ಚೈತ್ರಾ ಕುಂದಾಪುರ ವಂಚನೆ ಕೇಸ್‌: ನಾನು ಕಬಾಬ್‌ ಮಾರಲ್ಲ, ಬಿಜೆಪಿಗನ ವೇಷ ಹಾಕಿದ್ದು ನಿಜ, ಕಬಾಬ್‌ ನಾಯ್ಕ್

By Kannadaprabha News  |  First Published Sep 15, 2023, 1:54 PM IST

ನಾನು ಕಬಾಬ್ ಮಾರಾಟ ಮಾಡುವುದಿಲ್ಲ. ಕೆ.ಆರ್‌.ಪುರದಲ್ಲೂ ನೆಲೆಸಿಲ್ಲ. ನನ್ನೂರು ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣವಾಗಿದೆ. ಕಡೂರಿನಲ್ಲೇ ನೆಲೆಸಿದ್ದೇನೆ ಎಂದಿದ್ದಾನೆ. ಅಲ್ಲದೆ 'ಪೂಜಾರಿ ಅವರನ್ನು ನಾನು ಮೂರೇ ನಿಮಿಷ ಭೇಟಿಯಾಗಿದ್ದು, ನಾನು ಅವರಿಗೆ ವಂಚಿಸಿಲ್ಲ. ನನಗೆ ಚೈತ್ರಾ ಕುಂದಾಪುರ ಕಡೆಯಿಂದ 93 ಸಾವಿರ ರು. ಸಂದಾಯವಾಗಿತ್ತು ಎಂದು ಹೇಳಿದ್ದಾನೆ: ಕಬಾಬ್‌ ನಾಯ್ಕ್


ಬೆಂಗಳೂರು(ಸೆ.15): ''ನಾನು ಕಬಾಬ್‌ ಮಾರುವನಲ್ಲ. ಫ್ಯಾಬ್ರಿಕೇಷನ್, ವೆಲ್ಡಿಂಗ್ ಹಾಗೂ ಸಿವಿಲ್ ಕಂಟ್ರಾಕ್ಟ್ ಕೆಲಸ ಮಾಡುತ್ತೇನೆ. ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಬಿಜೆಪಿ ಟಿಕೆಟ್ ಹೆಸರಿನ ವಂಚನೆ ಕೃತ್ಯದಲ್ಲಿ ನಾನು ತಪ್ಪು ಮಾಡಿಲ್ಲ..!'' ಇದು ಹಿಂದೂ ಪರ ಸಂಘಟನೆಯ ಕಾರ್ಯಕರ್ತೆ ಚೈತ್ರಾ ಕುಂದಾಪುರ ವಂಚನೆ ತಂಡದಲ್ಲಿ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ನಾಯಕನ ಪಾತ್ರಧಾರಿಯಾಗಿದ್ದ ಬಿ.ಎಲ್‌.ಚೆನ್ನನಾಯ್ಕ್ ಅಲಿಯಾಸ್ ಕಬಾಬ್‌ ನಾಯ್ಕ್ ನೀಡಿರುವ ಸ್ಪಷ್ಟನೆ.

ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಉದ್ಯಮಿ ಗೋವಿಂದ ಪೂಜಾರಿ ಅವರಿಂದ 5 ಕೋಟಿ ರು. ವಸೂಲಿ ಮಾಡಿ ವಂಚಿಸಿದ್ದ ಚೈತ್ರಾ ತಂಡವು, ಈ ಮೋಸದ ಕೃತ್ಯದಲ್ಲಿ ಪೂಜಾರಿಗೆ ನಂಬಿಸಲು ನಾಯ್ಕ್‌ನನ್ನು ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಸದಸ್ಯ ಎಂದು ಹೇಳಿ ಪರಿಚಯಿಸಿತ್ತು. ಈ ಪ್ರಕರಣ ಸಂಬಂಧ ದಾಖಲಾದ ಎಫ್‌ಐಆರ್‌ನಲ್ಲಿ ಚೆನ್ನನಾಯ್ಕ್ ನನ್ನು ಬೆಂಗಳೂರಿನ ಕೆ.ಆರ್‌.ಪುರದಲ್ಲಿ ರಸ್ತೆ ಬದಿ ಚಿಕನ್ ಕಬಾಬ್‌ ಮಾರುತ್ತಾನೆ ಎಂದು ಉಲ್ಲೇಖಿಸಲಾಗಿತ್ತು. ವಂಚನೆ ಕೃತ್ಯ ಬೆಳಕಿಗೆ ಬಂದ ಬಳಿಕ ಕಬಾಬ್ ನಾಯ್ಕ್‌ ಪಾತ್ರವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.

