ಹೊಸೂರಿಗೆ ಮೆಟ್ರೋ: ಕನ್ನಡಿಗರ ಕೆಂಗಣ್ಣು!

By Kannadaprabha NewsFirst Published Jun 11, 2022, 6:48 AM IST
Highlights

* ರಾಜ್ಯ ಸರ್ಕಾರದ ಉತ್ಸಾಹಕ್ಕೆ ತೀವ್ರ ಆಕ್ಷೇಪ

* ಹೊಸೂರಿಗೆ ಮೆಟ್ರೋ: ಕನ್ನಡಿಗರ ಕೆಂಗಣ್ಣು!

* ಮೊದಲು ಬೆಂಗಳೂರು ಸುತ್ತಲಿನ ನಗರಗಳಿಗೆ ಮೆಟ್ರೋ ಓಡಿಸಿ

* ಈಗ ಘೋಷಿಸಿರುವ ಮೆಟ್ರೋ ಯೋಜನೆ ಕುಂಟುತ್ತಿದ್ದರೂ ಪಕ್ಕದ ರಾಜ್ಯಕ್ಕೆ ಮೆಟ್ರೋ ಯಾಕೆ?: ಕನ್ನಡಿಗರು

ಬೆಂಗಳೂರು(ಜೂ,11): ತಮಿಳುನಾಡು ರಾಜ್ಯದ ಹೊಸೂರಿನ ತನಕ ಬೆಂಗಳೂರು ಮೆಟ್ರೋ ಸೇವೆಯನ್ನು ವಿಸ್ತರಿಸಬೇಕು ಎಂದು ಕೃಷ್ಣಗಿರಿಯ ಸಂಸದರು ಮಾಡಿಕೊಂಡ ಮನವಿಗೆ ಸ್ಪಂದಿಸಿ ಯೋಜನೆ ಜಾರಿಗೆ ಒಲವು ತೋರಿರುವ ರಾಜ್ಯ ಸರ್ಕಾರದ ನಡೆ ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಯೋಜನೆ ಮುಂದುವರಿಸಿದರೆ ಹೋರಾಟದ ಎಚ್ಚರಿಕೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ನೀಡಿದೆ.

ಇದೇ ವೇಳೆ ಸಾರಿಗೆ ತಜ್ಞರು ಕೂಡ ಈ ಪ್ರಸ್ತಾವನೆ ಅವೈಜ್ಞಾನಿಕ ಎಂದು ಟೀಕಿಸಿದ್ದಾರೆ. ಬೆಂಗಳೂರು ಮೆಟ್ರೊ ನಿಗಮ ಸದ್ಯ ಆರ್‌.ವಿ ರಸ್ತೆಯಿಂದ ಬೊಮ್ಮಸಂದ್ರದ ತನಕ ಮೆಟ್ರೋ ಕಾಮಗಾರಿ ನಡೆಸುತ್ತಿದ್ದು, ಮುಂದಿನ ವರ್ಷದ ಮಾಚ್‌ರ್‍ ಹೊತ್ತಿಗೆ ಈ ಮಾರ್ಗ ವಾಣಿಜ್ಯ ಬಳಕೆಗೆ ಲಭ್ಯವಾಗುವ ನಿರೀಕ್ಷೆಯಿದೆ. ಈ ಮಾರ್ಗವನ್ನು ಹೊಸೂರು ತನಕ ವಿಸ್ತರಿಸಬೇಕು ಎಂಬ ಕೃಷ್ಣಗಿರಿಯ ಸಂಸದರ ಮನವಿಗೆ ಕ್ಷಿಪ್ರಗತಿಯಲ್ಲಿ ಸ್ಪಂದಿಸಿರುವ ರಾಜ್ಯ ಸರ್ಕಾರ ಈ ಬಗ್ಗೆ ಅಧ್ಯಯನ ನಡೆಸಲು ಒಲವು ವ್ಯಕ್ತಪಡಿಸಿ ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಕಾರ್ಯದರ್ಶಿಗೆ ಪತ್ರ ಬರೆದಿದೆ.

