ಮಹಾರಾಷ್ಟ್ರದಲ್ಲೇ ಉಳಿದ ಚೆನ್ನಮ್ಮ, ರಾಯಣ್ಣ ಸೇರಿ ಕರ್ನಾಟಕದ 2 ಲಕ್ಷಕ್ಕೂ ಹೆಚ್ಚು ಇತಿಹಾಸ ದಾಖಲೆಗಳು; ವಾಪಸ್ ತರಲು ಆಗ್ರಹ

Sathish Kumar KH   | Kannada Prabha
Published : Aug 10, 2026, 08:58 AM IST
Karnataka History Document in Maharashtra

ಸಾರಾಂಶ

ಕರ್ನಾಟಕದ ಸಾಂಸ್ಕೃತಿಕ, ರಾಜಕೀಯ ಹಾಗೂ ಸಾಮಾಜಿಕ ಇತಿಹಾಸಕ್ಕೆ ಸಂಬಂಧಿಸಿದ ಬರೋಬ್ಬರಿ 2 ಲಕ್ಷಕ್ಕೂ ಹೆಚ್ಚು ಅಮೂಲ್ಯ ಐತಿಹಾಸಿಕ ದಾಖಲೆಗಳು ನೆರೆಯ ಮಹಾರಾಷ್ಟ್ರದ ದಾಖಲೆ ಭಂಡಾರಗಳಲ್ಲಿ ಬಂಧಿಯಾಗಿವೆ! ರಾಜ್ಯ ಸರ್ಕಾರಗಳ ದಶಕಗಳ ನಿರ್ಲಕ್ಷ್ಯದಿಂದಾಗಿ ಈ ಅಮೂಲ್ಯ ನಿಧಿಗಳು ಅಲ್ಲಿಯೇ ಉಳಿದಿದ್ದು, ದಿನಕಳೆದಂತೆ ಶಿಥಿಲಗೊಳ್ಳುತ್ತಿವೆ. ಇವುಗಳನ್ನು ಮರಳಿ ತರಲು ಇತಿಹಾಸಕಾರರು ಹಾಗೂ ಸಂಶೋಧಕರು ಒತ್ತಾಯಿಸುತ್ತಿದ್ದಾರೆ.

ವರದಿ: ಬಸವರಾಜ ಹಿರೇಮಠ

ಧಾರವಾಡ (ಆ.10): ಕರ್ನಾಟಕದ ಸಾಂಸ್ಕೃತಿಕ, ರಾಜಕೀಯ ಮತ್ತು ಸಾಮಾಜಿಕ ಇತಿಹಾಸಕ್ಕೆ ಸಂಬಂಧಿಸಿದ 2 ಲಕ್ಷಕ್ಕೂ ಹೆಚ್ಚು ಅಮೂಲ್ಯ ದಾಖಲೆಗಳು ಮಹಾರಾಷ್ಟ್ರದ ವಿವಿಧ ದಾಖಲೆ ಭಂಡಾರಗಳಲ್ಲಿ ಅಡಗಿವೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಈ ದಾಖಲೆಗಳು ಅಲ್ಲಿಯೇ ಉಳಿದಿದ್ದು, ಮರಳಿ ಕರುನಾಡಿಗೆ ತರಲು ರಾಜ್ಯ ಸರ್ಕಾರ ಕ್ರಮ ವಹಿಸಬೇಕಿದೆ.

ದಶಕಗಳಿಂದ ಇತಿಹಾಸಕಾರರು, ಲೇಖಕರು ಮತ್ತು ಸಂಶೋಧಕರು ಪದೇ ಪದೇ ಮನವಿ ಮಾಡಿದರೂ ರಾಜ್ಯದಲ್ಲಿ ಈ ವರೆಗೆ ಆಡಳಿತ ನಡೆಸಿದವರು ಈ ಅಮೂಲ್ಯ ದಾಖಲೆಗಳನ್ನು ಮರಳಿ ಪಡೆಯಲು ಅಥವಾ ಕನಿಷ್ಠ ಪಕ್ಷ ಅವುಗಳ ಡಿಜಿಟಲ್ ಪ್ರತಿಗಳನ್ನಾದರೂ ಪಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂಬುದೇ ಕನ್ನಡಿಗರ ದುರ್ದೈವ. ಕಾಲಕ್ರಮೇಣ ಹಲವು ದಾಖಲೆಗಳು ಶಿಥಿಲಗೊಂಡಿವೆ ಎಂದು ಇತಿಹಾಸಕಾರರು ಬೇಸರ ವ್ಯಕ್ತಪಡಿಸುತ್ತಾರೆ.

