
ಬೆಂಗಳೂರು : ರಾಜ್ಯ ಸಮ್ಮಿಶ್ರ ಸರ್ಕಾರವನ್ನು ತುದಿಗಾಲ ಮೇಲೆ ನಿಲ್ಲಿಸಿರುವ ‘ಅತೃಪ್ತರ ಆಪರೇಷನ್’ನ ಕೊನೆಯ ಘಟ್ಟಅನಾವರಣಗೊಳ್ಳಲಾರಂಭಿಸಿದ್ದು, ಬುಧವಾರ ನಡೆದ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಕಾಂಗ್ರೆಸ್-ಜೆಡಿಎಸ್ನ 11 ಮಂದಿ ಶಾಸಕರು ಗೈರು ಹಾಜರಾಗುವ ಮೂಲಕ ಆತಂಕ ಮುಗಿಲು ಮುಟ್ಟಿದೆ. ಈ ಘಟ್ಟದ ಮುಂದಿನ ಹಂತದಲ್ಲಿ ಅತೃಪ್ತ ಶಾಸಕರ ಪೈಕಿ ಐವರು ಗುರುವಾರ ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಬುಧವಾರ ಆರಂಭಗೊಂಡ ಜಂಟಿ ಅಧಿವೇಶನದಲ್ಲಿ ಅತೃಪ್ತರ ಆಪರೇಷನ್‌ನ ಅಂತಿಮ ಘಟ್ಟವು ಸ್ಪಷ್ಟವಾಗಿ ಅನಾವರಣಗೊಳ್ಳಲಾರಂಭಿಸಿತು. ಬಿಜೆಪಿಯು ತನ್ನ ಕಾರ್ಯತಂತ್ರದಂತೆ ಯಶಸ್ವಿಯಾಗಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿತು. ಜಂಟಿ ಸದನ ಸಮಾವೇಶಗೊಂಡ 5 ನಿಮಿಷಕ್ಕೆ ಮುಕ್ತಾಯಗೊಂಡಿತು. ರಾಜ್ಯಪಾಲರು ಸದನವನ್ನು ಉದ್ದೇಶಿಸಿ ಮಾತನಾಡಲು ತಂದಿದ್ದ 22 ಪುಟಗಳ ಭಾಷಣದ ಪೈಕಿ ಎರಡು ಪುಟಗಳನ್ನು ಸಮರ್ಪಕವಾಗಿ ಓದಲು ಸಾಧ್ಯವಾಗದಂತೆ ಸದನದಲ್ಲಿ ಕೋಲಾಹಲಕಾರಿ ಸನ್ನಿವೇಶವನ್ನು ಬಿಜೆಪಿ ಸೃಷ್ಟಿಸಿತು.
ಸದನದಲ್ಲಿ ಕಾಂಗ್ರೆಸ್-ಜೆಡಿಎಸ್ ಶಾಸಕರ ಗೈರು ಹಾಜರಾತಿಯನ್ನು ಮುಂದೊಡ್ಡಿದ ಬಿಜೆಪಿಯು ಬಹುಮತವಿಲ್ಲದ ಸರ್ಕಾರ ರಾಜ್ಯಪಾಲರಿಂದ ಸುಳ್ಳು ಹೇಳಿಸಲು ಹೊರಟಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ವಾದಿಸಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಉಂಟುಮಾಡಿತು. ಇದಕ್ಕೆ ಪೂರಕವಾಗಿ, ಬಿಜೆಪಿಯತ್ತ ವಾಲಿರುವ ಕಾಂಗ್ರೆಸ್ನ ನಾಲ್ಕು ಮಂದಿ ಅತೃಪ್ತ ಶಾಸಕರಾದ ಗೋಕಾಕ್‌ನ ರಮೇಶ್ ಜಾರಕಿಹೊಳಿ, ಅಥಣಿಯ ಮಹೇಶ್ ಕುಮಟಳ್ಳಿ, ಬಳ್ಳಾರಿ ಗ್ರಾಮೀಣದ ಬಿ.ನಾಗೇಂದ್ರ ಮತ್ತು ಚಿಂಚೋಳಿಯ ಡಾ
ಉಮೇಶ್ ಜಾಧವ್ ಅವರು ಸದನಕ್ಕೆ ಗೈರುಹಾಜರಾಗಿದ್ದುದು ಸರ್ಕಾರಕ್ಕೆ ಇಕ್ಕಟ್ಟಿನ ಸ್ಥಿತಿ ತಂದೊಡ್ಡಿತು.
