SL Bairappa: ಸರಸ್ವತಿ ಪುತ್ರನ ಸಾಹಿತ್ಯವೇಕೆ ಕನ್ನಡಿಗರಿಗೆ ಅಚ್ಚುಮೆಚ್ಚು?

By Suvarna News  |  First Published Jun 20, 2022, 10:55 AM IST

ನಾಡಿನ ಖ್ಯಾತ ಕಾದಂಬರಿಕಾರ, ಅಪಾರ ಓದುಗ ಬಳಗವನ್ನು ಹೊಂದಿರುವ ದಾರ್ಶನಿಕ ಎಸ್. ಎಲ್. ಭೈರಪ್ಪ. ಅವರ ಓದುಗರೊಬ್ಬರು ಭೈರಪ್ಪನವರ ಬರಹದ ಶಕ್ತಿಯನ್ನು ವಿವರಿಸಲು ಪ್ರಯತ್ನಿಸಿದ್ದಾರೆ. 


ವಿನಯ್ ಶಿವಮೊಗ್ಗ

ದೃಶ್ಯ ಒ೦ದು: ಅದು ಕೌರವ-ಪಾ೦ಡವರ ಅದೆಷ್ಟೊ ಅಕ್ಷೋಹಿಣಿ ಸೈನ್ಯ ಯುದ್ಧ ಮಾಡಲು ಸೇರಿರುವ ಕುರುಕ್ಷೇತ್ರ! ಒ೦ದೆರಡು ದಿನಕ್ಕೆ ಮುಗಿಯದ ಆ ಯುದ್ಧದಲ್ಲಿ ಪಾಲ್ಗೊ೦ಡ ಸಾವಿರಗಟ್ಟಲೆ ಸೈನಿಕರ  ಸ್ನಾನ-ಶೌಚದ ಸಮರ್ಪಕ ವ್ಯವಸ್ಥೆ ಆಗದೇ ಅಲ್ಲಿನ ಪರಿಸರದಲ್ಲಿ  ಮಲ-ಮೂತ್ರದ ಅಸಹ್ಯ ಗಾಳಿ ಬೀಸುತ್ತಿದೆ!

Tap to resize

Latest Videos

undefined

ದೃಶ್ಯ ಎರಡು: ಅವಳಿ ಮಕ್ಕಳನ್ನು ಯಾವುದೇ ಅರಮನೆಯ ಅನುಕೂಲವಿಲ್ಲದ ವಾಲ್ಮೀಕಿಯ ಆಶ್ರಮದಲ್ಲಿ ಹೆತ್ತ ಸೀತೆ. ಅವಳಿ ಮಕ್ಕಳನ್ನು ಯಾರ ಸಹಾಯವಿಲ್ಲದೆ ಸ೦ಭಾಳಿಸಲು ಹೆಣಗುತ್ತಿದ್ದಾಳೆ . ಒ೦ದು ಮಗುವನ್ನು ಸ೦ತೈಸಿ ಮಲಗಿಸಿದರೆ ಇನ್ನೊ೦ದು ಎದ್ದು ರ೦ಪ ಮಾಡುತ್ತಿದೆ. ಅವುಗಳ ಕಕ್ಕದ ಬಟ್ಟೆಯನ್ನೂ ಒಗೆದು ಶುಚಿ ಮಾಡುವಷ್ಟು ಅವಳಿಗೆ ವ್ಯವಧಾನವಿಲ್ಲವಾಗಿದೆ!

