ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್ ರಾಜೀನಾಮೆ; ಭ್ರಷ್ಟಾಚಾರ ವಿಡಿಯೋ ವೈರಲ್!

Published : Sep 05, 2025, 03:35 PM IST
Bhovi Nigam Scam Ravikumar Resigns

ಸಾರಾಂಶ

ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್, ಭ್ರಷ್ಟಾಚಾರ ಆರೋಪ ಮತ್ತು ವಿಡಿಯೋ ಬಹಿರಂಗಗೊಂಡ ಬೆನ್ನಲ್ಲೇ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಒತ್ತಡದ ನಡುವೆಯೂ ರಾಜೀನಾಮೆ ನಿರಾಕರಿಸಿದ್ದ ರವಿಕುಮಾರ್, ಕೊನೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಪ್ರಕರಣ ಪಕ್ಷದಲ್ಲಿ ಗೊಂದಲ ಮೂಡಿಸಿತ್ತು.

ಬೆಂಗಳೂರು (ಸೆ.05): ಭೋವಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಮತ್ತು ಅದಕ್ಕೆ ಸಂಬಂಧಿಸಿದ ವಿಡಿಯೋ ಬಹಿರಂಗವಾದ ನಂತರ, ನಿಗಮದ ಅಧ್ಯಕ್ಷ ರವಿಕುಮಾರ್‌ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲು ಸೂಚಿಸಿದ್ದರೂ, ರವಿಕುಮಾರ್ ಅದಕ್ಕೆ ಒಪ್ಪದ ಕಾರಣ ಪಕ್ಷದಲ್ಲಿ ಬಿಕ್ಕಟ್ಟು ಉಂಟಾಗಿತ್ತು. ಆದರೆ, ಕೊನೇ ಕ್ಷಣದಲ್ಲಿ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಆರೋಪಗಳು ಮತ್ತು ಮುಖ್ಯಮಂತ್ರಿಗಳ ಸೂಚನೆ

ಭೋವಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣವೇ ರವಿಕುಮಾರ್ ಅವರಿಗೆ ರಾಜೀನಾಮೆ ನೀಡಲು ಸೂಚಿಸಿದ್ದರು. ವಿಡಿಯೋ ಬಹಿರಂಗವಾದ ಕೂಡಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಮುಂದಾಗಿದ್ದ ರವಿಕುಮಾರ್ ಅವರಿಗೆ, ಸಿದ್ದರಾಮಯ್ಯ ಅವರು 'ರಾಜೀನಾಮೆ ಕೊಟ್ಟು ಹೊರಡು' ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ರವಿಕುಮಾರ್‌ರ ವಾದ ಮತ್ತು ನಿರ್ಧಾರ

ಆದರೆ, ಮುಖ್ಯಮಂತ್ರಿಗಳ ಸೂಚನೆಯ ಹೊರತಾಗಿಯೂ ರವಿಕುಮಾರ್ ರಾಜೀನಾಮೆ ನೀಡಲು ನಿರಾಕರಿಸಿದ್ದರು. ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಿ.ಎಂ. ಸಿದ್ದರಾಮಯ್ಯ ಅವರಿಗೆ ಸಂದೇಶ ರವಾನಿಸಿರುವ ಅವರು, 'ನಾನು ಯಾವುದೇ ತಪ್ಪು ಮಾಡಿಲ್ಲ. ಎಐ ತಂತ್ರಜ್ಞಾನ ಬಳಸಿ ನನ್ನನ್ನು ತೇಜೋವಧೆ ಮಾಡಲಾಗಿದೆ. ಸೂಕ್ತ ತನಿಖೆ ನಡೆದು ವರದಿ ಬರುವವರೆಗೂ ನಾನು ರಾಜೀನಾಮೆ ನೀಡುವುದಿಲ್ಲ' ಎಂದು ಹೇಳಿದ್ದರು. ದೆಹಲಿ ನಾಯಕರನ್ನೂ ಭೇಟಿ ಮಾಡಿ ತಮ್ಮ ನಿಲುವನ್ನು ಸ್ಪಷ್ಟಪಡಿಸುವುದಾಗಿ ಅವರು ಹೇಳಿಕೊಂಡಿದ್ದರು.

