು?

ಇತರರು (ಬ್ರಾಹ್ಮಣ ಹಾಗೂ ಹಿಂದುಳಿದ ವರ್ಗ) ಸುಮಾರು 15,000 ಮತದಾರರು ಇದ್ದಾರೆ. ಆದರೆ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯ ದೊಡ್ಡದಾಗಿದ್ದರೂ, ಮತಗಳು ವಿಭಜನೆಯಾದಾಗ 'ಅಹಿಂದ' ಮತಗಳ ಕ್ರೋಢೀಕರಣವೇ ನಿರ್ಣಾಯಕ ಪಾತ್ರ ವಹಿಸುತ್ತದೆ. 2023ರಲ್ಲಿ ವಿನಯ್ ಕುಲಕರ್ಣಿ ಅವರ ಗೆಲುವಿಗೆ ಇದೇ ಸೂತ್ರ ನೆರವಾಗಿತ್ತು. 2008ರಲ್ಲಿ ಅತ್ಯಂತ ಕನಿಷ್ಠ (723) ಮತಗಳ ಅಂತರದಲ್ಲಿ ಸೀಮಾ ಮಸೂತಿ ಅವರು ಗೆದ್ದಾಗ, ಲಿಂಗಾಯತ ಮತ್ತು ಮರಾಠ ಮತಗಳ ಧ್ರುವೀಕರಣ ಬಿಜೆಪಿಗೆ ಆಸರೆಯಾಗಿತ್ತು.

ಉಪಚುನಾವಣೆಯಲ್ಲಿ ಬಿಜೆಪಿ ಮಾಡಬಾರದ ತಪ್ಪೇನು?

ಮುಂಬರುವ ಉಪಚುನಾವಣೆಯಲ್ಲಿ ಕಮಲ ಪಡೆ ಅಧಿಕಾರಕ್ಕೇರಬೇಕಾದರೆ ಅತ್ಯಂತ ಜಾಗರೂಕತೆಯಿಂದ ಹೆಜ್ಜೆ ಇಡಬೇಕಾಗಿದೆ. ಯಾರಿಗೆ ಟಿಕೆಟ್ ಸಿಕ್ಕರೂ ಉಳಿದ ಆಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರು ಪಕ್ಷದ ಅಭ್ಯರ್ಥಿಯ ವಿರುದ್ಧ ಕೆಲಸ ಮಾಡದಂತೆ ಮುಂಚಿತವಾಗಿಯೇ ಒಮ್ಮತ ಮೂಡಿಸುವುದು ಬಿಜೆಪಿಗೆ ಅತ್ಯಗತ್ಯ. ಕೇವಲ ಒಂದೇ ಸಮುದಾಯದ ಮತಗಳನ್ನು ನೆಚ್ಚಿಕೊಳ್ಳದೆ, ಕ್ಷೇತ್ರದಲ್ಲಿ ಎರಡನೇ ಅತಿ ದೊಡ್ಡ ಸಮುದಾಯವಾಗಿರುವ ಕುರುಬರು, ಮರಾಠರು ಮತ್ತು ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯುವ ತಂತ್ರ ರೂಪಿಸಬೇಕು. 2008ರಂತೆ ಕೇವಲ ಅಲೆಯನ್ನು ನೆಚ್ಚಿಕೊಳ್ಳದೆ, ಪ್ರತಿಯೊಂದು ಬೂತ್ ಮಟ್ಟದಲ್ಲೂ ಪಕ್ಷದ ಸಂಘಟನೆಯನ್ನು ಗಟ್ಟಿಗೊಳಿಸಿ ಮತದಾನದ ಪ್ರಮಾಣ ಹೆಚ್ಚಿಸುವಂತೆ ನೋಡಿಕೊಳ್ಳಬೇಕು.

ಕಾಂಗ್ರೆಸ್‌ಗೆ ಇರುವ ಶಕ್ತಿ ಏನು?

ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಗಟ್ಟಿಯಾದ ‘ಅಹಿಂದ’ ಮತಬ್ಯಾಂಕ್ ಮತ್ತು ವಿನಯ್ ಕುಲಕರ್ಣಿ ಅವರ ಸಂಘಟನಾ ಶಕ್ತಿ ದೊಡ್ಡ ಬಲವಾಗಿದೆ. ಪ್ರಭಾವಿ ಲಿಂಗಾಯತ ಸಮುದಾಯದ ಒಂದು ವರ್ಗದ ಬೆಂಬಲದ ಜೊತೆಗೆ, ಕ್ಷೇತ್ರದಲ್ಲಿ ಎರಡನೇ ಅತಿ ದೊಡ್ಡ ಸಮುದಾಯವಾಗಿರುವ 30,000ಕ್ಕೂ ಹೆಚ್ಚು ಕುರುಬ ಮತದಾರರು, ಮುಸ್ಲಿಂ ಹಾಗೂ ಪ.ಜಾತಿ, ಪ.ಪಂಗಡ ಸಮುದಾಯಗಳು ಒಟ್ಟಾಗಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಬ್ಯಾಂಕ್ ಆಗಿ ಕ್ರೋಢೀಕರಣಗೊಳ್ಳುತ್ತವೆ. ಇದರ ಜೊತೆಗೆ, ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಕುಲಕರ್ಣಿ ಕುಟುಂಬದ ಮೇಲಿರುವ ಸಾರ್ವಜನಿಕ ಸಹಾನುಭೂತಿ ಅಲೆ, ರಾಜ್ಯ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳು ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಆನೆಬಲ ತಂದುಕೊಡಲಿವೆ ಎನ್ನಲಾಗಿದೆ.

ಉತ್ತರಿಸಬೇಕಿದೆ ಕಾಲ!

ಕಾಂಗ್ರೆಸ್‌ಗೆ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳುವ ಸವಾಲಿದ್ದರೆ, ಬಿಜೆಪಿಗೆ ಆಂತರಿಕ ಶೀತಲ ಸಮರವನ್ನು ಶಮನಗೊಳಿಸಿ ಗೆಲುವಿನ ದಾರಿ ಕಂಡುಕೊಳ್ಳುವ ಅನಿವಾರ್ಯತೆಯಿದೆ. ಈ ಮಹಾ ಸಂಗ್ರಾಮದಲ್ಲಿ ಅಂತಿಮವಾಗಿ ಯಾರು ನಗುತ್ತಾರೆ ಎಂಬುದನ್ನು ಕಾಲವೇ ಉತ್ತರಿಸಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

KPSC: ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮಕ್ಕೆ ಬಿಗ್ ಟ್ವಿಸ್ಟ್! ಕಾಂತಕುಮಾರ್ ನಡೆಸಿದ ಹೋರಾಟಕ್ಕೆ ಕೊನೆಗೂ ಸಿಕ್ತಾ ಗೆಲುವು?
ಕಲುಷಿತಗೊಂಡ ರಾಜಕಾರಣ, ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದ ಸಿದ್ದರಾಮಯ್ಯ ಮನದ ಮಾತು