ಕಷ್ಟಗಳ ನಡುವೆ ಗಿರಿಜಾ ಲೋಕೇಶ್ ಸಾರ್ಥಕ ಬದುಕು: ಡಾ. ವಿಜಯಮ್ಮ

By Kannadaprabha News  |  First Published Jan 11, 2021, 9:14 AM IST

 ಹಿರಿಯ ಕಲಾವಿದೆ ಗಿರಿಜಾ ಲೋಕೇಶ್‌ ಅವರ ಜೀವನ ಆಧರಿಸಿ ‘ಕನ್ನಡಪ್ರಭ’ ಪುರವಣಿ ಪ್ರಧಾನ ಸಂಪಾದಕ ಗಿರೀಶ್‌ ರಾವ್‌ ಹತ್ವಾರ್‌(ಜೋಗಿ) ರಚಿಸಿರುವ ‘ಗಿರಿಜಾ ಪರಸಂಗ’ ಕೃತಿ ಲೋಕಾರ್ಪಣೆ ಮಾಡಲಾಯಿತು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 


ಬೆಂಗಳೂರು(ಜ.11): ಹಿರಿಯ ಕಲಾವಿದೆ ಗಿರಿಜಾ ಲೋಕೇಶ್‌ ಅವರು ತಮ್ಮ ಜೀವನದಲ್ಲಿ ಹಲವು ಅಗ್ನಿದಿವ್ಯ ದಾಟಿ ಸಾರ್ಥಕ ಬದುಕು ಕಟ್ಟಿಕೊಂಡಿದ್ದಾರೆ ಎಂದು ಹಿರಿಯ ಲೇಖಕಿ ಡಾ.ವಿಜಯಮ್ಮಾ ಹೇಳಿದರು.

ನಗರದ ಸುಚಿತ್ರ ಫಿಲ್ಮಂ ಸೊಸೈಟಿಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದೆ ಗಿರಿಜಾ ಲೋಕೇಶ್‌ ಅವರ ಜೀವನ ಆಧರಿಸಿ ‘ಕನ್ನಡಪ್ರಭ’ ಪುರವಣಿ ಪ್ರಧಾನ ಸಂಪಾದಕ ಗಿರೀಶ್‌ ರಾವ್‌ ಹತ್ವಾರ್‌(ಜೋಗಿ) ರಚಿಸಿರುವ ‘ಗಿರಿಜಾ ಪರಸಂಗ’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಕಷ್ಟಗಳ ನಡುವೆಯೇ ಬೆಳೆದು ಉತ್ತಮ ಕಲಾವಿದೆಯಾದ ಗಿರಿಜಾ ಲೋಕೇಶ್‌ ಎಲ್ಲಿಯೂ ತಮ್ಮ ಬದುಕಿನ ಕಷ್ಟಗಳನ್ನು ಹೇಳಿಕೊಂಡಿಲ್ಲ. ಈ ಕೃತಿಯಲ್ಲಿ ಅದು ಕಾಣುವುದಿಲ್ಲ. ಆದರೆ, ಅವರ ಬದುಕನ್ನು ನೋಡಿದರೆ ನೋವಿನ ಎಳೆಗಳು ಕಾಣುತ್ತವೆ ಎಂದರು.

Latest Videos

undefined

ಲೋಕೇಶ್‌ ಕುಟುಂಬದೊಂದಿಗೆ ಹಲವು ವರ್ಷಗಳ ಒಡನಾಟವಿದೆ. ಮೂಲಭೂತವಾಗಿ ಲೋಕೇಶ್‌ ಅವರು ಮೂಢನಂಬಿಕೆ ವಿರೋಧಿ. ಕನ್ನಡ ಚಳವಳಿ, ಗೋಕಾಕ್‌ ಚಳವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು. ಕನ್ನಡದ ಬಗ್ಗೆ ಮಾತು ಮತ್ತು ನಡೆ ಒಂದೇ ಆಗಿತ್ತು ಎಂದು ಹೇಳಿದರು.

ಕವಿ ಎಚ್‌.ಎಸ್‌.ವೆಂಕಟೇಶ ಮೂರ್ತಿ ಮಾತನಾಡಿ, ಕಲಾವಿದರೆಂದರೆ ಮಿಂಚಿ ಮರೆಯಾಗುವ ಮಿಂಚಲ್ಲ. ಸದಾ ಉರಿಯುವ ನಂದಾದೀಪ. ಲೋಕೇಶ್‌ ಕುಟುಂಬದ ಕಲಾವಿದರು ಈ ಮಾದರಿಯ ಕಲಾವಿದರು. ಗಿರಿಜಾ ಲೋಕೇಶ್‌ ಅವರ ಈ ಕೃತಿ ಆತ್ಮ ಚರಿತ್ರೆ ಅಲ್ಲ. ಬದಲಾಗಿ ಅದೊಂದು ಆತ್ಮ ಪ್ರಬಂಧ. ಈ ಕೃತಿಯಲ್ಲಿ ಗಿರಿಜಾ ಅವರ ಬದುಕಿನ ಘಟ್ಟಗಳ ಅನುಭಗಳು ಲೀಲಾಜಾಲವಾಗಿ ಹರಿದಿವೆ. ಒಂದು ಹೆಣ್ಣು ತನ್ನನ್ನು ತಾನೇ ವಸ್ತ್ರಹರಣ ಮಾಡಿಕೊಂಡಂತೆ ಅಥವಾ ತನಗೆ ತಾನೇ ಬೆತ್ತಲಾದಂತೆ ಗಿರಿಜಾ ಅಂತರಂಗದ ಪ್ರಪಂಚವನ್ನು ತೆರೆದಿಟ್ಟಿದ್ದಾರೆ. ಲೇಖಕ ಜೋಗಿ ಅವರು ಉತ್ತಮವಾಗಿ ಈ ಕೃತಿಯನ್ನು ಬರೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜೋಗಿ ವಿರಚಿತ ‘ಗಿರಿಜಾ ಪರಸಂಗ’ ಕೃತಿ ಲೋಕಾರ್ಪಣೆ