ಪಕ್ಷದಲ್ಲಿ ಮೂಡಿದ ಗೊಂದಲ

ರವಿಕುಮಾರ್‌ರ ಈ ನಿರ್ಧಾರ ಕಾಂಗ್ರೆಸ್ ನಾಯಕರನ್ನು ಗೊಂದಲಕ್ಕೆ ಸಿಲುಕಿಸಿತ್ತು. ಮುಖ್ಯಮಂತ್ರಿಗಳ ಭೇಟಿಗೆ ಅವರು ಪ್ರಯತ್ನ ಪಟ್ಟರೂ, ಸಿದ್ದರಾಮಯ್ಯ ಅವರು ಭೇಟಿಗೆ ಆಸಕ್ತಿ ತೋರಿಸಿಲ್ಲ. ಇದರಿಂದ ರವಿಕುಮಾರ್ ಅವರು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡುವ ನಿರ್ಧಾರ ಕೈಗೊಂಡಿದ್ದರು. ಪಕ್ಷದ ಉನ್ನತ ನಾಯಕತ್ವದ ನಿರ್ದೇಶನವನ್ನು ಪಾಲಿಸದೆ ರಾಜೀನಾಮೆ ನಿರಾಕರಿಸಿರುವ ಕಾರಣ, ರವಿಕುಮಾರ್ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವ ಕುರಿತು ಪಕ್ಷದ ವಲಯದಲ್ಲಿ ಚರ್ಚೆಗಳು ನಡೆಯುತ್ತಿದ್ದವು. ಇದರ ಬೆನ್ನಲ್ಲಿಯೇ ಭಾರೀ ಒತ್ತಡಗಳು ಕೇಳಿಬಂದ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

ತಪ್ಪು ಮಾಡಿದವರು, ಅನುಭವಿಸುತ್ತಾರೆ!

ಈ ಬಗ್ಗೆ ಮಾತನಾಡಿದ ಸುರೇಶ್ ಕುಮಾರ್ ಅವರು, ಕೊನೆಗಾದ್ರೂ ರಾಜೀನಾಮೆ ಕೊಟ್ಟರು. ರವಿಕುಮಾರ್ ಸಿಎಂ, ಡಿಸಿಎಂ ಹೇಳಿದ್ರೆ ರಾಜೀನಾಮೆ ಕೊಡ್ತೀನಿ ಅಂತ ಹೇಳಿದ್ದರು. ಅಂದರೆ, ಇವರಿಗೆ ನೈತಿಕತೆ ಇಲ್ಲವಾ.? ಬೋವಿ, ವಾಲ್ಮೀಕಿ ನಿಗಮಕ್ಕೆ ಗಂಜಿ ಕೇಂದ್ರ ಅಂತ ಇವರನ್ನ ನೇಮಕ ಮಾಡಿದ್ದಾರಾ? ಅವರಿಂದ ಫಲಾನುಭವಿಗಳಿಗೆ ಅನುಕೂಲ ಆಗಲಿಲ್ಲ. ತಪ್ಪು ಮಾಡಿದವರು ಅನುಭವಿಸ್ತಾರೆ. ಗಂಜಿ ಕುಡಿಯಲಾಗದವರು, ಕೊಕೊಕೋಲಾ ಆದರೂ ಕುಡಿಯಲಿ ಎಂದು ಕಿಡಿಕಾರಿದರು.

ಸಚಿವ ಕೆ.ಎಚ್. ಮುನಿಯಪ್ಪ ಪ್ರತಿಕ್ರಿಯೆ

ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಸಚಿವ ಕೆ.ಎಚ್. ಮುನಿಯಪ್ಪ, 'ನಿಗಮಗಳ ಅಧ್ಯಕ್ಷರ ವಿರುದ್ಧದ ಭ್ರಷ್ಟಾಚಾರದ ಆರೋಪಗಳು ಹೊಸದೇನಲ್ಲ, ಇದು ತುಂಬಾ ಹಳೆಯದು. ವಾಲ್ಮೀಕಿ ನಿಗಮದ ಅಕ್ರಮದ ತನಿಖೆ ಇನ್ನೂ ನಡೆಯುತ್ತಿದೆ. ರವಿಕುಮಾರ್ ಮಾಡಿದ ಅಕ್ರಮಕ್ಕೆ ಅವರೇ ಉತ್ತರ ಕೊಡಬೇಕು, ನಾನು ಸಚಿವನಾಗಿ ಅದಕ್ಕೆ ಉತ್ತರ ಕೊಡಲು ಸಾಧ್ಯವಿಲ್ಲ. ನಿಗಮದ ಅಧ್ಯಕ್ಷರ ವಿರುದ್ಧ ಸೂಕ್ತ ತನಿಖೆ ಆಗಲಿ' ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
'63% ಭ್ರಷ್ಟಾಚಾರ' ಹೇಳಿಕೆ ವಿವಾದ: 'ನನ್ನ ಹೇಳಿಕೆ ತಿರುಚಲಾಗಿದೆ' ಉಪಲೋಕಾಯುಕ್ತ ನ್ಯಾ. ವೀರಪ್ಪ ಸ್ಪಷ್ಟನೆ