ಪ್ರಾದೇಶಿಕ ಅಸಮಾನತೆ ಕಲ್ಯಾಣದ ಸೀಮೆ ಬಿಟ್ಟು ಹೋಗಿಲ್ಲ

By Kannadaprabha News  |  First Published Mar 9, 2022, 12:36 AM IST

ಹಿಂದುಳಿದ ಜಿಲ್ಲೆಗಳಲ್ಲೀಗ ಹೊಸ ತಲೆನೋವು

ತಲಾ ಆದಾಯದಲ್ಲಿ ಕಲ್ಯಾಣ ನಾಡಿನ ಜಿಲ್ಲೆಗಳು ಇಂದಿಗೂ ಕೊನೆ ಸ್ಥಾನ

ಅಭಿವೃದ್ಧಿಯ ಸಾವಿರಾರು ಕೋಟಿ ಅನುದಾನ ಹೋಯ್ತೆಲ್ಲಿ?


ಶೇಷಮೂರ್ತಿ ಅವಧಾನಿ
ಕಲಬುರಗಿ (ಮಾ.9): ತಲಾ ಆದಾಯ (ಪರ್‌ ಕ್ಯಾಪಿಟಾ ಇನ್‌ಕಮ್‌)ದಲ್ಲಿ (Per Capita Income) ಕಲ್ಯಾಣ ಕರ್ನಾಟಕದ (Kalyana Karnataka) ಪಂಚ ಜಿಲ್ಲೆಗಳು ರಾಜ್ಯದ ಇತರೆಲ್ಲಾ ಜಿಲ್ಲೆಗಳಿಂತಲೂ ಕೊನೆಯ ಸ್ಥಾನದಲ್ಲಿರುವ ಆತಂಕಕಾರಿ ವಿಚಾರ ರಾಜ್ಯ ಸರಕಾರದ ಪ್ರಸಕ್ತ ಸಾಲಿನ ಆರ್ಥಿಕ ಸಮೀಕ್ಷೆ (Karnataka Economic Survey) ಬಯಲು ಮಾಡಿದೆ. ಇದರೊಂದಿಗೆ ಅಭಿವೃದ್ಧಿ ವಿಚಾರದಲ್ಲಿ ದಶಕಗಳಿಂದಲೂ ಕಲ್ಯಾಣ ನಾಡನ್ನು ಅಮರಿಕೊಂಡಿರುವ ‘ಪ್ರಾದೇಶಿಕ ಅಸಮಾನತೆ ಭೂತ’ ಇಂದಿಗೂ ಕಲ್ಯಾಣದ ಸೀಮೆಯನ್ನ ಬಿಟ್ಟು ತೊಲಗಿಲ್ಲ ಎಂಬಂಶ ಮತ್ತೊಮ್ಮೆ ಸಾಬೀತಾಗಿದೆ.

ಡಾ.ಡಿಎಂ ನಂಜುಂಡಪ್ಪ (DM Nanjundappa Report) ವರದಿಯಂತೆ ವಿಶೇಷಾಭಿವೃದ್ಧಿ ಯೋಜನೆ (ಎಸ್‌ಡಿಪಿ)ಯಡಿ ಹಿಂದುಳಿದ, ಅತೀ ಹಿಂದುಳಿದ ಕಲ್ಯಾಣದ 41 ತಾಲೂಕುಗಳಲ್ಲೇ ಇದುವರೆಗೂ 24,429 ಕೋಟಿ ರು. ವೆಚ್ಚವಾದರೂ, ಹಿಂದಿನ ಎಚ್ಕೆಆರ್‌ಡಿಬಿ, ಇಂದಿನ ಕೆಕೆಆರ್‌ಡಿಬಿ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ವಾರ್ಷಿಕ ಸರಾಸರಿ 1,200 ಕೋಟಿ ರು.ನಂತೆ ಈ ಭಾಗಕ್ಕೆ ಸಾವಿರಾರು ಕೋಟಿ ರು. ಹಣ ಹರಿದು ಬಂದರೂ ಅದು ಹೋಯ್ತೆಲ್ಲಿ? ಕೋಟಿ ಕೋಟಿ ಅಭಿವೃದ್ಧಿ ಅನುದಾನಕ್ಕೆ ಪ್ರಾದೇಶಿಕ ಅಸಮಾನತೆ ಮೆಟ್ಟಿನಿಲ್ಲೋದು ಆಗಲೇ ಇಲ್ಲ ಯಾಕೆ? ಎಂಬ ಪ್ರಶ್ನೆಗಳು ಸಮೀಕ್ಷೆ ಬೆನ್ನಲ್ಲೇ ಹುಟ್ಟಿಕೊಂಡಿವೆ.

