‘ಮಹದಾಯಿ ವನ್ಯ ಜೀವಿ ಅಭಯಾರಣ್ಯ’ವನ್ನು ‘ಹುಲಿ ಸಂರಕ್ಷಿತ ಅಭಯಾರಣ್ಯ’ ಎಂದು ಘೋಷಿಸುವಂತೆ ಬಾಂಬೆ ಹೈಕೋರ್ಚ್‌ನ ಗೋವಾ ಪೀಠ ಗೋವಾ ಸರ್ಕಾರಕ್ಕೆ ನಿರ್ದೇಶನ ನೀಡಿರುವುದಕ್ಕೆ ಆತಂಕಿತರಾದ ‘ಕಳಸಾ-ಬಂಡೂರಿ ಹೋರಾಟ’ಗಾರರು ಸುಪ್ರೀಂ ಕೋರ್ಚ್‌ನಲ್ಲಿ ಪಿಐಎಲ್ ಸಲ್ಲಿಸಲು ಮುಂದಾಗಿದ್ದಾರೆ.
ಹುಬ್ಬಳ್ಳಿ (ಜು.26) : ‘ಮಹದಾಯಿ ವನ್ಯ ಜೀವಿ ಅಭಯಾರಣ್ಯ’ವನ್ನು ‘ಹುಲಿ ಸಂರಕ್ಷಿತ ಅಭಯಾರಣ್ಯ’ ಎಂದು ಘೋಷಿಸುವಂತೆ ಬಾಂಬೆ ಹೈಕೋರ್ಚ್‌ನ ಗೋವಾ ಪೀಠ ಗೋವಾ ಸರ್ಕಾರಕ್ಕೆ ನಿರ್ದೇಶನ ನೀಡಿರುವುದಕ್ಕೆ ಆತಂಕಿತರಾದ ‘ಕಳಸಾ-ಬಂಡೂರಿ ಹೋರಾಟ’ಗಾರರು ಸುಪ್ರೀಂ ಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಲು ಮುಂದಾಗಿದ್ದಾರೆ.
ರಾಜ್ಯ ಸರ್ಕಾರ ಈ ಕೂಡಲೇ ‘ಸರ್ವಪಕ್ಷ ಸಭೆ’ ಕರೆದು ಈ ಬಗ್ಗೆ ಚರ್ಚೆ ನಡೆಸಬೇಕು. ಜತೆಗೆ ಕೇಂದ್ರದ ಮೇಲೆ ಒತ್ತಡ ಹೇರುವ ಕೆಲಸ ಮಾಡಬೇಕು. ನ್ಯಾಯಾಧಿಕರಣ ನೀಡಿರುವ ತೀರ್ಪಿನಂತೆ ನೀರು ಪಡೆಯಲು ಅವಕಾಶ ಮಾಡಿಕೊಡಬೇಕು ಎಂಬ ಬೇಡಿಕೆ ಮುಂದಿಟ್ಟು ಹೋರಾಟಕ್ಕೆ ಅಣಿಯಾಗಿದ್ದಾರೆ.
ಮಹದಾಯಿ ಯೋಜನೆಗೆ ಭಾರಿ ಹಿನ್ನಡೆ: ಮತ್ತೆ ತಗಾದೆ ತೆಗೆದ ಕೇಂದ್ರ ಪರಿಸರ ಅರಣ್ಯ ಇಲಾಖೆ
‘ಹುಲಿ ಸಂರಕ್ಷಿತ ಅಭಯಾರಣ್ಯ ಮಾಡಿಕೊಳ್ಳಲಿ. ಆದರೆ, ಪ್ರಾಣಿಗಳೊಂದಿಗೆ ಮನುಷ್ಯರು ಬದುಕಬೇಕಲ್ವಾ? ಹೀಗಾಗಿ, ಅಲ್ಲಿ ಯಾವುದೇ ಅಭಯಾರಣ್ಯ ಮಾಡಿಕೊಂಡರೂ ಅದಕ್ಕೆ ಕುಡಿಯುವ ನೀರಿನ ಯೋಜನೆಗೆ ಅಡ್ಡಿ ಪಡಿಸುವುದು ಸರಿಯಲ್ಲ. ಅಡ್ಡಿ ಪಡಿಸಬಾರದು. ಇದನ್ನು ಗೋವಾ ಸರ್ಕಾರ ಅರ್ಥ ಮಾಡಿಕೊಳ್ಳಬೇಕು’ ಎನ್ನುತ್ತಾರೆ ಹೋರಾಟಗಾರರು.
