
ಬೆಂಗಳೂರು (ಏ.16) ನಗರದ ಜೆ.ಸಿ.ರಸ್ತೆಯ ಕನ್ನಡ ಭವನದ ಆವರಣದಲ್ಲಿರುವ ಕ್ಯಾಂಟೀನ್ ಬಾಡಿಗೆ ದರವನ್ನು ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದ ಕಾರಂತರ ಕ್ಯಾಂಟೀನ್ ಶೀಘ್ರದಲ್ಲೇ ಸ್ಥಗಿತಗೊಳ್ಳಲಿದ್ದು, ಹೊಸದಾಗಿ ಟೆಂಡರ್ ಪಡೆದಿರುವ ‘ಶ್ರೀನಿಧಿ ಕೇಟರ್ಸ್’ ಕ್ಯಾಂಟೀನ್ ಆರಂಭಿಸಲಿದೆ.
ಪ್ರಾರಂಭದಲ್ಲಿ ಅತ್ಯಂತ ಕಡಿಮೆ ಬಾಡಿಗೆ ನಿಗದಿ ಮಾಡಲಾಗಿತ್ತು. 2013ರಲ್ಲಿ ಕ್ಯಾಂಟೀನ್ ಮಾಲೀಕರಾದ ಎ.ಪಿ.ಕಾರಂತ ಅವರು, ₹5 ಸಾವಿರ ಬಾಡಿಗೆ ಮತ್ತು ₹500 ಜಿಎಸ್‌ಟಿ ಸೇರಿ ಒಟ್ಟು ₹5,500ಕ್ಕೆ ಲೋಕೋಪಯೋಗಿ ಇಲಾಖೆಯ ಈ ಕ್ಯಾಂಟೀನ್ ಕಟ್ಟಡವನ್ನು ಬಾಡಿಗೆಗೆ ಪಡೆದುಕೊಂಡಿದ್ದರು. ಅಲ್ಲಿಂದ ಈವರೆಗೂ ಬಾಡಿಗೆ ದರ ಪರಿಷ್ಕರಣೆ ಮಾಡಿರಲಿಲ್ಲ. ಇತ್ತೀಚೆಗೆ ಈ ಕುರಿತು ದೂರುಗಳು ಬಂದಿದ್ದು, ಆರ್‌ಟಿಐ ಮೂಲಕವೂ ಮಾಹಿತಿ ಕೇಳಲಾಗಿತ್ತು.
ವಿದ್ಯುತ್ ಶಾರ್ಟ್ ಸೆರ್ಕ್ಯೂಟ್; ಶೆಡ್‌ನಲ್ಲಿ ಮಲಗಿದ್ದ 4 ವರ್ಷದ ಮಗು ಸಜೀವ ದಹನ!
ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಲೋಕೋಪಯೋಗಿ ಇಲಾಖೆ ಆನ್‍ಲೈನ್ ಮೂಲಕ ಆಸಕ್ತರಿಗೆ ಅವಕಾಶ ನೀಡಿ ಟೆಂಡರ್ ಕರೆದಿತ್ತು. ಪ್ರಸ್ತುತ ಜೆ.ಸಿ.ರಸ್ತೆಯಲ್ಲಿ ಮಾರುಕಟ್ಟೆ ದರದ ಆಧಾರದಲ್ಲಿ ಜಿಎಸ್‍ಟಿ ಸಹಿತ ಬಾಡಿಗೆಯನ್ನು ₹59 ಸಾವಿರಕ್ಕೆ ನಿಗದಿಪಡಿಸಲಾಗಿತ್ತು. ಕ್ಯಾಂಟೀನ್‍ಗೆ ಬೇಡಿಕೆ ಸಲ್ಲಿಸಿ, ಮೂವರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಈ ಪೈಕಿ ಹೆಚ್ಚು ಹಣ ಪಾವತಿಸಲು ಮುಂದೆ ಬಂದ ‘ಶ್ರೀನಿಧಿ ಕೇಟರ್ಸ್’ಗೆ ಕ್ಯಾಂಟೀನ್ ಕಟ್ಟಡ ಲಭ್ಯವಾಗಿದೆ. ಈಗ ಕ್ಯಾಂಟೀನ್ ನಡೆಸುತ್ತಿರುವ ಕಾರಂತ್ ಅವರು ಟೆಂಡರ್‌ನಲ್ಲಿ ಭಾಗವಹಿಸಲಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ತಿಂಡಿ, ಊಟ ದರ ಹೆಚ್ಚಳ ಸಾಧ್ಯತೆ
ಹೊಸದಾಗಿ ಕ್ಯಾಂಟೀನ್ ಆರಂಭಿಸುವವರು ಕಟ್ಟಡವನ್ನು ಒಡೆಯುವಂತಿಲ್ಲ. ಈಗ ಇರುವ ಕಟ್ಟಡದಲ್ಲೇ ಯಥಾಪ್ರಕಾರ ಮುನ್ನಡೆಸಬೇಕು. ಬೇಕಿದ್ದರೆ ಒಳಾಂಗಣದ ವಿನ್ಯಾಸವನ್ನು ಈಗಿನ ಅವಶ್ಯಕತೆಗೆ ತಕ್ಕಂತೆ ಅಲಂಕರಿಸಿಕೊಳ್ಳಬಹುದು ಎಂಬ ನಿಯಮಗಳನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ.
ಹೆಚ್ಚು ಮೊತ್ತಕ್ಕೆ ಕ್ಯಾಂಟೀನ್ ಕಟ್ಟಡ ಪಡೆದಿರುವ ಮ್ಯಾನೇಜ್‌ಮೆಂಟ್, ಊಟ, ತಿಂಡಿ ಇತ್ಯಾದಿಗಳ ದರವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಇದರಿಂದ ಬಡ ಕಲಾವಿದರು, ಸಾರ್ವಜನಿಕರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ವಿವಿಧ ಅಕಾಡೆಮಿಗಳ ಸಿಬ್ಬಂದಿಗೂ ಸಮಸ್ಯೆಯಾಗಲಿದೆ ಎಂಬ ಹಲವು ಕಲಾವಿದರು ಅಲವತ್ತುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