ರವಿ ಬೆಳಗೆರೆಯವರು ಇಲ್ಲಿಯವರೆಗೆ ಗೌಪ್ಯವಾಗಿದ್ದ ಒಂದು ವಿಷಯ ಅಂದರೆ ಅವರ ತಂದೆಯವರದು. ಇತ್ತೀಚೆಗೆ ಅದನ್ನೂ ಬಹಿರಂಗಪಡಿಸಿದ್ದಾರೆ. ಜೊತೆಗೆ ಅವರ ಭಾವಕೋಶದಲ್ಲಿ ಉಳಿದಿರುವ ಬೀಚಿ ಅವರ ಚಿತ್ರಗಳನ್ನೂ ಬಿಚ್ಚಿಟ್ಟಿದ್ದಾರೆ. ತಂದೆಯ ಬಗ್ಗೆ ಅವರು ಹೇಳಿದ್ದಿಷ್ಟು.
‘ನನ್ನ ಲೀಗಲ್ ಫಾದರ್ ಯಾರೋ ಗೊತ್ತಿಲ್ಲ. ಆದರೆ ನನ್ನ ಬಯಾಲಾಜಿಕಲ್ ಫಾದರ್ ಬೀಚಿ ಅವರು. ಒಮ್ಮೆ ನಾನೆಲ್ಲೋ ಹೋಗಿ ಬರುವಾಗ ಬೀಚಿ ನಮ್ಮ ಮನೆಯಲ್ಲಿದ್ದರು, ನಿದ್ದೆ ಮಾಡುತ್ತಿದ್ದರು. ನಾನಾಗ ಬಹಳ ಚಿಕ್ಕವ. ಅಮ್ಮನ ಬಳಿ ವಿಚಾರಿಸಿದಾಗ ಬೆಳಗ್ಗೆ ಬಂದರು, ರೆಸ್ಟ್ ಮಾಡ್ತಿದ್ದಾರೆ ಅಂದಳು. ಅವರಿಗೆ ಎಚ್ಚರಾದ ಮೇಲೆ ನನ್ನನ್ನು ಹತ್ತಿರ ಕರೆದರು. ಒಂದು ರುಪಾಯಿ ನನ್ನ ಕೈಗಿಟ್ಟು, ‘ಹೋಗಿ ಬಕ್ಲೀರ್ ಸಿಗರೇಟ್ ತಗೊಂಡು ಬಾ’ ಅಂದರು. ಅದೆಲ್ಲಿದ್ಲೋ ಅಮ್ಮ ಬಿರುಗಾಳಿಯ ಹಾಗೆ ನುಗ್ಗಿ ಬಂದಳು. ‘ನೋಡಿ, ಅವನ ಕೈಯಲ್ಲಿ ಸಿಗರೇಟು ತರಿಸಿದ್ರೆ ಹುಷಾರು. ಯಾಕಂದ್ರೆ ನಾಳೆ ಯಾರೂ ಬೀಚಿ ಮಗ ರವಿ ಅಂತ ಹೇಳಲ್ಲ. ರವಿಯ ಅಪ್ಪ ಬೀಚಿ ಅಂತ ಹೇಳ್ತಾರೆ’ ಅಂದುಬಿಟ್ಟಳು.
ಅಷ್ಟರಲ್ಲಾಗಲೇ ಅವರಿಗೆ ವಯಸ್ಸಾಗಿತ್ತು. ಹೆಚ್ಚಾಗಿ ಕುಡೀತಾನೇ ಇರ್ತಿದ್ರು. ಅವರನ್ನು ಬಾರ್‌ಗೆ ಕರ್ಕೊಂಡು ಹೋಗ್ತಿದ್ದೆ. ವಾಪಾಸ್ ಮನೇಗೆ ಕರ್ಕೊಂಡು ಬರ್ತಿದ್ದೆ. ಅವರ ಜುಬ್ಬಾ ತೆಗೆದು ಗೋಡೆಗೆ ನೇತು ಹಾಕ್ತಿದ್ದೆ. ಅಷ್ಟರೊಳಗೆ ಬನೀನು ಹರ್ಕೊಳ್ತಿದ್ರು. ನನ್ನ ದೇಹವನ್ನು ಬಿಟ್ಟು ತೊಲಗು ಅಂತ ಬನೀನಿಗೆ ಬೈತಿದ್ರು. ನಾನು ಅವರನ್ನು ಸಾರ್ ಅಂತ ಕರೀತಿದ್ದೆ. ಕ್ರಮೇಣ ಅವರ ಪತ್ನಿ, ಮಕ್ಕಳು, ಮೊಮ್ಮಕ್ಕಳೆಲ್ಲ ನನಗೆ ಆತ್ಮೀಯರೇ ಆದರು. ನಾವೀವಾಗಲೂ ಚೆನ್ನಾಗಿಯೇ ಇದ್ದೀವಿ.