ನಮ್ಮ ರಾಜ್ಯಕ್ಕೆ ಅವರು ಬೇಕು. ಅವರ ರಾಜ್ಯಕ್ಕೆ ನಾವು ಬೇಕು. ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಸಹೋದರರಂತೆ ಬದುಕು ಸಾಗಿಸಬೇಕು. ದ್ವೇಷ ಸಾಧಿಸಲು ಹೋಗಿ ಸಂಬಂಧ ಹಾಳು ಮಾಡಿಕೊಳ್ಳಬಾರದು. ನಮ್ಮಲ್ಲಿಂದ ತರಕಾರಿ, ಹಾಲು ಸೇರಿದಂತೆ ದಿನಸಿ ಪದಾರ್ಥಗಳೆಲ್ಲ ಗೋವಾಕ್ಕೆ ಹೋಗುತ್ತವೆ. ಅವನ್ನು ನಾವು ಕೊಡಲ್ಲ ಎನ್ನಲು ಬರುತ್ತದೆಯೇ? ಅದೇ ರೀತಿ ಇಲ್ಲಿ ಹುಟ್ಟಿರುವ ಮಹದಾಯಿ ನದಿ ಅಲ್ಲಿಗೆ ಹರಿದು ಹೋಗುತ್ತದೆ. ಅದರಲ್ಲಿ ನಮ್ಮ ಪಾಲಿನ ನೀರನ್ನು ತೆಗೆದುಕೊಂಡು ಕುಡಿಯಲು ಬಳಸಿದರೆ ಸಮಸ್ಯೆಯೇನು? ಅದಕ್ಕೂ ಅಡ್ಡಿ ಪಡಿಸುವುದು ಎಷ್ಟುಸೂಕ್ತ ಎಂದು ಪ್ರಶ್ನಿಸುತ್ತಿದ್ದಾರೆ ಹೋರಾಟಗಾರರು.
ನ್ಯಾಯಾಧಿಕರಣಕ್ಕೆ ಬೆಲೆ ಇಲ್ವೆ?
ಮಹದಾಯಿ ಹಾಗೂ ಕಳಸಾ- ಬಂಡೂರಿ ನಾಲಾ ತಿರುವು ಯೋಜನೆಯನ್ನು ಜಾರಿಗೊಳಿಸಲು ಬೇಕಾದ ಯೋಜನೆಯನ್ನು ಕೈಗೆತ್ತಿಕೊಳ್ಳಲು ಯಾವುದೇ ಅಡ್ಡಿ ಆತಂಕ ಬರಬಾರದೆಂಬ ಉದ್ದೇಶದಿಂದಲೇ ಸುಪ್ರೀಂ ಕೋರ್ಚ್ ನ್ಯಾಯಾಧಿಕರಣ ರಚಿಸಿತ್ತು. ನ್ಯಾಯಾಧಿಕರಣವೇ ನಮ್ಮ ಪಾಲಿನ ನೀರನ್ನು ಗೊತ್ತು ಮಾಡಿ ತೀರ್ಪು ನೀಡಿದೆ. ಹಾಗಾದರೆ ನ್ಯಾಯಾಧಿಕರಣಕ್ಕೆ ಬೆಲೆ ಇಲ್ಲವೇ? ಕೇಂದ್ರ ಸರ್ಕಾರ ಏನು ಮಾಡುತ್ತಿದೆ? ಅಧಿಸೂಚನೆ ಹೊರಡಿಸಿಯೂ ಆಗಿದೆ. ಡಿಪಿಆರ್ ಒಪ್ಪಿಕೊಂಡು ಆಗಿದೆ. ಆದರೂ ಮತ್ತೆ ಮತ್ತೆ ಈ ರೀತಿ ತಗಾದೆಗಳು ಬರುವುದು ಎಷ್ಟುಸಮಂಜಸ? ಆದಕಾರಣ ನ್ಯಾಯಾಧಿಕರಣ ನೀಡಿರುವ ತೀರ್ಪನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದೇವೆ ಎಂದು ‘ರೈತ ಸೇನೆ ಕರ್ನಾಟಕ’ದ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ತಿಳಿಸಿದರು.
