
ವಿಧಾನ ಪರಿಷತ್(ಜು.20): ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆಯಡಿ ರಾಜ್ಯ ಸರ್ಕಾರ ಸಣ್ಣ ರೈತರು ಹಾಗೂ ಅತಿಸಣ್ಣ ರೈತರಿಗೆ 4 ಸಾವಿರ ರು. ನೀಡುವ ಬಗ್ಗೆ ಈ ಬಾರಿಯ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪವಿಲ್ಲ. ರೈತರ ವಿಚಾರದಲ್ಲಿ ರಾಜಕೀಯ ಮಾಡದೆ ಈ ಯೋಜನೆ ಮುಂದುವರೆಸಬೇಕು ಎಂದು ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ಆಗ್ರಹಿಸಿದ್ದಾರೆ.
ಬುಧವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆಯಡಿ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ವರ್ಷಕ್ಕೆ ಆರು ಸಾವಿರ ರು. ನೀಡುತ್ತಿದೆ. ಹಿಂದಿನ ರಾಜ್ಯ ಬಿಜೆಪಿ ಸರ್ಕಾರವು ಇದೇ ಯೋಜನೆಯಡಿ ನಾಲ್ಕು ಸಾವಿರ ರು. ನೀಡುತ್ತಿತ್ತು. ಈ ಬಾರಿ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಯೋಜನೆಯಡಿ ನಾಲ್ಕು ಸಾವಿರ ರು. ನೀಡುವುದನ್ನು ಮುಂದುವರೆಸುವ ಬಗ್ಗೆ ಪ್ರಸ್ತಾಪಿಸಿಲ್ಲ. ರಾಜ್ಯದಲ್ಲಿ ಮುಂಗಾರು ವೈಫಲ್ಯದಿಂದ ರೈತರು ಸಂಕಷ್ಟದಲ್ಲಿರುವುದರಿಂದ ರಾಜ್ಯ ಸರ್ಕಾರ ರೈತರಿಗೆ ನಾಲ್ಕು ಸಾವಿರ ರು. ನೀಡುವುದನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿದರು.
ಕೃಷಿ ಸಮ್ಮಾನ್ ಯೋಜನೆ ಅತಿ ಮಹತ್ವದ್ದು: ಸಂಸದ
ಈ ಬಾರಿ ಕರಾವಳಿಯಲ್ಲಿ ಅತಿಯಾದ ಮಳೆಯಾಗಿ ನೆರೆಯಿಂದ ಆ ಭಾಗದ ಜನರು ತತ್ತರಿಸಿದ್ದಾರೆ. ಕಲ್ಯಾಣ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಭಾಗದಲ್ಲಿ ಮಳೆ ಕೊರತೆಯಿಂದ ಸಮಪರ್ಕ ಬಿತ್ತನೆಯಾಗಿಲ್ಲ. ಜೀವ ನದಿಗಳು ಬತ್ತುತ್ತಿವೆ. ಈಗಾಗಲೇ ರಾಜ್ಯದಲ್ಲಿ 42 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಬರದ ಛಾಯೆ ಮೂಡಿದೆ. ಈ ಬಗ್ಗೆಯೂ ಬಜೆಟ್‌ನಲ್ಲಿ ಪ್ರಸ್ತಾವಿಲ್ಲ. ಕರವಾಳಿಯ ನೆರೆ ಹಾನಿಗೆ ಪರಿಹಾರ ನೀಡುವ ಸಂಬಂಧ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಇನ್ನೂ ಮನವಿ ನೀಡಿಲ್ಲ. ಸರ್ಕಾರ ಈಗಲಾದರೂ ಜಿಲ್ಲೆ ಹಾಗೂ ತಾಲೂಕುವಾರು ಬರ ನಿರ್ವಹಣೆಗೆ ಮುಂದಾಗಬೇಕು. ಜನರ ಗುಳೆ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರೈತ ಶಕ್ತಿ ಯೋಜನೆಯಡಿ ಪ್ರತಿ ಎಕರೆಗೆ 250 ರು.ನಂತೆ ಡೀಸೆಲ್ ಸಬ್ಸಿಡಿ ನೀಡಲಾಗುತ್ತಿದೆ. ಬಜೆಟ್‌ನಲ್ಲಿ ಈ ಯೋಜನೆ ಮುಂದುವರಿಕೆಗೆ ಬಗ್ಗೆ ಪ್ರಸ್ತಾಪವಿಲ್ಲ. ರಾಜ್ಯ ಸರ್ಕಾರ ಐದು ಗ್ಯಾರಂಟಿಗಳ ಜಾರಿಯ ನಡುವೆ ರೈತರನ್ನು ಮರೆತಿದೆ. ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ರೈತ ಶಕ್ತಿ ಯೋಜನೆ ಮುಂದುವರೆಸಿ ಎಕರೆಗೆ ಐದು ಲೀಟರ್ ಡೀಸೆಲ್ ಸಬ್ಸಿಡಿ ನೀಡಬೇಕು. ನೀರಾವರಿ, ಆರ್‌ಡಿಪಿಆರ್, ಲೋಕೋಪಯೋಗಿ ಇಲಾಖೆಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