ಬಿಜೆಪಿ ಅನ್ಯಾಯ: ವಚನಾನಂದ ಶ್ರೀ ನೇತೃತ್ವದಲ್ಲಿ ಸಭೆ

By Kannadaprabha NewsFirst Published Apr 16, 2024, 6:40 AM IST
Highlights

ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವುದರಲ್ಲಿ ಗಣನೀಯ ಪಾತ್ರ ನಿರ್ವಹಿಸಿದ ಪಂಚಮಸಾಲಿ ಲಿಂಗಾಯತರನ್ನು ಪಕ್ಷ ಕಡೆಗಣಿಸಿದೆ. ಬಿಜೆಪಿಯವರು ಪಂಚಮಸಾಲಿ ನಾಯಕರ ನಡುವೆ ಒಳಗೊಳಗೆ ಜಗಳ ಹಚ್ಚಿ ಅಧಿಕಾರ ಪಡೆದುಕೊಂಡಿದ್ದಾರೆ. ಮೀಸಲಾತಿ ವಿಚಾರದಲ್ಲಿ ಪಂಚಮಸಾಲಿಗಳಿಗೆ 2ಡಿ ಮೀಸಲಾತಿ ನೀಡಿ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿದರು. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಆಗ್ರಹಿಸಿದರು ಎನ್ನಲಾಗಿದೆ.

ಬೆಂಗಳೂರು(ಏ.16):  ಪಂಚಮಸಾಲಿ ಸಮುದಾಯಕ್ಕೆ ಬಿಜೆಪಿ ಅನ್ಯಾಯ ಎಸಗುತ್ತಿದೆ ಎಂದು ಆರೋಪಿಸಿದ್ದ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಸಮುದಾಯದ ಮುಖಂಡರ ಸಭೆ ನಡೆಯಿತು.

ಹರಿಹರದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಜಿಲ್ಲೆ ಹಾಗೂ ತಾಲೂಕುಗಳ ಮುಖಂಡರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ವಚನಾನಂದ ಸ್ವಾಮೀಜಿಗಳ ಅಭಿಪ್ರಾಯಕ್ಕೆ ಸಹಮತ ಸೂಚಿಸಿದ್ದು, ಸ್ವಾಮೀಜಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ ಎಂದು ಹೇಳಿದ್ದಾರೆ.

ಪಂಚಮಸಾಲಿಗೆ ಬಿಜೆಪಿ ಅನ್ಯಾಯ, ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ: ವಚನಾನಂದ ಶ್ರೀ ಎಚ್ಚರಿಕೆ

ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವುದರಲ್ಲಿ ಗಣನೀಯ ಪಾತ್ರ ನಿರ್ವಹಿಸಿದ ಪಂಚಮಸಾಲಿ ಲಿಂಗಾಯತರನ್ನು ಪಕ್ಷ ಕಡೆಗಣಿಸಿದೆ. ಬಿಜೆಪಿಯವರು ಪಂಚಮಸಾಲಿ ನಾಯಕರ ನಡುವೆ ಒಳಗೊಳಗೆ ಜಗಳ ಹಚ್ಚಿ ಅಧಿಕಾರ ಪಡೆದುಕೊಂಡಿದ್ದಾರೆ. ಮೀಸಲಾತಿ ವಿಚಾರದಲ್ಲಿ ಪಂಚಮಸಾಲಿಗಳಿಗೆ 2ಡಿ ಮೀಸಲಾತಿ ನೀಡಿ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿದರು. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಆಗ್ರಹಿಸಿದರು ಎನ್ನಲಾಗಿದೆ.

ಸಭೆ ಉದ್ದೇಶಿಸಿ ಮಾತನಾಡಿದ ಸ್ವಾಮೀಜಿ, ಕಳೆದ 25 ವರ್ಷಗಳಿಂದ ಲಿಂಗಾಯತರಲ್ಲಿ ಅತಿಹೆಚ್ಚು ಜನಸಂಖ್ಯೆಯುಳ್ಳ ಪಂಚಮಸಾಲಿ ಸಮುದಾಯದ ಲಕ್ಷಾಂತರ ಯುವಕರು, ಕಾರ್ಯಕರ್ತರು ಬಿಜೆಪಿ ಕಟ್ಟುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಲಿಂಗಾಯತರು ಇರುವುದರಿಂದಲೇ ದಕ್ಷಿಣ ಭಾರತದಲ್ಲಿ ಪ್ರಥಮ ಬಿಜೆಪಿ ಸರ್ಕಾರ ಬರಲು ಸಾಧ್ಯವಾಗಿದೆ. ಪಂಚಮಸಾಲಿಗಳ ಸಾಕಷ್ಟು ಪರಿಶ್ರಮದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಪಂಚಮಸಾಲಿಗಳನ್ನು ಅಧಿಕಾರದಿಂದ ದೂರ ಇರಿಸುವ ಹಾಗೂ ಪಂಚಮಸಾಲಿ ನಾಯಕರನ್ನು ತುಳಿಯುವ ಕೆಲಸ ಮಾಡುತ್ತಿದೆ ಎಂದು ಬೇಸರದಿಂದ ಹೇಳಿದರು.

ಸಭೆಯ ವಿವರಗಳನ್ನು ಬಿಜೆಪಿ ವರಿಷ್ಠರಿಗೆ ತಲುಪಿಸಲಾಗಿದ್ದು, ಅವರಿಂದ ಯಾವ ರೀತಿ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ಕಾದು ನೋಡಿ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

click me!