ರಾಜ್ಯ ಸರ್ಕಾರದ ಈ ಪತ್ರ ಬಹಿರಂಗಗೊಳ್ಳುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಈಗಾಗಲೇ ಘೋಷಿಸಿರುವ ಮೆಟ್ರೋ ಯೋಜನೆಗಳು ಕುಂಟುತ್ತ ಸಾಗುತ್ತಿದ್ದು, ಹೊಸೂರಿಗೆ ಮೆಟ್ರೋ ಸೇವೆ ಕಲ್ಪಿಸಲು ಅವಸರ ಏನಿದೆ ಎಂದು ಅನೇಕರು ಪ್ರಶ್ನಿಸಿದ್ದಾರೆ. ಅದೇ ರೀತಿ ಬೆಂಗಳೂರಿಗೆ ಸಮೀಪದಲ್ಲಿರುವ ಪಟ್ಟಣಗಳಿಗೆ ಮೆಟ್ರೋ ಸೇವೆ ವಿಸ್ತರಿಸುವ ಬೇಡಿಕೆಗಳ ಬಗ್ಗೆ ಇನ್ನೂ ಸ್ಪಂದಿಸದಿರುವ ಸರ್ಕಾರಕ್ಕೆ ಹೊಸೂರಿಗೆ ಮೆಟ್ರೋ ಓಡಿಸುವ ಧಾವಂತ ಏಕೆ? ಎಂಬ ಟೀಕೆಗಳು ವ್ಯಕ್ತವಾಗಿದೆ. ಇದೇ ವೇಳೆ ಈ ಯೋಜನೆ ಜಾರಿಯಾದರೆ ಕರ್ನಾಟಕಕ್ಕೆ ಆರ್ಥಿಕವಾಗಿ ಭಾರಿ ಹೊಡೆತ ಬೀಳಬಹುದು ಎಂಬ ಆಂತಕವೂ ಇದೆ.

ದೊಡ್ಡಬಳ್ಳಾಪುರ, ಹೊಸಕೋಟೆ, ತುಮಕೂರು, ದಾಬಸ್‌ಪೇಟೆ, ನೆಲಮಂಗಲ, ಕೋಲಾರಕ್ಕೆ ಮೆಟ್ರೋ ಸೇವೆ ನೀಡಬೇಕು ಎಂದು ಆ ಭಾಗದ ಜನಪ್ರತಿನಿಧಿಗಳು ಮಾಡಿಕೊಂಡ ಮನವಿಗೆ ಸರ್ಕಾರ ಇನ್ನೂ ಸ್ಪಂದಿಸಿಲ್ಲ. ಆದರೆ ಹೊಸೂರಿನ ಸಂಸದರ ಪತ್ರಕ್ಕೆ ಮುಖ್ಯಮಂತ್ರಿಗಳು ಮನ್ನಣೆ ನೀಡಿರುವುದು ಅನೇಕರ ಕಣ್ಣು ಕೆಂಪಾಗಿಸಿದೆ.

ಯಾವುದೇ ಪ್ರದೇಶಕ್ಕೆ ಮೆಟ್ರೋ ಸೇವೆ ಲಭ್ಯವಾಗುವುದರಿಂದ ಅಲ್ಲಿನ ಆರ್ಥಿಕ ಚಟುವಟಿಕೆ ಗರಿಗೆದರುತ್ತದೆ. ರಾಜ್ಯ ಸರ್ಕಾರ ಕೂಡ ಬೆಂಗಳೂರಿನಿಂದ ಹೊರಗೆ ಉದ್ದಿಮೆಗಳನ್ನು ಸೆಳೆಯುವ ಉತ್ಸಾಹ ಹೊಂದಿದೆ. ಆದರೆ ಬೆಂಗಳೂರಿನ ಸುತ್ತಲಿನ ರಾಜ್ಯದ ನಗರಗಳಿಗೆ ಮೆಟ್ರೋ ಸಾರಿಗೆ ಕಲ್ಪಿಸದೆ ಹೊಸೂರಿಗೆ ಮೆಟ್ರೋ ಸೇವೆ ನೀಡಲು ಹೊರಡುವ ಮೂಲಕ ರಾಜ್ಯ ಸರ್ಕಾರ ಯಾವ ಸಂದೇಶ ನೀಡುತ್ತಿದೆ ಎಂದು ಕನ್ನಡಿಗರು ಪ್ರಶ್ನಿಸಿದ್ದಾರೆ.

ಈಗಾಗಲೇ ಕೃಷ್ಣಗಿರಿಯಲ್ಲಿ ಕೈಗಾರಿಕಾ ಚಟುವಟಿಕೆ ಬಿರುಸು ಪಡೆದಿದೆ. ರಾಜ್ಯಕ್ಕೆ ಬರಬೇಕಿದ್ದ ಅನೇಕ ಉದ್ದಿಮೆಗಳು ಹೊಸೂರಿಗೆ ಹೋಗಿದೆ. ಆನೇಕಲ್‌ನಿಂದ ಹಲವು ಉದ್ದಿಮೆಗಳು ಕೃಷ್ಣಗಿರಿಗೆ ಕಾಲ್ಕಿತ್ತಿವೆ. ಈ ಮಧ್ಯೆ ಹೊಸೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಲು ತಮಿಳುನಾಡು ಸರ್ಕಾರ ಮುಂದಾಗಿದ್ದು, ಕರ್ನಾಟಕಕ್ಕೆ ಬರುವ ಉದ್ದಿಮೆಗಳನ್ನು ಸೆಳೆಯುವುದೇ ಅಲ್ಲಿನ ಸರ್ಕಾರದ ಉದ್ದೇಶ. ಒಂದು ವೇಳೆ ನಾವು ಅಲ್ಲಿಗೆ ಮೆಟ್ರೋ ಸಂಪರ್ಕ ಕಲ್ಪಿಸಿದರೆ ಅಲ್ಲಿನ ಸರ್ಕಾರದ ತಾಳಕ್ಕೆ ನಮ್ಮ ಸರ್ಕಾರ ಕುಣಿದಂತೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಉಗ್ರ ಹೋರಾಟ ಮಾಡ್ತೀವಿ: ನಾರಾಯಣಗೌಡ ಎಚ್ಚರಿಕೆ