Tap to resize

Latest Videos

undefined

5 ಕೋಟಿ ಡೀಲ್‌ ಕೇಸ್‌: ಚೈತ್ರಾಗೆ ಮೂರ್ಚೆ ರೋಗದ ಹಿಸ್ಟರಿಯೇ ಇಲ್ವಂತೆ, ಎಲ್ಲ ಡ್ರಾಮಾನಾ?

ಗುರುವಾರ ಮಾಧ್ಯಮಗಳ ಮುಂದೆ ಪ್ರತ್ಯಕ್ಷನಾಗಿ ಮಾತನಾಡಿದ ನಾಯ್ಕ್, ''ನಾನು ಕಬಾಬ್ ಮಾರಾಟ ಮಾಡುವುದಿಲ್ಲ. ಕೆ.ಆರ್‌.ಪುರದಲ್ಲೂ ನೆಲೆಸಿಲ್ಲ. ನನ್ನೂರು ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣವಾಗಿದೆ. ಕಡೂರಿನಲ್ಲೇ ನೆಲೆಸಿದ್ದೇನೆ'' ಎಂದಿದ್ದಾನೆ. ಅಲ್ಲದೆ ''ಪೂಜಾರಿ ಅವರನ್ನು ನಾನು ಮೂರೇ ನಿಮಿಷ ಭೇಟಿಯಾಗಿದ್ದು, ನಾನು ಅವರಿಗೆ ವಂಚಿಸಿಲ್ಲ. ನನಗೆ ಚೈತ್ರಾ ಕುಂದಾಪುರ ಕಡೆಯಿಂದ 93 ಸಾವಿರ ರು. ಸಂದಾಯವಾಗಿತ್ತು'' ಎಂದು ಹೇಳಿದ್ದಾನೆ.
ಈ ಸುದ್ದಿಗೋಷ್ಠಿ ನಡೆದ ಕೆಲವೇ ನಿಮಿಷಗಳಲ್ಲಿ ನಾಯ್ಕ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದರು.

''ನಾನು ತಪ್ಪಿಸಿಕೊಂಡು ಹೋಗಿಲ್ಲ. ಚೈತ್ರಾ, ಗಗನ್ ಅವರೆಲ್ಲರ ಬಳಿ ನನ್ನ ನಂಬರ್‌ ಇದೆ. ಗೋವಿಂದ ಪೂಜಾರಿ ಅವರ ಬಳಿ ಸಹ ನನ್ನ ನಂಬರ್ ಇದೆ. ಹೀಗಿದ್ದರೂ ಯಾಕೆ ಅವರು ನನ್ನ ನಂಬರ್ ಅನ್ನು ಸಿಸಿಬಿಗೆ ಕೊಟ್ಟಿಲ್ಲ? ಪೂಜಾರಿ ಅವರೇ ನನಗೆ ಕರೆ ಮಾಡಿ ಅಲ್ಲಿ ಏನಾಗುತ್ತಿದೆ ಎಂಬುದನ್ನು ವಿಡಿಯೋ ಮಾಡಿ ಕಳುಹಿಸುವಂತೆ ಕೋರಿದ್ದರು. ಆಗ ನಾನು ನಿಮ್ಮ ದುಡ್ಡಿನ ವ್ಯವಹಾರ ನನಗೆ ಗೊತ್ತಿಲ್ಲ. ನಾನು ಚೈತ್ರಾ ಹಾಗೂ ಗಗನ್ ಅವರಿಗೆ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದೆ. ನಾನು ಪೂಜಾರಿ ಅವರಿಗೆ ಹಣದ ವ್ಯವಹಾರಕ್ಕೆ ದಾಖಲೆಗಳನ್ನು ಇಟ್ಟುಕೊಳ್ಳುವಂತೆ ಸಹ ಎಚ್ಚರಿಸಿದ್ದೆ'' ಎಂದು ನಾಯ್ಕ್ ಹೇಳಿದ್ದಾನೆ.