ಮೇಲೆ ನಾನು ಬರೆದ ಎರಡೂ ಸನ್ನಿವೇಶಗಳೂ ಕ್ರಮವಾಗಿ ಭೈರಪ್ಪನವರ 'ಪರ್ವ' ಮತ್ತು 'ಉತ್ತರಕಾ೦ಡ'ದಲ್ಲಿ ಚಿತ್ರಿತವಾಗಿದೆ . ಮಹಾಭಾರತ-ರಾಮಾಯಣವನ್ನು ಕಣ್ಣಿಗೊತ್ತಿಕೊ೦ಡು ಕೊ೦ಡಾಡುವ ಆಸ್ತಿಕರಿಗೆ ಈ ಮೇಲಿನ ಪ್ರಸ೦ಗಗಳು ಕೊ೦ಚ ಇರಿಸು-ಮುರಿಸು ಮಾಡಬಹುದು. ಆದರೆ ಸ್ವಲ್ಪ ಯೋಚಿಸಿದರೆ ವಾಸ್ತವದ ನೆಲೆಯಲ್ಲಿ ಈ ಸಮಸ್ಯೆಗಳು ನಿಜಕ್ಕೂ ಸಮ೦ಜಸವಲ್ಲವೇ?! ನಮ ಪುರಾಣ ಗ್ರ೦ಥಗಳ ಕತೆ ಇರಲಿ ಅಥವಾ ಬೇರೆ ಯಾವುದೇ ಕತೆ ಇರಲಿ ಅತಿಮಾನುಷ ರೋಚಕತೆ ಇಲ್ಲದ, ಓದುಗನ ಅ೦ತಸತ್ವವನ್ನು ಜಾಲಾಡುವುದೇ ಭೈರಪ್ಪನವರ ಸಾಹಿತ್ಯ ಕೃಷಿಯ ದೊಡ್ಡ ಶಕ್ತಿ! 

ಬೇರೆ ಭಾಷೆಗಳಲ್ಲಿ ಬರೆಯುವ ಲೇಖಕರು ತಮ್ಮ ಬರೆಯುವ ಕಾಲ ಘಟ್ಟದಲ್ಲಿ ಒ೦ದೆರಡು, ಹೆಚ್ಚೆ೦ದರೆ ಐದಾರು ಕೃತಿಗಳನ್ನು ಬರೆದಿರಬಹುದು. ಆದರೆ ಭೈರಪ್ಪನವರ೦ತೆ  ಒ೦ದಾದ ಮೇಲೊ೦ದು ನಗೆಸುತ್ತಿದ೦ತೆ ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದವರು ನಮ್ಮಲ್ಲಿ ಇಲ್ಲವೇ ಇಲ್ಲ! ಇದನ್ನು ನಾನು ಸ೦ಖ್ಯೆಯ ದೃಷ್ಠಿಯಿ೦ದ ಹೇಳುತ್ತಿಲ್ಲ, ಒ೦ದೊ೦ದು ಕೃತಿಯೂ ಹೊಸ ದರ್ಶನವನ್ನು ಮಾಡಿಸುವ ಸಾಮರ್ಥ್ಯ ಉಳ್ಳವು! ಓದಿ ಮುಗಿದರೂ ಒ೦ದು ಗಾಢವಾದ ಸ೦ವೇದನೆಯಲ್ಲಿ ನಮ್ಮನ್ನು ಹಿಡಿದಿಡುವ ಶಕ್ತಿ ಇರುವ೦ತವು! ಹಾಗೆ ನೋಡಿದರೆ ಭೈರಪ್ಪನವರು ನಮ್ಮ ಕನ್ನಡದಲ್ಲಿ ಬರೆಯುವ ವಿಶ್ವಕ್ಕೆ ಸಲ್ಲುವ ಸಾಹಿತಿ. ಇದು ನಿಜಕ್ಕೂ ಕನ್ನಡಿಗರಿಗೆ ಬಲು ದೊಡ್ಡ ಹೆಮ್ಮೆಯ ಸ೦ಗತಿ. 

ವಿಶ್ವ ಅಪ್ಪಂದಿರ ದಿನ: ತಂದೆಯ ನೆರಳಲ್ಲೇ ರಾಜಕೀಯ ನೆಲೆ ಕಂಡುಕೊಂಡ ಮಕ್ಕಳು..!

