2027ಕ್ಕೆ ಮುಂಬೈ-ದಿಲ್ಲಿ ಮಧ್ಯೆ ಹೈಸ್ಪೀಡ್‌ ರೈಲು: ಕೇಂದ್ರ ಸಚಿವ ಸೋಮಣ್ಣ

By Kannadaprabha NewsFirst Published Sep 10, 2024, 9:57 AM IST
Highlights

ರಾಜ್ಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ, ರಾಜ್ಯ ಸರ್ಕಾರದಿಂದ ಅವರ ಪಾಲಿನ ಹಣ ಪಾವತಿಯಾಗುತ್ತಿಲ್ಲ. ಸದ್ಯ ರಾಜ್ಯ ಸರ್ಕಾರ 11 ಸಾವಿರ ಕೋಟಿ ರು.ಗಳಷ್ಟು ಹಣವನ್ನು ರೈಲ್ವೆ ಇಲಾಖೆಗೆ ಪಾವತಿಸಬೇಕಿದೆ. ಆದರೂ, ರೈಲ್ವೆ ಇಲಾಖೆ ರಾಜ್ಯದಲ್ಲಿ ಉತ್ತಮ ಸೇವೆ ನೀಡುತ್ತಿದೆ. ಮುಂದಿನ 2 ವರ್ಷಗಳಲ್ಲಿ ರಾಜ್ಯದ ನೆರವಿಲ್ಲದಿದ್ದರೂ, ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಲೆವೆಲ್ ಕ್ರಾಸಿಂಗ್‌ಗಳಲ್ಲಿ ಕೆಳ ಮತ್ತು ಮೇಲ್ಸೇತುವೆ ನಿರ್ಮಿಸಲಾಗುವುದು: ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ 

ಬೆಂಗಳೂರು(ಸೆ.10): ರಾಜ್ಯ ಸರ್ಕಾರದ ನೆರವಿಲ್ಲದಿದ್ದರೂ ಮುಂದಿನ ಎರಡು ವರ್ಷಗಳಲ್ಲಿ ಬೆಂಗಳೂರು ಹೊರತುಪಡಿಸಿ ರಾಜ್ಯದ ಎಲ್ಲ ಲೆವೆಲ್‌ ಕ್ರಾಸಿಂಗ್‌ಗಳಲ್ಲಿ ಕೆಳ ಮತ್ತು ಮೇಲ್ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಘೋಷಿಸಿದ್ದಾರೆ. ರೈಲ್ವೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನ್ನ ಪಾಲಿನ ಮೊತ್ತವಾದ 11 ಸಾವಿರ ಕೋಟಿ ರು.ಗಳನ್ನು ರೈಲ್ವೆ ಇಲಾಖೆಗೆ ಪಾವತಿಸಬೇಕಿದೆ ಎಂದೂ ಅವರು ತಿಳಿಸಿದ್ದಾರೆ.

ಸೋಮವಾರ ಯಲಹಂಕದ ರೈಲ್ವೆ ಗಾಲಿ ಕಾರ್ಖಾನೆಯ ಕಾರ್ಯವೈಖರಿ ಪರಿಶೀಲನೆ ನಡೆಸಿ ನಂತರ ಸೋಮಣ್ಣ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ, ರಾಜ್ಯ ಸರ್ಕಾರದಿಂದ ಅವರ ಪಾಲಿನ ಹಣ ಪಾವತಿಯಾಗುತ್ತಿಲ್ಲ. ಸದ್ಯ ರಾಜ್ಯ ಸರ್ಕಾರ 11 ಸಾವಿರ ಕೋಟಿ ರು.ಗಳಷ್ಟು ಹಣವನ್ನು ರೈಲ್ವೆ ಇಲಾಖೆಗೆ ಪಾವತಿಸಬೇಕಿದೆ. ಆದರೂ, ರೈಲ್ವೆ ಇಲಾಖೆ ರಾಜ್ಯದಲ್ಲಿ ಉತ್ತಮ ಸೇವೆ ನೀಡುತ್ತಿದೆ. ಮುಂದಿನ 2 ವರ್ಷಗಳಲ್ಲಿ ರಾಜ್ಯದ ನೆರವಿಲ್ಲದಿದ್ದರೂ, ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಲೆವೆಲ್ ಕ್ರಾಸಿಂಗ್‌ಗಳಲ್ಲಿ ಕೆಳ ಮತ್ತು ಮೇಲ್ಸೇತುವೆ ನಿರ್ಮಿಸಲಾಗುವುದು ಎಂದು ತಿಳಿಸಿದರು.