ಕಾಂಗ್ರೆಸ್ ನಾಯಕತ್ವ ಸತತವಾಗಿ ನೀಡಿರುವ ನೋಟಿಸ್ ಹಾಗೂ ವಿಪ್‌ಗೂ ಕ್ಯಾರೆ ಎನ್ನದಿರುವ ಮೂಲಕ ಈ ನಾಲ್ಕು ಮಂದಿ ಅತೃಪ್ತರು ಸದನಕ್ಕೆ ಗೈರಾಗುವ ಮೂಲಕ ತಮ್ಮ ನಿಲುವನ್ನು ಬಹುತೇಕ ಸ್ಪಷ್ಟಗೊಳಿಸಿದ್ದಾರೆ. ಈಗ ಕಾಂಗ್ರೆಸ್ಗೆ ಇರುವ ಆತಂಕವೆಂದರೆ, ಈ ನಾಲ್ಕು ಮಂದಿ ತಮ್ಮೊಂದಿಗೆ ಇನ್ನೊಂದಿಬ್ಬರು ಶಾಸಕರನ್ನು ಸೆಳೆದುಕೊಂಡು ರಾಜೀನಾಮೆ ನೀಡುವಂತಹ ನಿರ್ಣಾಯಕ ಹೆಜ್ಜೆ ಇಡುವರೇ ಎಂಬುದು. ಈ ಅನುಮಾನವಿರುವುದರಿಂದಲೇ ಈ ನಾಲ್ಕು ಮಂದಿ ಅತೃಪ್ತರಿಗೆ ಪಾಠ ಕಲಿಸಲು ಶುಕ್ರವಾರ ಮತ್ತೊಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ದಿಢೀರ್ ಆಗಿ ಆಯೋಜಿಸಲಾಗಿದೆ. ಈ ಸಭೆಗೂ ಅತೃಪ್ತರು ಗೈರು ಹಾಜರಾದರೆ ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಕ್ರಮ ಕೈಗೊಳ್ಳುವ ಉದ್ದೇಶ ಕಾಂಗ್ರೆಸ್ ನಾಯಕತ್ವಕ್ಕೆ ಇದೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ನಾಯಕತ್ವ ಇಂತಹದೊಂದು ಕ್ರಮಕ್ಕೆ ಮುಂದಾಗಬಹುದು ಎಂಬ ನಿರೀಕ್ಷೆಯ ಹಿನ್ನೆಲೆಯಲ್ಲಿ ತಮ್ಮೊಂದಿಗೆ ಇನ್ನಿಬ್ಬರು ಶಾಸಕರನ್ನು ಸೆಳೆದುಕೊಳ್ಳಲಿರುವ ಈ ಅತೃಪ್ತ ಶಾಸಕರು ಗುರುವಾರವೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವರು ಎಂದು ಹೇಳಲಾಗುತ್ತಿದೆ. ಈಗ ಕುತೂಹಲ ಮೂಡಿಸಿರುವ ಪ್ರಶ್ನೆಯೆಂದರೆ, ಈ ಘೋಷಿತ ಅತೃಪ್ತರೊಂದಿಗೆ ರಾಜೀನಾಮೆಗೆ ಮುಂದಾಗಲಿರುವ ಅಘೋಷಿತ ಅತೃಪ್ತರು ಯಾರು ಎಂಬುದು.
ಬುಧವಾರ ನಡೆದ ವಿಧಾನಮಂಡಲ ಜಂಟಿ ಅಧಿವೇಶನಕ್ಕೆ ದೋಸ್ತಿ ಪಕ್ಷಗಳ 11 ಮಂದಿ ಗೈರು ಹಾಜರಾಗಿದ್ದರು. ಇದರಲ್ಲಿ ನಾಲ್ಕು ಮಂದಿ ಅತೃಪ್ತ ಶಾಸಕರು ಹಾಗೂ ಬಹುತೇಕ ಅತೃಪ್ತರೊಂದಿಗೆ ಇರುವ ಹಾಗೂ ರೆಸಾರ್ಟ್ ಬಡಿದಾಟದ ಪರಿಣಾಮವಾಗಿ ಪರಾರಿಯಾಗಿರುವ ಕಂಪ್ಲಿ ಗಣೇಶ್ ಜೊತೆಗೆ ಇನ್ನೂ ಆರು ಮಂದಿ ಇತರೆ ಶಾಸಕರು ಗೈರು ಹಾಜರಾಗಿದ್ದರು. ಈ ಆರು ಮಂದಿಯ ಪೈಕಿ ಸೌಮ್ಯಾರೆಡ್ಡಿ ಹಾಗೂ ರೋಷನ್ ಬೇಗ್ ಅವರನ್ನು ಅತೃಪ್ತರ ಪಟ್ಟಿಯಲ್ಲಿ ಪರಿಗಣಿಸಲು ಸಾಧ್ಯವಿಲ್ಲ. ಏಕೆಂದರೆ, ಅವರು ನಾಯಕತ್ವಕ್ಕೆ ಕಾರಣ ನೀಡಿಯೇ ಸದನಕ್ಕೆ ಗೈರು ಹಾಜರಾಗಿದ್ದರು.