ಹಲವು ಪ್ರಶ್ನೆಗೆ ಉತ್ತರ:

ಪುಣೆ, ಕೊಲ್ಲಾಪುರ ಮತ್ತು ಮುಂಬೈನಲ್ಲಿರುವ ಮಹಾರಾಷ್ಟ್ರ ರಾಜ್ಯ ದಾಖಲೆ ಭಂಡಾರ ಹಾಗೂ ಸಂಶೋಧನಾ ಗ್ರಂಥಾಲಯಗಳಲ್ಲಿರುವ ಈ ದಾಖಲೆಗಳು, 100 ವರ್ಷಗಳಿಗೂ ಹೆಚ್ಚಿನ ಹಳೆಯದಾದ ‘ಮೋಡಿ ಲಿಪಿ’ಯಲ್ಲಿವೆ. ಇವುಗಳಲ್ಲಿ ಕಿತ್ತೂರು ದಂಗೆಯ ನಂತರದ ಬೆಳವಣಿಗೆ, ಪೇಶ್ವೆ ಮತ್ತು ಕನ್ನಡ ಆಡಳಿತಗಾರರ ನಡುವಿನ ಸಂಬಂಧ, ಉತ್ತರ ಕರ್ನಾಟಕದಲ್ಲಿ ಬ್ರಿಟಿಷರ ತೆರಿಗೆ ಪದ್ಧತಿ, ಮೈಸೂರು ಸಂಸ್ಥಾನ ಮತ್ತು ಮರಾಠ ಆಡಳಿತಗಾರರ ನಡುವಿನ ಬಾಂಧವ್ಯ ಹಾಗೂ ಟಿಪ್ಪು ಸುಲ್ತಾನ್ ಮತ್ತು ಇಂದಿನ ಮಹಾರಾಷ್ಟ್ರದ ನಡುವಿನ ಸಂಪರ್ಕದಂತಹ ಹಲವು ಬಗೆಹರಿಯದ ಐತಿಹಾಸಿಕ ಪ್ರಶ್ನೆಗಳಿಗೂ ಉತ್ತರಗಳಿವೆ ಎಂದು ಇತಿಹಾಸಕಾರರು ತಿಳಿಸುತ್ತಾರೆ.

ಮೌಲ್ಯಯುತ ಸಾಕ್ಷ್ಯಗಳಿವು:

ಕರ್ನಾಟಕ ಏಕೀಕರಣಗೊಂಡು ಐದು ದಶಕಗಳಿಗೂ ಹೆಚ್ಚು ಸಮಯ ಕಳೆದಿದ್ದರೂ, ಕಿತ್ತೂರು ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಸಂಗೊಳ್ಳಿ ರಾಯಣ್ಣ, ಸಿಂಧೂರ ಲಕ್ಷ್ಮಣ, ಆಮಟೂರು ಬಾಳಪ್ಪ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರಿಗೆ ಸಂಬಂಧಿಸಿದ ದಾಖಲೆಗಳು ಇನ್ನೂ ಕನ್ನಡಿಗರಿಗೆ ಪೂರ್ತಿಯಾಗಿ ಲಭ್ಯವಿಲ್ಲ. ಉತ್ತರ ಕರ್ನಾಟಕದ ಇತಿಹಾಸ ಅರ್ಥ ಮಾಡಿಕೊಳ್ಳಲು ಮತ್ತು ಅದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಲು ಈ ದಾಖಲೆಗಳು ಅತ್ಯಗತ್ಯ. ಜತೆಗೆ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದವು ಸುಪ್ರೀಂಕೋರ್ಟ್‌ನಲ್ಲಿ ಬಾಕಿಯಿರುವ ಹಿನ್ನೆಲೆಯಲ್ಲಿ, ಬ್ರಿಟಿಷ್ ಕಾಲದ ಗಡಿ ನಿರ್ಣಯಕ್ಕೆ ಸಂಬಂಧಿಸಿದ ದಾಖಲೆಗಳು ಮೌಲ್ಯಯುತ ಐತಿಹಾಸಿಕ ಸಾಕ್ಷ್ಯಗಳಾಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ದಾಖಲೆ ತರುವ ನಿಟ್ಟಿನಲ್ಲಿ ಶೀಘ್ರ ಗಮನ ಹರಿಸಬೇಕಿದೆ ಎನ್ನುವುದು ರಾಜ್ಯದ ಇತಿಹಾಸಕಾರರ ಆಶಯವಾಗಿದೆ.