ಕರ್ನಾಟಕ ಸರ್ಕಾರದ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ 2021- 22 ನೇ ಸಾಲಿನ ಆರ್ಥಿಕ ಸಮೀಕ್ಷೆ ‘ಪ್ರಾದೇಶಿಕ ಅಸಮತೋಲನ’ ಇಂದಿಗೂ ಜೀವಂತವಾಗಿದೆ ಎಂಬಂಶವನ್ನು ಸಾರಿ ಹೇಳಿದೆ! ತಲಾ ಆದಾಯದಲ್ಲಿ ಬೆಂಗಳೂರು ನಗರ ಜಿಲ್ಲೆ(Bengaluru City) ಎಲ್ಲಕ್ಕಿಂತ ಮೊದಲಿದ್ದರೆ ಕಲ್ಯಾಣದ ಹೆಬ್ಬಾಗಿಲು ಕಲಬುರಗಿ (Kalaburagi) ಎಲ್ಲಕ್ಕಿಂತ ಕೊನೆಯಲ್ಲಿದೆ. ಅಭಿವೃದ್ಧಿಯಲ್ಲಿ ಪ್ರಾದೇಶಿಕ ಅಸಮಾನತೆ ಇನ್ನೂ ಕಲ್ಯಾಣದ ನೆಲವನ್ನು ತಿಕ್ಕಿಮುಕ್ಕುತ್ತಿದೆ ಎನ್ನಲು ಇದೊಂದೇ ಸಂಗತಿ ಸಾಕಲ್ಲವೆ?

ಸಮೀಕ್ಷೆಯಲ್ಲಿ ರಾಜ್ಯದ ಮೂವತ್ತೂ ಜಿಲ್ಲೆಗಳ ತಲಾ ಆದಾಯ ತೋರಿಸಲಾಗಿದ್ದು ಈ ಪೈಕಿ 26 ಜಿಲ್ಲೆಗಳ ಆದಾಯ ಬೆಂಗಳೂರು ನಗರ ತಲಾ ಆದಾಯಕ್ಕಿಂತ ಕಮ್ಮಿ ಇರೋದು ದಾಖಲಾಗಿದೆ. ತಲಾ ಆದಾಯದ ರಾಜ್ಯ ಸರಾಸರಿ 1,55,869 ರುಪಾಯಿ ಇದ್ದು ರಾಜ್ಯದ ಶೇ.75ರಷ್ಟುಜಿಲ್ಲೆಗಳ ತಲಾ ಆದಾಯ ಈ ಸರಾಸರಿಗೆ ಹತ್ತಿರವೂ ಇಲ್ಲ. ಸದರಿ ಸಮೀಕ್ಷೆ ರಾಜ್ಯದ ಜಿಲ್ಲೆಗಳಲ್ಲಿನ ಆರ್ಥಿಕಾಭಿವೃದ್ಧಿ ನೋಟ, ಅಂತರ್‌ ಜಿಲ್ಲೆಗಳ ಮಟ್ಟದಲ್ಲಿನ ನೀತಿ ನಿರೂಪಣೆ ಹೇಗಿರಬೇಕೆಂಬುದರತ್ತ ಬೆರಳು ತೋರಿದೆಯಲ್ಲದೆ ರಾಜ್ಯ ಮಟ್ಟದಲ್ಲಿನ ಆರ್ಥಿಕಾಭಿವೃದ್ಧಿಯಲ್ಲಿನ ಅಸಮಾನತೆಗಳ ಅನೇಕ ಸಂಗತಿಗಳಿಗೂ ಈ ಸಮೀಕ್ಷೆ ಕನ್ನಡಿ ಹಿಡಿದಿದೆ. ರಾಜ್ಯದ 4 ಕಂದಾಯ ವಿಭಾಗಗಳ ನಡುವಿನ ತಲಾ ಆದಾಯದಲ್ಲಿಯೂ ಭಾರಿ ಅಂತರ ದಾಖಲಾಗಿರೋದು ಕಳವಳಕಾರಿ ಸಂಗತಿ ಎನ್ನಲಾಗುತ್ತಿದೆ. ಬೆಂಗಳೂರು ವಿಭಾಗದ ಸರಾಸರಿ ತಲಾ ಆದಾಯ 3,26,009 ರುಪಾಯಿ ಇದ್ದರೆ ಕಲಬುರಗಿ ಕಂದಾಯ ವಿಭಾಗದ ತಲಾ ಆದಾಯ ಇದರ ಅರ್ಧಕ್ಕೂ ಇಲ್ಲ!

