
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಆರ್ಥಿಕ ಸಂಪನ್ಮೂಲವಾಗಿ ಪರಿವರ್ತಿಸುವ ದಿಸೆಯಲ್ಲಿ ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸಿದೆ. ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಲ್ಲಿ (STP) ಉತ್ಪತ್ತಿಯಾಗುವ ಕಚ್ಚಾ ಜೈವಿಕ ಅನಿಲವನ್ನು ಹೆಚ್ಚಿನ ಮೌಲ್ಯದ ಕಂಪ್ರೆಸ್ಡ್ ಬಯೋ-ಗ್ಯಾಸ್ (CBG) ಆಗಿ ಮೇಲ್ದರ್ಜೆಗೇರಿಸುವ ಮೂಲಕ, ಮುಂದಿನ 20 ವರ್ಷಗಳಲ್ಲಿ ಸುಮಾರು ₹120 ಕೋಟಿಗೂ ಅಧಿಕ ಹೆಚ್ಚುವರಿ ಆದಾಯವನ್ನು ಗಳಿಸುವ ನಿರೀಕ್ಷೆ ಇದೆ ಎಂದು ಜಲಮಂಡಳಿ ತಿಳಿಸಿದೆ.
ಸುಸ್ಥಿರ ನಗರ ಜಲ ನಿರ್ವಹಣೆ ಮತ್ತು ಸರ್ಕ್ಯುಲರ್ ಎಕಾನಮಿ ಪರಿಕಲ್ಪನೆಯನ್ನು ಉತ್ತೇಜಿಸುವ ಉದ್ದೇಶದಿಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಈ ಯೋಜನೆ ರೂಪುಗೊಂಡಿದೆ. ತ್ಯಾಜ್ಯವನ್ನು ಸಂಪನ್ಮೂಲವನ್ನಾಗಿ ಪರಿವರ್ತಿಸುವ ಈ ಪ್ರಯತ್ನ, ಪರಿಸರ ಸಂರಕ್ಷಣೆಗೂ ಹಾಗೂ ಆರ್ಥಿಕ ಬೆಳವಣಿಗೆಗೂ ಸಹಕಾರಿ ಆಗಲಿದೆ.
ನಗರದ ಐದು ಪ್ರಮುಖ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಲ್ಲಿ ದಿನಕ್ಕೆ ಒಟ್ಟು 550 ಎಂಎಲ್‌ಡಿ (ಮಿಲಿಯನ್ ಲೀಟರ್ ಪ್ರತಿದಿನ) ತ್ಯಾಜ್ಯ ನೀರನ್ನು ಸಂಸ್ಕರಿಸಲಾಗುತ್ತದೆ. ಈ ನೀರಿನಿಂದ ಉತ್ಪತ್ತಿಯಾಗುವ ಜೈವಿಕ ಅನಿಲವನ್ನು ಸಂಗ್ರಹಿಸಿ, ಅದನ್ನು CBG ಆಗಿ ಪರಿವರ್ತಿಸಲಾಗುತ್ತದೆ. ಈ ಮಟ್ಟದ ಸಾಮರ್ಥ್ಯ ಹೊಂದಿರುವ ಯೋಜನೆ ದೇಶದಲ್ಲೇ ಅತಿದೊಡ್ಡದಾಗಿದ್ದು, ಇದು ಐತಿಹಾಸಿಕ ಮೈಲಿಗಲ್ಲಾಗಲಿದೆ.
ಭಾರತದ ಇತರ ನಗರಗಳೊಂದಿಗೆ ಹೋಲಿಸಿದರೆ, ಉದಾಹರಣೆಗೆ ಸೂರತ್‌ನ ಘಟಕವು ಕೇವಲ 120 MLD ಸಾಮರ್ಥ್ಯ ಹೊಂದಿದೆ. ಆದರೆ ಬೆಂಗಳೂರಿನ ಈ ಯೋಜನೆ ಅದರಿಗಿಂತ ಹಲವು ಪಟ್ಟು ದೊಡ್ಡದು ಎಂಬುದು ಗಮನಾರ್ಹ.
