Karnataka Budget 2025: ಬೆಟ್ಟದಷ್ಟು ನಿರೀಕ್ಷೆಯಲ್ಲಿ ಹಲ್ಲುಕಡ್ಡಿಯಷ್ಟೂ ಈಡೇರಲಿಲ್ಲ!

Published : Mar 08, 2025, 05:45 AM ISTUpdated : Mar 08, 2025, 05:48 AM IST
Karnataka Budget 2025: ಬೆಟ್ಟದಷ್ಟು ನಿರೀಕ್ಷೆಯಲ್ಲಿ ಹಲ್ಲುಕಡ್ಡಿಯಷ್ಟೂ ಈಡೇರಲಿಲ್ಲ!

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಜೆಟ್ ರಾಮನಗರ ಜಿಲ್ಲೆಯ ಜನರಿಗೆ ನಿರಾಸೆ ಮೂಡಿಸಿದೆ. ಹೊಸ ಯೋಜನೆಗಳಿಲ್ಲದೆ, ಹಳೆಯ ಯೋಜನೆಗಳನ್ನೇ ಮರು ಪ್ರಸ್ತಾಪಿಸಲಾಗಿದೆ. ಮೇಕೆದಾಟು ಯೋಜನೆಗೆ ಅನುದಾನದ ಕೊರತೆ ಮತ್ತು ಮೆಟ್ರೋ ವಿಸ್ತರಣೆಯಾಗದಿರುವುದು ಪ್ರಮುಖ ನಿರಾಶೆಗಳು.

ರಾಮನಗರ (ಮಾ.8): ಉಪಮುಖ್ಯಮಂತ್ರಿಗಳು ಆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತವರು ಜಿಲ್ಲೆ ರಾಮನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಬಜೆಟ್ ನಿರಾಸೆ ತಂದಿದೆ.

ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಹಾಗೂ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅಧಿಕಾರದಲ್ಲಿರುವ ಕಾರಣ ರಾಮನಗರ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಭರಪೂರ ಕೊಡುಗೆಗಳು ಸಿಗುತ್ತವೆ ಎಂದು ಜನರು ಬೆಟ್ಟದಷ್ಟು ಹೊಂದಿದ್ದ ನಿರೀಕ್ಷೆಗಳನ್ನು ಗರಿಕೆ ಹುಲ್ಲಿನಷ್ಟು ಈಡೇರಿಸಿಲ್ಲ.

ಕಳೆದ ಸಾಲಿನಲ್ಲಿ ಘೋಷಣೆಯಾದ ಹಾಗೂ ಪ್ರಗತಿಯಲ್ಲಿರುವ ಯೋಜನೆಗಳನ್ನು ಈ ಬಜೆಟ್‌ನಲ್ಲಿ ಮರು ಪ್ರಸ್ತಾಪ ಮಾಡಲಾಗಿದೆ. ಕೆರೆ ತುಂಬಿಸುವ ಯೋಜನೆ ಬಿಟ್ಟರೆ ಜಿಲ್ಲೆಗೆ ವಿಶೇಷ ಯೋಜನೆಗಳಾಗಲಿ, ಅನುದಾನವಾಗಲಿ ಘೋಷಣೆಯಾಗಿಲ್ಲ. ಆದರೆ, ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ರೇಷ್ಮೆ ಮತ್ತು ಹೈನೋದ್ಯಮಕ್ಕೆ ಒಂದಷ್ಟು ನೆರವಾಗುವ ಯೋಜನೆಗಳ ಲಾಭ ಸಿಗಲಿದೆ.

ಇದನ್ನೂ ಓದಿ: ಸಿದ್ದರಾಮಯ್ಯನವರು ಮಂಡಿಸಿದ್ದು ಅಲ್ಪಸಂಖ್ಯಾತರ ಓಲೈಕೆಯ ಬಜೆಟ್: ಸಂಸದ ಯದುವೀರ್ ಒಡೆಯರ್ ಟೀಕೆ

ಪ್ರತಿ ಬಜೆಟ್ ನಲ್ಲಿ ಉಲ್ಲೇಖವಾಗುವಂತೆ ಈ ಬಾರಿಯೂ ಮೇಕೆದಾಟು ಜಲಾಶಯ ನಿರ್ಮಾಣ ಪ್ರಸ್ತಾಪವಾಗಿದೆ. ಈ ಯೋಜನೆ ಪೂರ್ವ ಸಿದ್ಧತಾ ಕಾರ್ಯ ಪೂರ್ಣಗೊಂಡಿದೆ. ಕೇಂದ್ರ ಸರ್ಕಾರದ ಸಕ್ಷಮ ಪ್ರಾಕಾರದ ಅನುಮತಿ ದೊರೆತ ನಂತರ ಅನುಷ್ಠಾನ ಮಾಡಲಾಗುವುದು ಎಂದು ಬಜೆಟ್ ನಲ್ಲಿ ಘೋಷಿಸಲಾಗಿದೆ. ಆದರೆ, ಅನುದಾನ ಮೀಸಲಿಡದಿರುವುದನ್ನು ನೋಡಿದರೆ ಮೇಕೆದಾಟು ಯೋಜನೆ ಕೇವಲ ಘೋಷಣೆಗೆ ಸೀಮಿತವಾದಂತಿದೆ.

