
ಬೆಂಗಳೂರು (ಮಾ.8): ರಾಜ್ಯದ ಬೊಕ್ಕಸ ಭರ್ತಿ ಮಾಡಿಕೊಳ್ಳಲು ಖಾಲಿ ಇರುವ ಅಥವಾ ಲಭ್ಯವಿರುವ ಮದ್ಯದ ಪರವಾನಗಿಗಳನ್ನು ಎಲೆಕ್ಟ್ರಾನಿಕ್ ಹರಾಜಿನ ಮೂಲಕ ಹಂಚಿಕೆ ಮಾಡುವುದಾಗಿ ಆಯವ್ಯಯದಲ್ಲಿ ಪ್ರಕಟಿಸಲಾಗಿದೆ.
₹40000 ಕೋಟಿ ಆದಾಯ ಟಾರ್ಗೆಟ್
ರಾಜ್ಯದ ಪ್ರಮುಖ ಆದಾಯ ಮೂಲವಾಗಿರುವ ಅಬಕಾರಿ ಇಲಾಖೆಯಿಂದ 2025-26ನೇ ಸಾಲಿನಲ್ಲಿ 40,000 ಕೋಟಿ ರು. ರಾಜಸ್ವ ಸಂಗ್ರಹಣ ಗುರಿ ಹೊಂದಿರುವ ಸರ್ಕಾರ, ಇದಕ್ಕಾಗಿ ಅನೇಕ ವರ್ಷಗಳಿಂದ ಸ್ಥಗಿತಗೊಂಡಿರುವ ಸಿಎಲ್-2 (ಮದ್ಯ ಮಾರಾಟ ಅಂಗಡಿ), ಸಿಎಲ್-9 ಸನ್ನದುಗಳನ್ನು (ಬಾರ್) ಹರಾಜಿನ ಮೂಲಕ ಹಂಚಿಕೆ ಮಾಡಲು ಉದ್ದೇಶಿಸಿದೆ.
ಅನೇಕ ವರ್ಷಗಳಿಂದ ಸರ್ಕಾರ ಹೊಸ ಸನ್ನದುಗಳನ್ನು ನೀಡುತ್ತಿಲ್ಲ. ಹೊಸ ಸನ್ನದುಗಳನ್ನು ನೀಡಲು ತೀವ್ರ ವಿರೋಧವಿದೆ. ಹೀಗಾಗಿ ಆದಾಯ ಹೆಚ್ಚಿಸಿಕೊಳ್ಳಲು ಖಾಲಿ ಇರುವ ಅಥವಾ ಲಭ್ಯವಿರುವ ಮದ್ಯದ ಪರವಾನಗಿಗಳನ್ನು ಪಾರದರ್ಶಕ ಎಲೆಕ್ಟ್ರಾನಿಕ್ ಹರಾಜಿನ ಮೂಲಕ ಹಂಚಿಕೆ ಮಾಡಲು ನಿರ್ಧರಿಸಿದೆ.
ಇದನ್ನೂ ಓದಿ: Karnataka Budget 2025 highlights | ಮಹಿಳಾ ದಿನಕ್ಕೆ ಸಿಎಂ ಸಿದ್ದರಾಮಯ್ಯ ಬಜೆಟ್ ಕೊಡುಗೆಗಳೇನು?
ಲಭ್ಯವಿರುವ ಮಾಹಿತಿ ಪ್ರಕಾರ, ರಾಜ್ಯದ 33 ಜಿಲ್ಲೆಗಳಲ್ಲಿ ಸ್ಥಗಿತಗೊಂಡಿರುವ ಸಿಎಲ್-2 ಸನ್ನದುಗಳ ಸಂಖ್ಯೆ 136 ಇದೆ. ಅದೇ ರೀತಿ ಸಿಎಲ್-9 ಸನ್ನದುಗಳ ಸಂಖ್ಯೆ 105 ಇದೆ. ಇದರ ಜೊತೆಗೆ 1987ರ ಕೋಟಾ ಅನ್ವಯ ಸನ್ನದು ನೀಡಲು ಬಾಕಿ ಇರುವ (ಎಂಎಸ್‌ಐಎಲ್) ಸಿಎಲ್-2 ಸನ್ನದುಗಳ ಸಂಖ್ಯೆ 70 ಇದೆ. ಆದರೆ ಎಂಎಸ್‌ಐಎಲ್ ಸನ್ನದುಗಳನ್ನು ಹರಾಜು ಹಾಕಲು ಬರುವುದಿಲ್ಲ.
ಬೆಂಗಳೂರು ನಗರ ಜಿಲ್ಲೆಯಲ್ಲಿ 36 ಸನ್ನದುಗಳು ಸ್ಥಗಿತಗೊಂಡಿದ್ದು, ಈ ಪೈಕಿ 21 ಸಿಎಲ್-2 ಹಾಗೂ 15 ಸಿಎಲ್-9 ಸನ್ನದು ಇದೆ. ಉಳಿದಂತೆ ಧಾರವಾಡ ಜಿಲ್ಲೆಯಲ್ಲಿ 21, ಚಿತ್ರದುರ್ಗ 24, ದಾವಣಗೆರೆ 20, ಶಿವಮೊಗ್ಗ 21, ಮಂಡ್ಯ ಜಿಲ್ಲೆಯಲ್ಲಿ 10 ಸನ್ನದು ಸ್ಥಗಿತಗೊಂಡಿವೆ. ಉಳಿದ ಜಿಲ್ಲೆಗಳಲ್ಲಿ ಕಡಿಮೆ ಸಂಖ್ಯೆಯ ಸನ್ನದು ಇದೆ.
ಸ್ಲ್ಯಾಬ್ ಮುಂದುವರಿಕೆ:
ಪ್ರೀಮಿಯಂ ಮದ್ಯದ ಬೆಲೆಗಳನ್ನು ನೆರೆಯ ರಾಜ್ಯಗಳಲ್ಲಿ ವಿಧಿಸುತ್ತಿರುವ ಬೆಲೆಗಳಿಗೆ ಅನುಸಾರವಾಗಿ ಪರಿಷ್ಕರಿಸಲಾಗಿದ್ದು, ಈ ವರ್ಷ ಅದೇ ರೀತಿ ಮುಂದುವರೆಸಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