Latest Videos

ನನ್ನ ತಾಲೂಕು ಕನಕಪುರದಿಂದ ಚಾಮರಾಜನಗರಕ್ಕೆ ಹೊಸ ರೈಲ್ವೆ ಯೋಜನೆಗೆ ಕ್ರಮ: ಕೇಂದ್ರ ಸಚಿವ ಸೋಮಣ್ಣ

3ನೇ ಉತ್ಪಾದನಾ ಘಟಕ 3 ತಿಂಗಳಲ್ಲಿ ಸಿದ್ಧ:

2023-24ನೇ ಸಾಲಿನಲ್ಲಿ ರೈಲ್ವೆ ಗಾಲಿ ಕಾರ್ಖಾನೆಯಲ್ಲಿ 1.96 ಲಕ್ಷ ಗಾಲಿಗಳು, 83,054 ಆ್ಯಕ್ಸೆಲ್‌ ಹಾಗೂ 94,275 ಗಾಲಿಸೆಟ್‌ಗಳನ್ನು ಉತ್ಪಾದಿಸಲಾಗಿದೆ. ಇದೀಗ ಕಾರ್ಖಾನೆಯಲ್ಲಿ ಹೊಸದಾಗಿ 3ನೇ ಆ್ಯಕ್ಸೆಲ್ ಉತ್ಪಾದನಾ ಘಟಕ ಸ್ಥಾಪಿಸಲಾಗುತ್ತಿದ್ದು, ಮುಂದಿನ 3 ತಿಂಗಳಲ್ಲಿ ಅದನ್ನು ಲೋಕಾರ್ಪಣೆ ಮಾಡಲಾಗುವುದು. ಅದರಿಂದ ಕಾರ್ಖಾನೆಯ ಉತ್ಪಾದನಾ ಸಾಮರ್ಥ್ಯ ಶೇ. 30ರಿಂದ 40ರಷ್ಟು ಹೆಚ್ಚಳವಾಗಲಿದೆ ಎಂದು ಹೇಳಿದರು.

10 ವರ್ಷದಲ್ಲಿ ರೈಲು ಸೇವೆಯಲ್ಲಿ ಭಾರೀ ಬದಲಾವಣೆ:

ದೇಶದಲ್ಲಿ 2014ರ ವೇಳೆಗೆ 10 ಸಾವಿರ ಕಿಮೀ ರೈಲ್ವೆ ಹಳಿ ಡಬ್ಲಿಂಗ್‌ ಮಾಡಲಾಗಿತ್ತು. ಆದರೀಗ ಆ ಪ್ರಮಾಣ 40 ಸಾವಿರ ಕಿಮೀಗೆ ಹೆಚ್ಚಿದೆ. ಅದೇ ರೀತಿ ರೈಲ್ವೆ ಮಾರ್ಗದ ವಿದ್ಯುದ್ಧೀಕರಣ ಶೇ. 25ರಿಂದ ಶೇ. 92ಕ್ಕೆ ಹೆಚ್ಚಳವಾಗಿದೆ. ಅರಣ್ಯ ಭೂಮಿಗೆ ಸಂಬಂಧಿಸಿದ ಸಮಸ್ಯೆ ಇರುವಲ್ಲಿ ಹೊರತುಪಡಿಸಿ ಉಳಿದೆಲ್ಲ ಮಾರ್ಗಗಳೂ ವಿದ್ಯುದೀಕರಣಗೊಂಡಿದೆ ಎಂದು ಸೋಮಣ್ಣ ಮಾಹಿತಿ ನೀಡಿದರು.

2027ಕ್ಕೆ 275 ಕಿ.ಮೀ. ವೇಗದ ರೈಲು ಸಂಚಾರ

ದೇಶದ ರೈಲು ಸೇವೆಯಲ್ಲಿ ಭಾರೀ ಬದಲಾವಣೆ ತರಲಾಗುತ್ತಿದೆ. ವಂದೇ ಭಾರತ್‌ ರೈಲಿಗೆ ಉತ್ತಮ ಬೇಡಿಕೆಯಿದೆ. ಮುಂದಿನ 3 ತಿಂಗಳಲ್ಲಿ ಪ್ರತಿ ಗಂಟೆಗೆ 260 ಕಿಮೀ ವೇಗದಲ್ಲಿ ಸಂಚರಿಸುವ ವಂದೇ ಭಾರತ್‌ ಸ್ಲೀಪಿಂಗ್‌ ರೈಲನ್ನು ದೇಶಕ್ಕೆ ಸಮರ್ಪಣೆ ಮಾಡಲಾಗುವುದು. ಹಾಗೆಯೇ, 2027ರಲ್ಲಿ ದೆಹಲಿಯಿಂದ ಮುಂಬೈಗೆ ಸಂಚರಿಸುವ 275 ಕಿ.ಮೀ ವೇಗದ ರೈಲು ಸೇವೆ ಆರಂಭಿಸಲಾಗುವುದು. ರೈಲು ಅಪಘಾತ ತಡೆಗೆ, ಒಂದೇ ಹಳಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ರೈಲು ಸಂಚರಿಸುವುದನ್ನು ಪತ್ತೆ ಮಾಡಿ, ರೈಲಿನ ಲೋಕೋಪೈಲಟ್‌ಗೆ ಎಚ್ಚರಿಕೆ ನೀಡುವಂತಹ ಹೊಸ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ ಎಂದು ಸೋಮಣ್ಣ ತಿಳಿಸಿದರು.

click me!