ರಾಮನಗರಕ್ಕೆ ಮತ್ತು ಉಲ್ಲಾಳಕ್ಕೆ ಕರ್ನಾಟಕ ಕುಡಿಯುವ ನೀರು ಸರಬರಾಜು ಮಂಡಳಿಯಿಂದ 705 ಕೋಟ ವೆಚ್ಚದ ಯೋಜನೆಯನ್ನು ಅನುಷ್ಟಾನಗೊಳಿಸಲಾಗುವುದು ಎಂದು ಘೋಷಿಸಲಾಗಿದೆ. ಆದರೆ, ರಾಮನಗರದಲ್ಲಿ ಈಗಾಗಲೇ 457 ಕೋಟಿ ವೆಚ್ಚದ ನೆಟ್ಕಲ್ ಕುಡಿಯುವ ನೀರಿನ ಯೋಜನೆ ಕಾಮಗಾರಿ ಲೋಕಾರ್ಪಣೆ ಹಂತಕ್ಕೆ ಬಂದಿದೆ. ಈಗ ನೂತನವಾಗಿ ಘೋಷಣೆಯಾಗಿರುವ ಯೋಜನೆ ಯಾವುದು ಎಂಬುದರ ಬಗ್ಗೆ ಸ್ಪಷ್ಟನೆ ಇಲ್ಲ.

ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ ಯೋಜನೆ ಕುರಿತು ಕಳೆದ ಬಜೆಟ್‌ನಲ್ಲಿ ಎರಡನೇ ಹಂತದಲ್ಲಿ 250 ಕೋಟಿ ವೆಚ್ಚದ ಕಾಮಗಾರಿ ಅನುಷ್ಠಾನ ಮಾಡಲಾಗುವುದು ಎಂದು ಘೋಷಿಸಿತ್ತು. ಆದರೆ ಈ ಬಾರಿ ಅದನ್ನು ಮರುಘೋಷಣೆ ಮಾಡಲಾಗಿದೆ. ನೂತನ ತಾಲೂಕು ಹಾರೋಹಳ್ಳಿಯಲ್ಲಿ ಪ್ರಜಾ ಸೌಧ ನಿರ್ಮಾಣ ಕುರಿತು ಕಳೆದ ಸಾಲಿನಲ್ಲೂ ಘೋಷಿಸಲಾಗಿತ್ತು. ಈ ಬಾರಿ ಅದಕ್ಕೆ ಅನುಮೋದನೆ ನೀಡಿರುವುದಾಗಿ ಘೋಷಣೆ ಮಾಡಿದ್ದಾರೆ. ಇನ್ನು ಶ್ರೀರಂಗ ಕುಡಿಯುವ ನೀರಿನ ಯೋಜನೆ ಬಗ್ಗೆಯೂ ಮರು ಘೋಷಣೆಯಾಗಿದೆ.

ರೇಷ್ಮೆ ಬೆಳೆಗಾರರಿಗೆ ಶಕ್ತಿ ತುಂಬುವ ಪ್ರಯತ್ನ:

ರಾಮನಗರ ರೇಷ್ಮೆ ಕೃಷಿ ಮತ್ತು ಉದ್ಯಮಕ್ಕೆ ಖ್ಯಾತಿ ಪಡೆದಿದ್ದು, ಸಾವಿರಾರು ರೈತ ಕುಟುಂಬಗಳು, ರೀಲರ್ಸ್‌ ಮತ್ತು ಕಾರ್ಮಿಕರು ರೇಷ್ಮೆ ಉದ್ಯಮವನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಈ ಕ್ಷೇತ್ರಕ್ಕೆ ರಾಜ್ಯ ಸರಕಾರ ನೀಡಿದ ಉತ್ತೇಜನದಿಂದ ಜಿಲ್ಲೆಗೆ ಹೆಚ್ಚು ಅನುಕೂಲ ಆಗಲಿದೆ. ಮಧ್ಯಮ ವರ್ಗದ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ 120 - ಎಂಡ್ ಸ್ವಯಂ ಚಾಲಿತ ರೀಲಿಂಗ್ ಘಟಕ ಸ್ಥಾಪಿಸಲು ಪ್ರೋತ್ಸಾಹ, ಗೂಡು ಮಾರುಕಟ್ಟೆಯಲ್ಲಿ ಗುಣಮಟ್ಟ ಪರೀಕ್ಷೆ ಮತ್ತು ಶ್ರೇಣೀಕರಣ ಕಾರ್ಯಕ್ಕಾಗಿ ನಿಯೋಜನೆ, ರೇಷ್ಮೆ ಬೆಳೆ ವಿಸ್ತರಣೆಗೆ ಪ್ರಸಕ್ತ ಸಾಲಿನಲ್ಲಿ 55 ಕೋಟಿ ಅನುದಾನ ನೀಡುವ ಘೋಷಣೆಯಾಗಿದೆ.

