
ಬೆಂಗಳೂರು (ಏ.20): ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ನಡುವಿನ ಶೀತಲ ಸಮರ ಈಗ ಸ್ಫೋಟಗೊಂಡಿದೆ. ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ವಿರುದ್ಧ ಡಿ ಸಿ ಆರ್ ಇ (DCRE) ಎಸ್‌ಪಿ ಕಾಶಿನಾಥ್ ಅವರು ಡಿಜಿಪಿ ಸಲೀಂ ಅವರಿಗೆ ಗಂಭೀರ ಆರೋಪಗಳಿರುವ ಪತ್ರ ಬರೆಯುವ ಮೂಲಕ ಇಲಾಖೆಯಲ್ಲಿ ಸಂಚಲನ ಮೂಡಿಸಿದ್ದಾರೆ.
ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರು ತಮಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಮತ್ತು ತಾರತಮ್ಯ ಮಾಡುತ್ತಿದ್ದಾರೆ ಎಂದು ಎಸ್‌ಪಿ ಕಾಶಿನಾಥ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. "ನನಗೆ ಕೇವಲ 30 ನಿಮಿಷಗಳ ಕಾಲಾವಕಾಶ ನೀಡಿ, ಈ ಐಪಿಎಸ್ ಅಧಿಕಾರಿಯ ಎಲ್ಲಾ ಕರ್ಮಕಾಂಡಗಳನ್ನು ನಿಮ್ಮ ಮುಂದೆ ಬಯಲು ಮಾಡುತ್ತೇನೆ" ಎಂದು ಡಿಜಿಪಿಯವರಿಗೆ ಬರೆದ ಪತ್ರದಲ್ಲಿ ಸವಾಲು ಹಾಕಿದ್ದಾರೆ.
ಐಪಿಎಸ್ ಅಧಿಕಾರಿಗಳು ಹೇಳಿದಂತೆ ಕೆಲಸ ಮಾಡದಿದ್ದರೆ ಶೋಕಾಸ್ ನೋಟಿಸ್ (Memo) ನೀಡಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಕರ್ನಾಟಕ ಮೂಲದ ಅಧಿಕಾರಿಗಳನ್ನು ಮುದ್ದಾಂ ಗುರಿ ಮಾಡಿಕೊಂಡು ಕಿರುಕುಳ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಈ ಭ್ರಷ್ಟಾಚಾರ ಮತ್ತು ಕಿರುಕುಳದ ವಿಷಯವನ್ನು ಕೇವಲ ಡಿಜಿಪಿ ಮಾತ್ರವಲ್ಲದೆ, ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರ ಗಮನಕ್ಕೂ ತರಬೇಕು. ಹಾಗಾಗಿ ಅವರನ್ನು ಭೇಟಿ ಮಾಡಿಸಲು ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡಿದ್ದಾರೆ. ಮುಕ್ತವಾಗಿ ಮಾತನಾಡಲು ಒಂದು ವಾರದೊಳಗೆ ಭೇಟಿಗೆ ಸಮಯ ನಿಗದಿಪಡಿಸುವಂತೆ ಎಸ್‌ಪಿ ಪಟ್ಟು ಹಿಡಿದಿದ್ದಾರೆ.
ಹಲವು ಬಾರಿ ಲಿಖಿತ ದೂರು ನೀಡಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಈಗ ಎಸ್‌ಪಿ ಕಾಶಿನಾಥ್ ಅವರು ನೇರವಾಗಿ ಡಿಜಿಪಿ ಅಂಗಳಕ್ಕೆ ಚೆಂಡನ್ನು ಎಸೆದಿದ್ದಾರೆ. ಈ ಬೆಳವಣಿಗೆಯಿಂದಾಗಿ ಪೊಲೀಸ್ ಇಲಾಖೆಯಲ್ಲಿ ಆಂತರಿಕ ಭಿನ್ನಮತ ಬೀದಿಗೆ ಬಂದಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