ಇಂದಿನಿಂದ ಬಿಜೆಪಿ 'ಬೆಲೆ ಏರಿಕೆ' ವಿರುದ್ಧ ಅಹೋರಾತ್ರಿ ಹೋರಾಟ, ಯಡಿಯೂರಪ್ಪ ಹೇಳಿದ್ದೇನು?

Published : Apr 02, 2025, 07:13 AM ISTUpdated : Apr 02, 2025, 07:51 AM IST
ಇಂದಿನಿಂದ ಬಿಜೆಪಿ 'ಬೆಲೆ ಏರಿಕೆ' ವಿರುದ್ಧ ಅಹೋರಾತ್ರಿ ಹೋರಾಟ, ಯಡಿಯೂರಪ್ಪ ಹೇಳಿದ್ದೇನು?

ಸಾರಾಂಶ

ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಅಹೋರಾತ್ರಿ ಧರಣಿ ನಡೆಸಲಿದೆ. ಏಪ್ರಿಲ್ 13ರವರೆಗೆ ವಿವಿಧ ಹಂತಗಳಲ್ಲಿ ಹೋರಾಟ ನಡೆಸಲು ಬಿಜೆಪಿ ನಿರ್ಧರಿಸಿದೆ.

ಬೆಂಗಳೂರು (ಏ.2): ಹಾಲು ಸೇರಿ ವಿವಿಧ ಅಗತ್ಯ ವಸ್ತು, ಸೇವೆಗಳ ಬೆಲೆ ಏರಿಕೆ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ಬುಧವಾರ ಅಹೋರಾತ್ರಿ ಧರಣಿ ನಡೆಸಲಿದೆ. ಈ ಮೂಲಕ ಏ.13ರವರೆಗೆ ವಿವಿಧ ಹಂತಗಳಲ್ಲಿ ಈ ಕುರಿತು ನಡೆಸುವ ಹೋರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದೆ.
ನಗರದ ಫ್ರೀಡಂ ಪಾರ್ಕ್‌ನಲ್ಲಿ ಮಧ್ಯಾಹ್ನ 12 ಗಂಟೆಗೆ ಈ ಧರಣಿ ಆರಂಭವಾಗಲಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಉಭಯ ಸದನಗಳ ಪ್ರತಿಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಪಕ್ಷದ ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳು, ಪಕ್ಷದ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರು, ಕಾರ್ಯಕರ್ತರು ಈ ಧರಣಿಯಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಯತ್ನಾಳ್ ಹೊಸ ಪಕ್ಷ ಕಟ್ಟುವುದಿಲ್ಲ: ರಮೇಶ್ ಜಾರಕಿಹೊಳಿ ಸ್ಪಷ್ಟನೆ
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಾಧ್ಯಕ್ಷ ವಿಜಯೇಂದ್ರ, ‘ಪಕ್ಷದ ಎಲ್ಲ ಹಿರಿಯರು ಚರ್ಚೆ ಮಾಡಿ ಬೆಲೆ ಏರಿಕೆ ವಿರುದ್ಧ ಹೋರಾಟ ನಡೆಸುವ ನಿರ್ಧಾರ ಮಾಡಿದ್ದೇವೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಬಳಿಕ 20 ತಿಂಗಳಿನಲ್ಲಿ ಜನರಿಗೆ ಬೆಲೆ ಏರಿಕೆ ಗ್ಯಾರಂಟಿ ದಯಪಾಲಿಸಿದ್ದಾರೆ. ಸರ್ಕಾರದ ನಿರ್ಧಾರದಿಂದ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆ ಉಂಟಾಗಿದೆ’ ಎಂದು ಹೇಳಿದರು.