ಈಡೇರದ ಹತ್ತಾರು ನಿರೀಕ್ಷೆ:

ರಾಮನಗರ ಜಿಲ್ಲೆಯ ಬಿಡದಿವರೆಗೆ ಮೆಟ್ರೋ ಸೇವೆ ವಿಸ್ತರಣೆಯಾಗಲಿದೆ ಎಂದು ಬಜೆಟ್ ನಲ್ಲಿ ನಿರೀಕ್ಷಿಸಲಾಗಿತ್ತು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹ ಬಿಡದಿಗೆ ಮೆಟ್ರೋ ವಿಸ್ತರಣೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ, ಈ ಬಜೆಟ್ ನಲ್ಲೂ ಮೆಟ್ರೋ ವಿಸ್ತರಣೆಯಾಗದಿರುವುದು ಬಿಡದಿ ಕೈಗಾರಿಕಾ ಪ್ರದೇಶದ ಕಾರ್ಮಿಕರು ಹಾಗೂ ಜಿಲ್ಲೆಯ ಜನರಲ್ಲಿ ಬೇಸರ ಉಂಟು ಮಾಡಿದೆ.

ಮೇಕೆದಾಟು ಯೋಜನೆಗೆ ಅನುದಾನ ಮೀಸಲಿಡುವುದು, ಮೂಲ ಸೌಕರ್ಯಗಳಿಗೆ ವಿಶೇಷ ಅನುದಾನ, ಸ್ಥಳೀಯ ಸಂಸ್ಥೆಯನ್ನು ಮೇಲ್ದರ್ಜೆಗೆ ಏರಿಸುವುದು, ಬಿಡದಿ ಮತ್ತು ಹಾರೋಹಳ್ಳಿವರೆಗೆ ಮೆಟ್ರೋ ವಿಸ್ತರಣೆ, ನಿವೇಶನ, ವಸತಿ ಸೌಲಭ್ಯಗಳನ್ನು ಒದಗಿಸುವುದು, ಮಂಚನಬೆಲೆ, ಕಣ್ವ ಜಲಾಶಯಗಳ ಬಳಿ ಪ್ರವಾಸೋದ್ಯಮ ಅಭಿವೃದ್ಧಿ, ಬೊಂಬೆ ಉದ್ಯಮಕ್ಕೆ ಪ್ರೋತ್ಸಾಹ ಸೇರಿದಂತೆ ಹತ್ತಾರು ನಿರೀಕ್ಷೆಗಳು ಈ ಬಾರಿಯ ಬಜೆಟ್‌ನಲ್ಲಿ ಈಡೇರಿಲ್ಲ.

ಹಳೆ ಯೋಜನೆಗಳ ಮರು ಮುದ್ರಣ

ಈ ಬಾರಿಯ ಆಯವ್ಯಯದಲ್ಲಿ ಹಳೆ ಯೋಜನೆಗಳ ಮರು ಮುದ್ರಣಗಳ ನಡುವೆ, ಮಾಗಡಿ ತಾಲೂಕು ಆಸ್ಪತ್ರೆ ಮೇಲ್ದರ್ಜೆಗೆ , ಕೆಶಿಫ್ ಮೂಲಕ ಮಾಗಡಿ- ಹುಣಸನಹಳ್ಳಿ ರಸ್ತೆ ಅಭಿವೃದ್ಧಿ, ನೂತನ ತಾಲೂಕು ಹಾರೋಹಳ್ಳಿಗೆ ಪ್ರಜಾಸೌಧ, ಹೈಟೆಕ್ ರೇಷ್ಮೆ ಮಾರುಕಟ್ಟೆ 2ನೇ ಹಂತದ ಕಾಮಗಾರಿಗೆ ಅನುದಾನ ಹೊರತು ಪಡಿಸಿದರೆ ಜಿಲ್ಲೆಗೆ ಯಾವುದೇ ವಿಶೇಷ ಯೋಜನೆ ಸಿಕ್ಕಿಲ್ಲ.
ಕಳೆದ ಬಜೆಟ್ ನಲ್ಲಿಯೇ ಕನಕಪುರ ತಾಲೂಕಿನ ಗಳಗಾಪುರ ಏತನೀರಾವರಿ ಯೋಜನೆ, ಶ್ರೀರಂಗ ಕುಡಿಯುವ ನೀರಿನ ಯೋಜನೆ ಹಾಗೂ ದೊಡ್ಡಾಲಹಳ್ಳಿ ಹನಿನೀರಾವರಿ ಯೋಜನೆಗಳು ಘೋಷಣೆಯಾಗಿದ್ದವು. ಈ ಬಾರಿ ಆಯವ್ಯಯದಲ್ಲಿ ಮತ್ತೆ ಮರು ಮುದ್ರಣವಾಗಿದೆ.

