ಕೊರೋನಾಗೆ 2ನೇ ಬಲಿ: ಬೆಳಗಾವಿಯ ವೃದ್ಧ ಸಾವು, ಕೋವಿಡ್‌ ನಿಯಮಾವಳಿಯಂತೆಯೇ ಅಂತ್ಯಕ್ರಿಯೆ

Kannadaprabha News   | Kannada Prabha
Published : May 30, 2025, 06:14 AM IST
corona

ಸಾರಾಂಶ

ಮಹಾಮಾರಿ ಕೊರೋನಾ ಸೋಂಕಿಗೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದೆ. ಬೆಳಗಾವಿ ಬಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 70 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದು, ಅವರಿಗೆ ಕೋವಿಡ್‌ ಸೋಂಕು ಇರುವುದನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ.

ಬೆಳಗಾವಿ (ಮೇ.30): ಮಹಾಮಾರಿ ಕೊರೋನಾ ಸೋಂಕಿಗೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದೆ. ಬೆಳಗಾವಿ ಬಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 70 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದು, ಅವರಿಗೆ ಕೋವಿಡ್‌ ಸೋಂಕು ಇರುವುದನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬೆನಕನಹಳ್ಳಿ ಗ್ರಾಮದ ನಿವಾಸಿಯನ್ನು ಬಿಮ್ಸ್‌ಗೆ ದಾಖಲಿಸಲಾಗಿತ್ತು. ಕೊರೋನಾ ತಪಾಸಣೆ ವೇಳೆ ಸೋಂಕು ಇರುವುದು ಗೊತ್ತಾಗಿದ್ದು, ಕೋವಿಡ್‌ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಕೋವಿಡ್‌ ನಿಯಮಾವಳಿ ಅನ್ವಯವೇ ಬುಧವಾರ ರಾತ್ರಿಯೇ ಕುಟುಂಬಸ್ಥರು ಮೃತರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ ಎಂದು ಬಿಮ್ಸ್‌ ವೈದ್ಯರು ತಿಳಿಸಿದ್ದಾರೆ. ಕಳೆದ ಮೇ 24ರಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ಉಸಿರಾಟದ ಸಮಸ್ಯಗೆ ಚಿಕಿತ್ಸೆ ಪಡೆಯುತ್ತಿದ್ದ 84 ವರ್ಷದ ವೃದ್ಧರೊಬ್ಬರು ಕೋವಿಡ್‌ಗೆ ಬಲಿಯಾಗಿದ್ದರು.

ಕೊರೋನಾ ಎದುರಿಸಲು ಸಕಲ ಸಿದ್ಧತೆ: ರಾಜ್ಯದಲ್ಲಿ ಸದ್ಯಕ್ಕೆ ಕೊರೋನಾದಿಂದ ಯಾವುದೇ ಭಯವಿಲ್ಲ. ಆದರೂ, ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌, ಆಮ್ಲಜನಕ, ವಾರ್ಡ್‌ಗಳ ಲಭ್ಯತೆಗಳನ್ನು ಪರಿಶೀಲಿಸಿ, ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಕೊರೋನಾ ಸಂಬಂಧ ಸಭೆ ನಡೆಸಿ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸೂಚನೆ ನೀಡಿದ್ದೇನೆ. ಎಲ್ಲದಕ್ಕೂ ಸಿದ್ಧರಾಗಿರುವಂತೆ ತಿಳಿಸಿದ್ದೇನೆ. ಆಸ್ಪತ್ರೆಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ನಿರ್ದೇಶಿಸಲಾಗಿದೆ. ಎಲ್ಲರೂ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಿಲ್ಲ. ಆದರೆ, ವೃದ್ಧರು ಮತ್ತು ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಎಂದು ತಿಳಿಸಲಾಗಿದೆ. ಸದ್ಯ ಕಾಣಿಸಿಕೊಂಡಿರುವ ಕೊರೋನಾ ತಳಿ ಗಂಭೀರವಾದುದಲ್ಲ. ಆದರೂ, ನೆಗಡಿ, ಕೆಮ್ಮು, ಜ್ವರ ಬಂದಿರುವ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು ಎಂದರು.

ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ವೆಂಟಿಲೇಟರ್‌, ಆಕ್ಸಿಜನ್‌ ಸೇರಿ ಇತರೆ ಲಭ್ಯತೆ ಕುರಿತು ವರದಿ ನೀಡುವಂತೆ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್‌ ಪಾಟೀಲ್‌ ಸೂಚನೆ ನೀಡಿದ್ದಾರೆ.ಮಂಗಳವಾರ ವಿಕಾಸೌಧದಲ್ಲಿ ಕೋವಿಡ್‌ ಮುನ್ನಚ್ಚರಿಕಾ ಕ್ರಮಗಳ ಕುರಿತು ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಅವರು, ಇಲಾಖೆ ವ್ಯಾಪ್ತಿಯ ವೈದ್ಯರು, ಆರೋಗ್ಯ ಸಿಬ್ಬಂದಿ ಮಾಸ್ಕ್‌ ಧರಿಸಬೇಕು ಎಂದು ನಿರ್ದೇಶನ ನೀಡಿದರು.ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿದೆ. ಆದರೆ, ಜನತೆ ಯಾವುದೇ ರೀತಿಯಲ್ಲೂ ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. ಜನನಿಬಿಡ ಸ್ಥಳಗಳಲ್ಲಿ ಜ್ವರ, ಶೀತ, ಕೆಮ್ಮ ಇರುವವರು ಮಾಸ್ಕ್‌ ಧರಿಸಬೇಕು. ಅಲ್ಲದೆ ಗರ್ಭಿಣಿಯರೂ ಮಾಸ್ಕ್ ಬಳಕೆ ಮಾಡಬೇಕು. ಜನರು ಸರ್ಕಾರದೊಂದಿಗೆ ಕೈ ಜೋಡಿಸಿ ಕೋವಿಡ್‌ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಹೇಳಿದರು.

ಸಾರಿ ಪ್ರಕರಣಗಳ ಪರೀಕ್ಷೆ ನಡೆಸಬೇಕು. ವೈದ್ಯಕೀಯ ಶಿಕ್ಷಣ ಇಲಾಖೆಯ ಎಲ್ಲ ಆಸ್ಪತ್ರೆ ನಿರ್ದೇಶಕರೊಂದಿಗೆ ಸಭೆ ನಡೆಸಲಾಗಿದೆ. ಪ್ರಯೋಗಾಲಯಗಳ ವ್ಯವಸ್ಥೆ, ಆಕ್ಸಿಜನ್‌ ಹಾಸಿಗೆ, ವೆಂಟಿಲೇಟರ್‌ಗಳ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಬೇಸಿಗೆ ರಜೆ ಬಳಿಕ ಶಾಲೆಗಳು ಪ್ರಾರಂಭವಾಗಿವೆ. ವಿದ್ಯಾರ್ಥಿಗಳಿಗೆ ಜ್ವರ, ಶೀತ, ಕೆಮ್ಮು ಇದ್ದರೆ ಪೋಷಕರು ಶಾಲೆಗಳಿಗೆ ಕಳುಹಿಸಿಬಾರದು. ಒಂದು ವೇಳೆ ಶಾಲೆಯಲ್ಲಿ ಶೀತ, ನೆಗಡಿ ಬಂದರೆ ತಕ್ಷಣವೇ ಪೋಷಕರಿಗೆ ಕರೆ ಮಾಡಿ ಕಳುಹಿಸಬೇಕು ಎಂದರು.ಸಭೆಯಲ್ಲಿ ವೈದ್ಯಕೀಯ ಶಿಕ್ಷಣದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಷಿನ್, ವೈದ್ಯಕೀಯ ಶಿಕ್ಷಣದ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ಇತರರು ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಹಸ್ಯ ಡಿನ್ನರ್ ಮೀಟಿಂಗ್‌ನಲ್ಲಿ 'ಅಹಿಂದ' ಮಾಸ್ಟರ್ ಪ್ಲಾನ್! ಸಿಎಂ ಕುರ್ಚಿ ಉಳಿಸಿಕೊಳ್ಳಲು ಬೆಳಗಾವಿಯಲ್ಲಿ ಹೊಸ ರಣತಂತ್ರ?
State News Live: Mysore - ಗೌರವ ಕೊಡದ ಹೆಂಡ್ತಿ ಕೊಲ್ಲಲು ಸುಪಾರಿ ಕೊಟ್ಟ ಪತಿರಾಯ!