ಮೊದಲ ಪ್ರೀತಿ
ರವಿ ಬೆಳಗೆರೆ ಅವರ ಬರಹಗಳಲ್ಲೆಲ್ಲ ಹಸಿರು ಲಂಗದ ಹುಡುಗಿ ಸದಾ ಬಂದು ಹೋಗುತ್ತಿರುತ್ತಾಳೆ. ಹದಿನಾಲ್ಕನೇ ವಯಸ್ಸಲ್ಲಿ ಆ ಹುಡುಗಿ ಜೊತೆಗೆ ಪ್ರೀತಿಯಾಯ್ತು. ಒಂದಿಷ್ಟುವರ್ಷ ಅವಳ ಜೊತೆಗಿನ ಪ್ರೀತಿ ಕೆಲವು ವರ್ಷಗಳ ಕಾಲ ಮುಂದುವರಿಯಿತು. ಆಮೇಲೆ ಮುರಿದುಬಿತ್ತು. ಆ ಹುಡುಗಿಗೆ ಮನೆಯವರು ಬೇರೆಯವರ ಜೊತೆಗೆ ಮದುವೆ ಮಾಡಿದರು. ಆದರೆ ಹಸಿರು ಲಂಗದ ಹುಡುಗಿ ಟ್ಯಾಟೂ ಕೊನೆಯ ತನಕ ಅವರ ಕೈಯಲ್ಲಿತ್ತು.
ಬಾರದ ಲೋಕಕ್ಕೆ ಬೆಳಗೆರೆ; ದುಃಖದಲ್ಲಿ ಪ್ರಾರ್ಥನಾ ಶಾಲಾ ಶಿಕ್ಷಕರು
ಲಲಿತೆಯ ಜೊತೆಗೆ ಪ್ರೀತಿ
ಲಲಿತಾ, ರವಿ ಬೆಳಗೆರೆ ಅವರಿಗೆ ಲೆಕ್ಚರರ್ ಆಗಿದ್ದವರು. ಇವರಿಗಿಂತ ಎಂಟು ವರ್ಷ ದೊಡ್ಡವರು. ರವಿ ಬೆಳಗೆರೆ ಅವರಿಗೂ ಪಾಠ ಮಾಡಿದವರು. ಬೆಳಗೆರೆ ತಾಯಿ ಇದೇ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿರುತ್ತಾರೆ. ಲಲಿತಾ ಅವರಿಗೂ ಇವರ ತಾಯಿಗೂ ಅತ್ಯುತ್ತಮ ಬಾಂಧವ್ಯ. ಈ ನಡುವೆ ಒಮ್ಮೆ ದೇವರ ಹುಚ್ಚು ಹತ್ತಿ ರವಿ ಹಿಮಾಲಯಕ್ಕೆ ಹೋಗುತ್ತಾರೆ. ಅವರು ವಾಪಾಸ್ ಬರುವಾಗ ಇವರ ಸೈನ್ ಫೋರ್ಜರಿ ಮಾಡಿ ಲಲಿತಾ ಎಂಎಗೆ ಅಪ್ಲಿಕೇಶನ್ ಹಾಕಿ ಸೀಟು ಪಡೆದಿರುತ್ತಾರೆ. ಮುಂದೆ ರವಿ ಬೆಳಗೆರೆ ಎಂಎ ಹಿಸ್ಟರಿಯಲ್ಲಿ ಗೋಲ್ಡ್ ಮೆಡಲ್ ಪಡೆಯುತ್ತಾರೆ. ಈ ನಡುವೆ ಲಲಿತಾ ಅವರಿಗೆ ಪ್ರೇಮ ನಿವೇದನೆ ಮಾಡಿ ಮದುವೆಯಾಗುವಂತೆ ರವಿ ಬೆಳಗೆರೆ ಅವರೇ ಪ್ರೊಪೋಸ್ ಮಾಡುತ್ತಾರೆ. ಇವರಿಬ್ಬರ ಮದುವೆಯಾಗುತ್ತದೆ. ಕರ್ಣ, ಚೇತನಾ ಹಾಗೂ ಭಾವನಾ ಎಂಬ ಮೂವರು ಮಕ್ಕಳು ಈ ದಂಪತಿಗಿದ್ದಾರೆ.
ನಿಮ್ಮ ಪ್ರೀತಿಗೆ ಸದಾ ಅಭಾರಿ, ಮತ್ತೆ ಹುಟ್ಟಿ ಬರ್ತೇನೆ ಕಾಯ್ತಿರಿ...!
ಯಶೋಮತಿ ಜತೆ ಎರಡನೇ ಮದುವೆ
ಹಾಯ್ ಬೆಂಗಳೂರು ಆಫೀಸ್‌ನಲ್ಲಿ ಯಶೋಮತಿಯ ಪರಿಚಯ ರವಿ ಬೆಳಗೆರೆ ಅವರಿಗಾಗುತ್ತದೆ. ಮುಂದೆ ಇವರಿಬ್ಬರ ನಡುವೆ ಪ್ರೀತಿ ಬೆಳೆದು ಹಿರಿಯರ ವಿರೋಧದ ನಡುವೆ ಮದುವೆಯಾಗುತ್ತಾರೆ. ತಮ್ಮ ಎರಡನೇ ಮದುವೆಯನ್ನು ಮುಚ್ಚಿಡದೇ ಸಾರ್ವಜನಿಕವಾಗಿ ರವಿ ಬೆಳಗೆರೆ ಹೇಳಿಕೊಳ್ಳುತ್ತಾರೆ. ಇವರಿಗೆ ಹಿಮವಂತ ಎಂಬ ಮಗ. ಅವನಿಗೀಗ 11 ವರ್ಷ.