ಇದನ್ನೂ ಓದಿ: 'ಜನರೇ ಜಟ್ಕಾ ಕಟ್‌ ಮಾಡಿ ಬಿಸಾಡಿದ್ದಾರೆ..' ಬಿಜೆಪಿಯ ಹಲಾಲ್‌ ಬಜೆಟ್‌ ಟೀಕೆಗೆ ಪ್ರಿಯಾಂಕ್‌ ಖರ್ಗೆ ಆಕ್ರೋಶ

ರಾಜ್ಯ ಬಜೆಟ್ - ರಾಮನಗರ ಜಿಲ್ಲೆಗೆ ಸಿಕ್ಕಿದ್ದೇನು ?

1.ರಾಮನಗರದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ
2.ಮೇಕೆದಾಟು ಯೋಜನೆ ಪೂರ್ವ ಸಿದ್ದತಾ ಕಾರ್ಯ ಅಂತಿಮಗೊಂಡಿದ್ದು, ಕೇಂದ್ರ ಸರ್ಕಾರದ ಸಕ್ಷಮ ಪ್ರಾಧಿಕಾರಗಳ ತೀರುವಳಿ ದೊರೆತ ಕೂಡಲೆ ಯೋಜನೆ ಅನುಷ್ಠಾನ.

3.ಮಾಗಡಿ ತಾಲೂಕು ಆಸ್ಪತ್ರೆಯ ನವೀಕರಣ. ಮಾಗಡಿ ಸೇರಿದಂತೆ 2 ಜಿಲ್ಲಾಸ್ಪತ್ರೆ ಮತ್ತು 7 ತಾಲೂಕು ಆಸ್ಪತ್ರೆಗಳಿಗೆ ಒಟ್ಟು 650 ಕೋಟಿ ರು.ಅನುದಾನ
4.ರಾಮನಗರ ಮತ್ತು ಉಲ್ಲಾಳಗಳಿಗೆ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ 705 ಕೋಟಿ ರು.
5.ರಾಮನಗರ ಮತ್ತು ಶಿಡ್ಲಘಟ್ಟದ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಗಳ ಮೊದಲನೆ ಹಂತದ ಕಾಮಗಾರಿ ಮುಕ್ತಾಯಗೊಳ್ಳಲಿದ್ದು, ಪ್ರಸಕ್ತ ಸಾಲಿನಲ್ಲಿ ಎರಡನೇ ಹಂತದ ಕಾಮಗಾರಿಗಳಿಗೆ 250 ಕೋಟಿ ರು.ಮೀಸಲು. ರೇಷ್ಮೆಗೂಡುಗಳಿಗೆ ಸೂಕ್ತ ಬೆಲೆ ದೊರಕಿಸಲು ಹಾಗೂ ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟವನ್ನು ಸಾಧಿಸುವ ದೃಷ್ಟಿಯಿಂದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಗಳಲ್ಲಿ ಗುಣಮಟ್ಟ ಪರೀಕ್ಷೆ ಮತ್ತು ಶ್ರೇಣಿಕರಣದ ಕಾರ್ಯಕ್ಕಾಗಿ ಅಸ್ಸೇಯರ್‌ಗಳ ನಿಯೋಜನೆ. ರೇಷ್ಮೆಬೆಳೆ ವಿಸ್ತರಿಸಲು ರೇಷ್ಮೆಗೂಡಿನ ಪೂರ್ವ ಮತ್ತು ನಂತರದ ಚಟುವಟಿಕೆಗಳನ್ನು ಪ್ರೋತ್ಸಹಿಸಲು ರೇಷ್ಮೆ ಅಭಿವೃದ್ದಿ ಯೋಜನೆಯಡಿಯಲ್ಲಿ 55 ಕೋಟಿ ಅನುದಾನ ಮೀಸಲು.

6.ನೂತನವಾಗಿ ಘೋಷಣೆಯಾಗಿರುವ ಹಾರೋಹಳ್ಳಿ ತಾಲೂಕುನಲ್ಲಿ ಪ್ರಜಾಸೌಧ ನಿರ್ಮಾಣ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!