ರಾಜ್ಯದ ಜನರಿಗೆ ಶಾಕ್, ಸದ್ದಿಲ್ಲದೆ ಮತ್ತೆ ವಿದ್ಯುತ್‌ ದುಬಾರಿ: ಜನ ಕಂಗಾಲು!

By Kannadaprabha News  |  First Published Jan 11, 2021, 7:30 AM IST

ಸದ್ದಿಲ್ಲದೆ ಮತ್ತೆ ವಿದ್ಯುತ್‌ ದುಬಾರಿ: ಜನ ಕಂಗಾಲು!| ನ.1ಕ್ಕೆ ಏರಿಸಿದ್ದ 40 ಪೈಸೆ ಜತೆ ಈಗ ಮತ್ತೆ 8 ಪೈಸೆ ಹೆಚ್ಚಳ| ಜನವರಿಯಲ್ಲಿ ಬಂದ ಬಿಲ್‌ ನೋಡಿ ಗ್ರಾಹಕರಿಗೆ ಶಾಕ್‌| ಮತ್ತೆ ಮಾಚ್‌ರ್‍ನಲ್ಲಿ ದರ ಏರಿಸಲು ಕೆಇಆರ್‌ಸಿ ಸಿದ್ಧತೆ| ಕೊರೋನಾ ಆರ್ಥಿಕ ಸಂಕಷ್ಟದಲ್ಲಿ ಎಸ್ಕಾಂಗಳಿಂದ ಬರೆ ಮೇಲೆ ಬರೆ


ಶ್ರೀಕಾಂತ್‌ ಎನ್‌. ಗೌಡಸಂದ್ರ

ಬೆಂಗಳೂರು(ಜ.11): ರಾಜ್ಯದ ವಿದ್ಯುತ್‌ ಗ್ರಾಹಕರಿಗೆ ಸರ್ಕಾರ ಶಾಕ್‌ ಮೇಲೆ ಶಾಕ್‌ ನೀಡುತ್ತಿದೆ. ವಿವಿಧ ಎಸ್ಕಾಂಗಳ ವಿದ್ಯುತ್‌ ಬಳಕೆದಾರರಿಗೆ 2020ರ ನವೆಂಬರ್‌ 1ರಿಂದ ಅನ್ವಯವಾಗುವಂತೆ ಪ್ರತಿ ಯೂನಿಟ್‌ಗೆ 40 ಪೈಸೆ ಹೆಚ್ಚಳ ಮಾಡಿದ್ದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಇದೀಗ ಮತ್ತೆ 5ರಿಂದ 8 ಪೈಸೆವರೆಗೆ ವಿದ್ಯುತ್‌ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

Tap to resize

Latest Videos

ಅಲ್ಲದೆ, ಮುಂದಿನ ಮೂರು ತಿಂಗಳಲ್ಲೇ (2021-22 ಆರ್ಥಿಕ ವರ್ಷ) ಮತ್ತೆ ವಿದ್ಯುತ್‌ ದರ ಹೆಚ್ಚಳಕ್ಕೆ ಸಿದ್ಧತೆ ನಡೆಸುತ್ತಿದ್ದು ಏಪ್ರಿಲ್‌ 1ರಿಂದ ಅನ್ವಯವಾಗುವಂತೆ ಎಷ್ಟುದರ ಹೆಚ್ಚಳ ಮಾಡಬೇಕು ಎಂಬ ಕುರಿತು ಪ್ರಸ್ತಾವನೆ ಸಲ್ಲಿಸಲು ವಿವಿಧ ಎಸ್ಕಾಂಗಳಿಗೆ ಸೂಚನೆ ನೀಡಿದೆ.