''ನಾನು ಕಡೂರಿನಲ್ಲೇ ವೆಲ್ಡಿಂಗ್‌ ವರ್ಕ್‌, ಹಾಗೂ ಸಿವಿಲ್ ಕಂಟ್ರಾಕ್ಟ್ ಕೆಲಸ ಮಾಡುತ್ತಿದ್ದೆ. ಒಂದೂವರೆ ತಿಂಗಳ ಹಿಂದಷ್ಟೇ ಬೆಂಗಳೂರಿನ ಪೀಣ್ಯಕ್ಕೆ ಬಂದು ನೆಲೆಸಿದ್ದೇನೆ. ನನಗೆ ಚೈತ್ರಾ ನೇರ ಪರಿಚಯವಿರಲಿಲ್ಲ. ಮೊದಲಿನಿಂದ ಕಡೂರಿನ ಧನರಾಜ್‌ ಹಾಗೂ ಗಗನ್ ರವರ ಪರಿಚಯವಿತ್ತು. 2017ರಲ್ಲಿ ಆನಂದರಾವ್ ಸರ್ಕಲ್‌ನಲ್ಲಿ ಪ್ರತಿಭಟನೆ ಮಾಡಿದ್ದ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಚೈತ್ರಾ ನೋಡಿದ್ದರಂತೆ. ನನಗೆ ರಾಜಕೀಯ ಹುಚ್ಚಿದ್ದು, ಸಾಕಷ್ಟು ಹಣ ಕಳೆದುಕೊಂಡಿದ್ದೇನೆ. ನನಗೆ ನಮ್ಮ ಪರಿಚಿತರಿಗೆ ಟಿಕೆಟ್ ಕೊಡಿಸಲು ನೀನು ನೆರವು ನೀಡಬೇಕು ಎಂದು ಗಗನ್‌ ಹಾಗೂ ಧನರಾಜ್‌ ಹೇಳಿದ್ದರು. ಆದರೆ ಅವರ ಯೋಗ್ಯತೆ ನನಗೆ ಗೊತ್ತಿತ್ತು. ಗಗನ್‌ 30 ರುಪಾಯಿ ಮೇಲೆ ಪೆಟ್ರೋಲ್ ಹಾಕಿಸುತ್ತಿರಲಿಲ್ಲ. ಧನರಾಜ್ 20 ರುಪಾಯಿ ಗಿರಾಕಿಯಾಗಿದ್ದ'' ಎಂದು ನಾಯ್ಕ್ ಹೇಳಿದ್ದಾನೆ.

ಶೋಭಾ ಕರಂದ್ಲಾಜೆ ಸ್ಥಾನಕ್ಕೆ ನಾನು ಎಂದಿದ್ದ ಚೈತ್ರಾ: 

