ಧಾರವಾಡದಲ್ಲಿ ನೀರಾವರಿ ನಿಗಮದ ಇಂದುಮತಿ ಕಾಂಬಳೆ ಎಂಬ ಬಸ್‌ನಲ್ಲಿ ಪ್ರಯಾಣಿಸುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಘಟನೆ ಬಸ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅವರು ಕುಳಿತಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.
ಧಾರವಾಡ (ಏ.02): ಕರ್ನಾಟಕ ಸರ್ಕಾರದ ನೀರಾವರಿ ನಿಗಮದಲ್ಲಿ ಗುಮಾಸ್ತೆಯಾಗಿ ಕೆಲಸ ಮಾಡುತ್ತಿದ್ದ ಇಂದುಮತಿ ಕಾಂಬಳೆ ಅವರು ಬಸ್‌ನಲ್ಲಿ ಪ್ರಯಾಣ ಮಾಡುವಾಗಲೇ ಹಾರ್ಟ್ ಅಟ್ಯಾಕ್‌ಗೆ ಬಲಿಯಾಗಿದ್ದಾರೆ. ಕುಳಿತಲ್ಲಿಯೇ ಪ್ರಾಣ ಬಿಟ್ಟ ವಿಡಿಯೋ ಬಸ್‌ನ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.
ಇಂದುಮತಿ ಅವರು ಖಾಸಗಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದಾಗಲೇ ಕಿಟಕಿಯಲ್ಲಿ ನೋಡುತ್ತಾ ಕುಳಿತಿದ್ದರು. ತನ್ನ ಪಕ್ಕದಲ್ಲಿ ಬ್ಯಾಗ್ ಹಿಡಿದುಕೊಂಡು ಕುಳಿತಿದ್ದರು. ಮೊದಲೇ ಜನರು ಕಡಿಮೆ ಇದ್ದ ಬಸ್‌ನಲ್ಲಿ ಎರಡು ಸೀಟುಗಳಿಗೆ ಒಬ್ಬರಂತೆ ಅಲ್ಲೊಬ್ಬ, ಇಲ್ಲೊಬ್ಬರು ಕುಳಿತುಕೊಂಡಿದ್ದರು. ಈ ವೇಳೆ ದಿಡೀರನೆ ಇವರಿಗೆ ಹೃದಯಾಘಾತ ಆಗಿದ್ದು, ಕುಳಿತ ಸೀಟಿನಲ್ಲಿಯೇ ಹಿಂದಕ್ಕೆ ತಲೆ ಒರಗಿಸಿದ್ದಾರೆ. ಅವರ ಕೈಲಿದ್ದ ಬ್ಯಾಗ್ ಕೆಳಗೆ ಬಿದ್ದಿದೆ. ಕೆಲ ನಿಮಿಷ ಯಾರೊಬ್ಬರೂ ಮಹಿಳೆಯನ್ನು ಗಮನಿಸಿಯೇ ಇಲ್ಲ. ಬಸ್ ಒಂದು ಸ್ಟಾಪ್‌ನಲ್ಲಿ ನಿಂತಾಗ ಹಿಂಬದಿ ಸೀಟಿನಲ್ಲಿದ್ದ ವ್ಯಕ್ತಿ ಬಂದು ಮಹಿಳೆಗೆ ಏನೋ ಆಗಿದೆ ಎಂದು ಬಸ್‌ನ ಸಿಬ್ಬಂದಿಗೆ ತಿಳಿಸಿದ್ದಾರೆ.
ಆಗ ಬಸ್‌ನ ಕಂಡಕ್ಟರ್ ಬಂದು ನೋಡಿದಾಗ ಮಹಿಳೆ ಎಚ್ಚರಗೊಂಡಿಲ್ಲ. ಕೂಡಲೇ ಬಸ್‌ನಲ್ಲಿದ್ದ ಬೆರಳೆಣಿಕೆ ಪ್ರಯಾಣಿಕರು ಮಹಿಳೆಯ ಸೀಟಿನ ಬಳಿ ಬಂದು ನೀರು ಹಾಕಿ ಎಬ್ಬಿಸಲು ಮುಂದಾಗಿದ್ದಾರೆ. ಆದರೆ, ಆಕೆಯ ಜೀವ ಅದಾಗಲೇ ಹಾರಿ ಹೋಗಿತ್ತು ಎನ್ನುತ್ತದೆ. ಮತ್ತೆ ಮೇಲೆ ಏಳಲೇ ಇಲ್ಲ. ಮತ್ತೊಬ್ಬ ವ್ಯಕ್ತಿ ಬಂದು ಸುಮಾರು ಹೊತ್ತು ನಾಡಿಮಿಡಿತವನ್ನು ಹಿಡಿದು ನೋಡಿದ್ದಾರೆ. ಆಗ ಮಹಿಳೆಯ ಜೀವ ಹೋಗಿರುವ ಮಾಹಿತಿ ಲಭ್ಯವಾಗಿದೆ. ಇದಾದ ನಂತರ ಧಾರವಾಡ ನಗರದ ಜಿಲ್ಲಾ ಆಸ್ಪತ್ರೆಗೆ ಬಸ್ ಅನ್ನು ತಿರುಗಿಸಿದ್ದಾರೆ.
ಇದನ್ನೂ ಓದಿ: ನಟಿ ರನ್ಯಾ ರಾವ್ ಚಿನ್ನದ ಕೇಸ್, ಬಂಧಿತ ಸಾಹಿಲ್ ಜೈನ್‌ಗೆ ನ್ಯಾಂಯಾಂಗ ಬಂಧನ
ಜಿಲ್ಲಾಸ್ಪತ್ರೆಗೆ ಬರುವ ವೇಳೆಗೆ ಆಕೆ ಸತ್ತಿದ್ದು ದೃಢಪಟ್ಟಿದ್ದು, ವೈದ್ಯರು ಮತ್ತೊಮ್ಮೆ ಪರಿಶೀಲನೆ ಮಾಡಿ ಸಾವಿನ ಬಗ್ಗೆ ಖಚಿತಪಡಿಸಿದ್ದಾರೆ. ಇನ್ನು ಮೃತ ಮಹಿಳೆ ಇಂದುಮತಿ ಕಾಂಬಳೆ (58) ಧಾರವಾಡದ ನೀರಾವರಿ ನಿಗಮದ ಕಚೇರಿಯಲ್ಲಿ ಗುಮಾಸ್ತೆಯಾಗಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಸಂಜೆ ಖಾಸಗಿ ಬಸ್‌ನಲ್ಲಿ ಮನೆಗೆ ಹೋಗುವಾಗ ಬೇಂದ್ರೆ ಬಸ್‌ನಲ್ಲಿ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಎಲ್ಲ ದೃಶ್ಯಗಳೂ ಕೂಡ ಬಸ್‌ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.