ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಬಿಜೆಪಿ ಆಂತರಿಕ ಸಂಘರ್ಷ ತೀವ್ರ!

By Kannadaprabha NewsFirst Published Jun 28, 2023, 1:21 AM IST
Highlights
  • ಬಿಎಸ್‌ವೈ ಕೆಳಗಿಳಿಸಿದ್ದು ಕೂಡ ಸೋಲಿಗೆ ಕಾರಣ: ರೇಣು
  • ಶೆಟ್ಟರ್‌, ಈಶ್ವರಪ್ಪಗೆ ಕೊಕ್‌, ಅಕ್ಕಿ ಕಡಿತದಿಂದಲೂ ಸೋಲು
  •  ಈಶ್ವರಪ್ಪ ‘ವಲಸಿಗ’ ಹೇಳಿಕೆಗೆ ಡಿವಿಎಸ್‌, ಅಶ್ವತ್‌್ಥ ವಿರೋಧ

ಹೊನ್ನಾಳಿ/ಬೆಂಗಳೂರು (ಜೂ.28) : ರಾಜ್ಯ ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಬಿಜೆಪಿಯಲ್ಲಿ ಕಂಡುಬಂದಿರುವ ಆಂತರಿಕ ಸಂಘರ್ಷ ಮತ್ತಷ್ಟುತೀವ್ರಗೊಂಡಿದೆ. ಬಿಜೆಪಿ ಸೋಲಿನ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಚಿವ ರೇಣುಕಾಚಾರ್ಯ, ಬಿ.ಎಸ್‌.ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು, ಜಗದೀಶ್‌ ಶೆಟ್ಟರ್‌ ಹಾಗೂ ಕೆ.ಎಸ್‌.ಈಶ್ವರಪ್ಪ ಅವರಿಗೆ ಟಿಕೆಟ್‌ ನಿರಾಕರಿಸಿದ್ದು, ಅಕ್ಕಿ ಕಡಿತಗೊಳಿಸಿದ್ದು, ಗುಜರಾತ್‌ ಮಾದರಿಯಲ್ಲಿ ಹೊಸ ಮುಖಗಳಿಗೆ ಟಿಕೆಟ್‌ ನೀಡಿದ್ದು, ಒಳ ಮೀಸಲು ಜಾರಿಗೆ ತಂದಿದ್ದು, ಪ್ರಣಾಳಿಕೆ ಬಿಡುಗಡೆ ತಡವಾಗಿದ್ದು ಬಿಜೆಪಿ ಸೋಲಿಗೆ ಕಾರಣ ಎಂದು ದೂಷಿಸಿದ್ದಾರೆ.

ಈ ನಡುವೆ, ಕಾಂಗ್ರೆಸ್ಸಿಂದ ಪಕ್ಷಕ್ಕೆ ವಲಸೆ ಬಂದವರಿಂದಾಗಿ ಬಿಜೆಪಿಯಲ್ಲಿ ಅಶಿಸ್ತು ಮೂಡುತ್ತಿದೆ ಎಂಬ ಮಾಜಿ ಡಿಸಿಎಂ ಈಶ್ವರಪ್ಪ ಹೇಳಿಕೆಗೆ ಪಕ್ಷದೊಳಗೇ ವಿರೋಧ ವ್ಯಕ್ತವಾಗಿದೆ. ಈ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ ಎಂದು ಸಂಸದ ಡಿ.ವಿ.ಸದಾನಂದಗೌಡ ಹೇಳಿದ್ದರೆ, ವಲಸಿಗರ ಸಹಕಾರದಿಂದಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಅವರನ್ನು ವಲಸಿಗರು ಎನ್ನುವುದೇ ತಪ್ಪು. ಈಶ್ವರಪ್ಪ ಹೇಳಿಕೆಯನ್ನು ಖಂಡಿಸುತ್ತೇನೆ ಎಂದು ಮಾಜಿ ಸಚಿವ ಅಶ್ವತ್ಥನಾರಾಯಣ ಕಿಡಿಕಾರಿದ್ದಾರೆ.