''ಆಗ ಲೇಡಿಸ್ ಒಬ್ಬರು ಟಿಕೆಟ್ ಕೊಡಿಸುತ್ತಾರೆ ಎಂದಿದ್ದರು. ನಾನು ಜಗದೀಶ್‌ ಶೆಟ್ಟರ್‌, ಈಶ್ವರಪ್ಪನಂತಹವರಿಗೇ ಟಿಕೆಟ್ ಸಿಗುತ್ತಿಲ್ಲ. ಅಂಥದರಲ್ಲಿ ಹೊಸ ಮುಖಕ್ಕೆ ಹೇಗೆ ಟಿಕೆಟ್ ಕೊಡಿಸುತ್ತೀರಾ ಎಂದು ಪ್ರಶ್ನಿಸಿದೆ. ಆಗ ಚೈತ್ರಾ ಕುಂದಾಪುರ ಕೊಡಿಸುತ್ತಾರೆ ಎಂದಿದ್ದರು. ಎರಡು ದಿನಗಳ ಬಳಿಕ ಕಡೂರಿನಲ್ಲಿ ಚೈತ್ರಾ ಭೇಟಿಯಾದರು. ನಿಮ್ಮ ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ನೋಡಿದ್ದೀನಿ ಎಂದು ಹೇಳಿದರು. ಗೋವಿಂದ ಪೂಜಾರಿ ಅವರನ್ನು ಎಂಎಲ್‌ಎ ಮಾಡಿಸುತ್ತೇನೆ. ಶೋಭಾ ಕರಂದ್ಲಾಜೆ ಅವರು ಡಮ್ಮಿ. ಯಡಿಯೂರಪ್ಪ ಇರುವಷ್ಟು ದಿನಗಳು ಅಷ್ಟೇ ಶೋಭಾ. ಮುಂದೆ ಅವರ ಸ್ಥಾನಕ್ಕೆ ನಾನು ಬರುತ್ತೇನೆ ಎಂದು ಚೈತ್ರಾ ಹೇಳಿದ್ದರು. ನನಗೆ ಹಿಂದಿಯಲ್ಲಿ ಮಾತನಾಡುವಂತೆ ಚೈತ್ರಾ ಸೂಚಿಸಿದರು. ಗೋವಿಂದ ಪೂಜಾರಿ ಅವರು ಮುಂಬೈನಲ್ಲಿದ್ದವರು. ವಿಶ್ವನಾಥ್ ಜೀ ಅವರನ್ನೇ ಸೃಷ್ಟಿಸಿದ್ದೇವೆ. ಜೀ ಅನ್ನುವ ಪದವನ್ನು ಜಾಸ್ತಿ ಬಳಸಬೇಕು. ನನಗೆ 1 ಲಕ್ಷ ರು. ನೀಡುವಂತೆ ಚೈತ್ರಾ ಹೇಳಿದ್ದರು. ಕಡೂರಿನ ಎಪಿಎಂಸಿ ಮಾರುಕಟ್ಟೆ ಬಳಿ ನನಗೆ ಗಗನ್ 93 ಸಾವಿರ ರು. ನೀಡಿದ. ಇನ್ನುಳಿದ 7 ಸಾವಿರ ರು. ಅನ್ನು ಆತನೇ ಪಡೆದಿದ್ದ'' ಎಂದು ನಾಯ್ಕ್ ಹೇಳಿದ್ದಾನೆ.

ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಡೀಲ್‌ ಹಣದಲ್ಲಿ ಹಾಲಶ್ರೀ 10 ಎಕರೆ ಭೂಮಿ ಖರೀದಿ, ಬಂಗಲೆ ನಿರ್ಮಾಣ..!

