
ಬೆಂಗಳೂರು (ಮೇ.30): ಕನ್ನಡ ಭಾಷೆಯು ತಮಿಳಿನಿಂದ ಹುಟ್ಟಿದೆ ಎಂಬ ಹಿರಿಯ ನಟ ಕಮಲ್ ಹಾಸನ್ ಅವರ ಹೇಳಿಕೆ ಕನ್ನಡಿಗರ ಆತ್ಮಗೌರವ ಮತ್ತು ಭಾವನೆಗಳಿಗೆ ಧಕ್ಕೆ ತಂದಿದೆ. ಹೀಗಾಗಿ ಜೂ.5ರಂದು ಬಿಡುಗಡೆಯಾಗಲಿರುವ ಕಮಲ್ ಹಾಸನ್ ನಟನೆಯ ‘ಥಗ್‌ಲೈಫ್’ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆಯಾಗದಂತೆ ತಡೆಯಬೇಕೆಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ. ಗುರುವಾರ ಈ ಕುರಿತು ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ) ಮತ್ತು ಶಿವರಾಮೇಗೌಡ ಅವರ ಬಣದ ಮುಖಂಡರ ಪ್ರತ್ಯೇಕ ನಿಯೋಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ತೆರಳಿ ಪ್ರತ್ಯೇಕವಾಗಿ ಮನವಿ ಪತ್ರ ಸಲ್ಲಿಸಿದೆ.
ಕಮಲ್ ಹಾಸನ್ ಅವರ ಯಾವುದೇ ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆಗೆ ಅವಕಾಶ ನೀಡುವುದಿಲ್ಲ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಥಗ್‌ಲೈಫ್ ಬಿಡುಗಡೆ ತಡೆಗೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಕಮಲ್ ಹಾಸನ್ ಚಿತ್ರ ಬಿಡುಗಡೆ ಮಾಡುವ ಎಲ್ಲೆಡೆ ತೀವ್ರ ಹೋರಾಟ ನಡೆಸಲಾಗುವುದು. ಚಿತ್ರಪ್ರದರ್ಶನ ಬಂದ್ ಮಾಡಿಸಲಾಗುವುದು ಎಂದು ಕರವೇ ಎಚ್ಚರಿಸಿದೆ. ಕರವೇ ನಿಯೋಗದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಸಣ್ಣೀರಪ್ಪ, ಬೆಂಗಳೂರು ನಗರ ಘಟಕದ ಅಧ್ಯಕ್ಷ ಟಿ.ಎ.ಧರ್ಮರಾಜ್ ಗೌಡ, ಕರವೇ ರಾಜ್ಯ ಪ್ರಧಾನ ಸಂಚಾಲಕ ಮೋಹನ್ ಗೌಡ ಸೇರಿ ಮತ್ತಿತರರು ಇದ್ದರು.
ತಮಿಳು ಭಾಷೆಯಿಂದ ಕನ್ನಡದ ಉಗಮವಾಗಿದೆ ಎಂದು ನಟ-ರಾಜಕಾರಣಿ ಕಮಲ್‌ಹಾಸನ್ ದುರುದ್ದೇಶಪೂರಿತ ಹೇಳಿಕೆ ನೀಡಿದ್ದಾರೆ. ಈ ಸುಳ್ಳು ಮತ್ತು ಆಧಾರ ರಹಿತ ಹೇಳಿಕೆ ಕನ್ನಡ ಭಾಷೆಯ ಶ್ರೀಮಂತ ಇತಿಹಾಸ, ಸಂಸ್ಕೃತಿ ಮತ್ತು ಸ್ವಾಭಿಮಾನಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ಹೇಳಿಕೆ ಕುರಿತು ಕನ್ನಡಿಗರಿಂದ ತೀವ್ರ ಖಂಡನೆ ಮತ್ತು ವಿರೋಧ ವ್ಯಕ್ತವಾದರೂ ಕಮಲ್ ಹಾಸನ್ ಅವರು ತಮ್ಮ ತಪ್ಪು ಒಪ್ಪಿಕೊಂಡು ಕ್ಷಮೆಯಾಚಿಸಿಲ್ಲ. ಅದರ ಬದಲು ತಮ್ಮ ಹೇಳಿಕೆಗೆ ಬದ್ಧರಾಗಿರುವುದಾಗಿ ಹೇಳಿರುವುದು ಕನ್ನಡಿಗರ ಆಕ್ರೋಶ ಮತ್ತಷ್ಟು ಹೆಚ್ಚಿಸಿದೆ. ಕಮಲ್ ಹಾಸನ್ ಅವರ ಈ ಧೋರಣೆಯನ್ನು ಕರವೇ ತೀವ್ರವಾಗಿ ಖಂಡಿಸುತ್ತದೆ. ಆದ್ದರಿಂದ ಜೂ.5ಕ್ಕೆ ಬಿಡುಗಡೆಯಾಗಲಿರುವ ಅವರ ಹೊಸ ಚಿತ್ರ ‘ಥಗ್ ಲೈಫ್’ ಕರ್ನಾಟಕದಲ್ಲಿ ಪ್ರದರ್ಶನವಾಗದಂತೆ ತಡೆಯಬೇಕು. ಚಿತ್ರವಿತರಕರ ಹಿತದೃಷ್ಟಿಯಿಂದ ಶೀಘ್ರ ಕ್ರಮವಹಿಸಬೇಕು ಎಂದು ಒತ್ತಾಯಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