ನವೆಂಬರ್‌ 4ರಂದು ಕೆಇಆರ್‌ಸಿ ಹೊರಡಿಸಿದ್ದ ದರ ಪರಿಷ್ಕರಣೆ ಆದೇಶ 2020ರ ನ.1 ರಿಂದ 2021ರ ಮಾಚ್‌ರ್‍ 31ರವರೆಗೆ ಮಾತ್ರ ಅನ್ವಯವಾಗಲಿದೆ. ಹೀಗಾಗಿ ಏ.1, 2021ರಿಂದ ಹೊಸ ದರ ಪರಿಷ್ಕರಣೆ ಎಂದಿನಂತೆ ನಡೆಯಲಿದೆ. ಈಗಾಗಲೇ ಏ.1, 2021ರಿಂದ ಅನ್ವಯವಾಗುವಂತೆ ಪ್ರತಿ ಯುನಿಟ್‌ಗೆ 1.67 ರು. ದರ ಹೆಚ್ಚಳ ಮಾಡುವಂತೆ ಮಂಗಳೂರು ವಿದ್ಯುತ್‌ ಸರಬರಾಜು ಸಂಸ್ಥೆ (ಮೆಸ್ಕಾಂ) ಪ್ರಸ್ತಾವನೆ ಸಲ್ಲಿಸಿದೆ. ವಿವಿಧ ಎಸ್ಕಾಂಗಳು ಸರಾಸರಿ ಅಂದಾಜು 1.39 ರು.ಗಳಷ್ಟುದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದು, ಈ ಬಗ್ಗೆ ಆಕ್ಷೇಪಣೆಗಳನ್ನು ಆಹ್ವಾನಿಸಿ ಫೆಬ್ರುವರಿ ತಿಂಗಳಲ್ಲಿ ಮತ್ತೊಮ್ಮೆ ದರ ಹೆಚ್ಚಳ ಮಾಡಿ ಕೆಇಆರ್‌ಸಿ ಆದೇಶ ಹೊರಡಿಸಲಿದೆ ಎಂದು ಇಂಧನ ಇಲಾಖೆ ಉನ್ನತ ಮೂಲಗಳು ‘ಕನ್ನಡಪ್ರಭಕ್ಕೆ’ ತಿಳಿಸಿವೆ.

ನ.1ರಿಂದ 40 ಪೈಸೆ, ಈಗ ಮತ್ತೆ 8 ಪೈಸೆ ಹೆಚ್ಚಳ!:

ಕೊರೋನಾ, ಲಾಕ್‌ಡೌನ್‌ ಮತ್ತು ಆರ್ಥಿಕ ಸಂಕಷ್ಟದ ನಡುವೆಯೇ 2020ರ ನವೆಂಬರ್‌ 4ರಂದು ವಿದ್ಯುತ್‌ ದರ ಪರಿಷ್ಕರಣೆ ಮಾಡಿದ್ದ ಕೆಇಆರ್‌ಸಿ ನವೆಂಬರ್‌ 1ರಿಂದ ಪೂರ್ವಾನ್ವಯವಾಗುವಂತೆ 2021ರ ಮಾ.31ರವರೆಗೆ ಪ್ರತಿ ಯೂನಿಟ್‌ಗೆ 40 ಪೈಸೆಯಷ್ಟುದರ ಹೆಚ್ಚಳ ಮಾಡಿ ಆದೇಶಿಸಿತ್ತು.

2020ರ ಡಿ.23ರಂದು ಮತ್ತೊಂದು ಆದೇಶ ಮಾಡಿರುವ ಕೆಇಆರ್‌ಇಸಿ, ಇಂಧನ ವೆಚ್ಚ ಹೆಚ್ಚಳ ಹೊಂದಾಣಿಕೆ ಶುಲ್ಕ (ಫä್ಯಯೆಲ್‌ ಕಾಸ್ಟ್‌ ಅಡ್ಜಸ್ಟ್‌ಮೆಂಟ್‌ ಚಾಜ್‌ರ್‍) ವಿಧಿಸಲು ಅವಕಾಶ ಮಾಡಿಕೊಟ್ಟಿದೆ. ಇದರಂತೆ ಜ.1ರಿಂದ ಮಾ.31ರವರೆಗೆ ಅನ್ವಯವಾಗುವಂತೆ ಬೆಸ್ಕಾಂ ವ್ಯಾಪ್ತಿಯ ಗ್ರಾಹಕರಿಗೆ 8 ಪೈಸೆ, ಮೆಸ್ಕಾಂ, ಸಿಇಎಸ್‌ಸಿ ವ್ಯಾಪ್ತಿಯಲ್ಲಿ ತಲಾ 5 ಪೈಸೆ, ಹೆಸ್ಕಾಂ ವ್ಯಾಪ್ತಿಯಲ್ಲಿ 4 ಪೈಸೆ, ಜೆಸ್ಕಾಂ ವ್ಯಾಪ್ತಿಯಲ್ಲಿ 5 ಪೈಸೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದಾರೆ.

