ಪರಿವರ್ತಿತ ಭೂಮಿ ಷರತ್ತು ಉಲ್ಲಂಘನೆ ವಿರುದ್ಧ ಕ್ರಮದ ಅಧಿಕಾರ ಡಿಸಿಗೆ ಮಾತ್ರ: ಹೈಕೋರ್ಟ್

By Kannadaprabha News  |  First Published Sep 26, 2022, 6:20 AM IST
  • ಪರಿವರ್ತಿತ ಭೂಮಿ ಷರತ್ತು ಉಲ್ಲಂಘನೆ ವಿರುದ್ಧ ಕ್ರಮದ ಅಧಿಕಾರ ಡಿಸಿಗೆ ಮಾತ್ರ
  • ಜಿಲ್ಲಾಧಿಕಾರಿ ಅನುಮತಿ ನೀಡಿದ್ದ ಪ್ರಕರಣದಲ್ಲಿ ಅವರಿಗೆ ಮಾತ್ರ ಅಧಿಕಾರ: ಕೋರ್ಟ್
  • -ತಹಸೀಲ್ದಾರ್‌ ನೋಟಿಸ್‌ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠ ಆದೇಶ

ವಿಶೇಷ ವರದಿ

 ಬೆಂಗಳೂರು (ಸೆ.26) : ಕೃಷಿ ಜಮೀನನ್ನು ಕೃಷಿಯೇತರ ಚಟುವಟಿಕೆಗಳ ಬಳಕೆಗೆ ಅನುಮತಿ ನೀಡಿ ಜಿಲ್ಲಾಧಿಕಾರಿ ಹೊರಡಿಸಿದ ಆದೇಶದಲ್ಲಿನ ಯಾವುದೇ ಷರತ್ತು ಉಲ್ಲಂಘನೆಯಾದರೆ ಅಂಥ ಪ್ರಕರಣದಲ್ಲಿ ಕ್ರಮ ಜರುಗಿಸುವ ಅಧಿಕಾರ ಜಿಲ್ಲಾಧಿಕಾರಿಗೆ ಮಾತ್ರ ಇರಲಿದೆ ಎಂದು ಹೈಕೋರ್ಚ್‌ ಆದೇಶಿಸಿದೆ. ಕೈಗಾರಿಕೆ ಉದ್ದೇಶಕ್ಕೆ ಮೀಸಲಾಗಿದ್ದ ಜಾಗದಲ್ಲಿ ನಿರ್ಮಿಸಿದ್ದ ವಸತಿ ಕಟ್ಟಡ ತೆರವುಗೊಳಿಸುವಂತೆ ಬೆಂಗಳೂರು ಪೂರ್ವ ತಹಶೀಲ್ದಾರ್‌ ನೀಡಿದ್ದ ನೋಟಿಸ್‌ ರದ್ದುಪಡಿಸುವಂತೆ ಕೋರಿ ಮೆ. ಶ್ರೇನೋ ಲಿಮಿಟೆಡ್‌ ಕಂಪನಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಆರ್‌.ದೇವದಾಸ್‌ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.

Tap to resize

Latest Videos

ಸಿಇಟಿ ರ‍್ಯಾಂಕ್‌ ಸೂತ್ರ: ರಿಪೀಟರ್ಸ್‌ಗೆ 6% ಕಡಿತ, ರ‍್ಯಾಂಕಿಂಗ್‌ ಪಟ್ಟಿ ಪ್ರಕಟಕ್ಕೆ ಹೈಕೋರ್ಟ್‌ ಆದೇಶ

ಭೂ ಸುಧಾರಣಾ ಕಾಯ್ದೆ-1964ರ ಸೆಕ್ಷನ್‌ 95ರ ಅಡಿಯಲ್ಲಿ ಭೂ ಪರಿವರ್ತನೆಗೆ ಅನುಮತಿ ನೀಡಿ ಜಿಲ್ಲಾಧಿಕಾರಿ ಹೊರಡಿಸಿದ ಆದೇಶದಲ್ಲಿ ಯಾವುದೇ ಷರತ್ತು ಉಲ್ಲಂಘನೆಯಾದರೆ, ಇಲ್ಲವೇ ಕಾಯ್ದೆಯ ಸೆಕ್ಷನ್‌ 94 ಮತ್ತು 104 ಅಡಿ ಅನಧಿಕೃತ ಸ್ವಾಧೀನ ಮಾಡಿಕೊಂಡಿದ್ದರೆ ತೆರವಿಗೆ ಕ್ರಮ ಜರುಗಿಸುವ ಅಧಿಕಾರ ಜಿಲ್ಲಾಧಿಕಾರಿಗೆ ಮಾತ್ರ ಇರುತ್ತದೆ. ಈ ಸೆಕ್ಷನ್‌ ಅಡಿಯಲ್ಲಿ ಕ್ರಮ ಜರುಗಿಸಲು ತಹಶೀಲ್ದಾರ್‌ಗೆ ಅಧಿಕಾರ ಇಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿರುವ ಹೈಕೋರ್ಚ್‌, ಕಂಪನಿಗೆ ತಹಶೀಲ್ದಾರ್‌ ನೀಡಿದ್ದ ನೋಟಿಸ್‌ ರದ್ದುಪಡಿಸಿದೆ.