ಇದಕ್ಕೆ ಬೇಕಾಗಿರುವ ಅಗತ್ಯ ತಯಾರಿಯನ್ನು ಮಾಡಿಕೊಳ್ಳುತ್ತಿದ್ದೇವೆ. ಇನ್ನೆರಡ್ಮೂರು ದಿನಗಳಲ್ಲಿ ಸುಪ್ರೀಂ ಕೋರ್ಚ್‌ಲ್ಲಿ ಪಿಐಎಲ್ ಸಲ್ಲಿಸುವುದಾಗಿ ಸ್ಪಷ್ಟಪಡಿಸಿದರು.
ಕೇಂದ್ರ ಮಧ್ಯಪ್ರವೇಶಿಸಲಿ:
ಹುಲಿ ಸೇರಿದಂತೆ ಯಾವುದೇ ವನ್ಯಜೀವಿಗಳಿಗೆ ಅಡ್ಡಿಯಾಗದಂತೆ ಯೋಜನೆ ಜಾರಿಗೊಳಿಸಲು ಕೇಂದ್ರ ಸರ್ಕಾರವೇ ಮುಂದಾಗಬೇಕು. ಈ ನಿಟ್ಟಿನಲ್ಲಿ 3 ರಾಜ್ಯಗಳೊಂದಿಗೆ ಚರ್ಚೆ ಕೂಡ ನಡೆಸಬೇಕು. ಜತೆಗೆ ಯೋಜನೆ ಕೈಗೆತ್ತಿಕೊಳ್ಳಲು ಬೇಕಾದ ಅರಣ್ಯ ಹಾಗೂ ಪರಿಸರ ಇಲಾಖೆಗಳಿಂದ ಅನುಮತಿಯನ್ನು ಕೊಡಿಸಲು ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮುತುವರ್ಜಿ ವಹಿಸಿ ಕೆಲಸ ನಿರ್ವಹಿಸಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.
ಇನ್ನು ರಾಜ್ಯ ಸರ್ಕಾರ ಕೈಕಟ್ಟಿಕುಳಿತುಕೊಳ್ಳದೇ, ಬಾಂಬೆ ಹೈಕೋರ್ಚ್ ಪೀಠ ಕೊಟ್ಟಿರುವ ನಿರ್ದೇಶನದಿಂದ ಏನೇನು ಸಮಸ್ಯೆಯಾಗಬಹುದು. ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲು ಬೇಕಾದ ಕ್ರಮಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲು ಸರ್ವಪಕ್ಷಗಳ ಸಭೆ ಕರೆಯಬೇಕು. ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ. ಇದರಲ್ಲಿ ಮುಂದೆಯೂ ರಾಜಕಾರಣ ಮಾಡಿದರೆ ನಮ್ಮ ಹೋರಾಟವನ್ನು ಇನ್ನಷ್ಟುತೀವ್ರ ಗೊಳಿಸಬೇಕಾಗುತ್ತದೆ ಎಂಬ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಮಹದಾಯಿ ವನ್ಯಜೀವಿ ಅಭಯಾರಣ್ಯವನ್ನು ಹುಲಿ ಸಂರಕ್ಷಿತ ಅಭಯಾರಣ್ಯ ಎಂದು ಘೋಷಿಸಲು ಮುಂಬೈ ಹೈಕೋರ್ಚ್ ಪೀಠ ಗೋವಾ ಸರ್ಕಾರಕ್ಕೆ ಸೂಚನೆ ನೀಡಿರುವುದು ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಜಿಲ್ಲೆಗಳಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ರೈತರು ಮತ್ತೊಂದು ಸುತ್ತಿನ ಹೋರಾಟಕ್ಕೆ ಅಣಿಯಾಗಿದ್ದಾರೆ. ರಾಜ್ಯ ಸರ್ಕಾರ ಏನು ಮಾಡುತ್ತದೆ ಎಂಬುದನ್ನು ಕಾಯ್ದು ನೋಡಬೇಕಿದೆ.
