
ಬೆಂಗಳೂರು : ವಿಧಾನಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣ ವಿರೋಧಿಸಿ ಸದನದಲ್ಲೇ ಧರಣಿ ನಡೆಸಿದ ಪ್ರತಿಪಕ್ಷ ಬಿಜೆಪಿಯು ಆಡಳಿತಾರೂಢ ಪಕ್ಷಗಳ ಅತೃಪ್ತ ಶಾಸಕರು ರಾಜೀನಾಮೆ ನೀಡಿ ಹೊರಬಂದ ಬಳಿಕ ತನ್ನ ಆಟ ಆರಂಭಿಸಲಿದೆ.
ಗುರುವಾರ ರಾಜ್ಯಪಾಲರ ಭಾಷಣ ವಂದನಾ ನಿರ್ಣಯದ ಮೇಲಿನ ಚರ್ಚೆಗೂ ಬಿಜೆಪಿ ವಿರೋಧ ವ್ಯಕ್ತಪಡಿಸುವ ಸಾಧ್ಯತೆಯಿದ್ದು, ಶುಕ್ರವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಲಿರುವ ಬಜೆಟ್ ಮಂಡನೆಗೂ ಪ್ರತಿಭಟನಾ ಧರಣಿ ಮೂಲಕ ಅಡ್ಡಿಪಡಿಸುವ ಸಂಭವವಿದೆ ಎಂದು ತಿಳಿದು ಬಂದಿದೆ.
ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯಪಾಲರನ್ನು ಭೇಟಿ ಮಾಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಅತೃಪ್ತ ಶಾಸಕರು ರಾಜೀನಾಮೆ ನೀಡಿದರೆ, ನಂತರ ಉದ್ಭವಿಸುವ ಬೆಳವಣಿಗೆಗಳನ್ನು ಆಧರಿಸಿ ರಾಜ್ಯಪಾಲರನ್ನು ಭೇಟಿ ಮಾಡಿ ಮಧ್ಯೆ ಪ್ರವೇಶಿಸುವಂತೆ ಒತ್ತಾಯಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಕೇವಲ ಮೂರ್ನಾಲ್ಕು ಅತೃಪ್ತ ಶಾಸಕರು ರಾಜೀನಾಮೆ ನೀಡಿದರೂ ಅದರಿಂದ ರಾಜ್ಯ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ಏನೂ ಆಗಲಾರದು. ಒಂದು ವೇಳೆ ವಿಧಾನಸಭೆಯ ಸ್ಪೀಕರ್ ಅವರು ಶಾಸಕರ ರಾಜೀನಾಮೆ ಸ್ವೀಕರಿಸಲು ನಿರಾಕರಿಸಿದರೆ ಅಥವಾ ಅಂಗೀಕರಿಸಲು ವಿಳಂಬ ತಂತ್ರ ಅನುಸರಿಸಿದೆ ಅಥವಾ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮನವಿ ಮೇರೆಗೆ ಅತೃಪ್ತ ಶಾಸಕರ ಸದಸ್ಯತ್ವ ಅನರ್ಹಗೊಳಿಸುವ ಪ್ರಯತ್ನ ನಡೆದಲ್ಲಿ ಆಗ ಬಿಜೆಪಿ ನಾಯಕರು ಇಡೀ ಬೆಳವಣಿಗೆಗಳನ್ನು ಗಂಭೀರ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆಲವು ಅತೃಪ್ತ ಶಾಸಕರ ರಾಜೀನಾಮೆ ಮತ್ತಿತರ ಬೆಳವಣಿಗೆಗಳಿಂದ ಶಾಸಕಾಂಗ ವ್ಯವಸ್ಥೆಗೆ ತೀವ್ರ ಧಕ್ಕೆ ಉಂಟಾದಲ್ಲಿ ರಾಜ್ಯಪಾಲರು ಮಧ್ಯೆ ಪ್ರವೇಶಿಸಲು ಆಗ್ರಹಿಸಿ ರಾಷ್ಟ್ರಪತಿಗಳ ಆಳ್ವಿಕೆಗೆ ಮನವಿ ಮಾಡುವ ತಂತ್ರವೂ ಬಿಜೆಪಿ ನಾಯಕರ ಚಿಂತನೆಯಲ್ಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