ಪ್ರಕರಣದ ವಿವರ: ಸರ್ಕಾರದ ಯಾವುದೇ ಪ್ರಾಧಿಕಾರ ಮಂಜೂರು ಮಾಡದಿದ್ದರೂ ಬೆಂಗಳೂರು ಪೂರ್ವ ತಾಲೂಕಿನ ಬಿಡರಹಳ್ಳಿ ಹೋಬಳಿಯ ಚನ್ನಸಂದ್ರ ಗ್ರಾಮದ ಸರ್ವೇ ನಂಬರ್‌ 115ರ 46 ಎಕರೆ 30 ಗುಂಟೆ ಜಾಗದ ಸ್ವಾಧೀನಾನುಭವವನ್ನು ಮೆರ್ಸೆಸ್‌ ಶ್ರೇನೋ ಲಿಮಿಟೆಡ್‌ ಕಂಪನಿ ಹೊಂದಿದೆ ಎಂದು ವಿಶೇಷ ಜಿಲ್ಲಾಧಿಕಾರಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ಮಧ್ಯ ವಿವಾದಿತ ಜಮೀನು ಹಾಗೂ ಅಲ್ಲಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡ ತೆರವುಗೊಳಿಸುವಂತೆ ಬೆಂಗಳೂರು ಕೆ.ಆರ್‌.ಪುರದ ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್‌ 2022ರ ಆ.22ರಂದು ಕೆಎಲ್‌ಆರ್‌ ಕಾಯ್ದೆಯ ಸೆಕ್ಷನ್‌ 94 ಮತ್ತು 104 ಅಡಿಯಲ್ಲಿ ಕಂಪನಿಗೆ ನೋಟಿಸ್‌ ಜಾರಿ ಮಾಡಿದ್ದರು. ನೋಟಿಸ್‌ ರದ್ದತಿಗೆ ಕೋರಿ ಕಂಪನಿ ಹೈಕೋರ್ಚ್‌ ಮೆಟ್ಟಿಲೇರಿತ್ತು.

ಪ್ರಕರಣದ ದಾಖಲೆ ಪರಿಶೀಲಿಸಿದ ಹೈಕೋರ್ಚ್‌, ಕೃಷಿ ಜಮೀನನ್ನು ಕೈಗಾರಿಕೆ ಉದ್ದೇಶಕ್ಕೆ ಬಳಸಲು ಅನುಮತಿ ನೀಡಿದ್ದರೂ ವಸತಿ ಕಟ್ಟಡ ನಿರ್ಮಿಸಲಾಗಿದೆ ಎಂಬ ಆರೋಪದ ಮೇಲೆ ತಹಸೀಲ್ದಾರ್‌ ಅವರು ಅರ್ಜಿದಾರ ಕಂಪನಿಗೆ ಉದ್ದೇಶಪೂರ್ವಕವಾಗಿ ನೋಟಿಸ್‌ ಜಾರಿ ಮಾಡಿದ್ದಾರೆ. ವಾಸ್ತವವಾಗಿ ನಿರ್ದಿಷ್ಟಅವಧಿಗೆ ವರ್ಗಾವಣೆ ಮಾಡಬಾರದು ಎಂಬ ಷರತ್ತಿಗೆ ಒಳಪಟ್ಟಿರುವ ಭೂಮಿ ಅನಧಿಕೃತ ಸ್ವಾಧೀನ ಹೊಂದಿದ ಸಂದರ್ಭದಲ್ಲಿ ತಹಶೀಲ್ದಾರ್‌ ತೆರವಿಗೆ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿದ್ದಾರೆ. ಆದರೆ, ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ ಬಳಸಲು ಅನುಮತಿ ನೀಡಿ ಆದೇಶ ಹೊರಡಿಸಿದಾಗ ಜಿಲ್ಲಾಧಿಕಾರಿ ವಿಧಿಸಿರುವ ಷರತ್ತುಗಳನ್ನು ಉಲ್ಲಂಘಿಸಿದಾಗ ಅದರ ವಿರುದ್ಧ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗೆ ಮಾತ್ರ ಅಧಿಕಾರ ಹೊಂದಿದ್ದಾರೆ ಎಂದು ಆದೇಶಿಸಿದೆ.

ಏರ್‌ಪೋರ್ಟ್ ರಸ್ತೆ ವಿಸ್ತರಿಸಲು ಏನು ಮಾಡಿದ್ದೀರಿ, ವರದಿ ನೀಡಿ: ಹೈಕೋರ್ಟ್

ಕರ್ನಾಟಕ ನಗರ ಮತ್ತು ಪಟ್ಟಣ ಯೋಜನಾ ಕಾಯ್ದೆಯ ನಿಯಮಗಳ ಪ್ರಕಾರ ನಗರ ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಪ್ರದೇಶದ ಕೈಗಾರಿಕಾ ಅಥವಾ ವಾಣಿಜ್ಯ ಬಳಕೆಗೆ ಮೀಸಲಾಗಿರುವ ಜಮೀನಿನಲ್ಲೂ ವಸತಿ ಕಟ್ಟಡ ನಿರ್ಮಾಣ ಮಾಡಲು ಅನುಮತಿ ನೀಡುವ ಅಧಿಕಾರವನ್ನು ಪ್ರಾಧಿಕಾರ ಹೊಂದಿದೆ. ಆ ಪ್ರದೇಶಕ್ಕೆ ಸಂಬಂಧಿಸಿದಂತೆ ಕ್ರಮ ಜರುಗಿಸಲು ನೋಟಿಸ್‌ ನೀಡುವ ಅಧಿಕಾರ ತಹಸೀಲ್ದಾರ್‌ಗೆ ಇಲ್ಲ. ಹಾಗೆಯೇ, ಬಿಡಿಎ ವಲಯ ನಿಯಮಗಳು ಸಹ ಕೈಗಾರಿಕಾ ಮತ್ತು ವಾಣಿಜ್ಯ ಉದ್ದೇಶಕ್ಕೆ ಮೀಲಾಗಿರುವ ಜಾಗದಲ್ಲಿ ವಸತಿ ಕಟ್ಟಡ ನಿರ್ಮಿಸಲು ಅನುಮತಿ ಕಲ್ಪಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ.

click me!