ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿಗಳಲ್ಲೊಂದಾದ ಮನೆಯೊಡತಿಗೆ ಮಾಸಿಕ .2 ಸಾವಿರ ನೀಡುವ ಗೃಹಲಕ್ಷ್ಮೀ ಯೋಜನೆ ಕುರಿತಂತೆ ಸರ್ಕಾರ ಸಾಕಷ್ಟುಮಾಹಿತಿ ನೀಡಿದರೂ ಅರ್ಜಿ ಸಲ್ಲಿಸಲು ಗೃಹಲಕ್ಷ್ಮೀಯರು ನೋಂದಣಿ ಕೇಂದ್ರಗಳಿಗೆ ಮುಗಿಬೀಳುತ್ತಿರುವುದು ಮಾತ್ರ ತಪ್ಪುತ್ತಿಲ್ಲ.
ಧಾರವಾಡ (ಜು.26) : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿಗಳಲ್ಲೊಂದಾದ ಮನೆಯೊಡತಿಗೆ ಮಾಸಿಕ ₹2 ಸಾವಿರ ನೀಡುವ ಗೃಹಲಕ್ಷ್ಮೀ ಯೋಜನೆ ಕುರಿತಂತೆ ಸರ್ಕಾರ ಸಾಕಷ್ಟುಮಾಹಿತಿ ನೀಡಿದರೂ ಅರ್ಜಿ ಸಲ್ಲಿಸಲು ಗೃಹಲಕ್ಷ್ಮೀಯರು ನೋಂದಣಿ ಕೇಂದ್ರಗಳಿಗೆ ಮುಗಿಬೀಳುತ್ತಿರುವುದು ಮಾತ್ರ ತಪ್ಪುತ್ತಿಲ್ಲ.
ಪಕ್ಕದ ಮನೆಯೊಡತಿಗೆ ಸಂದೇಶ ಬಂದಿದೆ, ನನಗೇತಕ್ಕೆ ಬಂದಿಲ್ಲ. ಕೂಡಲೇ ನಮಗೂ ಸಂದೇಶ ಕಳುಹಿಸಿ ಹೆಸರು ನೋಂದಣಿ ಮಾಡಿ ಎನ್ನುವ ಗೃಹಲಕ್ಷ್ಮೀಯರು ಒಂದೆಡೆಯಾದರೆ, ಮಹಿಳೆಯರೊಂದಿಗೆ ಅವರ ಪತಿ, ಮಕ್ಕಳು ಸೇರಿದಂತೆ ಇಡೀ ಕುಟುಂಬವೇ ನೋಂದಣಿ ಕೇಂದ್ರಗಳಿಗೆ ಬರುತ್ತಿದ್ದು ಅಕ್ಷರಶಃ ಧಾರವಾಡದ ಹಲವು ನೋಂದಣಿ ಕೇಂದ್ರದ ಸಿಬ್ಬಂದಿ ಹೈರಾಣಾಗಿದ್ದಾರೆ.
Congress guarantee: ಗೃಹಲಕ್ಷ್ಮೀ ಯೋಜನೆಗೆ ನೋಂದಣಿ; ಇಂದಿನಿಂದ ಪುನಃ ಆರಂಭ
ಒಂದು ಕೇಂದ್ರದಲ್ಲಿ ನಿತ್ಯ 60 ಜನರ ನೋಂದಣಿ ಮಾತ್ರ ಮಾಡಲಾಗುತ್ತಿದ್ದು, ತಮ್ಮ ಮೊಬೈಲ್‌ಗೆ ಸಂದೇಶ ಬಂದವರು ಮಾತ್ರ ಆಯಾ ಕೇಂದ್ರಗಳಿಗೆ ಹೋಗಬೇಕು ಎಂಬ ಸರ್ಕಾರದ ನಿರ್ದೇಶನ ಪಾಲಿಸದೇ ಜನತೆ ಯೋಜನೆ ಕೈ ಬಿಟ್ಟೀತು ಎಂಬ ಆತಂಕದಲ್ಲಿ ಸಂದೇಶ ಬರದೇ ಇದ್ದರೂ ಸಮೀಪದ ನೋಂದಣಿ ಕೇಂದ್ರಗಳಿಗೆ ಬರುತ್ತಿದ್ದಾರೆ. ನಸುಕಿನಲ್ಲಿಯೇ ಕೇಂದ್ರಕ್ಕೆ ಬಂದು ಪಾಳಿ ಹಚ್ಚುತ್ತಿದ್ದಾರೆ. ಯೋಜನೆಗೆ ಸರ್ಕಾರ ಆನ್‌ಲೈನ್ ಮೂಲಕ ಅರ್ಜಿಗಳನ್ನು ಪಡೆದುಕೊಳ್ಳುತ್ತಿದೆ. ಆಗಾಗ ವೆಬ್‌ಸೈಟ್ ಸಮಸ್ಯೆ ಆಗುತ್ತಿದ್ದು ಮಹಿಳೆಯರಲ್ಲೇ ಪರಸ್ಪರ ಜಗಳ, ವಾಗ್ವಾದಗಳು ನಡೆಯುತ್ತಿವೆ.