ಜನವರಿಯಲ್ಲಿನ ಬಿಲ್‌ ನೋಡಿ ಗ್ರಾಹಕರು ಶಾಕ್‌:

ಇನ್ನು ಬೆಸ್ಕಾಂ ವ್ಯಾಪ್ತಿಯಲ್ಲಿ ನವೆಂಬರ್‌ 1ರಿಂದ ಪೂವಾನ್ವಯವಾಗುವಂತೆ ಪ್ರತಿ ಯುನಿಟ್‌ಗೆ 40 ಪೈಸೆ ಹೆಚ್ಚಳ ಮಾಡಿ ಆದೇಶಿಸಿದ್ದರೂ ಕೆಲವರಿಗೆ ಡಿಸೆಂಬರ್‌ ವಿದ್ಯುತ್‌ ಬಿಲ್‌ನಲ್ಲಿ ಪರಿಷ್ಕೃತ ದರ ಬಂದಿಲ್ಲ.

ಈ ಎರಡೂ ತಿಂಗಳ ಹೆಚ್ಚುವರಿ ಶುಲ್ಕವನ್ನು ಜನವರಿ ತಿಂಗಳಲ್ಲಿ ನೀಡುತ್ತಿರುವ ಬಿಲ್‌ನಲ್ಲಿ ಬೆಸ್ಕಾಂ ಒಟ್ಟಾಗಿ ವಿಧಿಸಿದೆ. ಹೀಗಾಗಿ ಸಾಮಾನ್ಯವಾಗಿ ಬರುತ್ತಿದ್ದ ಶುಲ್ಕದ ಶೇ.20-30 ರಷ್ಟುಹೆಚ್ಚುವರಿ ಶುಲ್ಕ ಬರುತ್ತಿದೆ. ಇದನ್ನು ನೋಡಿ ಗ್ರಾಹಕರು ಕಂಗಾಲಾಗಿದ್ದಾರೆ.

ಈ ಬಗ್ಗೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎಂ.ಬಿ. ರಾಜೇಶ್‌ಗೌಡ ಅವರನ್ನು ಪ್ರಶ್ನಿಸಿದರೆ, ಬಹುತೇಕರಿಗೆ ಡಿಸೆಂಬರ್‌ ಬಳಕೆ ಸೇರಿ ಜನವರಿಯಲ್ಲಿ ನೀಡುತ್ತಿರುವ ಬಿಲ್‌ಗಳಲ್ಲೇ ಪರಿಷ್ಕೃರ ದರ ಅನ್ವಯ ವಿದ್ಯುತ್‌ ಶುಲ್ಕ ವಿಧಿಸಲಾಗುತ್ತಿದೆ. ಇದು ವಿದ್ಯುತ್‌ ದರ ಪರಿಷ್ಕರಣೆಯಿಂದ ಆಗಿರುವ ಹೆಚ್ಚಳವೇ ಹೊರತು ಬೇರೇನೂ ಅಲ್ಲ. ಈ ಬಗ್ಗೆ ಗೊಂದಲಗಳಿದ್ದರೆ ಗ್ರಾಹಕರು ಬೆಸ್ಕಾಂ ಸಹಾಯವಾಣಿಗೆ ಕರೆ ಮಾಡಬಹುದು ಎಂದು ಹೇಳಿದ್ದಾರೆ.

ಎಸ್ಕಾಂಗಳ ವಿದ್ಯುತ್‌ ಖರೀದಿ ವೆಚ್ಚ ಹೆಚ್ಚಾದರೆ ಫä್ಯಯೆಲ್‌ ಕಾಸ್ಟ್‌ ಅಡ್ಜಸ್ಟ್‌ಮೆಂಟ್‌ ಚಾರ್ಜಸ್‌ ಅಡಿ ವಿದ್ಯುತ್‌ ದರ ಪರಿಷ್ಕರಣೆಗೆ ಕೆಇಆರ್‌ಸಿಗೆ ಕೇಳುತ್ತೇವೆ. ಅದೇ ರೀತಿ ಈ ಬಾರಿಯು ನವೆಂಬರ್‌ ತಿಂಗಳಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ಜ.1 ರಿಂದ ಮಾ.31ರವರೆಗೆ ಅನ್ವಯವಾಗುವಂತೆ ವಿದ್ಯುತ್‌ ದರ ಪರಿಷ್ಕರಣೆ ಮಾಡಿ ಆದೇಶಿಸಲಾಗಿದೆ. ಇದರ ಅನುಷ್ಠಾನದ ಬಗ್ಗೆ ಶುಕ್ರವಾರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.

- ಎಂ.ಬಿ.ರಾಜೇಶ್‌ಗೌಡ, ವ್ಯವಸ್ಥಾಪಕ ನಿರ್ದೇಶಕರು, ಬೆಸ್ಕಾಂ

click me!