
ಹೂವಿನಹಡಗಲಿ(ಸೆ.15): ಚೈತ್ರಾ ಕುಂದಾಪುರ ವಂಚನೆ ಪ್ರಕರಣದ ಮೂರನೇ ಆರೋಪಿ ಹಿರೇಹಡಗಲಿಯ ಸದ್ಗುರು ಶಿವಯೋಗಿ ಹಾಲಸ್ವಾಮಿ ಸಂಸ್ಥಾನ ಮಠದ ಅಭಿನವ ಹಾಲವೀರಪ್ಪಜ್ಜ ಅವರು ವಂಚನೆ ಮಾಡಿ ಬಂದ ಹಣದಲ್ಲಿ ಹಲವಾರು ಕಡೆ ಹೂಡಿಕೆ ಮಾಡಿರುವುದು ಬೆಳಕಿಗೆ ಬಂದಿದೆ.
ಹಾಲವೀರಪ್ಪಜ್ಜ ಅವರು ತಮ್ಮ ಪತ್ನಿಯ ತಂದೆ ಮಲ್ಲಯ್ಯ ತುಂಬಿನಕೆರೆ ಅವರ ಹೆಸರಿನಲ್ಲಿ ತಾಲೂಕಿನ ಕೊಳಚಿ ಗ್ರಾಮದಲ್ಲಿ 10 ಎಕರೆ ಜಮೀನು ಖರೀದಿಸಿದ್ದು, ಇದರಲ್ಲಿ ಕಬ್ಬು ಬೆಳೆದಿದ್ದಾರೆ. ಅಲ್ಲದೆ, ಹಿರೇಹಡಗಲಿ ಗ್ರಾಮದ ಹೊರವಲಯದಲ್ಲಿರುವ ದರ್ಗಾದ ಹಿಂದೆ 1 ಎಕರೆ ಜಮೀನು ಖರೀದಿ ಮಾಡಿದ್ದಾರೆ. ಜೊತೆಗೆ, ಹಿರೇಹಡಗಲಿ-ಹಗರನೂರು ಮಧ್ಯೆ ₹40 ಲಕ್ಷ ವೆಚ್ಚದಲ್ಲಿ ಅರ್ಧ ಎಕರೆ ಜಾಗದಲ್ಲಿ ಹಿರೇಹಡಗಲಿ ಚಂದ್ರಪ್ಪ ಎಂಬುವರ ಹೆಸರಿನಲ್ಲಿ ಪೆಟ್ರೋಲ್ ಬಂಕ್ ನಿರ್ಮಿಸಿದ್ದಾರೆ. ಹಿರೇಹಡಗಲಿ- ಮಾಗಳ ರಸ್ತೆ ಪಕ್ಕದಲ್ಲೇ ಪ್ಲಾಟ್‌ವೊಂದನ್ನು ₹16 ಲಕ್ಷಕ್ಕೆ ಖರೀದಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಮಧ್ಯೆ, ಹಿರೇಹಡಗಲಿ-ಮಾಗಳ ರಸ್ತೆಯಲ್ಲಿ ಪಿತ್ರಾರ್ಜಿತವಾಗಿ ಇವರಿಗೆ 8 ಎಕರೆ ಜಮೀನು ಬಂದಿದ್ದು, ಈ ನಿವೇಶನದಲ್ಲಿ ಸುಮಾರು ₹80 ಲಕ್ಷ ವೆಚ್ಚದಲ್ಲಿ ದೊಡ್ಡ ಬಂಗಲೆ ನಿರ್ಮಾಣವಾಗುತ್ತಿದೆ.
ಬಿಜೆಪಿ ಟಿಕೆಟ್ ಡೀಲ್ ಕೇಸ್: ಚೈತ್ರಾ ಕುಂದಾಪುರ ಬಾಯಿಯಲ್ಲಿ ನೊರೆ, ಆಸ್ಪತ್ರೆಗೆ ದಾಖಲು
ಜೊತೆಗೆ, ಇತ್ತೀಚಿನ ದಿನಗಳಲ್ಲಿ ಸ್ವಾಮೀಜಿಯ ಜೀವನ ಶೈಲಿಯೇ ಬದಲಾವಣೆಯಾಗಿತ್ತು. ಹಳೆ ಕಾರು ಮಾರಾಟ ಮಾಡಿ, ಹೊಸ ಇನ್ನೋವಾ ಕಾರಿನಲ್ಲಿ ಸುತ್ತಾಡುತ್ತಿದ್ದರು. ಜತೆಗೆ, ಬೆಂಗಳೂರಿನ ಜಯನಗರ ಬಡಾವಣೆಯಲ್ಲಿ ಮನೆಯೊಂದನ್ನು ಖರೀದಿಸಿದ್ದು, ಚುನಾವಣೆ ವೇಳೆ ಅಲ್ಲೇ ಹೆಚ್ಚು ತಂಗುತ್ತಿದ್ದರು. ಮಠದಲ್ಲಿ ಹೆಚ್ಚಾಗಿ ಇರುತ್ತಿರಲಿಲ್ಲ ಎಂಬ ವಿಷಯ ಬೆಳಕಿಗೆ ಬಂದಿದೆ.
ಮಠದಿಂದ ನಾಪತ್ತೆ:
ಕಳೆದ ವಿಧಾನಸಭಾ ಚುನಾವಣೆ ವೇಳೆ ಬೈಂದೂರು ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ ಎಸಗಿದ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಅವರ ಬಂಧನವಾಗುತ್ತಿದ್ದಂತೆ ಹಾಲವೀರಪ್ಪ ಅವರು ಮಠದಿಂದ ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಅವರು, ಮೈಸೂರಿನ ಆಪ್ತರರೊಬ್ಬರ ಮನೆಯಲ್ಲಿ ಅಡಗಿದ್ದಾರೆ ಎನ್ನಲಾಗುತ್ತಿದೆ.
ಮಠದಲ್ಲೇ ನಡೆದಿತ್ತು ಮಾತುಕತೆ?:
ಈ ಮಧ್ಯೆ, ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಚೈತ್ರಾ ಕುಂದಾಪುರ ಹಾಗೂ ಉದ್ಯಮಿ ಪೂಜಾರಿ ಇಬ್ಬರೂ ಹಾಲಸ್ವಾಮಿ ಮಠಕ್ಕೆ ಭೇಟಿ ನೀಡಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಹೀಗಾಗಿ, ಈ ಕೋಟಿ, ಕೋಟಿ ಹಣದ ವ್ಯವಹಾರ ಮಠದಲ್ಲೇ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಅಲ್ಲದೆ, ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆ ಉದ್ಯಮಿ ಗೋವಿಂದಬಾಬು ಪೂಜಾರಿಯವರು ಶ್ರೀಗಳ ಬಳಿ ತಾವು ನೀಡಿದ ಹಣವನ್ನು ವಾಪಸ್ ನೀಡುವಂತೆ ಒತ್ತಾಯಿಸಿದ್ದು, ಇದಕ್ಕಾಗಿ ಸ್ವಾಮೀಜಿ, ಸ್ಥಳೀಯ ಮುಖಂಡರೊಬ್ಬರ ಬಳಿ ₹10 ಲಕ್ಷ ಸಾಲ ಕೇಳಿದ್ದರು. ಸಾಲ ಮಾಡಿಯಾದರೂ ಗೋವಿಂದಬಾಬು ಅವರಿಗೆ ಹಣ ನೀಡಲು ಸ್ವಾಮೀಜಿ ಮುಂದಾಗಿದ್ದರು ಎಂಬ ಸಂಗತಿ ಬಯಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