67 ಸಾಧಕರು, 10 ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ: ಮೊದಲ ಬಾರಿಗೆ ದೈವನರ್ತಕರಿಗೂ ಒಲಿದ ಪ್ರಶಸ್ತಿ

By Govindaraj S  |  First Published Oct 30, 2022, 7:57 PM IST

ಇಸ್ರೋ ಮಾಜಿ ನಿರ್ದೇಶಕ ಕೆ. ಶಿವನ್‌, ಹಿರಿಯ ಸಾಹಿತಿ ಅ.ರಾ.ಮಿತ್ರ, ಹಿರಿಯ ಕಲಾವಿದ ದತ್ತಣ್ಣ, ನಿವೃತ್ತ ಐಎಎಸ್‌ ಅಧಿಕಾರಿ ಎಂ.ಮದನ್‌ ಗೋಪಾಲ್‌ ಸೇರಿದಂತೆ 67 ಜನರಿಗೆ ರಾಜ್ಯ ಸರ್ಕಾರ ಪ್ರತಿಷ್ಠಿತ 2022ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಿದೆ.


ಬೆಂಗಳೂರು (ಅ.30): ಇಸ್ರೋ ಮಾಜಿ ನಿರ್ದೇಶಕ ಕೆ. ಶಿವನ್‌, ಹಿರಿಯ ಸಾಹಿತಿ ಅ.ರಾ.ಮಿತ್ರ, ಹಿರಿಯ ಕಲಾವಿದ ದತ್ತಣ್ಣ, ನಿವೃತ್ತ ಐಎಎಸ್‌ ಅಧಿಕಾರಿ ಎಂ.ಮದನ್‌ ಗೋಪಾಲ್‌ ಸೇರಿದಂತೆ 67 ಜನರಿಗೆ ರಾಜ್ಯ ಸರ್ಕಾರ ಪ್ರತಿಷ್ಠಿತ 2022ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಿದೆ.

ಇದರೊಂದಿಗೆ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಮೈಸೂರಿನ ರಾಮಕೃಷ್ಣ ಆಶ್ರಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ 10 ಸಂಘ-ಸಂಸ್ಥೆಗಳಿಗೆ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯು ಐದು ಲಕ್ಷ ರು. ನಗದು, 25 ಗ್ರಾಂ ಚಿನ್ನ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ. ಪ್ರಶಸ್ತಿಯನ್ನು ಕರ್ನಾಟಕ ರಾಜ್ಯೋತ್ಸವ ದಿನವಾದ ಮಂಗಳವಾರ ಸಂಜೆ ಬೆಂಗಳೂರಿನಲ್ಲಿ ಪ್ರದಾನ ಮಾಡಲಾಗುತ್ತದೆ.

Tap to resize

Latest Videos

ರಾಯಚೂರಿನ ಇಬ್ಬರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ, ವಿಶೇಷ ಕ್ಷೇತ್ರದಲ್ಲಿ ಸಾಧನೆ

ಈ ಹಿಂದಿನ ವರ್ಷಗಳಂತೆ ಪ್ರಶಸ್ತಿಗೆ ಅರ್ಜಿ ಆಹ್ವಾನಿಸದೇ ಈ ಬಾರಿ ರಾಜ್ಯ ಸರ್ಕಾರವೇ ಪ್ರಶಸ್ತಿ ಆಯ್ಕೆ ಸಲಹಾ ಸಮಿತಿಯನ್ನು ರಚಿಸಿತ್ತು. ಸಮಿತಿಯ ಸದಸ್ಯರು ಎಲೆಮರೆ ಕಾಯಿಯಂತಿರುವ ಸಾಧಕರನ್ನು ರಾಜ್ಯದ ಎಲ್ಲೆಡೆ ಹುಡುಕಿ, ಸಾಧಕರ ಪಟ್ಟಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಅಂದರಂತೆಯೇ ಸಾಮಾನ್ಯರಾಗಿದ್ದುಕೊಂಡು ಅಸಾಮಾನ್ಯ ಕೆಲಸ ಮಾಡಿದವರು, ಸಮಾಜದ ನಾನಾ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದವರು, ತೆರೆಮರೆಯಲ್ಲಿದ್ದ ಅರ್ಹ ಸಾಧಕರು, ಸಮಾಜದ ಹಿತಕ್ಕಾಗಿ ಗಣನೀಯ ಸೇವೆ ಸಲ್ಲಿಸಿದ ಹತ್ತು ಸಂಘ-ಸಂಸ್ಥೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಜನಸಾಮಾನ್ಯರು ಆಯ್ಕೆ: ತೆರೆಮರೆಯಲ್ಲಿ ಸಾಧನೆ ಮಾಡಿದ ಜನಸಾಮಾನ್ಯರನ್ನು ಗುರುತಿಸುವಲ್ಲಿ ರಾಜ್ಯೋತ್ಸವ ಸಮಿತಿ ವಿಶೇಷ ಗಮನ ನೀಡಿದೆ. ಚಾಮರಾಜನಗರದ ಸೋಲಿಗರ ಮಾದಮ್ಮ, ಪೌರ ಸೇನಾನಿ ಮಲ್ಲಮ್ಮ, ಉಡುಪಿಯ ದೈವನರ್ತಕ ಗುಡ್ಡ ಪಾಣಾರ್‌, ಪರಿಸರ ಸಂರಕ್ಷಕ ಸಾಲುಮರದ ನಿಂಗಣ್ಣ, ದೊಡ್ಡಾಟ ಕಲಾವಿದ ಅಡವಯ್ಯ ಚ ಹಿರೇಮಠ್‌, ಮುಖವೀಣೆ ಕಲಾವಿದ ಅಂಜನಪ್ಪ ಸತ್ಪಾಡಿ ಅವರು ಪ್ರಶಸ್ತಿ ಪಟ್ಟಿಯಲ್ಲಿದ್ದಾರೆ.

