
ಗಿರೀಶ್ ಮಾದೇನಹಳ್ಳಿ
ಬೆಂಗಳೂರು(ಜೂ.20): ರಾಜ್ಯದ ಭ್ರಷ್ಟ ಸರ್ಕಾರಿ ಅಧಿಕಾರಿಗಳ ಮೇಲೆ ಕಾರ್ಯಾಚರಣೆ ಮತ್ತು ತನಿಖೆ ನಡೆಸಲು ಮತ್ತೆ ಸಿಬ್ಬಂದಿ ಕೊರತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಕಾಡುತ್ತಿದ್ದು, ಹೊಸದಾಗಿ ಓರ್ವ ಡಿವೈಎಸ್ಪಿ ಸೇರಿದಂತೆ 140 ಪೊಲೀಸರನ್ನು ನೇಮಕಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಎಸಿಬಿ ಪ್ರಸ್ತಾವನೆ ಸಲ್ಲಿಸಿದೆ.
ಒಂದೆಡೆ ಎಸಿಬಿಗೆ ದಿನೇ ದಿನೇ ಲಂಚಬಾಕ ಅಧಿಕಾರಿಗಳ ವಿರುದ್ಧ ಸಾರ್ವಜನಿಕರಿಂದ ದಾಖಲೆ ಪ್ರಮಾಣದಲ್ಲಿ ದೂರುಗಳು ಸಲ್ಲಿಕೆಯಾಗುತ್ತಿದ್ದರೆ, ಮತ್ತೊಂದೆಡೆ ಭ್ರಷ್ಟ ಸರ್ಕಾರಿ ಅಧಿಕಾರಿಗಳ ಬಗ್ಗೆ ಸ್ವತಃ ಮಾಹಿತಿ ಸಂಗ್ರಹಿಸಿ ಎಸಿಬಿ ಕಾರ್ಯಾಚರಣೆಗಳು ಹೆಚ್ಚಾಗುತ್ತಿವೆ. ಇದರ ಪರಿಣಾಮ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಎಸಿಬಿಯಲ್ಲಿ ಪ್ರತಿ ವರ್ಷ 300ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಆದರೆ ಇವುಗಳ ಸಕಾಲಕ್ಕೆ ತನಿಖೆ ಪೂರ್ಣಗೊಳಿಸಲು ಎಸಿಬಿಗೆ ಪ್ರಮುಖವಾಗಿ ಸಿಬ್ಬಂದಿ ಅಭಾವವು ಬಹುದೊಡ್ಡ ಅಡ್ಡಿಯಾಗಿದೆ.
ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂ ಬೆಳಗ್ಗೆ ಎಸಿಬಿ ಬಿಗ್ ಶಾಕ್: ರಾಜ್ಯದ 80 ಕಡೆ ದಾಳಿ!
ಆರು ವರ್ಷಗಳ ಹಿಂದೆ ಎಸಿಬಿಗೆ ಎಡಿಜಿಪಿ, ಐಜಿಪಿ, ಎಸ್ಪಿ ಸೇರಿದಂತೆ ಒಟ್ಟು 447 ಅಧಿಕಾರಿ ಮತ್ತು ಸಿಬ್ಬಂದಿಯನ್ನು ಸರ್ಕಾರವು ನೇಮಿಸಿತ್ತು. ಹಲವು ಬಾರಿ ಖಾಲಿ ಹುದ್ದೆಗಳು ಮಾತ್ರವಲ್ಲ ಹೊಸದಾಗಿ ಹುದ್ದೆಗಳನ್ನು ಸೃಜಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಆದರೆ ಸರ್ಕಾರದಿಂದ ನಿರೀಕ್ಷಿತ ಮಟ್ಟದ ಪ್ರತಿಕ್ರಿಯೆ ಬಂದಿಲ್ಲ. ಕೆಲವು ಸಂದರ್ಭಗಳಲ್ಲಿ ತನಿಖಾಧಿಕಾರಿಯಾಗಿರುವ ಡಿವೈಎಸ್ಪಿ ಮಟ್ಟದ ಅಧಿಕಾರಿಯೇ ಟೈಪಿಂಗ್ ಕೆಲಸ ಕೂಡ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.