ರಾಜ್ಯ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣ ಗೌಡ, ಈಗಾಗಲೇ ಅನೇಕಲ್‌ ಭಾಗದಲ್ಲಿನ ನಮ್ಮ ಜನರ ಉದ್ಯೋಗ, ಜಮೀನು ತಮಿಳುನಾಡಿನವರ ಪಾಲಾಗುತ್ತಿದೆ. ನಮ್ಮಲ್ಲಿಗೆ ಬರಬೇಕಿದ್ದ ಉದ್ದಿಮೆಗಳು ತಮಿಳುನಾಡಿಗೆ ಹೋಗುತ್ತಿದೆ. ಕಾವೇರಿ, ಮೇಕೆದಾಟು ವಿಷಯದಲ್ಲಿ ಅಲ್ಲಿನ ಸರ್ಕಾರ ಸದಾ ಕ್ಯಾತೆ ತೆಗೆಯುತ್ತಿದೆ. ನೆರೆಹೊರೆಯ ರಾಜ್ಯಗಳು ಹೇಗೆ ನಡೆದುಕೊಳ್ಳಬೇಕು ಎಂಬ ಪರಿಜ್ಞಾನವಿಲ್ಲದೆ ಅದು ವರ್ತಿಸುತ್ತಿದೆ. ಹೊಸೂರಿಗೆ ಮೆಟ್ರೋ ಮಾರ್ಗ ಎಳೆಯುವ ಅಗತ್ಯ ರಾಜ್ಯಕ್ಕಿಲ್ಲ. ಒಂದು ವೇಳೆ ರಾಜ್ಯ ಸರ್ಕಾರ ಈ ಯೋಜನೆ ಮುಂದುವರಿಸಲು ಒಪ್ಪಿದರೆ ನಾವು ಉಗ್ರ ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಮೊದಲು ನಮ್ಮ ಸಮಸ್ಯೆ ಬಗೆಹರಿಸಿ: ಸಂಜೀವ್‌

ನಗರ ಸಾರಿಗೆ ತಜ್ಞ ಸಂಜೀವ್‌ ದ್ಯಾವಣ್ಣವರ್‌ ಕೂಡ ಹೊಸೂರು ತನಕ ಮೆಟ್ರೋ ಒಯ್ಯುವುದು ಅವೈಜ್ಞಾನಿಕ ಎಂದು ಹೇಳುತ್ತಾರೆ. ನಮ್ಮ ಎಲ್ಲ ಸಾರಿಗೆ ಅವ್ಯವಸ್ಥೆಗಳಿಗೆ ಮೆಟ್ರೋ ಒಂದೇ ಪರಿಹಾರ ಎಂಬ ಭ್ರಮೆ ನಮ್ಮಲ್ಲಿದೆ. ಈ ಭ್ರಮೆಯ ಭಾಗವೇ ಹೊಸೂರಿಗೆ ಮೆಟ್ರೋ ಎಳೆಯಬೇಕು ಎಂಬ ಯೋಚನೆ. ಉಪನಗರಗಳನ್ನು ಸಂಪರ್ಕಿಸಲು ಮೆಟ್ರೋ ಸಾರಿಗೆ ಸೂಕ್ತವಲ್ಲ. ಇದರೊಂದಿಗೆ ನಗರದೊಳಗಿನ ತನ್ನ ಯೋಜನೆಗಳನ್ನು ಪೂರ್ಣಗೊಳಿಸಲು ಬಿಎಂಆರ್‌ಸಿಎಲ್‌ ಒದ್ದಾಡುತ್ತಿದೆ. ಹಾಗೆಯೇ ನಮ್ಮ ಮೆಟ್ರೋ ಸದ್ಯ ನಷ್ಟದಲ್ಲಿದೆ. ಈ ಸಮಸ್ಯೆಗಳನ್ನು ಪರಿಹರಿಸಬೇಕು. ಹಾಗೆಯೇ ಅನ್ಯ ರಾಜ್ಯದ ನಗರವೊಂದಕ್ಕೆ ಮೆಟ್ರೋ ಸೇವೆ ಒದಗಿಸುವುದಾದರೆ ಆ ಬಗ್ಗೆ ಕೇಂದ್ರ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಬೇಕೇ ಹೊರತು ರಾಜ್ಯ ಸರ್ಕಾರ ಉತ್ಸಾಹ ತೋರುವುದು ಸರಿಯಲ್ಲ ಎಂದು ಹೇಳುತ್ತಾರೆ.

click me!