ಸಚಿವರ ಜಿಲ್ಲೆಗೆ ಹೆಚ್ಚು: ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್‌ಕುಮಾರ್‌ ಪ್ರತಿನಿಧಿಸುವ ಉಡುಪಿ ಜಿಲ್ಲೆಗೆ ಅತಿ ಹೆಚ್ಚು ನಾಲ್ಕು ಪ್ರಶಸ್ತಿಗಳು ದೊರೆತಿವೆ. ಎರಡನೇ ಅತಿ ಹೆಚ್ಚು ಪ್ರಶಸ್ತಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿ ಮತ್ತು ಬೆಳಗಾವಿ ತಲಾ ಮೂರು ಪ್ರಶಸ್ತಿ, ರಾಯಚೂರು, ಕಲಬುರಗಿ, ಶಿವಮೊಗ್ಗ, ಮೈಸೂರು ಜಿಲ್ಲೆಗೆ ತಲಾ ಎರಡು ಪ್ರಶಸ್ತಿ ಉಳಿದಂತೆ 22 ಎಲ್ಲಾ ಜಿಲ್ಲೆಗಳಿಗೂ ತಲಾ ಒಂದು ಪ್ರಶಸ್ತಿ ದೊರೆತಿದೆ.

10 ಸಂಘ ಸಂಸ್ಥೆಗಳಿಗೆ ಪ್ರಶಸ್ತಿ: ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಹತ್ತು ಸಮಾಜ ಸೇವಾ ಸಂಘಟನೆಗಳನ್ನು ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಮೈಸೂರಿನ ರಾಮಕೃಷ್ಣ ಆಶ್ರಮ, ಬೆಂಗಳೂರಿನ ಅಮೃತ ಶಿಶು ನಿವಾಸ, ಸುಮನಾ ಪೌಂಡೇಶನ್‌, ಹಾವೇರಿಯ ಅಗಡಿ ತೋಟ, ಗದಗ ಜಿಲ್ಲೆಯ ಲಿಂಗಾಯತ ಪ್ರಗತಿಶೀಲ ಸಂಸ್ಥೆ ಸೇರಿದಂತೆ ಹತ್ತು ಸಾಮಾಜಿಕ ಸಂಘಟನೆಯನ್ನು ಆಯ್ಕೆ ಮಾಡಲಾಗಿದೆ.

ಪುನೀತ್ ರಾಜ್‌ಕುಮಾರ್​ಗೆ ಕರ್ನಾಟಕ ರತ್ನ: ಸ್ಯಾಂಡಲ್​ವುಡ್‌ನ ಪವರ್  ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕನ್ನಡ ರಾಜ್ಯೋತ್ಸವ ದಿನದಂದು ಪ್ರದಾನ ಮಾಡುವುದಾಗಿ ಹಿಂದೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಈ ಕಾರ್ಯಕ್ರಮಕ್ಕೆ ಜೂನಿಯರ್ ಎನ್‍ಟಿಆರ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಅಲ್ಲದೇ ಸೂಪರ್ ಸ್ಟಾರ್ ರಜನಿಕಾಂತ್ ಸಹ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.

ಬಡವರ ಪಾಲಿನ ವೈದ್ಯ ದೇವತೆ, ದಾವಣಗೆರೆ ವೈದ್ಯ‌ನಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

ಈ ಬಾರಿ ಕೇಂದ್ರ ಸರ್ಕಾರದ ಪದ್ಮ ಪ್ರಶಸ್ತಿ ಮಾದರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದೆ. ಎಲೆಮರೆಯ ಸಾಧಕರು ಹಾಗೂ ಅಸಾಮಾನ್ಯ ಸಾಧನೆ ಮಾಡಿದ ಶ್ರೀಸಾಮಾನ್ಯರನ್ನು ಗುರುತಿಸಿದ್ದೇವೆ. ಬಹುತೇಕರು ತಮ್ಮ ಕ್ಷೇತ್ರಗಳಲ್ಲಿ ಪ್ರಚಾರ ಬಯಸದೇ ಕಾರ್ಯನಿರ್ವಹಿಸುತ್ತಿದ್ದರು. ದೈವ ನರ್ತಕರು ಹಾಗೂ ವೀರಗಾಸೆ ಕಲಾವಿದರು, ಪೌರ ಸೇನಾನಿಗಳನ್ನು ಗೌರವಿಸಿದ್ದೇವೆ.
- ವಿ.ಸುನೀಲ್‌ ಕುಮಾರ್‌, ಕನ್ನಡ ಮತ್ತು ಸಂಸ್ಕೃತಿ ಸಚಿವ

click me!