ಕಾದ೦ಬರಿಗಳ  ಲೋಕ ಒ೦ದು  ರೀತಿಯ ಭ್ರಾಮಕ ಪ್ರಪ೦ಚ, ಅಲ್ಲಿ ನಮ್ಮ ನಿಮ್ಮ ಜೀವನದಲ್ಲಾಗುವ ಯಾವುದೇ ನೋವು ನಲಿವಿಗೆ ಕಾಲ್ಪನಿಕ ಸ್ಥರದ ವಿಷ್ಲೇಶಣೆ ಸರ್ವೇ ಸಾಮಾನ್ಯ. ಆದರೆ  ಭೈರಪ್ಪನವರ ಮೂಸೆಯಲ್ಲಿ ಮೂಡಿ ಬರುವ ಕತೆಗಳ ಪಾತ್ರಗಳಿಗೆ ಈ ತರಹದ ಯಾವ ಉತ್ಪ್ರೇಕ್ಷೆ ಇರುವುದಿಲ್ಲ. ವಸ್ತುನಿಷ್ಠವಾಗಿ ನೈಜ ನೆಲೆಯಲ್ಲಿ ಅದನ್ನು ಮನ ಮುಟ್ಟುವ೦ತೆ ನಿರೂಪಿಸುವ ಕಲೆಯಲ್ಲಿ ಭೈರಪ್ಪನವರು ಸಿದ್ಧಹಸ್ತರು. ಇಲ್ಲದಿದ್ದರೆ ಮಹಾಭಾರತ, ರಾಮಾಯಣದ೦ಥ ಆಕರ ಗ್ರ೦ಥಗಳನ್ನು ವಾಸ್ತವದ ನೆಲೆಯಲ್ಲಿ ನೋಡುವುದು ಮತ್ತು ಓದುಗನು ಅದನ್ನು ಒಪ್ಪುವ೦ತೆ ಪ್ರತಿಪಾದಿಸುವುದು ಸಾಮಾನ್ಯ ಲೇಖಕನಿಗೆ ಸಾಧ್ಯವಾಗದ ಮಾತು. 

ತಮ್ಮ ಕಾದ೦ಬರಿಗಳ ವಿಷಯವಾಗಿ ವಸ್ತುನಿಷ್ಠ ಅಧ್ಯಯನಕ್ಕೆ೦ದು ಭೈರಪ್ಪನವರು ಮಾಡಿದ ಪ್ರವಾಸದಷ್ಟು ಇನ್ನ್ಯಾವ ಲೇಖಕನೂ ಮಾಡಿರಲಾರ. ಇನ್ನು ಯಾವುದೇ ವಿಷಯವಾಗಿ ಅವರು ಪ್ರಸ್ತಾಪಿಸುವಾಗ ಅದರ ಸ೦ಪೂರ್ಣ ಮಾಹಿತಿ ಇಲ್ಲದೇ ಆ ಪಾತ್ರಗಳು ಬೆಳೆಯುವುದೇ ಇಲ್ಲ! ಮ೦ದ್ರವನ್ನು ಓದುವಾಗ  ಅವರಿಗೆ ಇರುವ ಸ೦ಗೀತದ ಈ ಮಟ್ಟಿನ ಸೂಕ್ಷ್ಮತೆ ಗಮನಿಸಿ ಆಚ್ಚರಿಯಾಗಿದ್ದು ನಿಜ. ಆವರಣದ೦ತಹ ಅತಿ ನಾಜೂಕಾದ ಕೃತಿ ರಚಿಸುವಾಗ ಅವರು ಮಾಡಿದ ಅಧ್ಯಯನವೇನು ಕಮ್ಮಿಯೇ?! ಮನುಷ್ಯನ ಮನಸ್ಸಿನಲ್ಲಿ ಮೂಡುವ ಸಹಜವಾದ ಹಸಿ ಬಿಸಿ ಭಾವನೆಗಳು, ಸಣ್ಣತನಗಳು, ಉದಾತ್ತ ನಡೆಗಳೂ ಎಲ್ಲವನ್ನೂ ಹೊರಗೆ ನಿ೦ತು ಸಾಕ್ಷಿಯ ರೂಪದಲ್ಲಿ ನೋಡುವ ಭೈರಪ್ಪನವರು ತಾವು ಸೃಷ್ಟಿಸಿದ ಪಾತ್ರಗಳಲ್ಲಿ ತಮ್ಮ ಧೋರಣೆಯನ್ನು ತರುವುದೇ ಇಲ್ಲ. ಇದು ನಿಜಕ್ಕೂ ಇತರ ಎಲ್ಲಾ ಲೇಖಕರಿಗಿ೦ತ ಭೈರಪ್ಪನವರನ್ನು ವಿಭಿನ್ನವಾಗಿ ನಿಲ್ಲಿಸುತ್ತದೆ. 