ಪ್ರಸ್ತುತ, STP ಗಳಲ್ಲಿ ಉತ್ಪತ್ತಿಯಾಗುವ ಜೈವಿಕ ಅನಿಲವನ್ನು ಮುಖ್ಯವಾಗಿ ಸ್ಥಳೀಯವಾಗಿ ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತಿದೆ. ಕೆಲವು ಘಟಕಗಳಲ್ಲಿ ಅನಿಲವನ್ನು ಸುಡಲಾಗುತ್ತದೆ. ಆದರೆ ಹೊಸ ಯೋಜನೆಯಡಿ, ಈ ಕಚ್ಚಾ ಅನಿಲವನ್ನು ಶುದ್ಧೀಕರಿಸಿ CBG ಆಗಿ ಪರಿವರ್ತಿಸಿ ನಗರ ಅನಿಲ ವಿತರಣಾ ಜಾಲಕ್ಕೆ ಪೂರೈಸುವ ಅಥವಾ ಶುದ್ಧ ಸಾರಿಗೆ ಇಂಧನವಾಗಿ ಬಳಸುವ ಉದ್ದೇಶ ಹೊಂದಿದೆ. ಇದರಿಂದ ಅನಿಲದ ಮೌಲ್ಯ ಹೆಚ್ಚುವಂತೆ ಮಾಡಲಾಗುತ್ತದೆ.
ಇನ್ನು ಮುಂದೆ ನಗರದಲ್ಲಿರುವ ಎಲ್ಲ STP ಗಳಲ್ಲಿ ಬಯೋ-ಡೈಜೆಸ್ಟರ್ ವ್ಯವಸ್ಥೆಗಳಿರುವ ಸ್ಥಳಗಳಲ್ಲಿ ಈ ತಂತ್ರಜ್ಞಾನವನ್ನು ಹಂತ ಹಂತವಾಗಿ ವಿಸ್ತರಿಸಲು ಮಂಡಳಿ ಯೋಜಿಸಿದೆ.
ಈ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಜಾರಿಗೆ ತರಲಾಗುತ್ತಿದೆ. ಒಟ್ಟು ₹85 ಕೋಟಿ ಬಂಡವಾಳ ವೆಚ್ಚವನ್ನು ಖಾಸಗಿ ಸಂಸ್ಥೆಯೇ ಭರಿಸಲಿದ್ದು, ಕಾರ್ಯಾಚರಣೆ ಹಾಗೂ ನಿರ್ವಹಣೆಯ ಹೊಣೆಗಾರಿಕೆಯನ್ನು ಸಹ ವಹಿಸಿಕೊಳ್ಳಲಿದೆ. ಇದರಿಂದ BWSSB ಗೆ ಯಾವುದೇ ಆರ್ಥಿಕ ಭಾರ ಉಂಟಾಗುವುದಿಲ್ಲ.
ಯೋಜನೆಗಾಗಿ STP ಆವರಣದೊಳಗೆ ಸುಮಾರು 13,000 ಚದರ ಮೀಟರ್ ಜಾಗವನ್ನು ಮಂಡಳಿ ಒದಗಿಸಲಿದೆ. ಭೂಮಿಯ ಮಾಲೀಕತ್ವದಲ್ಲಿ ಯಾವುದೇ ಬದಲಾವಣೆ ನಡೆಯುವುದಿಲ್ಲ.
ವಿದ್ಯುತ್ ಉತ್ಪಾದನೆಗೆ ಮಾತ್ರ ಸೀಮಿತವಾಗಿದ್ದ ಜೈವಿಕ ಅನಿಲವನ್ನು CBG ಆಗಿ ಪರಿವರ್ತಿಸುವ ಮೂಲಕ, ಸುಮಾರು ₹120 ಕೋಟಿ ಹೆಚ್ಚುವರಿ ಆದಾಯವನ್ನು ಪಡೆಯುವ ಸಾಮರ್ಥ್ಯ ಈ ಯೋಜನೆ ಹೊಂದಿದೆ. ಇದು BWSSB ಆರ್ಥಿಕ ಸ್ಥಿತಿಯನ್ನು ಬಲಪಡಿಸುವುದರ ಜೊತೆಗೆ, ಶುದ್ಧ ಇಂಧನ ಉತ್ಪಾದನೆಯಲ್ಲಿ ಹೊಸ ದಾರಿಯನ್ನು ತೆರೆಯಲಿದೆ.
