ಕೀಲು ಜಾರಿದ (ಡಿಸ್‌ಲೊಕೇಟ್) ಸಮಸ್ಯೆಯಿಂದ ಬಳಲುತ್ತಿದ್ದ ಬಡ ಮಹಿಳೆಯೊಬ್ಬಳಿಗೆ ಜರ್ಮನಿಯಿಂದ ಕೃತಕ ಕೀಲು ತರಿಸಿ ಖುದ್ದು ಕುಣಿಗಲ್ ಶಾಸಕ ಎಚ್.ಡಿ.ರಂಗನಾಥ್ ಅವರೇ ಶಸ್ತ್ರಚಿಕಿತ್ಸೆ ನೆರವೇರಿಸಿ ಮಾನವೀಯತೆ ಮೆರೆದ ಘಟನೆ ಸೋಮವಾರ ನಡೆದಿದೆ.
ತುಮಕೂರು (ಜೂ.28) ಕೀಲು ಜಾರಿದ (ಡಿಸ್‌ಲೊಕೇಟ್) ಸಮಸ್ಯೆಯಿಂದ ಬಳಲುತ್ತಿದ್ದ ಬಡ ಮಹಿಳೆಯೊಬ್ಬಳಿಗೆ ಜರ್ಮನಿಯಿಂದ ಕೃತಕ ಕೀಲು ತರಿಸಿ ಖುದ್ದು ಕುಣಿಗಲ್ ಶಾಸಕ ಎಚ್.ಡಿ.ರಂಗನಾಥ್(HD Ranganath MLA) ಅವರೇ ಶಸ್ತ್ರಚಿಕಿತ್ಸೆ ನೆರವೇರಿಸಿ ಮಾನವೀಯತೆ ಮೆರೆದ ಘಟನೆ ಸೋಮವಾರ ನಡೆದಿದೆ.
ಸ್ವತಃ ಆರ್ಥೋಪಿಡಿಕ್ ಸರ್ಜನ್ (ಮೂಳೆ ತಜ್ಞ) ಆಗಿರುವ ಡಾ.ರಂಗನಾಥ್(Dr Ranganath Orthopedic Surgeon) ಅವರು ಬೆಂಗಳೂರಿನ ಬೌರಿಂಗ್ ಆಸ್ಪತ್ರೆ(Bowring Hospital)ಯಲ್ಲಿ ಸತತ ನಾಲ್ಕು ಗಂಟೆಗಳ ಕಾಲ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ.
ಬೆಳಗಾವಿ: ಕಿಡ್ನಿ ಕೊಟ್ಟು ಮಗನ ಉಳಿಸಿಕೊಂಡ ತಾಯಿಗೆ ಆರ್ಥಿಕ ಸಂಕಷ್ಟ, ಮಹಾದಾನಿಗೆ ಬೇಕಿದೆ ಸಹಾಯಹಸ್ತ
ಕುಣಿಗಲ್ ತಾಲೂಕು ಕುಂದೂರು ಗ್ರಾಮದ ಆಶಾ (42) ಎಂಬ ಮಹಿಳೆ ಕೀಲು ಡಿಸ್‌ಲೊಕೇಟ್ ಸಮಸ್ಯೆಯಿಂದ ಬಳಲುತ್ತಿದ್ದರು. 10 ವರ್ಷದ ಹಿಂದೆ ‘ಯಶಸ್ವಿನಿ’ ಯೋಜನೆಯಡಿ ಈಕೆಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿತ್ತು. ಆದರೂ ಸಮಸ್ಯೆ ಮರುಕಳಿಸಿದ್ದರಿಂದ ವೈದ್ಯರ ಬಳಿ ತಪಾಸಣೆಗೆ ಹೋದಾಗ ಮರು ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದಿದ್ದಾರೆ. ಈಗಾಗಲೇ ಸರ್ಕಾರಿ ಯೋಜನೆಯಡಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಆಶಾ ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತೊಂದು ಉಚಿತ ಶಸ್ತ್ರಚಿಕಿತ್ಸೆ ಅವಕಾಶ ಇರಲಿಲ್ಲ. ಹೀಗಾಗಿ ಖಾಸಗಿ ಆಸ್ಪತ್ರೆಯನ್ನೇ ನೆಚ್ಚಿಕೊಳ್ಳಬೇಕಾಗಿತ್ತು. ಅಲ್ಲಿ ಈ ಶಸ್ತ್ರಚಿಕಿತ್ಸೆಗೆ 5 ರಿಂದ 6 ಲಕ್ಷ ರುಪಾಯಿ ಖರ್ಚು ತಗಲುತ್ತಿತ್ತು. ಗ್ರಾಮದಲ್ಲಿ ಪುಟ್ಟಕಿರಾಣಿ ಅಂಗಡಿ ಇಟ್ಟುಕೊಂಡಿದ್ದ ಅವರಿಗೆ ಇಷ್ಟೊಂದು ಹಣ ಹೊಂದಿಸುವುದು ಅಸಾಧ್ಯವಾಗಿತ್ತು. ಕೊನೆಗೆ ಕ್ಷೇತ್ರದ ಶಾಸಕ ಡಾ.ರಂಗನಾಥ್ ಅವರನ್ನು ಭೇಟಿಯಾಗಿ ತನ್ನ ನೋವು ತೋಡಿಕೊಂಡರು.
