
ಬೆಂಗಳೂರು(ಸೆ.10): ಸರ್ಕಾರಿ ವೈದ್ಯರು ಕನ್ನಡದಲ್ಲಿಯೇ ಔಷಧಿ ಚೀಟಿ ಬರೆಯಲು ಶೀಘ್ರ ಆದೇಶ ಜಾರಿ ಮಾಡುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮನವಿ ಮಾಡಿದೆ.
ಸೋಮವಾರ ಈ ಕುರಿತು ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರು ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದು, ಇತ್ತೀಚೆಗೆ ರಾಯಚೂರಿನಲ್ಲಿ ವೈದ್ಯರು ಔಷಧಿ ಚೀಟಿಗಳನ್ನು ಕನ್ನಡದಲ್ಲಿ ಬರೆದು ಭಾಷೆಯ ಬೆಳವಣಿಗೆಗೆ ಸಹಕರಿಸಬೇಕೆಂದು ನೀಡಿದ ಕರೆಗೆ ನೂರಾರು ಕನ್ನಡಪ್ರಿಯ ವೈದ್ಯರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಇದು ಭಾಷೆಯ ಬೆಳವಣಿಗೆಯ ದೃಷ್ಠಿಯಿಂದ ಚೇತೋಹಾರಿಯಾದ ಸಂಗತಿ. ಹಾಗಾಗಿ ಸರ್ಕಾರಿ ವೈದ್ಯರೆಲ್ಲರೂ ಕನ್ನಡದಲ್ಲಿಯೇ ಔಷಧಿ ಚೀಟಿ ಬರೆಯಬೇಕೆಂದು ಕಡ್ಡಾಯ ಮಾಡಿ ಸರ್ಕಾರ ಆದೇಶಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಾಥಮಿಕ ಶಾಲೆಗೆ ಆಂಗ್ಲ ಮಾಧ್ಯಮ ಬೇಡ: ಡಾ.ಪುರುಷೋತ್ತಮ ಬಿಳಿಮಲೆ ಮನವಿ
ರಾಜ್ಯ ಸರ್ಕಾರದ ಅಧೀನದಲ್ಲಿರುವ ಎಲ್ಲ ವೈದ್ಯರು ಇಂತಹ ಮಾನಸಿಕತೆಗೆ ತೆರೆದುಕೊಂಡಲ್ಲಿ ಕನ್ನಡ ಭಾಷೆಯ ಬೆಳವಣಿಗೆಗೆ ಒಂದು ಮಹತ್ವದ ದಾರಿ ದೊರಕಿದಂತೆ ಆಗುತ್ತದೆ. ಸರ್ಕಾರದ ಆದೇಶ ಈ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗುತ್ತದೆ ಎಂದಿದ್ದಾರೆ.
ಕನ್ನಡಪ್ರಿಯ ವೈದ್ಯರುಗಳನ್ನು, ಅವರ ಭಾಷಾ ಪರವಾದ ಕ್ರಿಯಾಶೀಲ ಚಟುವಟಿಕೆಗಳನ್ನು ಗುರುತಿಸಿ ಪ್ರತಿವರ್ಷ ವೈದ್ಯರ ದಿನದಂದು ಅಭಿನಂದಿಸುವ ಹಾಗೂ ಪುರಸ್ಕರಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ತಾಲೂಕು, ಜಿಲ್ಲೆ, ರಾಜ್ಯ ಹಂತದಲ್ಲಿ ಪ್ರತಿವರ್ಷ ಸತ್ಕರಿಸುವ ಕಾರ್ಯಕ್ರಮಗಳ ನಿರೂಪಣೆಯಾಗಬೇಕು. ಖಾಸಗಿ ಆಸ್ಪತ್ರೆಗಳ ಕನ್ನಡ ಪ್ರಿಯ ವೈದ್ಯರಲ್ಲಿಯೂ, ಆಸ್ಪತ್ರೆಗಳ ಮುಖ್ಯಸ್ಥರಲ್ಲಿಯೂ ಕನ್ನಡ ಬಳಕೆಗೆ ರಾಜ್ಯ ಸರ್ಕಾರವು ಪ್ರೋತ್ಸಾಹದಾಯಕ ವಾತಾವರಣವನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ನೀತಿ ನಿರೂಪಣೆಗೆ ಮುಂದಾಗಬೇಕೆಂದು ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