ಕಳಸಾ- ಬಂಡೂರಿ ಬಗ್ಗೆ ಈ ಮೊದಲೇ ನ್ಯಾಯಾಧಿಕರಣ ತೀರ್ಪು ನೀಡಿ ಆಗಿದೆ. ಪ್ರಾಣಿಗಳು ಬದುಕಬೇಕು. ಮನುಷ್ಯರೂ ಬದುಕಬೇಕು. ಆ ರೀತಿ ಯೋಜನೆಯನ್ನು ಕೈಗೆತ್ತಿಕೊಳ್ಳಲಿ. ಅದಕ್ಕೆ ಬೇಕಾದ ಸಿದ್ಧತೆಯನ್ನು ರಾಜ್ಯ ಸರ್ಕಾರ ಮಾಡಿಕೊಳ್ಳಬೇಕು. ನಾವು ಕೂಡ ಯೋಜನೆ ಜಾರಿಗೆ ಆಗ್ರಹಿಸಿ ಸುಪ್ರೀಂ ಕೋರ್ಟ್ ಲ್ಲಿ ಪಿಐಎಲ್ ಹಾಕ್ತೇವೆ.
ವೀರೇಶ ಸೊಬರದಮಠ, ರಾಜ್ಯಾಧ್ಯಕ್ಷರು, ರೈತ ಸೇನೆ, ಕರ್ನಾಟಕ
ಮಹದಾಯಿ ಹಾಗೂ ಕಳಸಾ- ಬಂಡೂರಿ ಯೋಜನೆಗಳು ಬೇರೆ ಬೇರೆ. ಕಳಸಾ- ಬಂಡೂರಿ ಕುಡಿಯುವ ನೀರಿನ ಯೋಜನೆಯಾದರೆ, ಮಹದಾಯಿ ವಿದ್ಯುತ್ ಉತ್ಪಾದನೆಯ ಯೋಜನೆ. ನಮ್ಮ ರಾಜ್ಯದಲ್ಲೇ ಹುಟ್ಟಿಹರಿಯುವ ಕಳಸಾ-ಬಂಡೂರಿ ಸೇರಿದಂತೆ ಆರು ಹಳ್ಳಗಳ ಪ್ರದೇಶದಲ್ಲಿ ಒಂದೇ ಒಂದು ಹುಲಿ ಇಲ್ಲ. ನ್ಯಾಯಾಧಿಕರಣದ ತೀರ್ಪಿನಂತೆ ಯೋಜನೆ ಕೈಗೆತ್ತಿಕೊಳ್ಳಲು ಯಾವುದೇ ಸಮಸ್ಯೆಯಿಲ್ಲ.- ವಿಜಯ ಕುಲಕರ್ಣಿ, ಕಳಸಾ- ಬಂಡೂರಿ ಹೋರಾಟಗಾರ
ರಾಜ್ಯ ಸರ್ಕಾರ ಕೂಡಲೇ ಸರ್ವಪಕ್ಷ ಸಭೆ ಕರೆಯಬೇಕು. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಯೋಜನೆ ಜಾರಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅವರು ಮನಸು ಮಾಡಿದರೆ ಈ ಯೋಜನೆ ಜಾರಿಗೊಳಿಸುವುದೇನೂ ಕಷ್ಟವಲ್ಲ. ಪ್ರಧಾನಿ ಮಧ್ಯಪ್ರವೇಶಿಸಿ 3 ರಾಜ್ಯಗಳೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಬೇಕು. ರಾಜಕಾರಣ ಮಾಡಬಾರದು.- ಲೋಕನಾಥ ಹೆಬಸೂರ, ಹೋರಾಟಗಾರ
ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ಪ್ರದೇಶವನ್ನು ಮುಂಬೈ ಹೈಕೋರ್ಟ್ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಿದ್ದು ಆಶ್ಚರ್ಯ ತಂದಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಈ ಆದೇಶ ಬರಲಿಲ್ಲ. ಈಗ ಕಾಂಗ್ರೆಸ್ ಸರ್ಕಾರ ಬಂದ ತಕ್ಷಣವೇ ಕೋರ್ಟ್ ಆದೇಶ ಮಾಡಿದ್ದು ತಿಳಿಯದಾಗಿದೆ.- ಎಸ್.ಬಿ. ಜೋಗಣ್ಣವರ, ರಾಜ್ಯ ಕಾರ್ಯದರ್ಶಿ, ರೈತ ಸೇನೆ, ಕರ್ನಾಟಕ
ಮಹದಾಯಿ ಅಭಯಾರಣ್ಯ ಪ್ರದೇಶವನ್ನು ಹೈಕೋರ್ಟ್ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಿದ್ದು ಸರಿ, ಆದರೆ ಈ ಪ್ರದೇಶದಲ್ಲಿ ಹೆಚ್ಚು ಹುಲಿಗಳು ಇರುವುದಿಲ್ಲ, ಇದನ್ನು ರಾಜ್ಯ ಸರ್ಕಾರ ಪಿಐಎಲ್‌ಕೋರ್ಟ್‌ಗೆ ಸಲ್ಲಿಸಿ ಈ ಸಮಸ್ಯೆ ನಿವಾರಣೆ ಮಾಡಿಕೊಳ್ಳಲು ಸಾಧ್ಯವಿದೆ.
