
Karnataka budget 2025 Highlights: ಮಹಿಳೆಯರ ಸುರಕ್ಷಿತೆ ಹಾಗೂ ಉತ್ತಮ ವಾತಾವರಣವನ್ನು ಕಲ್ಪಿಸಲು ಕೋಲಾರ ಜಿಲ್ಲೆಯ ನರಸಾಪುರದಲ್ಲಿ ₹173 ಕೋಟಿ ವೆಚ್ಚದಲ್ಲಿ 6,000 ಬೆಡ್ ಸಾಮರ್ಥ್ಯದ ಮಹಿಳಾ ವಸತಿ ನಿಲಯ, ತುಮಕೂರು ಜಿಲ್ಲೆಯ ವಸಂತನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ 20 ಕೋಟಿ ರು. ವೆಚ್ಚದಲ್ಲಿ ಮಹಿಳಾ ವಸತಿ ನಿಲಯಗಳನ್ನು ನಿರ್ಮಿಸಲಾಗುತ್ತದೆ.
ಅಂಗನವಾಡಿ ನೌಕರರ ಗೌರವಧನ ಹೆಚ್ಚಳ
ರಾಜ್ಯದ 37 ಲಕ್ಷ ಮಕ್ಕಳ ಆರೈಕೆ ಮತ್ತು ಕಲಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಗೌರವಧನವನ್ನು ಕ್ರಮವಾಗಿ ₹1,000 ಹಾಗೂ ₹750ಕ್ಕೆ ಹೆಚ್ಚಿಸಲಾಗಿದೆ. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡುತ್ತಿರುವ ₹1 ಲಕ್ಷ ಸಾಲ ಮತ್ತು ₹1.50 ಲಕ್ಷ ಸಹಾಯಧನವನ್ನು ಕ್ರಮವಾಗಿ ₹2.50 ಲಕ್ಷ ಮತ್ತು ₹2.50 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ: Karnataka Budget 2025: ಬೆಟ್ಟದಷ್ಟು ನಿರೀಕ್ಷೆಯಲ್ಲಿ ಹಲ್ಲುಕಡ್ಡಿಯಷ್ಟೂ ಈಡೇರಲಿಲ್ಲ!
ಅಲ್ಪಸಂಖ್ಯಾತ ಸ್ತ್ರೀಯರ ಶಿಕ್ಷಣಕ್ಕೆ 16 ಕಾಲೇಜು
ಅಲ್ಪಸಂಖ್ಯಾತ ಮಹಿಳೆಯರ ಉನ್ನತ ಶಿಕ್ಷಣಕ್ಕೆ ಪೂರಕವಾಗಿ 2025-26ನೇ ಸಾಲಿನಲ್ಲಿ 16 ಹೊಸ ಮಹಿಳಾ ಕಾಲೇಜುಗಳನ್ನು ಸ್ಥಾಪಿಸಲಾಗುತ್ತಿದೆ. ಜಿಲ್ಲೆ ಮತ್ತು ತಾಲೂಕು ಪಂಚಾಯತಿ ಕಚೇರಿ ಆವರಣಗಳಲ್ಲಿ ʻಅಕ್ಕ ಕೆಫೆ ಮತ್ತು ಕ್ಯಾಂಟೀನ್ʼ ಸ್ಥಾಪನೆ, ಪ್ರತಿ ತಾಲೂಕಿನಲ್ಲಿ ಒಂದು ʻಸಮಗ್ರ ಕೃಷಿ ಕ್ಲಸ್ಟರ್ʼ, ಶಾಲೆ, ಅಂಗನವಾಡಿ ಮತ್ತು ವಸತಿ ನಿಲಯಗಳಿಗೆ ಮೊಟ್ಟೆ ಮತ್ತು ತರಕಾರಿ ಪೂರೈಸಲು ಸ್ವ-ಸಹಾಯ ಸಂಘಗಳ ʻಕಿರು ಉದ್ಯಮʼಗಳಿಗೆ ಪ್ರೋತ್ಸಾಹ, ಸ್ವ-ಸಹಾಯ ಸಂಘಗಳ ಮೂಲಕ ಪ್ರತಿ ಜಿಲ್ಲೆಯಲ್ಲಿ ಒಂದು ʻಸಮುದಾಯ ಪ್ರವಾಸಿ ಯೋಜನೆʼಯನ್ನು ಅನುಷ್ಠಾನ ಮಾಡಲಾಗುತ್ತದೆ.
ಮಹಿಳೆಯರಿಗಾಗಿ ʻಸಂವಿಧಾನ ಸಾಕ್ಷರತೆʼ
ಗ್ರಾಮ ಪಂಚಾಯತಿ ಮಟ್ಟದಲ್ಲಿನ ಅರಿವು ಕೇಂದ್ರಗಳಲ್ಲಿ ವಿಜ್ಞಾನ, ಕಲೆ, ಸಾಹಿತ್ಯ ಮತ್ತು ವೃತ್ತಿ ಮಾರ್ಗದರ್ಶನ ಕುರಿತಾದ ʻಚಿಗುರುʼ ಕಾರ್ಯಕ್ರಮ, ಮಕ್ಕಳು ಮತ್ತು ಮಹಿಳೆಯರಿಗಾಗಿ ʻಸಂವಿಧಾನ ಸಾಕ್ಷರತೆʼ, ಮಹಿಳೆಯರಿಗಾಗಿ ʻಡಿಜಿಟಲ್ ಮತ್ತು ಆರ್ಥಿಕ ಸಾಕ್ಷರತೆʼ ಹಾಗೂ ಮಹಿಳಾ ಚುನಾಯಿತ ಪ್ರತಿನಿಧಿಗಳಿಗೆ ʻಅಧಿಕಾರ-ಸಾಕಾರʼ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಹೆರಿಗೆ ವೇಳೆ ತಾಯಿ ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಲು ₹320 ಕೋಟಿ ವೆಚ್ಚದ ಯೋಜನೆ ರೂಪಿಸಲಾಗುತ್ತದೆ.
ಇಂಗ್ಲೆಂಡ್ ಪ್ರತಿಷ್ಠಿತ ವಿವಿಯಲ್ಲಿ ಶಿಕ್ಷಣ ಅವಕಾಶ
ಮಹಿಳಾ ಉನ್ನತ ಶಿಕ್ಷಣದ ಬಲವರ್ಧನೆಗಾಗಿ 26 ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ₹26 ಕೋಟಿ, ಸರ್ಕಾರಿ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿನಿಯರಿಗೆ ಇಂಗ್ಲೆಂಡ್ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ‘ಚೆವನಿಂಗ್ ಕರ್ನಾಟಕ ಮಾಸ್ಟರ್ಸ್ ಫೇಲೋಶಿಪ್’ ನೆರವಿನೊಂದಿಗೆ ಒಂದು ವರ್ಷದ ಸ್ನಾತಕೋತ್ತರ ಪದವಿ ಪಡೆಯುವ ಯೋಜನೆ ರೂಪಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