‘ಕಾಂಗ್ರೆಸ್ ಸರ್ಕಾರ ಹಾಲಿನ ದರ, ವಿದ್ಯುತ್ ದರ, ನೀರಿನ ದರ, ಪೆಟ್ರೋಲ್, ಡೀಸೆಲ್, ಸ್ಟಾಂಪ್ ಶುಲ್ಕ, ಮೆಟ್ರೋ ದರ ಏರಿಸುವ ಮೂಲಕ ಜನಸಾಮಾನ್ಯರಿಗೆ ಬದುಕು ಹೊರೆ ಎನಿಸುವಂತೆ ಮಾಡಿದೆ. ಬೆಲೆ ಏರಿಕೆ ನಿರಂತರವಾಗಿ ಸಾಗುತ್ತಿದೆ. ಇದನ್ನು ಖಂಡಿಸಿ ಬುಧವಾರ ಅಹೋರಾತ್ರಿ ಧರಣಿ ನಡೆಸುತ್ತೇವೆ. ದೊಡ್ಡ ಮಟ್ಟದಲ್ಲಿ ಈ ಹೋರಾಟ ನಡೆಯಲಿದೆ’ ಎಂದು ತಿಳಿಸಿದರು.
-ಬಾಕ್ಸ್‌-

ಮಧ್ಯಮ ವರ್ಗಕ್ಕೆ ಉಸಿರುಗಟ್ಟುವ ಸ್ಥಿತಿ: ಬಿಎಸ್‌ವೈ

ಬೆಂಗಳೂರು: ರಾಜ್ಯ ಸರ್ಕಾರ ಜನವಿರೋಧಿ ಬೆಲೆ ಏರಿಕೆಯನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ಬಿಜೆಪಿ ಬುಧವಾರ ಅಹೋರಾತ್ರಿ ಧರಣಿ ನಡೆಸಲಿದ್ದು, ನಾನೂ ಪಾಲ್ಗೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ: '2028ಕ್ಕೆ ನಾನೇ ಸಿಎಂ, ನೋಡ್ತಾ ಇರ್ರಿ’ ಎಂದ ಯತ್ನಾಳ್!
ಈ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ತಿಂಗಳು ಒಂದಲ್ಲ ಒಂದು ರೀತಿ ಬೆಲೆ ಹೆಚ್ಚಿಸುತ್ತಿದ್ದಾರೆ. ಪೆಟ್ರೋಲ್, ಬಸ್ ಪ್ರಯಾಣ ದರ ಹೆಚ್ಚಿಸಿದ್ದಾರೆ. ಸಾಮಾನ್ಯ ಜನ ಬಳಸುವ ಹಾಲಿನ ದರವನ್ನು ಇನ್ನೆಂದೂ ಇಲ್ಲದ ರೀತಿಯಲ್ಲಿ ಒಂದೇ ಬಾರಿಗೆ ಒಂದು ಲೀಟರ್‌ಗೆ 4 ರು. ಹೆಚ್ಚಿಸಿದ್ದಾರೆ. ಒಟ್ಟಾರೆ ಒಂದೇ ವರ್ಷದಲ್ಲಿ ಹಾಲಿಗೆ ಒಂದು ಲೀಟರ್‌ಗೆ 9 ರು. ಹೆಚ್ಚಿಸಿದ್ದಾರೆ. ವಿದ್ಯುತ್ ದರವನ್ನು ಪ್ರತಿ ಯುನಿಟ್‌ಗೆ 36 ಪೈಸೆ ಹೆಚ್ಚಿಸಿದ್ದಾರೆ. ಇದರಿಂದ ಸಣ್ಣ, ಮಧ್ಯಮ ವರ್ಗದ ಜನ ಜೀವನ ಮಾಡಲು ಸಾಧ್ಯವಿಲ್ಲದೆ ಉಸಿರುಗಟ್ಟುವ ಸ್ಥಿತಿ ಬಂದಿದೆ. ನೋವು ಅನುಭವಿಸುತ್ತಿರುವ ಎಲ್ಲರೂ ಪಕ್ಷಭೇದ ಮರೆತು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಹಾಗೂ ಹೋರಾಟ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!