2021ರಲ್ಲಿ 314 ಪ್ರಕರಣಗಳು ದಾಖಲಾಗಿದ್ದರೆ, ಈ ವರ್ಷ ಆರು ತಿಂಗಳಲ್ಲೇ 277 ಪ್ರಕರಣಗಳು ದಾಖಲಾಗಿವೆ. ಬಿಡಿಎ ಹಾಗೂ ಬಿಬಿಎಂಪಿ ವಿರುದ್ಧ 40 ಸಾವಿರಕ್ಕೂ ಅಧಿಕ ದೂರುಗಳು ಸಾರ್ವಜನಿಕರಿಂದ ಸಲ್ಲಿಕೆಯಾಗಿದ್ದವು. ಇವುಗಳನ್ನು ಸೂಕ್ತ ತನಿಖೆ ನಡೆಸಿ ಇತ್ಯರ್ಥಪಡಿಸಲು ಸಿಬ್ಬಂದಿ ಅಗತ್ಯವಿದೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಬಲವರ್ಧನೆ ಮಾಡಿ :
ರಾಜ್ಯದಲ್ಲಿ ಭ್ರಷ್ಟವ್ಯವಸ್ಥೆಯನ್ನು ತೊಲಗಿಸಬೇಕಾದರೆ ಎಸಿಬಿ ಬಲವರ್ಧನೆಗೆ ಸರ್ಕಾರ ಪ್ರಾಮಾಣಿಕತೆ ತೋರಬೇಕಿದೆ. ಆರ್ಥಿಕ ಕಾರಣ ಮುಂದಿಟ್ಟು ಹೊಸ ಹುದ್ದೆಗಳ ಸೃಜಿಸಲು ಸರ್ಕಾರ ಹಿಂದೇಟು ಹಾಕಿದೆ. ಪ್ರಸುತ್ತ ಎಸಿಬಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸರಿಗೆ ಮುಂಬಡ್ತಿ ನೀಡಲಾಗುತ್ತಿಲ್ಲ. ಇದರಿಂದ ಸಿಬ್ಬಂದಿ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರುತ್ತಿದೆ. ಲೋಕಾಯುಕ್ತ ಪೊಲೀಸರು ತನಿಖೆ ಅಧಿಕಾರ ಕಳೆದುಕೊಂಡ ಬಳಿಕ ಭ್ರಷ್ಟರ ವಿರುದ್ಧ ಕಾರ್ಯಾಚರಣೆಗೆ ಎಸಿಬಿಗೆ ಶಕ್ತಿ ತುಂಬಲೇಕೆ ಸರ್ಕಾರ ಹಿಂದೇಟು ಹಾಕಿದೆ ಎಂಬುದು ಪ್ರಶ್ನೆಯಾಗಿದೆ. ಏಳೆಂಟು ತಿಂಗಳಿಂದ ಬಿಡಿಎ, ಬಿಬಿಎಂಪಿ, ಕಂದಾಯ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳ ಮೇಲೆ ಎಸಿಬಿ ದಿಢೀರ್ ದಾಳಿಗಳು ಹೆಚ್ಚು ಮಾಡುತ್ತಿದೆ. ತನ್ಮೂಲಕ ಭ್ರಷ್ಟಸರ್ಕಾರಿ ವಲಯದಲ್ಲಿ ಸಂಚಲನ ಮೂಡಿಸಿದೆ. ಎಸಿಬಿ ವೇಗಕ್ಕೆ ಸಿಬ್ಬಂದಿ ಮೂಲಕ ಸರ್ಕಾರ ಇಂಧನ ತುಂಬಬೇಕಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ವಿಜಯನಗರ ಜಿಲ್ಲೆಗೆ ಇಲ್ಲ ಎಸಿಬಿ ಅಧಿಕಾರಿ
ರಾಜ್ಯದ 31ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದ ವಿಜಯನಗರ ಜಿಲ್ಲೆಗೆ ಪೊಲೀಸರು, ಕಂದಾಯ ಸೇರಿದಂತೆ ಎಲ್ಲ ಅಧಿಕಾರಿಗಳನ್ನು ನೇಮಿಸಲು ಬಹಳ ಮುತುವರ್ಜಿ ತೋರಿದ ಸರ್ಕಾರವು, ಭ್ರಷ್ಟರ ಬೇಟೆಯಾಡುವ ಎಸಿಬಿ ಅಧಿಕಾರಿ ನಿಯೋಜನೆಗೆ ಆರ್ಥಿಕ ಕಾರಣ ನೀಡಿ ಹಿಂದೇಟು ಹಾಕಿರುವ ಸಂಗತಿ ಬೆಳಕಿಗೆ ಬಂದಿದೆ. ಹೊಸ ಜಿಲ್ಲೆ ರಚನೆಯಾಗಿ ಏಳೆಂಟು ತಿಂಗಳು ಕಳೆದರೂ ಸಹ ವಿಜಯನಗರ ಜಿಲ್ಲೆಗೆ ಎಸಿಬಿ ಅಧಿಕಾರಿಯನ್ನು ನೇಮಿಸಿಲ್ಲ. ಈಗ ಬಳ್ಳಾರಿ ಅಧಿಕಾರಿಗಳಿಗೆ ವಿಜಯನಗರ ಪ್ರಭಾರ ನೀಡಲಾಗಿದೆ.
ಚಿಂತಾಮಣಿ, ಗೌರಿಬಿದನೂರು ನಗರಸಭೆ ಅಧಿಕಾರಿಗಳಿಗೆ ಎಸಿಬಿ ಶಾಕ್
ಪ್ರಸುತ್ತ ಎಸಿಬಿ ಬಲ
2016ರಲ್ಲಿ ಎಸಿಬಿ ರಚನೆಯಾದಾಗ ಸರ್ಕಾರವು 447 ಅಧಿಕಾರಿ ಮತ್ತು ಸಿಬ್ಬಂದಿ ಹುದ್ದೆ ಮಂಜೂರು ಮಾಡಿತ್ತು. ಅದರಲ್ಲಿ ಪ್ರಸುತ್ತ 9 ಎಸ್ಪಿ, 35 ಡಿವೈಎಸ್ಪಿ ಸೇರಿದಂತೆ 337 ಪೊಲೀಸರು ಇದ್ದಾರೆ. ಇನ್ನುಳಿದ 87 ಹುದ್ದೆಗಳು ಖಾಲಿ ಇವೆ. ಈ ಖಾಲಿ ಹುದ್ದೆಗಳ ಜೊತೆಗೆ ಹೊಸದಾಗಿ 140 ಹುದ್ದೆಗಳನ್ನು ಸೃಜಿಸುವಂತೆ ಸರ್ಕಾರಕ್ಕೆ ಎಸಿಬಿ ಮನವಿ ಮಾಡಿದೆ.
ಎಸಿಬಿ ಈವರೆಗಿನ ಸಾಧನೆ
ಕೇಸ್ ವಿಚಾರಣೆ ಇತ್ಯರ್ಥ ಶಿಕ್ಷೆ
2082 1761 321 22
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