Karnataka GDP: ಕೊರೋನಾ ವೇಳೆ ಕರ್ನಾಟಕದ ಜಿಡಿಪಿ ದಾಖಲೆ: ದೇಶದಲ್ಲೇ ನಂ.1 ಸ್ಥಾನ
ಎಚ್ಚರಿಕೆ ಗಂಟೆ- ಯಕ್ಷ ಪ್ರಶ್ನೆ
ಕೋಟಿಗಟ್ಟಲೆ ಅನುದಾನ ನೀರಿನಂತೆ ಕಲ್ಯಾಣದತ್ತ ಹರಿದು ಬಂದರೂ ಅಭಿವೃದ್ಧಿಯ ಅಳತೆಗೋಲಾದ ತಲಾ ಆದಾಯ ಸೂಚ್ಯಂಕದಲ್ಲಿ ಈ ಸೀಮೆಯ ಜಿಲ್ಲೆಗಳೆಲ್ಲವೂ ಕೊನೆಯ ಸ್ಥಾನದಲ್ಲೇ ಕೊಳೆಯುತ್ತಿರೋದು ನಮ್ಮನ್ನಾಳುವವರಿಗೆ, ಇಲ್ಲಿರುವ ಅಧಿಕಾರಶಾಹಿ ವ್ಯವಸ್ಥೆಗೇ ಎಚ್ಚರಿಕೆ ಗಂಟೆ ಎನ್ನಬಹುದು. ಉದ್ದಿಮೆ, ಮೂಲ ಸೌಕರ್ಯ ಬರ ಕಲ್ಯಾಣವನ್ನ ಕಂಗೆಡಿಸಿದ್ದರೂ ಕೇಳೋರಿಲ್ಲ. ಅದೆಷ್ಟೇ ಅನುದಾನ ಬಂದರೂ ಅದೆಲ್ಲವೂ ರಾಜಕಾರಣಿ, ಗುತ್ತಿಗೆದಾರ, ಅಧಿಕಾರಿಗಳ ನಡುವಿನ ಅಪವಿತ್ರ ಮೈತ್ರಿಯಲ್ಲಿಯೇ ಕರಗಿಹೋಗುತ್ತಿದೆ ಎಂಬುದು ಗುಟ್ಟೇನಲ್ಲ. ಈ ಅಕ್ರಮ ಮೈತ್ರಿಕೂಟದ ವಿರುದ್ಧ ಕ್ರಮಕ್ಕಿದು ಸಕಾಲ, ಅನುದಾನ ಅಭಿವೃದ್ಧಿಗೆ ಬಳಕೆಯಾಗಬೇಕೇ ವಿನಹಃ ಅದು ದುರ್ದಾನವಾಗಬಾರದಲ್ಲವೆ? ಬೆಕ್ಕಿನ ಕೊರಳಿಗೆ ಗಂಟೆ ಕಟ್ಟೋರ್ಯಾರು ಎಂಬುದೇ ಈ ಸಂದರ್ಭದ ಯಕ್ಷ ಪ್ರಶ್ನೆ.

Economic Survey 2022: ಲಾಕ್ಡೌನ್‌ನ ವಲಸಿಗರಿಗೆ ಕೆಲಸ: ಕರ್ನಾಟಕ ದೇಶಕ್ಕೇ ಪ್ರಥಮ!
ಏನಿದು ತಲಾ ಆದಾಯ?
ಒಂದು ನಗರ, ಜಿಲ್ಲೆ, ಪ್ರದೇಶದಲ್ಲಿ ವಾಸವಿರುವ ಪ್ರತಿ ವ್ಯಕ್ತಿಯ ಆದಾಯದ ಲೆಕ್ಕವೇ ತಲಾ ಆದಾಯ. ಒಂದು ಪ್ರದೇಶದ ಒಟ್ಟಾರೆ ಆದಾಯವನ್ನು ಆ ಪ್ರದೇಶದಲ್ಲಿನ ಒಟ್ಟು ಜನಸಂಖ್ಯೆಗೆ ಅನುಸಾರವಾಗಿ ಭಾಗಿಸಿ ತಲಾ ಆದಾಯ ಲೆಕ್ಕಹಾಕಲಾಗುತ್ತದೆ. ಆಯಾ ಪ್ರದೇಶದ ಆರ್ಥಿಕಾಬಿವೃದ್ಧಿ ಚಟುವಟಿಕೆಗಳೆಲ್ಲವೂ ತಲಾ ಆದಾಯದ ಮೇಲೆ ನೇರ ಪರಿಮಾಮ ಬೀರುವ ಮಹತ್ವದ ಅಂಶಗಳಾಗಿವೆ.

ತಲಾ ಆದಾಯ ಮಾಹಿತಿ ನೋಟ:
ಟಾಪ್‌ ಜಿಲ್ಲೆಗಳು (ರುಪಾಯಿಯಲ್ಲಿ)
ಬೆಂಗಳೂರು ನಗರ- 5,41,638
ದಕ್ಷಿಣ ಕನ್ನಡ- 3,71,771
ಉಡುಪಿ- 2,97,524
ಚಿಕ್ಕಮಗಳೂರು- 2,83,705
ಶಿವಮೊಗ್ಗ- 2,15,360
ಬೆಂಗಳೂರು ಗ್ರಾಮಾಂತರ- 2,05,165
ರಾಮನಗರ- 1,95,165
ಕೊಡಗು- 1,90,550
ತುಮಕೂರು- 1,82,995
ಮಂಡ್ಯ- 1,82,875

Tap to resize

Latest Videos

ಕೊನೆಯ ಜಿಲ್ಲೆಗಳಿವು (ರುಪಾಯಿಗಳಲ್ಲಿ)
ಕಲಬುರಗಿ- 1,00,446
ಕೊಪ್ಪಳ- 1,10,886
ಬೀದರ್‌- 1,11,750
ಯಾದಗಿರಿ- 1,12,937
ರಾಯಚೂರು- 1,16,000
ವಿಜಯಪುರ- 1,13,956

click me!