ಪ್ರಯತ್ನ ವಿಫಲ:

2016ರಲ್ಲಿ ಕರ್ನಾಟಕದ ಇತಿಹಾಸಕಾಸಕಾರರ ತಂಡವೊಂದು ಆ ದಾಖಲೆಗಳ ಸಂಗ್ರಹ ಪರಿಶೀಲಿಸಲು ಮಹಾರಾಷ್ಟ್ರಕ್ಕೆ ಭೇಟಿ ನೀಡಿತ್ತು. ಆದರೆ, ದಾಖಲೆಗಳ ಪ್ರಮಾಣವು ಹೆಚ್ಚಿದ್ದು ಜತೆಗೆ ಅವು ಮೋಡಿ ಲಿಪಿಯಲ್ಲಿ ಇದ್ದರಿಂದ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ನಂತರ ಆ ಇಲಾಖೆಯು, ಮಹಾರಾಷ್ಟ್ರದಿಂದ ಮೂಲ ದಾಖಲೆಗಳನ್ನು ಮರಳಿ ಪಡೆಯಲು ಹಾಗೂ ಮೋಡಿ ಲಿಪಿಯಲ್ಲಿ ಪರಿಣತರನ್ನು ತರಬೇತಿಗೊಳಿಸಲು ಮತ್ತು ಆ ವಿಷಯವನ್ನು ಕನ್ನಡಕ್ಕೆ ಅನುವಾದಿಸಲು ಅನುದಾನ ಮಂಜೂರು ಮಾಡುವಂತೆ ಕರ್ನಾಟಕ ಸರ್ಕಾರವನ್ನು ಕೋರಿತು. ಆದರೆ, ಈ ಪ್ರಸ್ತಾವನೆಯು ಮುಂದೆ ಸಾಗಲಿಲ್ಲ ಎಂದು ತಿಳಿದು ಬಂದಿದೆ.

ಮೋಡಿ ಲಿಪಿಯನ್ನು ಓದಬಲ್ಲ ತಜ್ಞರು ಕಡಿಮೆ: ಬಿಳಿಮಲೆ

ಕರ್ನಾಟಕದ ಪರಂಪರೆ ಸಂರಕ್ಷಿಸಲು ಈ ದಾಖಲೆಗಳನ್ನು ಮರಳಿ ಪಡೆಯುವುದು ಅತ್ಯಗತ್ಯ ಎಂದು ಹೇಳಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಮರಾಠಿಯಿಂದ ಕನ್ನಡಕ್ಕೆ ಅನುವಾದ ಮಾಡಬಲ್ಲ ವಿದ್ವಾಂಸರು ನಮ್ಮಲ್ಲಿದ್ದರೂ, ಮೋಡಿ ಲಿಪಿಯನ್ನು ಓದಬಲ್ಲ ತಜ್ಞರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಅಂತಹ ಪರಿಣತಿಯಿಲ್ಲದೇ, ಈ ದಾಖಲೆಗಳು ಲಭ್ಯವಾಗದಂತೆಯೇ ಉಳಿಯುತ್ತವೆ. ತರಬೇತಿ ಪಡೆದ ವಿದ್ವಾಂಸರ ಪಡೆಯನ್ನು ಸಿದ್ಧಪಡಿಸಲು ಕಲಬುರಗಿ, ಧಾರವಾಡ, ಮೈಸೂರು ಮತ್ತು ಬೆಂಗಳೂರಿನಲ್ಲಿ ಮೋಡಿ ಲಿಪಿ ತರಬೇತಿ ಕಾರ್ಯಕ್ರಮ ಆಯೋಜಿಸಲು ಪ್ರಾಧಿಕಾರ ಯೋಜಿಸಿದೆ. ಮಹಾರಾಷ್ಟ್ರದಿಂದ ಈ ದಾಖಲೆ ಪಡೆಯಲು ಸರ್ಕಾರಿ ಅನುಮೋದನೆ ಮತ್ತು ಅನುದಾನ ಪಡೆಯುವ ಉದ್ದೇಶವನ್ನೂ ಪ್ರಾಧಿಕಾರ ಹೊಂದಿದೆ ಎಂದು ತಿಳಿಸಿದರು.