ವೀರಭಸಪ್ಪ ಹೂಗಾರ, ಅಧ್ಯಕ್ಷರು, ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಮಹದಾಯಿ ಹಾಗೂ ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ
ಮಹದಾಯಿ ಪ್ರದೇಶವನ್ನು ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಿದನ್ನು ಸ್ವಾಗತಿಸುತ್ತೇವೆ. ಆದರೆ ಗೋವಾ ರಾಜ್ಯದವರೆಗೆ ಈ ಪ್ರದೇಶ ಹುಲಿ ಸಂರಕ್ಷಿತ ಅರಣ್ಯ ಘೋಷಣೆಗೆ ವಿರೋಧ ಇದೆ.
ಹನಮಂತ ಮಡಿವಾಳರ, ಮಹದಾಯಿ ಹಾಗೂ ಕಳಸಾ ಬಂಡೂರಿ ಹೋರಾಟಗಾರ
ಮಹದಾಯಿ ಹಾಗೂ ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆ ಮಾಡುವ ಪ್ರದೇಶದಲ್ಲಿ ಹುಲಿಗಳು ನಿರಂತರ ವಾಸ ಮಾಡುವುದಿಲ್ಲ, ಯಾವಾಗೋ ಒಮ್ಮೆ ಹುಲಿಗಳು ಈ ಪ್ರದೇಶದಿಂದ ಮಹಾರಾಷ್ಟ್ರ ರಾಜ್ಯದ ಅರಣ್ಯ ಪ್ರದೇಶಕ್ಕೆ ಹೋಗುತ್ತವೆ. ಆದ್ದರಿಂದ ಹೈಕೋರ್ಚ್ ಆದೇಶ ಮಾಡಿದ್ದನ್ನು ಗಮನಿಸುತ್ತೇವೆ, ನಾವು ಮುಂದಿನ ದಿನಗಳಲ್ಲಿ ಕಾನೂನು ಮೂಲಕ ಈ ಯೋಜನೆಯಿಂದ ಹುಲಿಗಳಿಗೆ ಯಾವುದೇ ತೊಂದರೆ ಆಗುವುದಿಲ್ಲವೆಂದು ತಿಳಸುತ್ತೇವೆ.
ಚನ್ನು ನಂದಿ, ಕನ್ನಡಪರ ಒಕ್ಕೂಟಗಳ ಮುಖಂಡ
ಮಹದಾಯಿ ಯೋಜನೆಗೆ ಮತ್ತೊಂದು ವಿಘ್ನ?: ಕೋರ್ಟ್ ಹೇಳಿದ್ದೇನು...