Latest Videos

ಇಂದಿನಿಂದ ದೆಹಲಿಯಲ್ಲಿ 3 ದಿನ ವರಿಷ್ಠರ ಸಭೆ; 4 ದಿನದಲ್ಲಿ ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷ?

ಹೈಕಮಾಂಡ್‌ ನಮ್ಮ ಮನವಿ ಪರಿಗಣಿಸಲಿಲ್ಲ:

ಹೊನ್ನಾಳಿ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಜನ​ನಾ​ಯ​ಕ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು ತಪ್ಪು ನಿರ್ಧಾ​ರ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸಬೇಡಿ ಎಂದು ಕರ್ನಾಟಕದ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಅವರಿಗೆ ಮನವಿ ಮಾಡಿದ್ದೆ. ಆದರೂ, ಹೈಕಮಾಂಡ್‌ ನಮ್ಮ ಮನವಿ ಪರಿಗಣಿಸಲಿಲ್ಲ. ಇದರಿಂದಾಗಿ ಎಲ್ಲಾ ವರ್ಗದವರು ನಮ್ಮ ಪಕ್ಷದ ಬಗ್ಗೆ ಬೇಸರಗೊಂಡರು. ಒಬ್ಬ ಸ್ವಾಮೀಜಿಯವರು ಬಿಎಸ್‌ವೈ ಅವರನ್ನು ಸಿಎಂ ಕುರ್ಚಿಯಿಂದ ಇಳಿಸಿದ್ದೀರಿ. ಅವರ ಕಣ್ಣೀರಿನಲ್ಲಿ ಬಿಜೆಪಿ ಕೊಚ್ಚಿ ಹೋಗಲಿದೆ ಎಂದು ಹೇಳಿ​ದ​ರು. ಅದರಂತೆ ನಮ್ಮ ಪಕ್ಷ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಬೇಕಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಗದೀಶ ಶೆಟ್ಟರ್‌ ಹಾಗೂ ಈಶ್ವರಪ್ಪ ಸೇರಿದಂತೆ ಅನೇಕ ಹಿರಿಯ ನಾಯಕರಿಗೆ ಟಿಕೆಟ್‌ ತಪ್ಪಿಸಿದರು. ದಾವಣಗೆರೆ ಜಿಲ್ಲೆಯ ಹಿರಿಯ ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರನ್ನು ಜೈಲಿಗೆ ಕಳಿಸಿದರು. ಅವರ ಮಗನಿಗೆ ಟಿಕೆಟ್‌ ನೀಡಬೇಕಾಗಿತ್ತು, ನೀಡಲಿಲ್ಲ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ 34 ಸಚಿವ ಸ್ಥಾನಗಳನ್ನು ಒಂದೇ ಬಾರಿಗೆ ತುಂಬಿದರು. ಆದರೆ, ನಮ್ಮ ಸರ್ಕಾರದಲ್ಲಿ ಇನ್ನೂ ಆರು ಸಚಿವ ಸ್ಥಾನ ಖಾಲಿ ಇದ್ದರೂ ಯಾರಿಗೂ ಕೊಡಲಿಲ್ಲ. ನನಗೇ ಕೊಡಿ ಎಂದು ಕೇಳಿರಲಿಲ್ಲ. ಯಾರಿಗಾದರೂ ಸಚಿವ ಸ್ಥಾನ ಕೊಡಿ ಎಂದು ಕೇಳಿದ್ದೆವು, ಕೊಡಲಿಲ್ಲ. ಇನ್ನು, ಕರ್ನಾಟಕದ ರಾಜಕಾರಣವೇ ಬೇರೆ. ಗುಜರಾತ್‌ ಮಾದರಿಯಲ್ಲಿ 72 ಹೊಸ ಮುಖಗಳಿಗೆ ಟಿಕೆಟ್‌ ನೀಡಿದ್ದರಿಂದ ನಮಗೆ ಸೋಲುಂಟಾಯಿತು. ಕರ್ನಾಟಕದಲ್ಲಿ ಜಾತಿ ಸಮೀಕರಣವೇ ಮುಖ್ಯ. ಇದರ ಹಿನ್ನೆಲೆಯಲ್ಲಿ ಟಿಕೆಟ್‌ ಹಂಚಿಕೆಯಾಗಬೇಕಿತ್ತು. ಹೀಗೆ ಅನೇಕ ಗೊಂದಲಗಳ ನಡುವೆ ನಾವು ಚುನಾವಣೆ ಎದುರಿಸಿದ್ದರಿಂದ ಅಧಿಕಾರ ಕಳೆದುಕೊಳ್ಳಬೇಕಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಳಮೀಸಲಾತಿಯನ್ನು ಯಾರೂ ಕೇಳಿರಲಿಲ್ಲ. ಮೀಸಲಾತಿ ವಿಚಾರಕ್ಕೆ ಈಗ ಕೈಹಾಕಬೇಡಿ ಎಂದರೂ ಕೇಳದೆ ಒಳಮೀಸಲಾತಿಯನ್ನು ಜಾರಿಗೆ ತಂದರು. ಇದರ ಪರಿಣಾಮ ಚುನಾ​ವಣೆ ಮೇಲಾ​ಯಿ​ತು. ಬಡವರಿಗೆ ಕೊಡುವ 10 ಕೆಜಿ ಅಕ್ಕಿಯಲ್ಲೂ ಕಡಿತ ಮಾಡಿದರು. ಎನ್‌ಪಿಎಸ್‌ ಮನವಿಯನ್ನು ಸ್ವೀಕಾರ ಮಾಡಿ, ಒಪಿಎಸ್‌ ಜಾರಿಗೆ ತನ್ನಿ ಎಂದು ಮನವಿ ಮಾಡಿದರೂ ಕೇಳಲಿಲ್ಲ. ಕಾಂಗ್ರೆಸ್‌ ನಾಯಕರು ಚುನಾವಣೆಗೂ ಮುಂಚೆಯೇ ಪ್ರಣಾಳಿಕೆ ಬಿಡುಗಡೆ ಮಾಡಿ ಅದರ ಬಗ್ಗೆ ಹೆಚ್ಚು ಪ್ರಚಾರ ಮಾಡಿದರು. ಅದರೆ, ನಮ್ಮ ಪಕ್ಷದ ನಾಯಕರು ಪ್ರಣಾಳಿಕೆ ಬಿಡುಗಡೆ ಮಾಡಿದ್ದು ಮತದಾನದ ದಿನ ಹತ್ತಿರವಾದಾಗ ಎಂದರು.