ಇಲ್ಲಿಯ ಕಲಾಭವನ ಹು-ಧಾ ಗ್ರಾಮ ಒನ್ ಕೇಂದ್ರದಲ್ಲಿ ಬೆಳಗ್ಗೆಯಿಂದಲೇ ಜನರು ಪಾಳಿ ಹಚ್ಚಿದ್ದಾರೆ. ಉದಯ ಹಾಸ್ಟೆಲ್ ಬಳಿ ಇರುವ ಹುಬ್ಬಳ್ಳಿ-ಧಾರವಾಡ ಗ್ರಾಮ ಒನ್ ಕೇಂದ್ರದಲ್ಲೂ ಅರ್ಜಿಗಳನ್ನು ಪಡೆಯಲಾಗುತ್ತಿದೆ. ಸರ್ವರ್ ಸಮಸ್ಯೆಯಾಗುತ್ತಿರುವುದರಿಂದ ಮಹಿಳೆಯರು ಸರತಿ ಸಾಲಿನಲ್ಲಿ ಕೊಡೆ ಹಿಡಿದು ನಿಲ್ಲುವಂತಾಗಿದೆ. ಹೀಗಾಗಿ ಗೃಹಲಕ್ಷ್ಮೀಯರು ಸಿಬ್ಬಂದಿ ಜೊತೆ ವಾಗ್ವಾದ ಮಾಡುವ ಪರಿಸ್ಥಿತಿ ಬಂದಿದ್ದು, ಕೇಂದ್ರದ ಎದುರು ಪೊಲೀಸರನ್ನು ನಿಲ್ಲಿಸಿ ಎಂದು ಕೇಂದ್ರದ ಸಿಬ್ಬಂದಿ ಆಗ್ರಹಿಸುತ್ತಾರೆ.
ಒಮ್ಮೆ ಸರ್ವರ್ ದೋಷವಿದೆ ಎನ್ನುತ್ತಾರೆ. ಬರೀ 60 ಅರ್ಜಿ ಮಾತ್ರ ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ. ಅಗತ್ಯ ಕಂಪ್ಯೂಟರ್ ಹಾಗೂ ಸಿಬ್ಬಂದಿ ನೇಮಕ ಮಾಡಿ ಮುಂಜಾಗ್ರತಾ ಕ್ರಮ ಅನುಸರಿಸಬೇಕು. ಈಗ ನಾವು ಬೆಳಗ್ಗೆಯಿಂದಲೇ ಕಾಯುತ್ತಿದ್ದೇವೆ. ಮಳೆಯಲ್ಲೇ ಸಾಲುಗಟ್ಟಿನಿಂತಿದ್ದೇವೆ. ನಮ್ಮ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಲೋಪದೋಷಗಳನ್ನು ಸರಿಪಡಿಸಬೇಕು ಎಂದು ಪಾರ್ವತಿ ಎಂಬುವರು ಆಗ್ರಹಿಸಿದರು.
ಗೃಹಲಕ್ಷ್ಮೀ: ಸರ್ವರ್ ಸಮಸ್ಯೆ, ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ!
80 ಸಾವಿರಕ್ಕೂ ಅಧಿಕ ನೋಂದಣಿ:
ಆರಂಭದಲ್ಲಿ ಮಾತ್ರ ಸರ್ವರ ಸಮಸ್ಯೆ ಇತ್ತು. ಈಗ ಯಾವುದೇ ತೊಂದರೆ ಇಲ್ಲ. ಜನರು ಸಮಾಧಾನದಿಂದ ವರ್ತನೆ ಮಾಡಿದರೆ ಜಿಲ್ಲೆಯ ಎಲ್ಲ ಫಲಾನುಭವಿಗಳನ್ನು ಯೋಜನೆ ಅಡಿ ನೋಂದಣಿ ಮಾಡಲಾಗುತ್ತದೆ. ಆದರೆ, ತಮ್ಮ ಮೊಬೈಲ್‌ಗೆ ಸಂದೇಶ ಬಂದವರಿಗೆ ಮಾತ್ರ ನೋಂದಣಿ ಮಾಡಲಾಗುತ್ತದೆ ಎಂದು ಹೇಳಿದರೂ ಜನರು ಕೇಂದ್ರಕ್ಕೆ ಬರುತ್ತಿರುವುದು ತುಸು ಗೊಂದಲವಾಗಿದೆ. ಇಷ್ಟಾಗಿಯೂ ಇಲ್ಲಿಯ ವರೆಗೆ ಜಿಲ್ಲೆಯ 80 ಸಾವಿರಕ್ಕೂ ಅಧಿಕ ಸಂಖ್ಯೆ ಫಲಾನುಭವಿಗಳ ಹೆಸರು ನೋಂದಣಿ ಮಾಡಲಾಗಿದೆ. ಇನ್ನೊಂದೆರೆಡು ವಾರಗಳಲ್ಲಿ ಎಲ್ಲ ಫಲಾನುಭವಿಗಳ ಹೆಸರು ನೋಂದಣಿ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಿರಿಯ ಅಧಿಕಾರಿ ಪದ್ಮಾವತಿ ಅವರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.