ಬಾಂಬೆ ಹೈಕೋರ್ಟ್‌ನ ಗೋವಾ ಪೀಠದ ತೀರ್ಮಾನ ಗೋವಾದ ಒಂದು ಎನ್‌ಜಿಒ ಹಾಕಿದ ಪಿಐಎಲ್ ಅಡಿಯಲ್ಲಿ ನೀಡಿದ ನಿರ್ದೇಶನ. ಮಹದಾಯಿ ಯೋಜನೆಯ ಜಾರಿಯ ವಿಷಯದಲ್ಲಿ 25 ವರ್ಷಗಳಿಂದ ಸರ್ವೋಚ್ಚ ನ್ಯಾಯಾಲಯ ಮತ್ತು ನ್ಯಾಯಾಧಿಕರಣದಲ್ಲಿ ವಿಚಾರಣೆ ನಡೆದು ಅಂತಿಮ ಆದೇಶವಾಗಿ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದೆ. ಯೋಜನೆಯ ವಿಸ್ತೃತ ವರದಿಗೆ ಅನುಮತಿ ನೀಡಿದ್ದರಿಂದ ನಿಲ್ಲಿಸಲು ಸಾಧ್ಯವಿಲ್ಲ. ಯೋಜನೆ ಪ್ರದೇಶ ಅರಣ್ಯದ ಅಂಚಿನ ಜನವಸತಿ ಪ್ರದೇಶಕ್ಕೆ ಹತ್ತಿರವಿದ್ದು, ಯೋಜನೆ ವ್ಯಾಪ್ತಿ ಕನಿಷ್ಠ ಪ್ರಮಾಣದಲ್ಲಿರುತ್ತದೆ. ಇದೆಲ್ಲವೂ ರಾಜಕೀಯ ಪ್ರೇರಿತ ಬೆಳವಣಿಗೆಯಾಗಿದ್ದು, ಕುಡಿಯುವ ನೀರಿನ ಯೋಜನೆಗೆ ಈ ತೀರ್ಮಾನಗಳು ಕಾನೂನಾತ್ಮಕವಾಗಿ ನಿರ್ಬಂದಿತವಾಗಲಾರದು.
-ಶಂಕರ ಅಂಬಲಿ, ಮಹಾದಾಯಿ ಯೋಜನೆ ಹೋರಾಟಗಾರರು
ರಾಜಕೀಯ ದುರುದ್ದೇಶ
ಪ್ರಸ್ತುತ ಮಹದಾಯಿ ಯೋಜನೆಗೆ ಮತ್ತೊಂದು ತಡೆ ಬಂದಿರುವುದು ರಾಜಕೀಯ ದುರುದ್ದೇಶ, ಕುತಂತ್ರದ ನಡೆ ಎನ್ನಬಹುದು. ಹುಲಿ ಸಂರಕ್ಷಿತ ಅರಣ್ಯ ಪ್ರದೇಶವೆಂದು ಕ್ರಮ ಕೈಗೊಂಡರೆ ಕರ್ನಾಟಕಕ್ಕಿಂತ ಗೋವಾದವರಿಗೆ ಹೆಚ್ಚು ತೊಂದರೆ. ಹೀಗಾಗಿ ಗೋವಾ ಸರ್ಕಾರ ಕೂಡಾ ಇದನ್ನು ವಿರೋಧಿಸಿದೆ. ಕೂಡಲೇ ರಾಜ್ಯ ಸರ್ಕಾರ ಈ ನಡೆಗೆ ವಿರೋಧವಾಗಿ ವಾದ ಮಂಡಿಸಿ ವಿಘ್ನಕ್ಕೆ ತಡೆ ನೀಡಬೇಕು. ಮಹದಾಯಿಗಾಗಿ ಹಲವಾರು ವರ್ಷಗಳಿಂದ ಹೋರಾಟ ನಡೆಯುತ್ತಿದ್ದು ಕೂಡಲೇ ಅನುಷ್ಠಾನವಾಗಿದ್ದರೆ ಇಂತಹ ತೊಂದರೆಗಳು ಬರುತ್ತಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ ರಾಜ್ಯ ಸರ್ಕಾರ ಬಾಂಬೆ ಕೋರ್ಟ್‌ನಿರ್ದೇಶನ ಪ್ರಶ್ನಿಸುವ ಕೆಲಸ ಮಾಡಬೇಕು. ಹು-ಧಾ ಅವಳಿ ನಗರದ ಜನತೆಗೆ ಕುಡಿಯುವ ನೀರಿಗಾಗಿ ಯೋಜನೆ ಜಾರಿ ಮಾಡುತ್ತಿದ್ದು ಮನುಷ್ಯನ ಅಗತ್ಯತೆ ಮೊದಲು ನಂತರ ಉಳಿದಿದ್ದು. ಹೀಗಾಗಿ ರಾಜ್ಯ ಸರ್ಕಾರ ಪ್ರಶ್ನಿಸಲಿ.
ಶಂಕರ ಹಲಗತ್ತಿ, ಮಹದಾಯಿ ಹೋರಾಟಗಾರರು, ನ್ಯಾಯವಾದಿಗಳು