ಸೋತು ಸುಣ್ಣವಾದರೂ ನಮ್ಮ ಪಕ್ಷದ ನಾಯಕರು ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಇನ್ನೂ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಆಗುತ್ತಿಲ್ಲ. ಜೊತೆಗೆ, ನಳಿನ್‌ ಕುಮಾರ್‌ ಕಟೀಲ್‌ ಅವರು ಸೋಲಿನ ಹೊಣೆ ಹೊತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಒಮ್ಮೆ ಹೇಳುತ್ತಾರೆ. ಮತ್ತೊಮ್ಮೆ ರಾಜೀನಾಮೆ ನೀಡಿಲ್ಲ ಎಂಬುದಾಗಿ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿಗ ನಾಯಕರ ವಾಕ್ಸಮರಕ್ಕೆ ನಳಿನ್‌ ಕಟೀಲ್‌ ಬ್ರೇಕ್‌

ಬೆಂಗಳೂರು: ಪಕ್ಷದಲ್ಲಿ ಆರಂಭವಾಗಿರುವ ಅಂತರ್ಯುದ್ಧಕ್ಕೆ ಬ್ರೇಕ್‌ ಹಾಕಲು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಮುಂದಾಗಿದ್ದಾರೆ.

‘ವಿಧಾನಸಭೆ ವಿರೋಧ ಪಕ್ಷದ ನಾಯಕನ ಸ್ಥಾನ, ಪಕ್ಷದ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ನೇಮಕ ಕುರಿತು ಪಕ್ಷದ ನಾಯಕರು ಹೇಳಿಕೆಗಳನ್ನು ನೀಡಿ ಪಕ್ಷದ ಘನತೆಗೆ ಧಕ್ಕೆ ತರಬಾರದು’ ಎಂದು ನಳಿನ್‌ಕುಮಾರ್‌ ಕಟೀಲ್‌ ಸೂಚನೆ ನೀಡಿದ್ದಾರೆ.

‘ಪ್ರತಿಪಕ್ಷದ ನಾಯಕನ ಸ್ಥಾನ ಮತ್ತಿತರ ಹುದ್ದೆಗೆ ಸಂಬಂಧಿಸಿದಂತೆ ಪಕ್ಷದ ಕೇಂದ್ರ ಸಂಸದೀಯ ಮಂಡಳಿಯು ಸೂಕ್ತ ಸಮಯದಲ್ಲಿ ಸಮರ್ಥ ನಿರ್ಧಾರವನ್ನು ಪ್ರಕಟಿಸಲಿದೆ. ಪಕ್ಷದ ಕೆಲವು ನಾಯಕರು ಈ ನಡುವೆ ಮಾಧ್ಯಮಗಳ ಮುಂದೆ ವಿವಿಧ ಹುದ್ದೆ ಕುರಿತು ಆಕಾಂಕ್ಷೆ ವ್ಯಕ್ತಪಡಿಸುವುದು ಗಮನಕ್ಕೆ ಬಂದಿದೆ. ಅಲ್ಲದೆ, ಪಕ್ಷದ ಸಭೆಗಳಲ್ಲಿ ಈ ವಿಷಯವಾಗಿ ಚರ್ಚಿಸುತ್ತಿರುವುದು ಸರಿಯಲ್ಲ’ ಎಂದು ಅವರು ತಿಳಿಸಿದ್ದಾರೆ.

 

ಲೋಕಸಭಾ ಚುನಾವಣೆಗೆ ಕಾರ್ಯಕರ್ತರು ಸಜ್ಜಾಗಿ: ನಳಿನ್‌ ಕುಮಾರ್‌ ಕಟೀಲ್‌

‘ಪಕ್ಷದ ಘನತೆಗೆ ಧಕ್ಕೆ ಉಂಟಾಗದಂತೆ ನಾಯಕರು ನೋಡಿಕೊಳ್ಳಬೇಕು. ಪಕ್ಷದ ಆಂತರಿಕ ವಿಚಾರಗಳನ್ನು ಮಾಧ್ಯಮಗಳ ಮುಂದೆ ಚರ್ಚಿಸುವುದು ಸೂಕ್ತವಲ್ಲ’ ಎಂದು ಪ್ರಕಟಣೆ ಮೂಲಕ ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ ಪಕ್ಷದ ವಿವಿಧ ಹಂತದ ನಾಯಕರು ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕುತ್ತಿದ್ದುದಲ್ಲದೆ, ರಾಜ್ಯಾಧ್ಯಕ್ಷ ಸ್ಥಾನವನ್ನು ತಮಗೇ ನೀಡಬೇಕು ಎಂಬ ಬೇಡಿಕೆ ಮುಂದಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು ಕಟೀಲ್‌ ಅವರಿಗೆ ಸೂಚನೆ ನೀಡಿ ನಾಯಕರ ಹೇಳಿಕೆ-ಪ್ರತಿ ಹೇಳಿಕೆಗಳಿಗೆ ಬ್ರೇಕ್‌ ಹಾಕುವಂತೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.

click me!