ಒಂದೇ ಕಾಯಿಲೆಗೆ ಎರಡು ಬಾರಿ ಶಸ್ತ್ರ ಚಿಕಿತ್ಸೆಗೆ ನೆರವು ಕೊಡಲು ಸರ್ಕಾರದ ನಿಯಮಾವಳಿ ಪ್ರಕಾರ ಅವಕಾಶವಿಲ್ಲದ್ದರಿಂದ ಸ್ವತಃ ಕೀಲು ಮೂಳೆ ಸರ್ಜನ್ ಆಗಿರುವ ಶಾಸಕರೇ ಖುದ್ದು ಶಸ್ತ್ರ ಚಿಕಿತ್ಸೆ ನೆರವೇರಿಸುವ ನಿರ್ಧಾರಕ್ಕೆ ಬಂದರು. ಅದರಂತೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಆಶಾ ಅವರನ್ನು ದಾಖಲಿಸಿದರು. ಕೃತಕ ಕೀಲನ್ನು ಅಳವಡಿಸಿದರೆ ಮಾತ್ರ ರೋಗಿ ಸಂಪೂರ್ಣ ಗುಣಮುಖರಾಗುತ್ತಾರೆ ಎಂಬುದು ಪರಿಶೀಲನೆ ವೇಳೆ ಸ್ಪಷ್ಟವಾಗಿತ್ತು. ಹೀಗಾಗಿ ಶಾಸಕರು ಜರ್ಮನಿಯಿಂದ ಈ ರೀತಿಯ ಕೃತಕ ಕೀಲುಗಳನ್ನು ಪೂರೈಸುವ ಅಂತಾರಾಷ್ಟ್ರೀಯ ಸಂಸ್ಥೆಯಾದ ಡೆಪ್ಯೂ ಕಂಪನಿಯನ್ನು ಸಂಪರ್ಕಿಸಿದರು. ಸ್ವತಃ ತಾವೇ ಒಂದಿಷ್ಟುಹಣ (ಈ ಕೃತಕ ಕೀಲಿಗೆ ಸುಮಾರು 2 ಲಕ್ಷ ರು. ಇರುತ್ತದೆ) ಮತ್ತು ಆ ಕಂಪನಿಯ ನೆರವಿನೊಂದಿಗೆ ಕೃತಕ ಕೀಲು ತರಿಸಿ ಯಶಸ್ವಿಯಾಗಿ ಜೋಡಣೆ ಮಾಡಿದ್ದಾರೆ.
ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಬೆಳಗ್ಗೆ 10 ಗಂಟೆಗೆ ಆರಂಭವಾದ ಕೀಲು ಜೋಡಣಾ ಶಸ್ತ್ರ ಚಿಕಿತ್ಸೆ ಮಧ್ಯಾಹ್ನ 2 ಗಂಟೆಗೆ ಮುಗಿದಿದೆ. ಶಾಸಕ ಡಾ.ರಂಗನಾಥ್ ಜೊತೆಯಲ್ಲಿ ಡಾ.ಮನೋಜ್, ಡಾ.ದೀಪಕ್ ಶಸ್ತ್ರ ಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದರು.
ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಮಾನಸಿಕ ಅಸ್ವಸ್ಥನ ಜೀವ ಉಳಿಸಿದ ವಿಶು ಶೆಟ್ಟಿ
23 ಮಂದಿಗೆ ಶಸ್ತ್ರಚಿಕಿತ್ಸೆಗೆ ಸಿದ್ಧ:
ಇದೇ ರೀತಿಯ ಸಮಸ್ಯೆಯಿಂದ ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ 23 ಮಂದಿ ಬಳಲುತ್ತಿದ್ದು, ಅವರಿಗೂ ಸಹ ಶಸ್ತ್ರ ಚಿಕಿತ್ಸೆ ನೆರವೇರಿಸಲು ಶಾಸಕರು ಪ್ರಯತ್ನ ನಡೆಸಿದ್ದಾರೆ. ಈ ಸಂಬಂಧ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಡಾ.ರಂಗನಾಥ್, ಅತ್ಯಂತ ಕಠಿಣ ಶಸ್ತ್ರ ಚಿಕಿತ್ಸೆ ಇದಾಗಿದ್ದು, ಇದನ್ನು ಯಶಸ್ವಿಯಾಗಿ ನೆರವೇರಿಸಿದ ಸಂತೃಪ್ತಿ ನನ್ನದಾಗಿದೆ. ರೋಗಿ ಈಗ ಆರೋಗ್ಯವಾಗಿದ್ದಾರೆ ಎಂದರು.