ಲೇಖಕ ಜೋಗಿ ಮಾತನಾಡಿ, ಈ ಕೃತಿ ರಚನೆ ವೇಳೆ ಗಿರಿಜಾ ಲೋಕೇಶ್‌ ಅವರ ಜೀವನದ ಕಥೆಗಳನ್ನು ಕೇಳುವಾಗ ನನ್ನ ಅಮ್ಮ ನೆನಪಾದರು. ಈ ಕೃತಿ ಬರೆಯಲು ಗಿರಿಜಾ ಅವರ ಸೊಸೆ ಗ್ರೀಷ್ಮಾ ಅವರೇ ಮುಖ್ಯ ಕಾರಣ. ಗಿರಿಜಾ ಅವರ ಜೀವನವನ್ನು ನೋಡಿದಾಗ ಹಲವು ಒಳನೋಟಗಳು, ಜೀವನಪಾಠಗಳು ಕಾಣುತ್ತವೆ. ಅವರು ಹೇಳಿರುವ ಪ್ರತಿ ಘಟನೆಯೂ ಸ್ಫೂರ್ತಿದಾಯಕವಾಗಿದೆ ಎಂದರು.

ನಾನು ಈವರೆಗೆ ಬರೆದಿರುವ 68 ಪುಸ್ತಕಗಳ ಪೈಕಿ ಐದು ಜೀವನಚರಿತ್ರೆ ಬರೆದಿದ್ದೇನೆ. ಈ ಪೈಕಿ ಗಿರಿಜಾ ಪರಸಂಗ ಕೃತಿ ಹೆಚ್ಚು ತೃಪ್ತಿಕೊಟ್ಟಿದೆ. ಈ ಪುಸ್ತಕದ ಮೂಲಕ ನನ್ನ ತಾಯಿಯ ಋುಣ ತೀರಿಸಿದ ಭಾವನೆ ಸಿಕ್ಕಿತು ಎಂದು ಹೇಳಿದರು.

ನಟ ಸುದೀಪ್‌ ಗಿರಿಜಾ ಲೋಕೇಶ್‌ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ನಿರ್ಮಾಪಕ ಸಂದೇಶ್‌ ನಾಗರಾಜ್‌, ಹಿರಿಯ ಕಲಾವಿದ ಅಶೋಕ್‌ ಸೇರಿದಂತೆ ಚಿತ್ರರಂಗದ ಹಿರಿಯ-ಕಿರಿಯ ಕಲಾವಿದರು, ಸಾಹಿತಿಗಳು, ರಂಗರ್ಮಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಗಿರಿಜಾ ಲೋಕೇಶ್‌ ಸಜ್ಜನ, ಸೌಜನ್ಯ, ದಾಸೋಹಿ, ಧಾರಾಳತನದ ದೊಡ್ಡ ವ್ಯಕ್ತಿತ್ವ. ಅವರೊಂದಿಗೆ ಹಲವು ಸಿನಿಮಾಗಳಲ್ಲಿ ಪಾತ್ರ ಮಾಡಿದ್ದೇನೆ. ಅವರು ನನಗೆ ಪರೋಕ್ಷ ಗುರುವೂ ಆಗಿದ್ದಾರೆ. ಆರಂಭದಲ್ಲಿ ನನಗೆ ಸಂಭಾಷಣೆ ಹೇಳುವಾಗ ಕನ್ನಡ ಸ್ಪಷ್ಟತೆ ಇರಲಿಲ್ಲ. ಗಿರಿಜಾ ಅವರು ತಿದ್ದಿತೀಡಿ ಸ್ಪಷ್ಟವಾಗಿ ಮಾತನಾಡುವುದನ್ನು ಹೇಳಿಕೊಟ್ಟಿದ್ದರು. ಲೋಕೇಶ್‌ ಕುಟುಂಬಕ್ಕೆ ಒಳ್ಳೆಯದಾಗಲಿ.

- ಮುಖ್ಯಮಂತ್ರಿ ಚಂದ್ರು, ಹಿರಿಯ ಕಲಾವಿದ

click me!