BWSSB ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಅವರು ಮಾತನಾಡಿ, “550 MLD ಸಾಮರ್ಥ್ಯದ ಈ ಯೋಜನೆ ದೇಶದಲ್ಲೇ ಅತಿದೊಡ್ಡ ಮತ್ತು ಅತ್ಯಂತ ಮಹತ್ವಾಕಾಂಕ್ಷಿಯಾಗಿದೆ. ಯಾವುದೇ ಬಂಡವಾಳ ಹೂಡಿಕೆ ಇಲ್ಲದೆ ₹120 ಕೋಟಿಗೂ ಹೆಚ್ಚು ಆದಾಯ ಗಳಿಸುವ ಅವಕಾಶ ಇದಾಗಿದೆ. ಇದು ನಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದರ ಜೊತೆಗೆ, ಬೆಂಗಳೂರಿನ ಇಂಧನ ಭದ್ರತೆಯನ್ನು ಹೆಚ್ಚಿಸಿ, ದೇಶದ ಇಂಧನ ಸ್ವಾವಲಂಬನೆಗೆ ಮಾದರಿಯಾಗಲಿದೆ,” ಎಂದು ತಿಳಿಸಿದ್ದಾರೆ.
ರಾಜ್ಯ ಸಚಿವ ಸಂಪುಟವು ಇತ್ತೀಚೆಗೆ ₹85 ಕೋಟಿ ವೆಚ್ಚದ ಜೈವಿಕ ಅನಿಲ ಶುದ್ಧೀಕರಣ ಮತ್ತು ಸಂಕೋಚನ ಯೋಜನೆಗೆ ಅಧಿಕೃತ ಅನುಮೋದನೆ ನೀಡಿದೆ. 20 ವರ್ಷಗಳ ರಿಯಾಯಿತಿ ಅವಧಿಯೊಂದಿಗೆ ಈ ಯೋಜನೆಯನ್ನು ಜಾರಿಗೆ ತರಲು BWSSB ಗೆ ಅಧಿಕಾರ ನೀಡಲಾಗಿದೆ.
ಐದು ಪ್ರಮುಖ STP ಗಳಿಂದ ಉತ್ಪತ್ತಿಯಾಗುವ ಜೈವಿಕ ಅನಿಲವನ್ನು ಶುದ್ಧ ಇಂಧನವಾಗಿ ಪರಿವರ್ತಿಸಿ ನಗರ ಅನಿಲ ಜಾಲಕ್ಕೆ ಸೇರಿಸುವ ಈ ಯೋಜನೆ, ಶೂನ್ಯ ಬಂಡವಾಳ ಹೂಡಿಕೆಯಲ್ಲಿ ದೊಡ್ಡ ಪ್ರಮಾಣದ ಇಂಧನ ಚೇತರಿಕೆಗೆ ದಾರಿ ಮಾಡಿಕೊಡುತ್ತದೆ. ಇದು ಕೇವಲ ಆದಾಯ ಸೃಷ್ಟಿಯಲ್ಲದೆ, ಪರಿಸರ ಸ್ನೇಹಿ ಅಭಿವೃದ್ಧಿ ಮತ್ತು ಸುಸ್ಥಿರ ನಗರ ವ್ಯವಸ್ಥೆಗೆ ಮಹತ್ವದ ಕೊಡುಗೆ ನೀಡಲಿದೆ.
ಮಂಡಳಿಯ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಜೊತೆಗೆ ಇಂಧನ ಭದ್ರತೆಯನ್ನು ಬಲಪಡಿಸುವ ಈ ಯೋಜನೆ ದೇಶಕ್ಕೆ ಮಾದರಿಯಾಗಿದೆ.
- ಡಾ. ರಾಮ್ ಪ್ರಸಾತ್ ಮನೋಹರ್, ಅಧ್ಯಕ್ಷ, ಬಿಡಬ್ಲ್ಯುಎಸ್‌ಎಸ್‌ಬಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