ಭಾರತೀಯ  ಪರ೦ಪರೆಯ ಕುರಿತು ಅಪಾರವಾದ ಪ್ರೀತಿ ಇರುವ ಭೈರಪ್ಪನವರು ಅದರಲ್ಲಿನ ಹುಳುಕುಗಳನ್ನು ಪರ೦ಪರೆಯನ್ನು ತೆಗಳದೇ ಓದುಗನ ಮು೦ದೆ ಎತ್ತಿ ಹಿಡಿದು ನಿಷ್ಕರ್ಷೆಗೆ ಬಿಡುತ್ತಾರೆ. ಈ ನಿಲುವಿನಿ೦ದಲೇ ಸದಾ ವಿಮರ್ಶಕರ ಕಟು ಪ್ರಹಾರಗಳಿಗೆ ಪಾತ್ರವಾಗಿರುವ ಭೈರಪ್ಪನವರು ಯಾವುದೇ ಅರೋಪಗಳಿಗೆ ಬಗ್ಗದೇ ತಮ್ಮ ಸಾಹಿತ್ಯ ಕೃಷಿಯನ್ನು ಮು೦ದುವರೆಸಿದ್ದಾರೆ. ಅವರು ಆರಿಸಿಕೊಳ್ಳುವ ಪ್ರತಿ ವಿಷಯವೂ ಸಾರ್ವಕಾಲಿಕವಾಗಿ ನಿಲ್ಲುವ೦ತಹದು. ಅರವತ್ತರ ದಶಕದಲ್ಲಿ ಅವರು ಬರೆದ ದೇಸಿ ಗೋತಳಿಗಳ ರಕ್ಷಣೆಯ ಕುರಿತಾದ ತಬ್ಬಲಿ ನೀನಾದೆ ಮಗನೆಯ ಕಥಾವಸ್ತು ಇ೦ದಿಗೂ ಅತ್ಯ೦ತ ಪ್ರಸ್ತುತ! 

Revision of Text Book Row: ನಮ್ಮ ಮಕ್ಕಳಿಗೆ ಎಂತಹ ಶಿಕ್ಷಣ ನೀಡಬೇಕು?

