
ಬೆಂಗಳೂರು, [ನ.24]: ಕನ್ನಡ ಚಿತ್ರರಂಗದ ರೆಬೆಲ್ಸ್ಟಾರ್ ಹಾಗೂ ವರ್ಚಸ್ವಿ ರಾಜಕಾರಣಿ ಅಂಬರೀಷ್ (66) ಅವರು ತೀವ್ರ ಅನಾರೋಗ್ಯ ಸಮಸ್ಯೆಯಿಂದಾಗಿ ಶನಿವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.
ಶನಿವಾರ ಸಂಜೆ ಅವರಿಗೆ ಏಕಾಏಕಿ ಎದೆನೋವು ಹಾಗೂ ಉಸಿರಾಟದ ತೀವ್ರ ಸಮಸ್ಯೆ ಕಾಣಿಸಿಕೊಂಡಿತ್ತು. ಈ ವೇಳೆ ವಿಂಡ್ಸರ್ ಮ್ಯಾನರ್ ಬಳಿಯ ಫ್ಲ್ಯಾಟ್‌ನಲ್ಲಿ ನಿಂತಲ್ಲೇ ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ವಸಂತನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತು. ತೀವ್ರ ಎದೆನೋವು, ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ತೀವ್ರ ಹೃದಯಾಘಾತದಿಂದ ಸುಮಾರು 10.15ರ ವೇಳೆಗೆ ಮೃತಪಟ್ಟಿದ್ದಾರೆ.
ಕಳೆದ 15 ವರ್ಷಗಳಿಂದಲೂ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರು 2014ರಲ್ಲಿ ತೀವ್ರ ಅನಾರೋಗ್ಯ ಸಮಸ್ಯೆ ಎದುರಿಸಿದ್ದರು. ಈ ವೇಳೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ವಿಕ್ರಂ ಆಸ್ಪತ್ರೆಗೆ ಮೊದಲು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರದ ಎಲಿಜಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಮೃತ್ಯುವನ್ನು ಜಯಿಸಿ ಮರುಹುಟ್ಟು ಪಡೆದಿದ್ದರು.
ಬಳಿಕವೂ ಕಾಲಕಾಲಕ್ಕೆ ವೈದ್ಯಕೀಯ ಪರೀಕ್ಷೆ ಹಾಗೂ ಫಾಲೋಅಪ್ ಚಿಕಿತ್ಸೆಗಾಗಿ ವಿಕ್ರಂ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಶನಿವಾರ ಸಂಜೆ ಏಕಾಏಕಿ ಎದೆನೋವು ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಡಾ.ಸತೀಶ್ ನೇತೃತ್ವದ ವೈದ್ಯರ ತಂಡ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅಂಬರೀಷ್ ಅವರ ನಿಧನಕ್ಕೆ ರಾಜ್ಯ ಸರ್ಕಾರ 3 ದಿನಗಳ ಶೋಕಾಚರಣೆಯನ್ನು ಪ್ರಕಟಿಸಿದೆ. ಸರ್ಕಾರಿ ಗೌರವದೊಂದಿಗೆ ಅವರ ಅಂತ್ಯಕ್ರಿಯೆ ನಡೆಯಲಿದ್ದು, ಸ್ಥಳ ಹಾಗೂ ದಿನವನ್ನು ಕುಟುಂಬದವರು ನಿರ್ಧರಿಸಲಿದ್ದಾರೆ.
ಬಲಿ ತೆಗೆದುಕೊಂಡ ಶ್ವಾಸಕೋಶದ ಸೋಂಕು:
ಕಳೆದ ಹದಿನೈದು ವರ್ಷದಿಂದ ಸಣ್ಣ ಪ್ರಮಾಣದಿಂದ ಶ್ವಾಸಕೋಶದ ಸೋಂಕಿನಿಂದ ಅಂಬರೀಷ್ ಬಳಲುತ್ತಿದ್ದರು. ನಾಲ್ಕು ವರ್ಷಗಳ ಹಿಂದೆ ದೊಡ್ಡ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡಿರುವುದರಿಂದ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗಿತ್ತು. ಈ ವೇಳೆ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಂಬರೀಶ್ ಅವರನ್ನು ಹೆಚ್ಚುವರಿ ಚಿಕಿತ್ಸೆಗೆ ಸಿಂಗಾಪುರಕ್ಕೆ ಕಳುಹಿಸಲಾಗಿತ್ತು. ಬಳಿಕ ಅವರ ಆರೋಗ್ಯ ಸುಧಾರಿಸಿತ್ತು. ವಯೋ ಸಹಜವಾಗಿ ಜೀವ ನಿರೋಧಕ ಶಕ್ತಿ ಕುಂದಿರುವುದರಿಂದ ಮತ್ತೆ ತೀವ್ರ ಸಮಸ್ಯೆ ಕಾಣಿಸಿಕೊಂಡಿದೆ. ಜತೆಗೆ ಹೃದಯದಲ್ಲೂ ಸಮಸ್ಯೆ ಉಂಟಾಗಿದ್ದು, ಏಕಾಏಕಿ ಆರೋಗ್ಯದಲ್ಲಿ ಉಂಟಾದ ಏರುಪೇರಿನಿಂದ ಮೃತಪಟ್ಟಿದ್ದಾರೆ.
ಅಂಬಿಗಿತ್ತು ಕಾರ್ ಕ್ರೇಜ್
ಅಂತ್ಯ ಸಂಸ್ಕಾರ ಕಂಠೀರವದಲ್ಲಿ ಬೇಡ್ವಂತೆ
ಅಂಬಿ ನೋಡಿದ ಕಡೆಯ ಚಿತ್ರ
1000 ರೂ. ನೋಟಿನ ಮೇಲೆ ಆಟೋಗ್ರಾಫ್ ನೀಡಿದ ಅಂಬಿ
ಮಂಡ್ಯದ ಗಂಡು ಮೊದಲು ಬಣ್ಣ ಹಚ್ಚಿದ್ದು ಚಿತ್ರದುರ್ಗದಲ್ಲಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