''ಕಡೂರಿನಿಂದ ಕಾರಿನಲ್ಲಿ ಬೆಂಗಳೂರಿಗೆ ಗಗನ್ ಹಾಗೂ ಧನರಾಜ್ ಕರೆತಂದಿದ್ದರು. ಕಡೂರಿನ ಸಲೂನ್‌ನಲ್ಲಿ ನನಗೆ ಕೇಂದ್ರ ಬಿಜೆಪಿ ನಾಯಕನ ರೀತಿ ಮೆಕಪ್ ಮಾಡಿಸಿದ್ದರು. ಮನೆಗೆ ಬಂದು ಸ್ನಾನ ಮಾಡಿಸಿ ಶೂ ಅವರೇ ಒರೆಸಿ ಬ್ಯಾಗ್‌ನಲ್ಲಿ ಹಾಕಿ ಪ್ಯಾಕ್ ಮಾಡಿಕೊಂಡು ಕರೆತಂದಿದ್ದರು. ಪ್ರಯಾಣದ ವೇಳೆ ಹೆಚ್ಚು ಮಾತನಾಡಿಸದೆ, ಮುಖ ಬಳಲಿದಂತೆ ಕಾಣಬಾರದೆಂದು ಕಾರಿನಲ್ಲಿ ನಿದ್ದೆ ಮಾಡಿಸಿಕೊಂಡು ಬಂದಿದ್ದರು. ಬೆಂಗಳೂರಿನ ಕುಮಾರ ಕೃಪಾ ಅತಿಥಿ ಗೃಹದಲ್ಲಿ ಪೂಜಾರಿ ಅವರನ್ನು ಭೇಟಿ ಮಾಡಿಸಿದರು. ಅದೂ 3 ನಿಮಿಷದ ಭೇಟಿಯಾಗಿತ್ತು. ಕೇಂದ್ರ ಬಿಜೆಪಿ ನಾಯಕನ ವೇಷ ಹಾಕಲು ಬಿಜೆಪಿ ಶಾಲು, ಕನ್ನಡಕ ಹೀಗೆ ಪ್ರತಿಯೊಂದನ್ನು ಚೈತ್ರಾ ಖರೀದಿಸಿ ತಂದು ಕೊಟ್ಟಿದ್ದು. ಬಿಜೆಪಿ ಶಾಲು ಹಾಕಿ ಗಗನ್‌ ಹಾಗೂ ಧನರಾಜ್‌ ಪೋಟೋ ತೆಗೆದಿದ್ದರು. ಪೂಜಾರಿ ಭೇಟಿ ವೇಳೆ ಕಣ್ಣು ಮಿಟುಕಿಸಿ ವಿಮಾನ ತಡವಾಗುತ್ತದೆ ಎಂದು ಗಗನ್ ಸನ್ನೆ ನೀಡುತ್ತಿದ್ದ. ನನಗೂ ಈ ವಂಚನೆ ಕೃತ್ಯಕ್ಕೂ ಸಂಬಂಧವಿಲ್ಲ’ ಎಂದು ನಾಯ್ಕ್ ವಿವರಿಸಿದ್ದಾನೆ.

'ಕೆಲ ದಿನಗಳಲ್ಲಿ ಗಗನ್ ಜೀವನ ಶೈಲಿ ಬದಲಾಗಿತ್ತು. ಆತ ಹೊಸ ಕಾರು ಖರೀದಿಸಿದ್ದ. ಅದ್ದೂರಿಯಾಗಿ ಮದುವೆ ಸಹ ಆಗಿದ್ದ. ಇದರಿಂದ ನನಗೆ ಅನುಮಾನ ಬಂದಿತು. ಮೊದಲಿನಿಂದಲೂ ನನ್ನನ್ನು ಯಾವುದೋ ಸಂಚಿನಲ್ಲಿ ಸಿಲುಕಿಸಿದರೆ ಸರಿಯಿರಲ್ಲ ಎಂದು ಗಗನ್‌ಗೆ ಎಚ್ಚರಿಕೆ ನೀಡಿದ್ದೆ. ಪೂಜಾರಿ ಅವರ ಭೇಟಿ ವೇಳೆ ಅವರ ವಿಸಿಟಿಂಗ್ ಕಾರ್ಡ್‌ ಅನ್ನು ಗಗನ್‌ಗೆ ಗೊತ್ತಾಗದಂತೆ ಪಡೆದಿದ್ದೆ. ಅದರಲ್ಲಿದ್ದ ಮೊಬೈಲ್ ನಂಬರ್‌ಗೆ ಕಾಲ್ ಮಾಡಿ ಪೂಜಾರಿ ಜತೆ ಮಾತನಾಡಲು ಯತ್ನಿಸಿದೆ. ಆದರೆ ಹಲವು ಬಾರಿ ಕರೆ ಮಾಡಿದರೂ ಪೂಜಾರಿ ಅವರು ಕೆಲಸವಿದೆ ಎಂದು ಹೇಳಿ ಕರೆ ಕಟ್ ಮಾಡಿದರು. ಆಗ ನಮ್ಮ ವಿಷಯ ಯಾರಿಗಾದರೂ ತಿಳಿಸಿದರೆ ನಮಗೆ ನೀನು ತಿಗಣೆ ಲೆಕ್ಕ ಎಂದು ಚೈತ್ರಾ ಕರೆ ಮಾಡಿ ಬೆದರಿಸಿದ್ದರು'' ಎಂದು ನಾಯ್ಕ್‌ ತಿಳಿಸಿದ್ದಾನೆ.

click me!