ಅನುದಾನ ಒದಗಿಸಿ: ಸಾವಂತ

ಈ ದಾಖಲೆಗಳ ಲಭ್ಯತೆಯಿಲ್ಲದೆ ಕರ್ನಾಟಕದ ಇತಿಹಾಸ ಅಪೂರ್ಣ. ಕಾಲಕ್ರಮೇಣ ಇವುಗಳಲ್ಲಿ ಅನೇಕ ದಾಖಲೆಗಳು ಶಿಥಿಲಗೊಂಡಿವೆ. ಅವುಗಳನ್ನು ಎಚ್ಚರಿಕೆಯಿಂದ ಸಂರಕ್ಷಿಸಿ, ಡಿಜಿಟಲೀಕರಣಗೊಳಿಸಬೇಕು ಮತ್ತು ಅನುವಾದಿಸಬೇಕು. ಈ ಪ್ರಮುಖ ಪರಂಪರೆ ಸಂರಕ್ಷಣಾ ಯೋಜನೆಗೆ ಅಗತ್ಯವಾದ ಅನುದಾನ ಒದಗಿಸಲು ಸರ್ಕಾರ ಹಿಂಜರಿಯಬಾರದು ಎಂದು ಮೋಡಿ ಲಿಪಿ ತಜ್ಞ ಡಾ। ಎಸ್‌.ವೈ.ಸಾವಂತ ಸರ್ಕಾರದ ಗಮನ ಸೆಳೆದರು.

ಶೀಘ್ರ ದಾಖಲೆ ತರಿಸಲಿ

ಬ್ರಿಟಿಷ್ ಆಳ್ವಿಕೆಯಲ್ಲಿ ಈಗಿನ ಉತ್ತರ ಕರ್ನಾಟಕದ 19 ಜಿಲ್ಲೆಗಳು ಬಾಂಬೆ ಪ್ರೆಸಿಡೆನ್ಸಿ ಮತ್ತು ಹೈದರಾಬಾದ್ ಸಂಸ್ಥಾನದಲ್ಲಿದ್ದವು. ಹೀಗಾಗಿ ಈ ಪ್ರದೇಶದ ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ಬೆಳವಣಿಗೆ ದಾಖಲಿಸುವ ಆಡಳಿತಾತ್ಮಕ ದಾಖಲೆಗಳು ಮಹಾರಾಷ್ಟ್ರದಲ್ಲಿಯೇ ಉಳಿದಿವೆ. ಇದು ರಾಜ್ಯದ ಐತಿಹಾಸಿಕ ಸಂಶೋಧನೆಗೆ ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ದಾಖಲೆಗಳನ್ನು ಪಡೆಯಲು ಶೀಘ್ರ ಯೋಜನೆ ರೂಪಿಸಲಿ.

ಶಂಕರ ಹಲಗತ್ತಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಸ್‌ಇಂಡ್ ಬ್ಯಾಂಕ್‌ನಲ್ಲಿ ₹1.53 ಕೋಟಿ ನಕಲಿ ಚಿನ್ನದ ಸಾಲ ಹಗರಣ; ಸಿಐಡಿ ತನಿಖೆಗೆ ಹೈಕೋರ್ಟ್‌ ಆದೇಶ
Karnataka news live: ವಿಜಯಪುರ ರೈತರಿಗೆ ಒಣದ್ರಾಕ್ಷಿ ಬಂಪರ್; ಆನ್‌ಲೈನ್ ಟ್ರೇಡಿಂಗ್ ಯಶಸ್ಸು ಬಿಚ್ಚಿಟ್ಟ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್!