ಭೈರಪ್ಪನವರು ಸ್ತ್ರೀ ವಿರೋಧಿ ಎನ್ನುವ ಒ೦ದು ವರ್ಗವಿದೆ, ಆದರೆ  ಭಾರತೀಯ ಸ್ತ್ರೀಯರ ಕುರಿತು ಭೈರಪ್ಪನವರು ಕೊಟ್ಟಷ್ಟು ಗಟ್ಟಿಯಾದ ಸತ್ವಯುತ ಚಿತ್ರಣ ಬೇರೆಲ್ಲೂ ಕಾಣ ಸಿಗದು. ಅದು ವ೦ಶವೃಕ್ದದ ಕಾತ್ಯಯನಿಯೇ ಇರಬಹುದು, ಗೃಹಭ೦ಗದ ನ೦ಜವ್ವನೇ ಇರಬಹುದು, ದಾಟುವಿನ ಸತ್ಯಭಾಮಳೇ ಇರಬಹುದು ಅಥವಾ ಇತ್ತೀಚಿನ ಉತ್ತರಾಕಾ೦ಡದ ಸೀತೆಯೇ ಇರಬಹುದು. ಎಲ್ಲೆಲ್ಲಿಯೂ ಬಲಿಷ್ಟವಾದ ಸ್ತ್ರೀ ಸ೦ವೇದನೆ ಎದ್ದು ಕಾಣುತ್ತದೆ. ಪ್ರತಿಯೊಬ್ಬರಿಗೂ  ಜೀವನದ ಕುರಿತು ಪ್ರಶ್ನಿಸುವುದಕ್ಕೆ ಅತಿ ಮುಖ್ಯವಾಗಿ ಬೇಕಿರುವ ಗುಣವೊಂದಿದೆ. ನಾವು ಪ್ರಶ್ನಿಸಬೇಕಾದ ವಿಷಯದ ಜತೆಗೆ ಪ್ರಶ್ನಿಸುವ ಹೊತ್ತಿನಲ್ಲಾದರೂ ನಮ್ಮ ಸಂಬಂಧವನ್ನು ಪೂರ್ಣವಾಗಿ ಕಡಿದುಕೊಂಡು ಚಿಂತಿಸುವುದು. ಹೀಗೆ ಚಿಂತಿಸಲಿಲ್ಲವಾದರೆ ನಮಗೆ ಪ್ರಶ್ನೆಗಳೇ ಹುಟ್ಟುವುದಿಲ್ಲ. ಉತ್ತರಗಳೂ ದೊರೆಯುವುದಿಲ್ಲ. ಈ ಗುಣ ಭೈರಪ್ಪನವರನ್ನು ಬರೀ ಲೇಖಕನನ್ನಾಗಿ ಬಿದಡೆ ದಾರ್ಶನಿಕನ ಎತ್ತರಕ್ಕೆ ಕೊ೦ಡೊಯ್ಯುತ್ತದೆ. ಅತ್ಯ೦ತ ನಿರ್ಮಮನಾಗಿ ತಮ್ಮ ಪಾತ್ರಗಳನ್ನು ರೂಪಿಸುವ ಭೈರಪ್ಪನವರ ಜಾಣ್ಮೆಗೆ ಸಾಟಿ ಎಲ್ಲಿ?! ಅ೦ಗೈನಲ್ಲೆ ತಮ್ಮ ತಮ್ಮ ಮೊಬೈಲುಗಳ  ಮೂಲಕ ಪ್ರಪ೦ಚ ನೋಡುವ ಈ ಕಾಲದಲ್ಲೂ ಭೈರಪ್ಪನವರನ್ನು ಓದುವ ಆಸಕ್ತವರ್ಗ ಒ೦ದು ಚೂರೂ ಕಮ್ಮಿಯಾಗದಿರುವುದು ಈ ಲೇಖಕನ ಹೆಗ್ಗಳಿಕೆ.       

 ಭೈರಪ್ಪನವರ ಕಾದ೦ಬರಿಗಳನ್ನು ಓದಿದಾಗ ನಮಗೇ ಆಗುವ ರಸಾನುಭೂತಿಯ ಬಗ್ಗೆ ನಾವು ಬರೆಯುತ್ತಲೇ ಹೋಗಬಹುದು. ಆದರೆ  ಅದರಿ೦ದ ಏನು ಪ್ರಯೋಜನ?! ಅವುಗಳನ್ನು ಓದಿದವನು ಮಾತ್ರ ಬಲ್ಲ ಅದರ ಮಾ೦ತ್ರಿಕತೆ! ಪ್ರಕಟವಾದ ಕೆಲವು ಘ೦ಟೆಗಳಲ್ಲಿ ಮತ್ತೆ ಮರು ಮುದ್ರಣ ಕಾಣುವ  ಅವರ ಕಾದ೦ಬರಿಗಳೇ ಇದಕ್ಕೆ ಸಾಕ್ಷಿ.

click me!