ತಾವು ಸಚಿವರಾದ ನಂತರ ಕನ್ನಡದಲ್ಲಿ ರೈಲ್ವೆ ಪರೀಕ್ಷೆ ಬರೆಯಲು ಕಲ್ಪಿಸಿರುವುದರಿಂದ ಕನ್ನಡಿಗರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಬೆಂಗಳೂರು (ಅ.21): ತಾವು ಸಚಿವರಾದ ನಂತರ ಕನ್ನಡದಲ್ಲಿ ರೈಲ್ವೆ ಪರೀಕ್ಷೆ ಬರೆಯಲು ಕಲ್ಪಿಸಿರುವುದರಿಂದ ಕನ್ನಡಿಗರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ನಗರದ ಗಾಂಧಿ ಭವನದಲ್ಲಿ ಡಾ। ಸಿ.ಸೋಮಶೇಖರ - ಎನ್.ಸರ್ವಮಂಗಳ ಸಾಹಿತ್ಯ ಸೇವಾ ಪ್ರತಿಷ್ಠಾನ ಆಯೋಜಿಸಿದ್ದ 2024ನೇ ಸಾಲಿನ ‘ಸಂಸ್ಕೃತಿ ಸಂಗಮ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಕನ್ನಡಿಗರು ಹೆಚ್ಚು ಆಸಕ್ತಿ ವಹಿಸುತ್ತಿಲ್ಲ.
ರೈಲ್ವೆ ಇಲಾಖೆಯದ್ದು ಸೂಕ್ಷ್ಮ ಕೆಲಸವಾಗಿದ್ದು, ಕೆಲವೊಮ್ಮೆ ದಿನದ 24 ತಾಸು ಕೆಲಸ ಮಾಡಬೇಕಾಗುತ್ತದೆ ಎನ್ನುವ ಕಾರಣಕ್ಕೆ ಕನ್ನಡಿಗರು ರೈಲ್ವೆ ಕೆಲಸದ ಬಗ್ಗೆ ಆಸಕ್ತಿ ತೋರದಿರಬಹುದು. ರೈಲ್ವೆ ಕೆಲಸ ಒಂದು ರೀತಿ ರಕ್ಷಣಾ ಇಲಾಖೆಯಂತೆ ಸೂಕ್ಷ್ಮವಾದ ಕೆಲಸ. ಇಲ್ಲಿ ಉತ್ತರ ಭಾರತೀಯರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕನ್ನಡಿಗರು ಸಿವಿಲ್ ಸರ್ವೀಸಸ್‌ಗೆ ತೋರಿಸುವಷ್ಟು ಆಸಕ್ತಿಯನ್ನು ರೈಲ್ವೆ ಹುದ್ದೆಗಳ ಬಗ್ಗೆ ತೋರಿಸುತ್ತಿಲ್ಲ. ಈಗ ಕನ್ನಡದಲ್ಲೇ ರೈಲ್ವೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿರುವುದರಿಂದ ಕನ್ನಡಿಗರು ಇದರ ಉಪಯೋಗ ಮಾಡಿಕೊಳ್ಳಬೇಕು ಎಂದರು. ರಾಜಕಾರಣ ಯಾರೋ ಕೆಲವರ ಸ್ವತ್ತಲ್ಲ.
ನಿಷ್ಕಲ್ಮಷ ಭಾವನೆಯಿಂದ ಕೆಲಸ ಮಾಡುವವರಿಗೆ ಅವಕಾಶ ಸಿಕ್ಕೇ ಸಿಗುತ್ತದೆ. ಎರಡು ಕಡೆ ಸೋತಾಗ ನನ್ನ ಜೊತೆ ಯಾರೂ ಬರಲಿಲ್ಲ. ಆದರೆ, ಪ್ರಧಾನಿ ಮೋದಿ ಮತ್ತು ಬಿ.ಎಲ್. ಸಂತೋಷ ಅವರು ನನಗೆ ಅವಕಾಶ ನೀಡಿ ರೈಲ್ವೆ ಇಲಾಖೆಯ ಜವಾಬ್ದಾರಿ ನೀಡಿದ್ದಾರೆ. ರೈಲ್ವೆಯಲ್ಲಿ ಹೆಚ್ಚೆಚ್ಚು ಕೆಲಸ ಮಾಡಲು ಪ್ರಯತ್ನಿಸುತ್ತಿದ್ದೇನೆ ಎಂದರು. ತುಮಕೂರಿನ ಕಾಡುಗೊಲ್ಲರು, ಸುಡುಗಾಡು ಸಿದ್ದರು, ಚಾಮರಾಜನಗರದ ಸೋಲಿಗರನ್ನು ಮುಖ್ಯ ವಾಹಿನಿಗೆ ತರುವ ಪ್ರಯತ್ನ ನಡೆದಿದೆ. ಅದಕ್ಕೆ ರಾಜ್ಯ ಸರ್ಕಾರವು ಆದ್ಯತೆ ನೀಡಬೇಕು ಎಂದು ವಿ. ಸೋಮಣ್ಣ ಹೇಳಿದರು. ಚಲನಚಿತ್ರ ನಿರ್ದೇಶಕ ಟಿ.ಎನ್. ಸೀತಾರಂ ಮಾತನಾಡಿ, ಕೃತಕ ಬುದ್ಧಿಮತ್ತೆ (ಎಐ) ಈ ಕಾಲದಲ್ಲಿ ಸಾಹಿತ್ಯ, ಅಕ್ಷರದ ಭವಿಷ್ಯವನ್ನು ಕೂಡ ನಾವು ನೋಡಬೇಕಿದೆ.
ಯೋಗೇಶ್ವರ್ ಕಾಂಗ್ರೆಸ್ ಜತೆ ಸಂಪರ್ಕದಲ್ಲಿದ್ದಾರೆ: ಎಚ್.ಡಿ.ಕುಮಾರಸ್ವಾಮಿ
ಸಾಹಿತ್ಯಕ್ಕೆ ಶಕ್ತಿ ಇದೆಯೋ? ಇಲ್ಲವೋ ಎನ್ನುವುದನ್ನು ಎಐ ನಿರ್ಧರಿಸುವ ಭೀತಿ ಇದೆ. ನಾವು ಸೃಷ್ಟಿಸಿರುವುದು ನಮ್ಮನ್ನೇ ತಿನ್ನುವ ಪರಿಸ್ಥಿತಿ ಬರುತ್ತದೆ. ಹೀಗಾಗಿ, ಇಂತಹ ವೇದಿಕೆಗಳಲ್ಲಿ ಅದರ ಬಗ್ಗೆ ಚರ್ಚೆ ಮಾಡುತ್ತಿರಬೇಕು. ಸಾಹಿತ್ಯ ಕ್ಷೇತ್ರದಲ್ಲಿ ಎಐ ಅನ್ನು ಬಳಸಿಕೊಂಡು, ಅದರ ಜೊತೆಗೆ ಸಾಗಬೇಕು ಎನ್ನುವುದರ ಬಗ್ಗೆ ಚಿಂತಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಾಗನೂರು ರುದ್ರಾಕ್ಷಿಮಠದ ಡಾ। ಅಲ್ಲಮಪ್ರಭು ಸ್ವಾಮೀಜಿ, ಸಾಹಿತಿ ಡಾ। ಹಂ.ಪ.ನಾಗರಾಜಯ್ಯ, ಪ್ರತಿಷ್ಠಾನದ ಅಧ್ಯಕ್ಷ ಡಾ। ಸಿ.ಸೋಮಶೇಖರ ಉಪಸ್ಥಿತರಿದ್ದರು.