ಉಳಿದಂತೆ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ದೊರೆಯದೇ ಅಸಮಾಧಾನಗೊಂಡಿರುವ ಚಿಕ್ಕಬಳ್ಳಾಪುರದ ಡಾ.ಸುಧಾಕರ್ ಹಾಗೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ್ ಅವರ ಗೈರು ಹಾಜರಿ ಕಾಂಗ್ರೆಸ್ ಪಾಳಯದಲ್ಲಿ ಆತಂಕ ಮೂಡಿಸಿದೆ. ಇನ್ನು ಹರಿಹರ ಶಾಸಕ ಎಸ್.ರಾಮಪ್ಪ ಅವರು ತಮ್ಮ ಗೈರು ಹಾಜರಾತಿಗೆ ಕಾರಣ ನೀಡಿದರೂ, ಈ ಬಗ್ಗೆ ಕಾಂಗ್ರೆಸ್ ನಾಯಕತ್ವಕ್ಕೆ ಅನುಮಾನಗಳಿವೆ ಎನ್ನಲಾಗಿದೆ.
ಯಾರ್ಯಾರು ಗೈರು?
ಬಂಡೆದ್ದ ನಾಲ್ವರು: ರಮೇಶ್ ಜಾರಕಿಹೊಳಿ (ಗೋಕಾಕ ಶಾಸಕ), ಮಹೇಶ್ ಕುಮಟಳ್ಳಿ (ಅಥಣಿ ಶಾಸಕ),
ಉಮೇಶ್ ಜಾಧವ್ (ಚಿಂಚೋಳಿ ಶಾಸಕ), ಬಿ.ನಾಗೇಂದ್ರ (ಬಳ್ಳಾರಿ ಗ್ರಾಮಾಂತರ ಶಾಸಕ)
ಅತೃಪ್ತರೆನ್ನಲಾದ ಇತರರು: ಜೆ.ಎನ್.ಗಣೇಶ್ (ಕಂಪ್ಲಿ ಶಾಸಕ), ಡಾ
ಕೆ.ಸುಧಾಕರ್ (ಚಿಕ್ಕಬಳ್ಳಾಪುರ), ಬಿ.ಸಿ.ಪಾಟೀಲ್ (ಹಿರೇಕೆರೂರು), ಎಸ್.ರಾಮಪ್ಪ (ಹರಿಹರ ಶಾಸಕ)
ಜೆಡಿಎಸ್ ಶಾಸಕ: ನಾರಾಯಣಗೌಡ (ಕೆ.ಆರ್.ಪೇಟೆ)
ಇನ್ನೂ ಇಬ್ಬರು: ಸೌಮ್ಯಾ ರೆಡ್ಡಿ (ಜಯನಗರ), ರೋಷನ್ ಬೇಗ್ (ಶಿವಾಜಿ ನಗರ). ಇವರಿಬ್ಬರೂ ಪಕ್ಷದ ಅನುಮತಿ ಪಡೆದು ಗೈರು
ರಾಜೀನಾಮೆ ಏಕೆ?
1. ಕಲಾಪಕ್ಕೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಅತೃಪ್ತರ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಸಿದ್ಧತೆ
2. ವಿಪ್ ಉಲ್ಲಂಘಿಸಿದ ಕಾರಣ ಗೈರಾದವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಪ್ರಹಾರ
3. ಇದಕ್ಕಾಗಿಯೇ ಶುಕ್ರವಾರ ಶಾಸಕಾಂಗ ಪಕ್ಷದ ಸಭೆ ಕರೆದಿರುವ ಕಾಂಗ್ರೆಸ್ ನಾಯಕತ್ವ
4. ಇದಕ್ಕೂ ಗೈರು ಹಾಜರಾದರೆ ಶಾಸಕತ್ವದಿಂದ ಅನರ್ಹಗೊಳಿಸಲು ಸ್ಪೀಕರ್‌ಗೆ ಮೊರೆ
5. ಪಕ್ಷದ ಈ ದಾಳದಿಂದ ತಪ್ಪಿಸಿಕೊಳ್ಳಲು ಸಭೆಗೆ ಮುನ್ನವೇ ರಾಜೀನಾಮೆ: ಅತೃಪ್ತರ ತಂತ್ರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